ಮೂಲ (ಹಿಂದಿ): ಅರ್ಚನಾ ಪೆನ್ಯುಲೀ

ಅವಳನ್ನು ಬೀಳ್ಕೊಡಲು ಒಂದು ದೊಡ್ಡ ಗುಂಪು ಏರ್‌ಪೋರ್ಟ್‌ಗೆ ಬಂದಿತು. ಪೂಜಾ ಇಂಡಿಯಾದಲ್ಲಿ ಮೂರು ವಾರ ಕಳೆದು ಡೆನ್ಮಾರ್ಕ್‌ಗೆ ಮರಳಿ ಹೋಗುತ್ತಿದ್ದಳು. ಅವಳನ್ನು ಬೀಳ್ಕೊಡಲು ಬಂದವರು ಒಬ್ಬೊಬ್ಬರಂತೆ ಅವಳನ್ನು ಅಪ್ಪಿಕೊಂಡು ಚುಂಬಿಸುತ್ತಿದ್ದರು.
“ಪೂಜಾ, ಮತ್ತೆ ಬಾರಮ್ಮ” ಅವಳ ದೊಡ್ಡಪ್ಪ ಹೇಳಿದರು, “ನೀನಿಲ್ಲಿಗೆ ಬಂದಿದ್ದು ತುಂಬಾ ಸಂತೋಷವಾಯ್ತು. ನಮಗೂ ಉತ್ಸಾಹ ಬಂತು”.
“ನಿಮ್ಮನ್ನೆಲ್ಲಾ ಭೇಟಿ ಮಾಡಿ ನನಗೂ ತುಂಬಾ ಸಂತೋಷವಾಯ್ತು” ಪೂಜಾ ಅವರನ್ನು ಅಪ್ಪಿಕೊಂಡಳು.
“ನೀನು ದೊಡ್ಡವಳಾದೆ. ನಿನಗೀಗ ಯಾವ ಮಾರ್ಗದರ್ಶಕರೂ ಬೇಕಿಲ್ಲ. ಪ್ರತಿ ವರ್ಷ ಬಂದು ಹೋಗ್ತಿರು” ಅವಳ ಅಜ್ಜಿ ಹೇಳಿದರು.
“ಮಾರ್ಗದರ್ಶಕರು ಬೇಡ. ಆದ್ರೆ ಈ ವಯಸ್ಸಿನಲ್ಲಿ ಹುಡುಗಿಯರಿಗೆ ಸಂಗಾತಿ ಬೇಕಾಗುತ್ತೆ” ಅವಳ ಚಿಕ್ಕಮ್ಮ ತಮಾಷೆ ಮಾಡಿದಾಗ ಎಲ್ಲರೂ ನಕ್ಕರು.
ಪೂಜಾ ಮುಗುಳ್ನಗಲು ಪ್ರಯತ್ನಿಸಿದಳು. ತನ್ನ ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಮತ್ತು ಅಣ್ಣ-ತಂಗಿ ಎಲ್ಲರನ್ನು ಸ್ನೇಹದಿಂದ ನೋಡಿದಳು... ಎಲ್ಲರೂ ಅವಳ ಬಗ್ಗೆ ಎಷ್ಟೊಂದು ಸ್ನೇಹ ತೋರಿದರೆಂದರೆ, ಪೂಜಾಳ ಮನಸ್ಸಿಗೆ ಅವರ ಸ್ನೇಹ ತಟ್ಟಿತು. ವಿಶೇಷವಾಗಿ ಅವಳ ಯೂರೋಪಿಯನ್ ಹಾಬಿಗಳನ್ನು ಗಮನದಲ್ಲಿಟ್ಟುಕೊಂಡು ಅವಳ ಅಗತ್ಯಗಳನ್ನು ತಕ್ಷಣ
ಪೂರೈಸಲು ಎಚ್ಚರ ವಹಿಸುತ್ತಿದ್ದರು.
ಪೂಜಾ ಬೀಳ್ಕೊಂಡಳು. ಒಂದು ಕೈಯನ್ನು ಗಾಳಿಯಲ್ಲಾಡಿಸುತ್ತಾ, ಇನ್ನೊಂದು ಕೈಯಿಂದ ಲಗ್ಗೇಜಿನ ಟ್ರಾಲಿಯನ್ನು ತಳ್ಳುತ್ತಾ ಏರ್‌ಪೋರ್ಟ್ ಒಳಗೆ ಬಂದಳು.
ಏರ್‌ಪೋರ್ಟ್ ಏರ್ ಕಂಡೀಷನ್ಡ್ ಆಗಿದ್ದರೂ ಒಳಗೆ ಚಳಿಗಾಳಿಯಿತ್ತು. ಈ ಚಳಿ ತುಂಬಾ ಹಿತವೆನಿಸಿತು.
“ದಿಲ್ಲಿಯ ಬೇಸಿಗೆಯೂ...” ಅವಳು ಪಿಸುಗುಟ್ಟಿದಳು.
ಪ್ರಪ್ರಥಮವಾಗಿ ಎಕ್ಸ್-ರೇ ಯಂತ್ರದಲ್ಲಿ ಸ್ಕ್ರೀನ್ ಮಾಡಿಸಿದಳು. ಚೆಕ್-ಇನ್ ಕೌಂಟರ್‌ನಲ್ಲಿ ಲಗ್ಗೇಜನ್ನು ನೇರವಾಗಿ ಕೋಪನ್‌ಹೇಗನ್‌ಗೆ ಬುಕ್ ಮಾಡಿಸಿ ಬೋರ್ಡಿಂಗ್ ಕಾರ್ಡ್ ತೆಗೆದುಕೊಂಡಳು.
ನಂತರ ಕಸ್ಟಮ್ಸ್ ಮತ್ತು ಸೆಕ್ಯುರಿಟಿಯನ್ನು ದಾಟಿ ಏರ್‌ಪೋರ್ಟ್ ಡಿಪಾರ್ಚರ್ ಲೌಂಜ್‌ಗೆ ಬಂದು ಒಂದು ಕುರ್ಚಿಯಲ್ಲಿ ಕಾಲು ಚಾಚಿಕೊಂಡು ಕೂತಳು. ಫ್ಲೈಟ್‌ಗೆ ಒಂದೂವರೆ ಗಂಟೆ ಸಮಯಾವಕಾಶವಿತ್ತು. ಅವಳು ಏರ್‌ಪೋರ್ಟ್ನಲ್ಲಿ ಕಣ್ಣುಗಳನ್ನು ದೂರದವರೆಗೆ ಹಾಯಿಸಿದಳು. ಅಕ್ಕ ಪಕ್ಕ ಸುತ್ತಾಡುತ್ತಿದ್ದ ಜನರ ಮುಖಗಳನ್ನು ಗಮನಿಸಿದಳು. ತನಗೆ ತನ್ನ ದೇಶ ಭಾರತ
ಎಷ್ಟೊಂದು ಅಪರಿಚಿತ... ! ಅವಳ ದೇಶ ಡೆನ್ಮಾರ್ಕ್, ಅಲ್ಲೇ ಅವಳು ಹುಟ್ಟಿದಳು. ಅಲ್ಲಿಯೇ ಅವಳು ಬೆಳೆದಿದ್ದಳು.

ಅವಳ ಅಜ್ಜ ಹರಿಪ್ರಸಾದ್ ಶರ್ಮಾ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಒಂದು ಹೊಸ ಹಾಗೂ ಅಜ್ಞಾತ ಜೀವನವನ್ನರಸುತ್ತಾ ಭಾರತದಿಂದ ಡೆನ್ಮಾರ್ಕ್‌ಗೆ ಹೋದಾಗ ಅವಳ ತಾಯಿ ಸುಧಾಳ ವಯಸ್ಸು ಒಂಬತ್ತು ವರ್ಷ. ಅವರ ಮನೆ-ಮಠ, ಐಶ್ವರ್ಯ-ಆಸ್ತಿ, ಅವರ ಬಂಧು-ಬಾಂಧವರು ಭಾರತದಲ್ಲಿದ್ದರು. ಅವರೊಂದಿಗೆ ಅವರ ಪ್ರತಿಭೆಯಿತ್ತು. ಒಂದು ಹೊಸ
ಅಪರಿಚಿತ ಸ್ಥಳದಲ್ಲಿ ಬದುಕನ್ನು ಪರೀಕ್ಷಿಸುವ ಬಯಕೆಯಿತ್ತು.

ಅವರು ಮೊದಲು ತಮ್ಮ ದೇಶವನ್ನು ನಂತರ ತಮ್ಮ ದೇಶದ ನಾಗರಿಕತೆಯನ್ನು ತ್ಯಜಿಸಿದರು. ಅವರ ಮಕ್ಕಳು ದೊಡ್ಡವರಾದಂತೆ, ಮಕ್ಕಳು ಭಾರತದ ನಾಗರಿಕರಾದ್ದರಿಂದ ಡೆನಿಶ್ ಸಂಸ್ಥೆಗಳು ಅಥವಾ ಕಚೇರಿಗಳಲ್ಲಿ ಸ್ಥಾನ ಪಡೆಯಲು ತೊಂದರೆಯಾಗಬಾರದೆಂಬ ಉದ್ದೇಶದಿಂದ ಭಾರತದ ನಾಗರಿಕತೆಯನ್ನು ತ್ಯಜಿಸಿ ಡೆನ್ಮಾರ್ಕ್ ನಾಗರಿಕತೆಯನ್ನು ಪಡೆದರು.

ಡೆನ್ಮಾರ್ಕ್ ಒಂದು ಶಾಂತ, ಸುವ್ಯವಸ್ಥಿತ ಹಾಗೂ ಸುರಕ್ಷಿತವಾದ ಸ್ಥಳವಾಗಿತ್ತು. ಆದರೆ ಅಲ್ಲಿಯ ಸ್ವಚ್ಛಂದ ಪಾಶ್ಚಾತ್ಯ ಸಂಸ್ಕೃತಿಯು ಹರಿಪ್ರಸಾದರ ಮನಸ್ಸನ್ನು ಭಯಭೀತಗೊಳಿಸಿತು. ಸಂಸ್ಕೃತಿಯ ಅಂತರ ಮನುಷ್ಯರ ನಡುವೆ, ಗಂಭೀರ ಅಂತರವಾಗುತ್ತದೆ.
ಹರಿಪ್ರಸಾದರು ಡೆನ್ಮಾರ್ಕ್‌ನಲ್ಲಿ ಬಹು ವರ್ಷಗಳಿಂದ ವಾಸಿಸುತ್ತಿದ್ದು, ಅಲ್ಲಿಯ ನಾಗರಿಕತೆಯನ್ನು ಪಡೆದಿದ್ದರು. ಆದರೂ ಅಲ್ಲಿನ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳದಾದರು. ವಿದೇಶಿ ನೆಲದಲ್ಲಿ ನೆಲಸಿಯೂ ಭಾರತದ ಸಂಪ್ರದಾಯ-ಪದ್ಧತಿಗಳನ್ನು ಕಾಯ್ದಿಟ್ಟುಕೊಳ್ಳಲು
ತುಂಬಾ ಪ್ರಯತ್ನಿಸಿದರು. ಈ ದಿಶೆಯಲ್ಲಿ ಸ್ವಲ್ಪ ಯಶಸ್ಸನ್ನು, ಸ್ವಲ್ಪ ಅಪಯಶಸ್ಸನ್ನು ಗಳಿಸಿದರು. ಮಗ ಡೆನಿಶ್ ಹುಡುಗಿಯನ್ನು ವಿವಾಹವಾದ. ಆದರೆ ಆ ವಿವಾಹ ಶೀಘ್ರವೇ ವಿಚ್ಛೇದನದಲ್ಲಿ ಮಾರ್ಪಾಡಾಯಿತು. ವಿಚ್ಛೇದನ ಪಾಶ್ಚಾತ್ಯ ಜೀವನ ಶೈಲಿಯ ಒಂದು ಸಾಮಾನ್ಯ ಸಂಗತಿಯಾಗಿದೆ. ಇಡೀ ಬದುಕನ್ನು ಒಬ್ಬರ ಹೆಸರಿನಲ್ಲಿ ಮಾತ್ರ ಕಳೆಯುವುದು... ಈ ಬಯಕೆ ಅತಿಯಾದದ್ದು. ಆದರೆ
ಹರಿಪ್ರಸಾದರ ಮಗಳು ಸುಧಾ ವಿದೇಶದಲ್ಲಿ ಬೆಳೆದಿದ್ದು, ಡೆನಿಶ್ ಶ್ವೇತ ಹುಡುಗಿಯರೊಂದಿಗೆ ದಿನ ಕಳೆಯುತ್ತಿದ್ದಳು; ಆದರೂ ತಂದೆ-ತಾಯಿ ಒಪ್ಪಿದ ಹುಡುಗನನ್ನು ಮದುವೆಯಾಗಲು ಅವಳಿಗೆ ಒಪ್ಪಿಗೆಯಿತ್ತು.

ಹರಿಪ್ರಸಾದರು ತಮ್ಮ ಮಗಳಿಗೆ ಭಾರತದಿಂದ ವರನನ್ನು ತಂದರು. ಪೂಜಾಳ ತಂದೆ ಸುನೀಲ್ ಭಾರತದಲ್ಲಿ ಬೆಳೆದಿದ್ದರು. ಅವರು ಸುಧಾಳ ಪತಿಯಾಗಿ ಭಾರತವನ್ನು ತ್ಯಜಿಸಿ ನಿರ್ಭಯವಾಗಿ ಡೆನ್ಮಾರ್ಕ್‌ಗೆ ಹೊರಟು ಹೋದರು. ಆದರೆ ಅವರಿಗೆ ತಮ್ಮ
ದೇಶ ಭಾರತ ಸ್ವಲ್ಪ ದೂರದ ದೇಶವಾಗಿತ್ತು, ಅಷ್ಟೆ. ವಿದೇಶಿ ನೆಲದಲ್ಲಿ ವಾಸಿಸುತ್ತಿದ್ದಾಗ್ಯೂ ಭಾರತ ಅವರೆಲ್ಲರ ಉಸಿರಾಗಿತ್ತು.

ಪೂಜಾ ಪ್ರತಿ ಎರಡು-ಮೂರು ವರ್ಷಕ್ಕೊಮ್ಮೆ ಭಾರತಕ್ಕೆ ಬರುತ್ತಿದ್ದಳು. ಒಮ್ಮೆ ತನ್ನ ತಂದೆ-ತಾಯಿಯೊಂದಿಗೆ ಬಂದರೆ, ಮತ್ತೊಮ್ಮೆ ತನ್ನ ಅಜ್ಜ-ಅಜ್ಜಿಯೊಂದಿಗೆ ಬರುತ್ತಿದ್ದಳು. ಹುಟ್ಟಿದಂದಿನಿಂದ ಇಪ್ಪತ್ತನಾಲ್ಕು ವರ್ಷದ ವಯಸ್ಸಿನವರೆಗೆ ಭಾರತಕ್ಕೆ ಏಳು
ಬಾರಿ ಬಂದಿದ್ದಳು. ಇಲ್ಲಿಗೆ ಬಂದಾಗ ಭಾರತವನ್ನು ಒಂದು ಭಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತಿದ್ದಳು. ಭಾರತ ಅವಳಿಗೆ ಪ್ರತಿ ಬಾರಿಯೂ ಬದಲಾದಂತೆ ಕಾಣಿಸುತ್ತಿತ್ತು. ಈ ಬಾರಿ ಅವಳು ಒಂಟಿಯಾಗಿ ಬಂದಿದ್ದಳು, ಈಗ ಅವಳು ಯೌವನಕ್ಕೆ ಕಾಲಿಟ್ಟಿದ್ದಳು. ಐದು ಅಡಿ ನಾಲ್ಕು ಇಂಚಿನ ಮೈಕಟ್ಟು, ಗೌರವರ್ಣ, ತೀಕ್ಷ್ಣ ಆಕರ್ಷಕ ನಯನಗಳು. ಭಾರತದ ರೂಪ-ಲಾವಣ್ಯ,
ಆದರೆ ನೋಟಕ್ಕೆ ಯೂರೋಪಿಯನ್. ಅವಳು ಕಳವಳದಿಂದ ಅತ್ತ-ಇತ್ತ ನೋಡುತ್ತಿರುವಾಗಲೇ ಗೋಧಿ ಬಣ್ಣದ ಯುವಕನೊಬ್ಬ ಅವಳ ಬಳಿಗೆ ಬಂದು ದಢಾರನೆ ಕೂತ.

ಲೌಂಜ್‌ನಲ್ಲಿ ಇಷ್ಟೊಂದು ಖಾಲಿ ಕುರ್ಚಿಗಳಿದ್ದಾಗ್ಯೂ ಆ ಯುವಕ ತನ್ನ ಪಕ್ಕದ ಕುರ್ಚಿಯನ್ನು ಆರಿಸಿಕೊಂಡಿದ್ದನ್ನು ಪೂಜಾ ಗಮನಿಸಿದಳು. ಅವನು ಬಹಳಷ್ಟು ಕಾಗದ-ಪತ್ರಗಳನ್ನು ಅಸ್ತವ್ಯಸ್ತವಾಗಿ ಹಿಡಿದುಕೊಂಡಿದ್ದ. ಕೆಲವು ಅವನ ಕೈಯಿಂದ ಇನ್ನೇನು ಕೆಳಗೆ
ಬೀಳುವ ಸ್ಥಿತಿಯಲ್ಲಿದ್ದವು. ಅವನು ಅವುಗಳನ್ನು ಸಂಭಾಳಿಸುತ್ತಾ ಒಮ್ಮೆ ತನ್ನ ಬ್ಯಾಗಿನಲ್ಲಿಟ್ಟಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಬ್ಯಾಗಿನಿಂದ ಹೊರತೆಗೆಯುತ್ತಿದ್ದ. ಕಾಗದಗಳ ಸದ್ದು ಪೂಜಾಳ ಗಮನವನ್ನು ಅವನೆಡೆಗೆ ಆಕರ್ಷಿಸುತ್ತಿತ್ತು. ಅವಳು ಆಗಾಗ್ಗೆ ಆ ಯುವಕವನ್ನು
ಮೌನದಿಂದ ಗಮನಿಸಿದಳು. ಆ ಯುವಕನೂ ತನ್ನನ್ನು ಅಷ್ಟೇ ಬಾರಿ ನೋಡಿದ್ದನ್ನು ಪೂಜಾ ಗಮನಿಸಿದಳು.
“ನೀವು ಕೋಪನ್‌ಹೇಗನ್‌ಗೆ ಹೋಗ್ತೀದ್ದೀರ?” ಆ ಯುವಕ ಇದ್ದಕ್ಕಿದ್ದಂತೆ ಪ್ರಶ್ನಿಸಿದ.
“ಹೌದು”.
“ನಾನೂ ಕೋಪನ್‌ಹೇಗನ್‌ಗೆ ಹೊಗ್ತಿದ್ದೀನಿ”.
ಪೂಜಾ ತನ್ನ ಕತ್ತನ್ನು ಹೌದೆಂಬಂತೆ ಆಡಿಸಿದಳು.
“ನೀವು ಓದುತ್ತಿದ್ದೀರೋ ಅಥವಾ ನೌಕರಿ ಮಾಡುತ್ತಿದ್ದೀರೋ ?”
“ನಾನಲ್ಲೇ ಇದ್ದೇನೆ. ನನ್ನ ಮಮ್ಮಿ-ಡ್ಯಾಡಿ ಮತ್ತು ಅಜ್ಜ-ಅಜ್ಜಿ ಸಹ ಅಲ್ಲಿಯೇ ಇದ್ದಾರೆ”.
“ಓಹೋ, ನೀವು ಡೆನ್ಮಾರ್ಕ್‌ನವರು! ಹಾಗಾದ್ರೆ ಈ ವಿಳಾಸ ಗೊತ್ತಿದೆಯಾ?” ಆ ಯುವಕ ಕೈಯಲ್ಲಿ ಹಿಡಿದ ಚೀಟಿಯೊಂದನ್ನು ಅವಳೆಡೆಗೆ ಚಾಚಿದ.
ಪೂಜಾ ಕಾಗದದಲ್ಲಿ ಬರೆದಿದ್ದ ವಿಳಾಸವನ್ನು ಓದಿದಳು - ‘ಕೆಬೀಸೀ ಮಿಶನ್, ವೆಸ್ಟ್ ಬ್ರಿಗೇಡ್, ಕೋಪನ್‌ಹೇಗನ್, ಡೆನ್ಮಾರ್ಕ್’.
“ನನಗೆ ಕೆಬೀಸೀ ಮಿಶನ್ ಗೊತ್ತಿಲ್ಲ, ಆದ್ರೆ ವೆಸ್ಟ್ ಬ್ರಿಗೇಡ್ ಸ್ಥಳ ಗೊತ್ತಿದೆ. ಅದು ಕೋಪನ್‌ಹೇಗನ್‌ನ ಒಂದು ಮುಖ್ಯ ರಸ್ತೆ.”
“ಸರಿ” ಯುವಕ ಖುಷಿಯಿಂದ ಮುಗುಳ್ನಕ್ಕ.
“ನೀವೇಕೆ ಡೆನ್ಮಾರ್ಕ್‌ಗೆ ಹೋಗ್ತಿದ್ದೀರ?” ಪೂಜಾ ವಿಚಾರಿಸಿದಳು.
ಆ ಯುವಕ ಸ್ವಲ್ಪ ತಡೆದು ನಂತರ ತನ್ನ ಕೈಯಲ್ಲಿ ಹಿಡಿದ ಪತ್ರವನ್ನು ತೋರಿಸುತ್ತಾ ಹೇಳಿದ, “ನಾನಲ್ಲಿಗೆ ಮಿಶನರಿ ಬೋಧಿಸಲು ಹೋಗ್ತಿದ್ದೀನಿ, ಬೈಬಲ್ ಬಗ್ಗೆ ಅಧ್ಯಯನ ಮಾಡ್ತೀನಿ”.
“ನೀವು ಕ್ರೈಸ್ತರೇ?”
ಅವನು ಸ್ವಲ್ಪ ಮೌನಿಯಾದ. ನಂತರ ಹಿಂಜರಿಯುತ್ತಾ ಹೇಳಿದ, “ನಾನು ನನ್ನ ಧರ್ಮವನ್ನು ಪರಿವರ್ತಿಸಿಕೊಂಡಿರುವೆ.
ಕ್ರಿಶ್ಚಿಯನ್ ಆಗಿದ್ದೇನೆ. ನನ್ನ ಹೆಸರು ವಿವೇಕ್ ಕಕ್ಕಡ್ ಅಂತ”.
“ನೀವೇಕೆ ಹಿಂದೂ ಧರ್ಮವನ್ನು ತ್ಯಜಿಸಿದಿರಿ?” ಪೂಜಾ ಸ್ಪಷ್ಟ ಶಬ್ದಗಳಲ್ಲಿ ಕೇಳಿದಳು.
ವಿವೇಕ ಮೆಲ್ಲನೆ ಮುಗುಳ್ನಕ್ಕು ನಂತರ ಆಳವಾಗಿ ಯೋಚಿಸುತ್ತಾ ಹೇಳಿದ, “ಹಿಂದೂ ಧರ್ಮದ ಬಗ್ಗೆ ನನಗೆ ಅಷ್ಟು ನಂಬಿಕೆಯಿರಲಿಲ್ಲ. ಹಿಂದೂ ಧರ್ಮದಲ್ಲಿ....” ಅವನು ಶಬ್ದವನ್ನು ಸಾಕಷ್ಟು ಎಳೆದ, “..... ತುಂಬಾ ದೇವರು-ದೇವತೆಗಳಿದ್ದಾರೆ.
ಮನುಷ್ಯ ಗಲಿಬಿಲಿಗೊಳ್ಳುತ್ತಾನೆ. ಕ್ರಿಶ್ಚಿಯಾನಿಟಿಯಲ್ಲಿ ಜೀಸಸ್ ಮತ್ತು ಬೈಬಲ್ ಮಾತ್ರ. ಇಲ್ಲಿ ಮನುಷ್ಯ ದಾರಿ ತಪ್ಪಲ್ಲ. ಅವನಿಗೆ ‘ಶಾಂತಿ’ ಎಂಬ ಒಂದು ದಡ ಸಿಗುತ್ತೆ”.
ಪೂಜಾಳಿಗೆ ವಿವೇಕ ಸ್ವಾರಸ್ಯಕರವಾಗಿ ಕಂಡ.
ಪೂಜಾ ಹೇಳಿದಳು, “ಕ್ರಿಶ್ಚಿಯನ್ ಮಿಶನರಿಯವರು ಇಂಡಿಯಾದಲ್ಲಿ ಕೆಳಜಾತಿಯ ಬಡ ಹಿಂದೂಗಳಿಗೆ ಹಣ, ಔಷಧಿ ಮತ್ತು ಶಾಲೆಗಳಿಗೆ ಸೇರಿಸುವ ಆಸೆ ತೋರಿಸಿ ‘ಕನ್‌ವರ್ಟ್’ ಮಾಡ್ತಾರೆ, ಅವರಿಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯ ಮಾಡ್ತಾರೆ ಅಂತ ಕೇಳಿದ್ದೇನೆ”.
ವಿವೇಕ ರೇಗಿ ಹೇಳಿದ, “ಇದಕ್ಕೆ ಆ ಮಿಶನರಿಗಳಲ್ಲ, ಹಿಂದೂ ಸಮಾಜವೇ ದೋಷಿಯಾಗಿದೆ. ಐದು ಸಾವಿರ ವರ್ಷ ಅವರು ನಮ್ಮ ದೇಶದ ಕೆಲವರನ್ನು ಹಿಂದುಳಿದ ಜಾತಿಯವರನ್ನಾಗಿ ಮಾಡಿದ್ದಾರೆ. ‘ಅಸ್ಪಶ್ಯರು’ ಎಂದು ಹೇಳಿ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡಿಲ್ಲ. ಅವರಿಗೆ ಶಿಕ್ಷಣ ಕೊಡಲಿಲ್ಲ. ಬೆಳೆಯಲು ಬಿಡಲಿಲ್ಲ. ಗಾಂಧೀಜಿಯವರು ಅವರಿಗೆ ‘ಹರಿಜನ’ ಎಂದು ಹೆಸರು ಕೊಟ್ಟು ಅವರನ್ನು ಪ್ರತ್ಯೇಕಗೊಳಿಸಿದರು. ಹಿಂದುತ್ವದಲ್ಲಿ ಅವರಿಗೆ ಗೌರವ ಮತ್ತು ಅಧಿಕಾರ ಸಿಗದಿದ್ದಾಗ ಅವರು ಅದನ್ನು ತ್ಯಜಿಸುತ್ತಿದ್ದಾರೆ, ಇದರಲ್ಲೇನು ತಪ್ಪಿದೆ ?”
ಪೂಜಾಳಿಗೆ ಅವನ ಮಾತು ಹಿಡಿಸಿದವು. ಅಲ್ಲದೆ ಅವನ ಮಾತಿನಲ್ಲಿ ನಿಜಾಂಶವಿದೆಯೆಂದೂ ಅನ್ನಿಸಿತು.
ಅವನು ವ್ಯಂಗ್ಯದಿಂದ ಮುಗುಳ್ನಗುತ್ತಾ ಹೇಳಿದ, “ಭಾರತದ ಬಗ್ಗೆ ನಿಮಗೆ ಸಾಕಷ್ಟು ತಿಳಿದಿದೆ. ನೀವು ‘ಐದು ಜನರು ಮತ್ತು ಒಂದು ಹಸು’ ಈ ಬಗ್ಗೆ ಕೇಳಿದ್ದೀರ?”
ಪೂಜಾ ಇಲ್ಲವೆಂಬಂತೆ ಕತ್ತನ್ನು ಅಲುಗಾಡಿಸಿದಳು.
“ಇಲ್ಲಿ ಹರಿಯಾಣದ ಬಳಿಯ ಒಂದು ಹಳ್ಳಿಯಲ್ಲಿ ದಲಿತರನ್ನು ಕೊಲೆ ಮಾಡಲಾಯಿತು.”
“ಯಾಕೆ?”
“ಭಾರತದಲ್ಲಿ ಗೋವುಗಳನ್ನು ಕೊಲ್ಲುವುದು ಅಪರಾಧವೆಂದು ಭಾವಿಸಲಾಗುತ್ತದೆ. ಕೊಲ್ಲುವವನು ‘ಕೊಲೆಗಡುಕ’ನೆಂದು ಕರೆಸಿಕೊಳ್ತಾನೆ. ಒಂದು ಸಂಜೆ ಐವರು ದಲಿತರು ಒಂದು ಸತ್ತ ಹಸುವಿನ ಚರ್ಮವನ್ನು ತೆಗೆಯುತ್ತಿದ್ದರು. ಜನ ಅವರನ್ನು ನೋಡಿದರು. ಅವರು, ‘ಇವರೆಲ್ಲಾ ಜೀವಂತ ಹಸುವಿನ ಚರ್ಮ ಸುಲಿಯುತ್ತಿದ್ದಾರೆಂದು’ ಯೋಚಿಸಿ, ಅಕ್ಕ ಪಕ್ಕದ ಹಳ್ಳಿಯ
ಜನರನ್ನೆಲ್ಲಾ ಗುಂಪು ಸೇರಿಸಿ, ಐವರನ್ನು....”
ಅಷ್ಟರಲ್ಲಿ ಎಮ್‌ಎಎಸ್ 168 ಫ್ಲೈಟ್ ಬೋರ್ಡಿಂಗ್‌ನ ಘೋಷಣೆಯಾಯಿತು. ಪೂಜಾಳೊಂದಿಗೆ ಅವನೂ ಸಹ ತನ್ನ ಲಗ್ಗೇಜನ್ನು ಎತ್ತಿಕೊಂಡು ಲೌಂಜ್‌ನಿಂದ ವಿಮಾನದೆಡೆಗೆ ಹೊರಟ.
ವಿಮಾನದಲ್ಲಿ ಪೂಜಾಳ ಸೀಟು ಮತ್ತು ವಿವೇಕನ ಸೀಟು ದೂರದಲ್ಲಿದ್ದವು. ಆದರೆ ಪೂಜಾಳಿಗೆ ಪ್ಲೇನ್‌ನಲ್ಲಿ ವಿವೇಕನ ಆರೋಗ್ಯ ಹದಗೆಡುತ್ತಿದೆ, ಅವನು ಬಹುಶಃ ಮೊದಲ ಬಾರಿಗೆ ವಿಮಾನ ಯಾತ್ರೆ ಕೈಗೊಂಡಿದ್ದಾನೆ, ಅವನಿಗೆ ವಾಂತಿಯಾಗುತ್ತಿದೆ ಎಂದು ಅನ್ನಿಸಿತು.
ಅವನು ಅನೇಕ ಬಾರಿ ತನ್ನ ಸೀಟಿನಿಂದೆದ್ದು ಟಾಯ್ಲೆಟ್‌ನೆಡೆಗೆ ಹೋಗುತ್ತಿರುವುದನ್ನು ಹಾಗೂ ಗಗನಸಖಿಯರು ಅವನ ಸೀಟಿನ ಬಳಿ ಓಡಾಡುತ್ತಿರುವುದನ್ನು ಪೂಜಾ ಗಮನಿಸಿದಳು. ನಂತರ ಓರ್ವ ಗಗನಸಖಿ ಅವನಿಗೆ ಬಹುಶಃ ವಾಂತಿ ನಿಲ್ಲುವ ಔಷಧಿಯನ್ನು ಕೊಟ್ಟಳು. ಅವನು ವಿಮಾನಯಾನದ ವೇಳೆಯಲ್ಲಿ ಕೊಟ್ಟ ತಿಂಡಿ ಮತ್ತು ಊಟವನ್ನು ಬಹುಶಃ ತಿಂದಿರಲೂ ಇಲ್ಲ.
ಹೊಸ ಸ್ಥಳ, ಹೊಸ ಜನ, ಹೊಸ ಭಾಷೆ... ವಿವೇಕನಿಗೆ ಡೆನ್ಮಾರ್ಕ್ ಅತ್ಯಂತ ಅಪರಿಚಿತ ದೇಶವಾಗಿತ್ತು. ಅವನು ಏರ್‌ಪೋರ್ಟ್ನಲ್ಲಿಯೇ ನರ್ವಸ್ ಆದ. ವಿಮಾನದಲ್ಲಿ ಅವನ ಆರೋಗ್ಯ ಹದಗೆಟ್ಟಿದ್ದರಿಂದಾಗಿ ಅವನ ಶರೀರ ಬಳಲಿತ್ತು. ಅವನು ಸಹಾಯಕ್ಕಾಗಿ ಪೂಜಾಳನ್ನು ನೋಡಿದ. ಅಪರಿಚಿತರ ನಡುವೆ ಪರಿಚಿತ ಮುಖವೆಂದರೆ ಅವಳೇ ಆಗಿದ್ದಳು. ಪೂಜಾ ಸಹಾನುಭೂತಿಯಿಂದಾಗಿ ಏರ್‌ಪೋರ್ಟ್ನ ಔಪಚಾರಿಕತೆಯನ್ನು ಪೂರೈಸುವಲ್ಲಿ ಅವನಿಗೆ ಸಹಕರಿಸಿದಳು. ಯೂರೋಪಿಯನ್
ಪ್ರಯಾಣಿಕರಿಗೆ ಪ್ರತ್ಯೇಕ ಹಾಗೂ ಯೂರೋಪಿಯನ್ ಅಲ್ಲದವರಿಗೆ ಪ್ರತ್ಯೇಕ ಪಂಕ್ತಿಯಿತ್ತು.
ಪೂಜಾಳಲ್ಲಿ ಡೆನಿಶ್ ಪಾಸ್‌ಪೋರ್ಟ್ ಇದ್ದಿದ್ದರಿಂದಾಗಿ ಎಮಿಗ್ರೇಶನ್ ಕೌಂಟರ್‌ನಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ. ಆದರೆ ವಿವೇಕನ ಪಾಸ್‌ಪೋರ್ಟ್ ಮತ್ತು ಅವನ ಮಿಶನರಿಗೆ ಸಂಬಂಧಿಸಿದ ಕಾಗದ ಪತ್ರಗಳ ಬಗ್ಗೆ ಎಮಿಗ್ರೇಶನ್ ಅಧಿಕಾರಿಗಳು ಸಾಕಷ್ಟು ಪರೀಕ್ಷೆ ಮಾಡಿದರು. ಇಲ್ಲಿ ಮಿಶನರಿಯಲ್ಲಿ ಏನು ಓದಲು ಬಂದಿದ್ದಾನೆ ? ಅವನನ್ನು ಯಾರು ಆಹ್ವಾನಿಸಿದ್ದಾರೆ? ಅವನನ್ನು ಸ್ಪಾನ್ಸರ್ ಮಾಡುವವರು ಯಾರು ? ಅವನ ಬಳಿ ಎಷ್ಟು ಹಣವಿದೆ ? ಎಂಬ ಬಗ್ಗೆ ಮೂವರು ಅಧಿಕಾರಿಗಳು ಅವನನ್ನು ಪ್ರತ್ಯೇಕವಾಗಿ ಪ್ರಶ್ನಿಸಿದರು. ಅವನು ಈ ಪ್ರಶ್ನೆಗಳಿಂದ ಮತ್ತೂ ಹೆದರಿದ. ಅಸಹಾಯಕತೆಯಿಂದ ಪೂಜಾಳೆಡೆಗೆ ಪದೇ-ಪದೇ ನೋಡಿದ. ಪೂಜಾ ಅವನಿಗೆ ಧೈರ್ಯ ಹೇಳಿದಳು. ತುಂಬಾ ಹೊತ್ತಾದ ಮೇಲೆ ಅವನ ಪಾಸ್‌ಪೋರ್ಟ್ಗೆ ಮುದ್ರೆ ಬಿತ್ತು. ಅವನ ಪಾಸ್‌ಪೋರ್ಟ್ ಮತ್ತು ಇನ್ನಿತರ ಕಾಗದ ಪತ್ರಗಳು ಕೌಂಟರ್‌ನಲ್ಲಿ ಮತ್ತೆ ದೊರೆತವು.
ಏರ್‌ಪೋರ್ಟ್ನ ಹೊರಗಿನ ಬಯಲಿಗೆ ಇಬ್ಬರೂ ಬಂದರು. ಸುನೀಲ್, ಪೂಜಾಳ ಬಗ್ಗೆ ಯೋಚಿಸುತ್ತಾ ಹೆಜ್ಜೆಗಳನ್ನು ಹಾಕುತ್ತಿದ್ದರು. ಪೂಜಾಳನ್ನು ಕಂಡೊಡನೆಯೇ ಅವರು ರೇಗಿದರು, “ಫ್ಲೈಟ್ ಲ್ಯಾಂಡ್ ಆಗಿ ಎಷ್ಟೋ ಹೊತ್ತಾಗಿದೆ ! ನೀನು ಹೊರಗೆ ಇಷ್ಟು ತಡವಾಗಿ ಯಾಕೆ ಬಂದೆ ?”
ಪೂಜಾ ‘ಡ್ಯಾಡಿ’ ಎಂದು ಅವರನ್ನು ಅಪ್ಪಿದಳು. ಮಗಳು ಇಷ್ಟೊಂದು ದಿನಗಳ ನಂತರ ಬರುತ್ತಿದ್ದಾಳೆ, ತಾವು ರೇಗಿ ಮಾತನಾಡುತ್ತಿವೆ ಎಂದು ಸುನೀಲ್ ನಾಚಿದರು. ಅವರು ಸ್ನೇಹದಿಂದ ಅವಳ ತಲೆಯನ್ನು ನೇವರಿಸಿದರು.
ಅವರಿಂದ ಬಿಡಿಸಿಕೊಂಡ ಪೂಜಾ ಅವರಿಗೆ ವಿವೇಕನನ್ನು ಪರಿಚಯಿಸಿದಳು. ವಿವೇಕ ಅವರಿಗೆ ಕೈ ಮುಗಿಯಬೇಕೆಂದಿದ್ದ, ಆದರೆ ಅವರು ಕೂಡಲೇ ತಮ್ಮ ಕೈಯನ್ನು ಮುಂದಕ್ಕೆ ಚಾಚಿ ಉತ್ಸಾಹದಿಂದ ಅವನ ಕೈಯನ್ನು ಹಿಡಿದುಕೊಂಡರು.
ಅವನು ಮಿಶನರಿಯ ಕೆಲಸದ ಮೇರೆಗೆ ಬಂದಿರುವ ವಿಷಯವನ್ನು ಪೂಜಾ ತಿಳಿಸಿದಳು.
“ನೀವಿಲ್ಲಿಗೆ ಬಂದಿರುವ ವಿಷಯ ನಿಮ್ಮ ಮಿಶನರಿಯವರಿಗೆ ಗೊತ್ತಿದೆಯಾ ? ಅವರು, ನೀವು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರಾ?” ಪೂಜಾ ವಿವೇಕನನ್ನು ಕೇಳಿದಳು.
ವಿವೇಕ ಇನ್ನೂ ಗಾಬರಿಯಲ್ಲಿಯೇ ಇದ್ದ. ಅವನು ಪೂಜಾಳ ಪ್ರಶ್ನೆಗೆ ಉತ್ತರಿಸದಾದ.
“ಫೋನ್ ಮಾಡಿ. ನೀವಿಲ್ಲಿಗೆ ಬಂದಿರುವ ವಿಷಯ ಅವರಿಗೆ ತಿಳಿಸಿ” ಪೂಜಾ ಸಲಹೆಯಿತ್ತಳು.
ಸುನೀಲರು ಕೂಡಲೇ ತಮ್ಮ ಮೊಬೈಲನ್ನು ವಿವೇಕನೆಡೆಗೆ ಚಾಚಿದರು. ವಿವೇಕ ತನ್ನ ಬ್ಯಾಗಿನಿಂದ ಒಂದು ಪತ್ರವನ್ನು ಹೊರತೆಗೆದು ತನ್ನ ಮಿಶನ್‌ನ ಫೋನ್ ನಂಬರ್ ನೋಡಿದ. ನಂತರ ಕಂಪಿಸುವ ಬೆರಳುಗಳಿಂದ ನಂಬರ್ ಒತ್ತಿದ.
“ಗುಡ್ ಡೆ ! ಡಿ ಇಯ್ ಕೆಬೀಸೀ ಮಿಶನ್. ಮಾಂ ಆಯಿ ಯೆಲ್ಪ್ ಡಾಈ” ಮತ್ತೊಂದು ಕಡೆಯಿಂದ ಡೇನಿಶ್ ಭಾಷೆಯಲ್ಲಿ ಮಹಿಳೆಯೊಬ್ಬಳ ಸ್ವರ ಕೇಳಿತು.
ವಿವೇಕ ಗಾಬರಿಗೊಂಡ. ಇದೆಂಥ ಹೊಸ ಭಾಷೆ... ತಕ್ಷಣ ಅವನು ಪೂಜಾಳಿಗೆ ಮೊಬೈಲ್ ಕೊಟ್ಟ. ಪೂಜಾ ಆ ಮಹಿಳೆಯೊಂದಿಗೆ ಡೆನಿಶ್ ಭಾಷೆಯಲ್ಲಿ ವಿವೇಕನ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿ, ನಂತರ ವಿವೇಕನಿಗೆ “ಅವರಿಗೆ ನೀವು ಬರುವ ವಿಷಯ ತಿಳಿದೇ ಇಲ್ಲ. ಅವರಿಗೆ ನಿಮ್ಮ ಹೆಸರೂ ಸಹ ಗೊತ್ತಿಲ್ಲ” ಎಂದಳು.
ವಿವೇಕ ಮತ್ತೂ ನಿರಾಶನಾದ. ಅವನ ಆರೋಗ್ಯದಲ್ಲಿ ಮತ್ತೆ ಏರುಪೇರಾಯಿತು. ಆಸರೆಗಾಗಿ ಒಂದು ಕಂಬವನ್ನು ಹಿಡಿದುಕೊಂಡ.
ಅವನ ಪರಿಸ್ಥಿತಿ ಕಂಡು ಸುನೀಲರಿಗೆ ಕರುಣೆ ಬಂದಿತು. ಇದ್ದಕ್ಕಿದ್ದಂತೆ ಅವರಿಗೆ ತಮ್ಮ ಹಿಂದಿನ ದಿನಗಳು ನೆನಪಾದವು... ಅವರು ಮೊದಲ ಬಾರಿಗೆ ಡೆನ್ಮಾರ್ಕ್‌ಗೆ ಬಂದಾಗ ಎಲ್ಲವೂ ಅದೆಷ್ಟು ಅನ್ಯವೆಂದು ಭಾಸವಾಗಿತ್ತು !
“ಇವರನ್ನು ಮೊದಲು ನಮ್ಮ ಮನೆಗೆ ಕರೆದುಕೊಂಡು ಹೋಗು” ಅವರು ಪೂಜಾಳಿಗೆ ಹೇಳಿದರು, “ಇವರು ಮೊದಲು ಕೈಕಾಲು ತೊಳೆದು ಸ್ನಾನ ಮಾಡಲಿ, ಊಟ ಮಾಡಲಿ, ಆಮೇಲೆ ಮನೆಯಿಂದಲೇ ಫೋನ್ ಮಾಡಿ, ಇವರೆಲ್ಲಿಗೆ ಹೋಗ್ಬೇಕು ಅಂತ ಪತ್ತೆ ಹಚ್ಚು”.
ಪೂಜಾ ಉತ್ತರಕ್ಕಾಗಿ ವಿವೇಕನನ್ನು ನೋಡಿದಳು.
ವಿವೇಕ ಒಪ್ಪಿಗೆಯಲ್ಲಿ ಕತ್ತನ್ನು ಆಡಿಸಿದ. ವಿದೇಶದಲ್ಲಿ ಅಪರಿಚಿತ ಜನರ ನಡುವೆ ಪ್ರಾರಂಭಿಸುವ ಈ ವಿಧಾನ ಅವನಿಗೆ ಅತ್ಯುತ್ತಮವೆಂದು ಅನ್ನಿಸಿತು. ಪೂಜಾಳಿಗೆ ಅವನ ಬಗ್ಗೆ ಸಹಾನುಭೂತಿ ಮತ್ತು ಕುತೂಹಲವೂ ಮೂಡಿತ್ತು. ಅವನು ತಮ್ಮ ದೇಶದವನು ಎಂಬ ಭಾವನೆಯಿಂದ ಸುನೀಲರು ಅವನಿಗೆ ಸಹಾಯ ಮಾಡುತ್ತಿದ್ದರು.
ತಾಸ್ತುಪ್‌ನಲ್ಲಿ ಅವರಿಗೆ ಒಂದು ಅತ್ಯಂತ ಸುಂದರ ಮತ್ತು ಭವ್ಯ ಬಂಗ್ಲೆಯಿತ್ತು. ಸುಧಾ ಇನ್ನೂ ಕಛೇರಿಯಿಂದ ಮನೆಗೆ ಬಂದಿರಲಿಲ್ಲ. ಅವಳು ನೌಕರಿಯಲ್ಲಿ ಸುನೀಲರಿಗಿಂತ ಹೆಚ್ಚು ತೊಡಗಿಕೊಂಡಿರುತ್ತಿದ್ದಳು. ಅವಳ ನೌಕರಿ ಸುನೀಲರ ನೌಕರಿಗಿಂತ ಉತ್ತಮವಾಗಿತ್ತು, ವೇತನವೂ ಚೆನ್ನಾಗಿತ್ತು. ಅವಳ ವಿದ್ಯಾಭ್ಯಾಸ, ಬಾಲ್ಯದಿಂದ ಡೆನ್ಮಾರ್ಕ್‌ನಲ್ಲಾಗಿತ್ತು. ಆದರೆ ಸುನೀಲರು ಪ್ರೌಢ
ವಯಸ್ಸಿನಲ್ಲಿ ವಿವಾಹವಾದ ನಂತರ ಡೆನ್ಮಾರ್ಕ್‌ಗೆ ಬಂದಿದ್ದರು. ಒಂದು ಹೊಸ ಅಪರಿಚಿತ ಸ್ಥಳದಲ್ಲಿ ನೌಕರಿ ಹುಡುಕಿ, ಜೀವನದಲ್ಲಿ ನೆಲೆಯೂರುವುದು ಸುಲಭದ ಮಾತಲ್ಲ !
ಹೊಸ ಭಾಷೆ ಕಲಿಯಬೇಕಾಗುತ್ತದೆ, ಹೊಸ ರೀತಿ-ನೀತಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಹೊಸ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಸುನೀಲರಿಗೆ ತಮಗೊಂದು ಸಾಮಾನ್ಯ ನೌಕರಿಯನ್ನಷ್ಟೇ ಹಿಡಿಯಲು ಸಾಧ್ಯವಾಯಿತು. ಆದರೆ ಶ್ರೀಮಂತ ದೇಶಗಳಲ್ಲಿ ಜೀವನಕ್ಕೆ ಬೇಕಾದ ಸೌಲಭ್ಯ ಮತ್ತು ಅನುಕೂಲಕರ ವಸ್ತುಗಳು ಎಲ್ಲರಿಗೂ ಲಭಿಸುತ್ತವೆ. ಸುಧಾಳ ನೌಕರಿ ಮತ್ತು ವೇತನ
ಸಾಕಷ್ಟು ಉತ್ತಮವಾಗಿತ್ತು. ಅಲ್ಲದೆ ಪೂಜಾ ಅವರ ಏಕಮಾತ್ರ ಪುತ್ರಿಯಾಗಿದ್ದಳು. ಅವರಿಗೆ ಹೆಚ್ಚು ಸೌಕರ‍್ಯ ಮತ್ತು ಆದಾಯವಿತ್ತು !

ವಿವೇಕನಿಗೆ ಮೊದಲು ಚಹಾ ಕೊಡಲಾಯಿತು. ನಂತರ ಅವನು ಸ್ನಾನ ಮಾಡಿ ತಿಂಡಿ ತಿಂದ. ಈ ನಡುವೆ ಸುನೀಲ್ ಮತ್ತು ಪೂಜಾ ಇಬ್ಬರೂ ಫೋನಿನಲ್ಲಿ ತೊಡಗಿಸಿಕೊಂಡರು. ಫೋನ್‌ನಲ್ಲಿ ಮಾತನಾಡಿ ‘ಕೆಬೀಸೀ ಮಿಶನ್’ ನಿಂದ, ವಿವೇಕ ಎಲ್ಲಿಗೆ ಹೋಗಬೇಕೆಂಬುದನ್ನು ಪತ್ತೆ ಮಾಡಿಕೊಂಡರು. ಪೂಜಾಳೇ ಅವನನ್ನು ಕಾರಿನಲ್ಲಿ ಅವನ ಕೆಬೀಸೀ ಮಿಶನ್‌ಗೆ ಬಿಡಲು ಹೋದಳು.
ಭಾರತದಲ್ಲಿ ಪೂಜಾಳಿಗೆ ಐದು ವರ್ಷಗಳು ಬದಲಾವಣೆಯ ಕಾಲವಾಗಿತ್ತು. ಡೆನ್ಮಾರ್ಕ್‌ಗೆ ಮರಳಿ ಬಂದು, ಉತ್ಸಾಹ ಮತ್ತು ಸಂತೋಷದಿಂದಿದ್ದಳು. ಸುಧಾ ಮತ್ತು ಸುನೀಲ್, ತಮ್ಮ ಮನೆಗೆ ಕೆಲವರು ಭಾರತೀಯ ಮಿತ್ರರನ್ನು ಡಿನ್ನರ್‌ಗೆ ಆಹ್ವಾನಿಸಿದರು.

ಹೊಸದಾಗಿ ಡೆನ್ಮಾರ್ಕ್‌ನಲ್ಲಿ ವಾಸಿಸಲು ಬಂದ ಕೆಲವು ಭಾರತೀಯರನ್ನು ಭೇಟಿಯಾಗುವ ಅವಕಾಶ ಸಿಗಲೆಂದು ವಿವೇಕನನ್ನು ಆಹ್ವಾನಿಸಿದರು. ಅವನನ್ನು ಭೇಟಿ ಮಾಡಿದ ಎಲ್ಲರೂ ಉತ್ಸುಕರಾದಂತೆ ಕಂಡಿತು. ಅವನು ಕೆಳವರ್ಗದವನೂ ಆಗಿರಲಿಲ್ಲ, ಬಡವರ ಮನೆಯವನೂ ಆಗಿರಲಿಲ್ಲ. ಒಳ್ಳೆಯ ವಿದ್ಯಾಭ್ಯಾಸ ಮಾಡಿದ್ದ. ಎಂ.ಎ. ಜೊತೆಗೆ ಎಲ್.ಎಲ್.ಬಿ. ಯನ್ನೂ ಮಾಡಿದ್ದ. ಅವನ ಧರ್ಮ
ಪರಿವರ್ತನೆಗೆ ಕಾರಣ ?
“ಧರ್ಮ ಒಂದು ಶುದ್ಧ ವೈಯಕ್ತಿಕ ವಿಷಯ. ಇದೊಂದು ಭಾವನೆ, ಒಂದು ನಂಬಿಕೆ. ಒಂದು ವೇಳೆ ನಾನು ಕೆಲವು ಭಾವನೆಗಳು ಮತ್ತು ನಂಬಿಕೆಗಳಿಂದಾಗಿ ಮತಾಂತರಗೊಂಡಿದ್ದರೆ, ನಾನು ಯಾವ ಅನರ್ಥವನ್ನೂ ಮಾಡಿಲ್ಲ” ಎಂದ ವಿವೇಕ.
ಜನ ಕಕ್ಕಾಬಿಕ್ಕಿಯಾದರು. ಪೂಜಾಳ ಮುಖದಲ್ಲಿ ಮುಗುಳ್ನಗೆಯೊಂದು ಮೂಡಿತು. ವಿವೇಕ ಎಷ್ಟು ಚೆನ್ನಾಗಿ ಮಾತನಾಡುತ್ತಾನೆ!
ಅವನ ವ್ಯಕ್ತಿತ್ವ ಅದೆಷ್ಟು ಆಕರ್ಷಕವಾಗಿದೆ. ಅವಳು ಅವನ ಬಗ್ಗೆ ಸಮ್ಮೋಹನಕ್ಕೊಳಗಾದಂತೆ ಭಾಸವಾದಳು.
ವಿವೇಕ ಪೂಜಾಳಿಗೆ ಫೋನ್ ಮಾಡುತ್ತಿದ್ದ. ಪೂಜಾ ಅವನಿಗೆ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದಳು. ಅವನು ಅವಳ ಮೊಬೈಲ್‌ಗೆ ಫೋನ್ ಮಾಡುತ್ತಿದ್ದ. ತಾನು ಒಂಟಿಯಾಗಿ ಇಲ್ಲಿ ಬೋರ್ ಹೊಡೆಯುತ್ತಿರುವೆ ಎನ್ನುತ್ತಿದ್ದ. ಒಂದು ದಿನ "ಮಿಶನರಿಯ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ನನ್ನ ಬಳಿ ಸಾಕಷ್ಟು ಸಮಯ ಉಳಿದಿರುತ್ತದೆ. ನಾನು ನೌಕರಿ ಮಾಡಲು ಬಯಸುತ್ತೇನೆ. ಹಣಕ್ಕೂ ತೊಂದರೆಯಾಗುತ್ತಿದೆ. ನೀನು ನನಗೊಂದು ನೌಕರಿ ನೋಡ್ತೀಯಾ?" ಎಂದು ಹೇಳಿದ.
“ನಾನು ನಿಮಗೆ ನೌಕರಿಗೆ ಹೇಗೆ ಹುಡುಕಲಿ ? ನೀವು ನೌಕರಿಗೆ ಮೊದಲು ಡೆನಿಶ್ ಭಾಷೆ ಕಲಿಯಬೇಕಾಗುತ್ತೆ” ಪೂಜಾ ನಕ್ಕಳು.
“ನೀವು ನನಗೆ ಡೆನಿಶ್ ಕಲಿಸ್ತೀರ?”
“ನಾನು ನಿಮಗೆ ಡೆನಿಶ್ ಕಲಿಸುವ ಅಗತ್ಯವಿಲ್ಲ. ಇಲ್ಲಿ ಕಮ್ಯೂನ್‌ನ (ಸ್ಥಳೀಯ ಸರ್ಕಾರ) ಅನೇಕ ಶಾಲೆಗಳಿವೆ. ಅಲ್ಲಿ ನೀವು ಪುಕ್ಕಟೆಯಾಗಿ ಡೆನಿಶ್ ಕಲಿಯಬಹುದು”.
“ಸರಿ”.
“ಸರಿ, ನಾನು ನಿಮಗೆ ಡೆನ್ಮಾರ್ಕ್‌ನ ಕೆಲವು ಟೂರಿಸ್ಟ್ ಸ್ಪಾಟ್‌ಗಳಿಗೆ ಕರೆದುಕೊಂಡು ಹೋಗುತ್ತೇನೆ. ಮುಂದಿನ ಶನಿವಾರ ನೀವು ಸಿದ್ಧರಾಗಿರಿ. ನಾನು ನಿಮ್ಮನ್ನು ಕರೆದೊಯ್ಯಲು ಮಿಶನ್‌ಗೆ ಬರ‍್ತೀನಿ” ಪೂಜಾ ಹೇಳಿದಳು.
ಕೋಪನ್‌ಹೇಗನ್ ತುಂಬಾ ದೊಡ್ಡ ನಗರವಾಗಿರಲಿಲ್ಲ. ವಿಶಾಲ ಅಗಲ ರಸ್ತೆಗಳು, ಉತ್ತಮ ವೇಗದಲ್ಲಿ ಸರ್ss ಎಂದು ಓಡಾಡುವ ವಾಹನಗಳು. ಅವರು ಒಂದು ದಿನದಲ್ಲಿಯೇ ಅನೇಕ ಸ್ಥಳಗಳನ್ನು ನೋಡಿದರು. ಸಮುದ್ರ ತೀರದ ಬಂಡೆಯ ಮೇಲೆ ಕೂತ ಲಿಟಲ್ ಮರ್‌ಮೇಡ್‌ನ ಕಲ್ಲಿನ ಪ್ರತಿಮೆಯನ್ನು ನೋಡಿದರು. ಕ್ವೀನ್ ಪ್ಯಾಲೇಸ್‌ನ ಕಾಂಪೌಂಡಿನಲ್ಲಿ ಕೆಂಪು ಕೋಟು, ಕಪ್ಪು
ಹ್ಯಾಟು ಧರಿಸಿ ನಿಂತಿದ್ದ ಸೈನಿಕರ ಪರೇಡ್ ನೋಡಿದರು. ವಾಕಿಂಗ್ ಸ್ಟ್ರೀಟ್‌ನ ಒಂದು ತುದಿಯಿಂದ ಮತ್ತೊಂದು ತುದಿಗೆ ವಾಕ್ ಮಾಡಿದರು. ಕೆನಾಲ್ ಟೂರ್ ಮಾಡಿದರು. ಚರ್ಚ್ ಟವರ್‌ನ ಮೆಟ್ಟಿಲುಗಳನ್ನೇರಿ ಮೇಲಿನಿಂದ ಇಡೀ ಕೋಪನ್‌ಹೇಗನ್‌ನ ದೃಶ್ಯ ನೋಡಿದರು.
ವಿವೇಕ ತುಂಬಾ ಖುಷಿಗೊಂಡ. ಪೂಜಾಳಿಗೆ ಧನ್ಯವಾದ ಹೇಳಿದಾಗ ಪೂಜಾ ಹೇಳಿದಳು, “ನಿಮ್ಮೊಂದಿಗೆ ಅಡ್ಡಾಡಲು ನನಗೂ ಖುಷಿಯಾಗುತ್ತೆ, ಮಜವೆನಿಸುತ್ತದೆ. ಮುಂದೆ ಎಂದಾದರೂ ಮತ್ತೆ ಅಡ್ಡಾಡಲು ಹೋಗೋಣ. ಇಲ್ಲಿ ಬಾಕ್ಕನ್ ಮತ್ತು ಟೀವೋಲಿ ತುಂಬಾ ಪ್ರಸಿದ್ಧಿಯಾಗಿವೆ. ಕೋಪನ್‌ಹೇಗನ್‌ನ ಪರಿಸರದಿಂದ ಸ್ವಲ್ಪ ದೂರದಲ್ಲಿ ಸಮರ್‌ಲ್ಯಾಂಡ್, ಬಾನ್-ಬಾನ್
ಲ್ಯಾಂಡ್, ಲಿಗೋಲ್ಯಾಂಡ್‌ನಂತಹ ತುಂಬಾ ಸ್ಥಳಗಳಿವೆ. ಇವೆಲ್ಲಾ ಬೇಸಿಗೆಯ ಪಿಕ್‌ನಿಕ್ ಸ್ಪಾಟ್ಸ್ಗಳು. ಇಲ್ಲಿ ಸೆಪ್ಟೆಂಬರ್‌ರವರೆಗೆ ಬೇಸಿಗೆ ಕಾಲವಿರುತ್ತದೆ. ಈಗ ಆಗಸ್ಟ್ ನಡೀತಿದೆ. ನಮ್ಮ ಬಳಿ ಬೇಕಾದಷ್ಟು ಸಮಯವಿದೆ. ನಾವು ಈ ಎಲ್ಲಾ ಪಿಕ್‌ನಿಕ್ ಸ್ಪಾಟ್ಸ್ಗಳಿಗೆ ಹೋಗೋಣ”.
ಪೂಜಾ ಕಾರನ್ನು ಚಾಲನೆ ಮಾಡುತ್ತಿದ್ದಳು. ವಿವೇಕ ಅವಳ ಪಕ್ಕದಲ್ಲಿ ಕೂತಿದ್ದ. ಅವಳ ಮಾತುಗಳನ್ನು ಕೇಳುತ್ತಾ ವಾತಾವರಣವನ್ನು ಗಮನಿಸುತ್ತಿದ್ದ. ಸೈಕಲ್ ತುಳಿಯುವ ಜನರನ್ನು ನೋಡಿ ಹೇಳಿದ, “ಡೆನ್ಮಾರ್ಕ್ ಸೈಕಲ್ ಪ್ರೇಮಿಗಳ ದೇಶವೆಂದು ತೋರುತ್ತದೆ.
ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಸೈಕಲ್ ಹೊಡೆಯುತ್ತಾರೆ”.
“ಹೌದು, ಇಲ್ಲಿ ಜನ ಸೈಕಲ್ ಸವಾರಿ ಹೆಚ್ಚು ಮಾಡ್ತಾರೆ. ನಾನು ಈ ಕಾರನ್ನು ಕಳೆದ ವರ್ಷವಷ್ಟೇ ಕೊಂಡೆ. ಇದಕ್ಕೂ ಮೊದಲೂ ನಾನೂ ಸೈಕಲ್ ಹೊಡೆಯುತ್ತಿದ್ದೆ”.
“ಒಳ್ಳೇದು. ಸೈಕಲ್ ತುಳಿಯುವುದರಿಂದ ವ್ಯಾಯಮವೂ ಆಗುತ್ತೆ, ವಾತಾವರಣವೂ ಮಾಲಿನ್ಯಗೊಳ್ಳುವುದಿಲ್ಲ”.
“ನೀವು ಸದಾ ಸ್ವಾರಸ್ಯಕರವಾದ ಮಾತುಗಳನ್ನೇ ಆಡ್ತೀರ” ಪೂಜಾ ನಕ್ಕಳು. ಅವಳ ಬಾಯಿಂದ ತನ್ನ ಹೊಗಳಿಕೆ ಮಾತುಗಳನ್ನು ಕೇಳಿ ವಿವೇಕ ಗದ್ಗದಿತನಾದ.
ಅವರು ಐದು ಗಂಟೆಯ ಕಾಲಾವಧಿಯನ್ನು ಒಟ್ಟಿಗೆ ಕಳೆದು ಮನೆಗೆ ಬಂದಾಗ ಇಬ್ಬರೂ ಪರಸ್ಪರರಲ್ಲಿ ಹೆಚ್ಚು ಸೆಳೆತವನ್ನು ಮನಗಂಡರು. ಪೂಜಾ ಡಿಟಿಯೂ-ಡೆನ್ಮಾರ್ಕ್ ಟಿಕ್ನಿಕಲ್ ಯೂನಿವರ್ಸಿಟಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಕೋರ್ಸನ್ನು ಅಧ್ಯಯನ ಮಾಡುತ್ತಿದ್ದಳು. ವಿವೇಕ ಕ್ರಿಶ್ಚಿಯನ್ ಧರ್ಮವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದ. ಇದು ನಾಲ್ಕು ವರ್ಷಗಳ ಕೋರ್ಸ್ ಆಗಿತ್ತು. ತದನಂತರ ಅವನು ಭವಿಷ್ಯದಲ್ಲಿ ಒಂದು ಚರ್ಚ್‌ಗೆ ಪಾಸ್ಟರ್ ಆಗಬೇಕಿತ್ತು.
ಅವರು ಸಿನಿಮಾ ನೋಡಲು ಹೋಗುತ್ತಿದ್ದರು, ರೆಸ್ಟೋರೆಂಟ್‌ಗೆ ಹೋಗುತ್ತಿದ್ದರು. ಅವರು ಡೆನ್ಮಾರ್ಕ್ ಅಕ್ಕ-ಪಕ್ಕದ ದೇಶಗಳನ್ನು ಸುತ್ತಾಡಿದರು. ಹಡಗಿನಲ್ಲಿ ‘ಓಸಲೋ’ ಕ್ಕೆ ಹೋದರು. ಹಚ್ಚ ಹಸಿರು ಸಮುದ್ರ ಘಟ್ಟಗಳ ನಡುವೆ ಹಾದು ಹೋಗುವ ಹಡಗು ಮತ್ತು ಪೂಜಾಳ ಸಾನ್ನಿಧ್ಯ... ವಿವೇಕನಿಗೆ ತುಂಬಾ ಹಿತವೆನ್ನಿಸುತ್ತಿತ್ತು. ಪೂಜಾಳಿಗೂ ಅವನ ಜೊತೆ ಮೆಚ್ಚಿಗೆಯಾಗಿತ್ತು.

ಇಪ್ಪತ್ತನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದ ಅವಳು ವಿದೇಶದ ಸ್ವಚ್ಛಂದ ವಾತಾವರಣದಲ್ಲಿ ಬೆಳೆದಿದ್ದರೂ, ಅವಳನ್ನು ಇದುವರೆಗೆ ಯಾರೂ ಸ್ಪರ್ಶಿಸಿರಲಿಲ್ಲ. ವಿವೇಕನ ಪ್ರೇಮ-ಸ್ಪರ್ಶ ಅವಳ ತನು-ಮನವನ್ನು ತೋಯಿಸುತ್ತಿತ್ತು. ಚಳಿಗಾಲದಲ್ಲಿ ಹಿಮ ಬಿದ್ದಾಗ ಅವರು ಬಳಿಯಿದ್ದ ಇಸಾಬರ್ಗ್ (ಸ್ವೀಡನ್) ಸ್ಕೇಟಿಂಗ್‌ಗೆ ಹೋದರು. ಇಬ್ಬರೂ ಪರಸ್ಪರ ಸಮೀಪಕ್ಕೆ ಬರಲಾರಂಭಿಸಿದರು. ಒಂದು ರೊಮ್ಯಾಂಟಿಕ್ ಸಂಬಂಧ ಅವರಿಬ್ಬರ ನಡುವೆ ಬೆಳೆಯುತ್ತಿತ್ತು... ತಮ್ಮ ಮಗಳು ಕೆಲಸ ಬಾರದ ಹುಡುಗನೊಂದಿಗೆ ಪ್ರೇಮದ ಉಯ್ಯಾಲೆಯಲ್ಲಿ ಜೋಕಾಲೆಯಾಟವಾಡುತ್ತಿರುವ ವಿಷಯ ಸುಧಾ ಮತ್ತು ಸುನೀಲರಿಗೆ
ತಿಳಿದಿರಲಿಲ್ಲ. ಅವರಿಗೆ ತಮ್ಮ ಮಗಳ ಚಲನವಲನಗಳು ತಿಳಿದಿರಲಿಲ್ಲವೆಂದಲ್ಲ, ಆದರೆ ಅವರಿಗೆ ತಮ್ಮ ಮಗಳ ಬಗೆಗಿದ್ದ ವಿಶ್ವಾಸ ಅವರನ್ನು ಮೈಮರೆಸಿತ್ತು.
“ನಮ್ಮ ಚರ್ಚ್ನಲ್ಲಿ ಸರ್ಮನ್ ಇದೆ, ಅಲ್ಲಿ ನಾನು ಮೊದಲ ಬಾರಿಗೆ ಓರ್ವ ಮೇನ್ ಸ್ಪೀಕರನ ಭೂಮಿಕೆಯನ್ನು ನಿರ್ವಹಿಸುತ್ತೇನೆ. ಒಂದು ವೇಳೆ ನೀನು ಕೇಳಲು ಇಷ್ಟಪಡುವುದಾದರೆ ಮತ್ತು ನನ್ನ ಮೊದಲ ಸರ್ವೀಸನ್ನು ನೋಡಬೇಕೆಂದರೆ ನಿನಗೆ ಆಹ್ವಾನವಿದೆ”.
ಪೂಜಾ ಅವನ ಕೈ ಹಿಡಿದು ಕೋಪನ್‌ಹೇಗನ್ ರಸ್ತೆಗಳಲ್ಲಿ ಹೀಗೇ ಅಡ್ಡಾಡುತ್ತಿದ್ದಳು. ಅವಳು ಇದ್ದಕ್ಕಿದ್ದಂತೆ ನಿಂತುಕೊಂಡಳು.
ಅವನು ಮುಗುಳ್ನಗುತ್ತಾ, ಕಣ್ಣುಗಳನ್ನು ಪಿಳಕಿಸುತ್ತಾ ಮತ್ತೆ ಹೇಳಿದ, “ನಾಳೆ ನನ್ನ ಚರ್ಚ್ನ ಸರ್ವೀಸ್‌ನಲ್ಲಿ ನಾನು ಮೇನ್ ಸ್ಪೀಕರ್. ನೀನು ಬರ‍್ತೀಯಾ?”
ಪೂಜಾ ಡೆನ್ಮಾರ್ಕ್‌ನಲ್ಲಿ ನೆಲೆಸಿದ್ದಳು. ಹೀಗಾಗಿ ಚರ್ಚಿಗೆ ಹೋಗುವುದು ಅಸಹಜ ಸಂಗತಿಯಾಗಿರಲಿಲ್ಲ. ಅವಳು ತುಂಬಾ ಸಂತೋಷದಿಂದ ಒಪ್ಪಿಗೆಯಿತ್ತು, ಅವನಿಂದ ಚರ್ಚ್ ವಿಳಾಸವನ್ನು ತೆಗೆದುಕೊಂಡಳು.
ಇಂಟರ್‌ನ್ಯಾಶನಲ್ ಪ್ರೋಟೆಸ್ಟೆಂಟ್ ಚರ್ಚ್, 208 ಲಿಂಬೀವಾಯ್. ಚರ್ಚ್ನ ಸರ್ವೀಸ್ ಹತ್ತು ಗಂಟೆಗೆ ಪ್ರಾರಂಭವಾಗುವುದಿತ್ತು.
ಪೂಜಾ ಸರಿಯಾದ ವೇಳೆಗೆ ಹೋದಳು. ಚರ್ಚ್ಗೆ ಬಂದಿದ್ದ ಜನ ಬೇರೆ-ಬೇರೆ ದೇಶದವರಂತೆ ಕಾಣಿಸುತ್ತಿದ್ದರು. ವಿವೇಕ, ಸಾಕಷ್ಟು ಹಿರಿಯರಾಗಿದ್ದ ಮುಖ್ಯ ಪಾಸ್ಟರ್‌ವರನ್ನು ಪರಿಚಯಿಸಿದ. ನಂತರ ಹೇಳಿದ, “ನಮ್ಮದು ಇಂಟರ್‌ನ್ಯಾಶನಲ್ ಚರ್ಚ್. ಹನ್ನೆರಡು ದೇಶಗಳಿಂದ ಡೆನ್ಮಾರ್ಕ್‌ಗೆ ಬರುತ್ತಿರುವ ಜನರಿಗಾಗಿಯೇ ಈ ಚರ್ಚ್ ಇದೆ. ಆಸ್ಟ್ರೇಲಿಯಾ, ಅಮೆರಿಕನ್, ಆಫ್ರಿಕನ್, ಮೆಕ್ಸಿಕನ್‌ಎಲ್ಲಾ ದೇಶದ ಜನರಿದ್ದಾರೆ”.
ಪೂಜಾಳಿಗೆ ಚರ್ಚ್ ತುಂಬಾ ಭವ್ಯವಾಗಿದೆಯೆಂದು ಅನ್ನಿಸಿತು. ಮೈಕ್ ಮತ್ತು ಸಂಗೀತ ವಾದ್ಯಗಳಿಂದ ಸುಸಜ್ಜಿತಗೊಂಡ ಮರದ ವಿಶಾಲ ವೇದಿಕೆ. ಜನರು ಕೂರಲು ಮರದ ಉತ್ತಮ ದರ್ಜೆಯ ಬಾಕ್ಸ್ಗಳು. ಅಲ್ಲಲ್ಲಿ ಮರದ ಆಕರ್ಷಕ ಕೆತ್ತನೆ-ಕಲೆ.
ಕ್ರಾಸ್‌ನಲ್ಲಿ ಜೀಸಸ್ ವಿಗ್ರಹ !
ವಿವೇಕ ಹಿರಿಯ ಪಾಸ್ಟರ್ ಜೊತೆಯಲ್ಲಿ ವೇದಿಕೆಗೆ ಹೋದ. ಅವರು ಮೈಕ್ ಎದುರು ನಿಂತರು. ಜನರು ಮರದ ಬಾಕ್ಸ್ಗಳಿಗೆ ಹೋಗಿ ಸ್ಥಾನವನ್ನು ಅಲಂಕರಿಸಿದರು. ಮೊಟ್ಟ ಮೊದಲಿಗೆ ‘ದ ಲಾರ್ಡ್ ಪ್ರೇಯರ್’ ಪ್ರಾರಂಭವಾಯಿತು.
‘ಅವರ್ ಫಾದರ್, ಹೂ ಆರ್ಟ್ ಇನ್ ಹೆವನ್, ಹೆಲೋಡ್ ಬಿ ದಾಯ್ ನೇಮ್... ಆಮೆನ್’.
ಪ್ರಾರ್ಥನೆಯ ನಂತರ ಪಾಸ್ಟರ್ ಎಲ್ಲರಿಗೆ ವಿವೇಕನನ್ನು ಪರಿಚಯಿಸುತ್ತಾ ಅವನ ಹೆಸರು, ಮೂಲ ದೇಶ, ಡೆನ್ಮಾರ್ಕ್‌ಗೆ ಬಂದ ಉದ್ದೇಶ ಮತ್ತು ದಿನಾಂಕ ಇತ್ಯಾದಿಗಳನ್ನು ತಿಳಿಸಿದರು. ವಿವೇಕನ ಹೆಸರು ವಿವೇಕ್ ಕಕ್ಕಡ್‌ನಿಂದ ವಿಕ್ಕಿ ಕೆಮಡನ್ ಎಂದಾಗಿತ್ತು.
ನಂತರ ಹಿರಿಯ ಪಾಸ್ಟರ್ ಮೈಕನ್ನು ವಿವೇಕನೆಡೆಗೆ ಹಿಡಿದರು.
ವಿವೇಕ ಸ್ವಲ್ಪ ಹಿಂಜರಿಯುತ್ತಾ ಮೈಕ್ ಹಿಡಿದುಕೊಂಡ. ನಂತರ ಪೂಜಾಳೆಡೆಗೆ ನೋಡುತ್ತಾ ಹೇಳಿದ, “ಇವತ್ತು ನನಗೆ ಚರ್ಚ್ನ ಮೊದಲ ಸರ್ವೀಸ್ ಆಗಿದೆ. ಇಂದು ವಿಶೇಷ ಅತಿಥಿಗಳೊಬ್ಬರು ನಮ್ಮ ಚರ್ಚ್ನಲ್ಲಿದ್ದಾರೆ. ಅವರೇ ಮಿಸ್ ಪೂಜಾ ಶರ್ಮಾ. ಒಂದೂವರೆ ವರ್ಷದ ಹಿಂದೆ ನಾನು ಕೋಪನ್‌ಹೇಗನ್‌ಗೆ ಬಂದಾಗ ಮಿಸ್ ಪೂಜಾ ಶರ್ಮಾರವರು ಹೊಸ ಜಾಗ, ಹೊಸ ಜನರ ನಡುವೆ ಜೀವನವನ್ನು ಪ್ರಾರಂಭಿಸುವಲ್ಲಿ ನನಗೆ ತುಂಬಾ ಸಹಕಾರ ನೀಡಿದ್ದರು. ನಾನು ಅವರಿಗೆ ತುಂಬಾ
ಆಭಾರಿಯಾಗಿದ್ದೇನೆ”.
ಎಲ್ಲರೂ ಚಪ್ಪಾಳೆ ತಟ್ಟಿ ಪೂಜಾಳನ್ನು ಸಂಭ್ರಮದಿಂದ ಸ್ವಾಗತಿಸಿದರು. ಚಪ್ಪಾಳೆ ಧ್ವನಿಯಿಂದ ಚರ್ಚ್ ಪ್ರತಿಧ್ವನಿಸಿತು. ನಂತರ ಒಬ್ಬೊಬ್ಬರಂತೆ ಸುಮಾರಾಗಿ ಎಲ್ಲರೂ ಅವಳಿಗೆ ಕೈಕುಲುಕಿ ಅಭಿನಂದಿಸಲು ಅವಳ ಬಳಿಗೆ ಬಂದರು. ಪೂಜಾಳಿಗೆ ಸಂಕೋಚವೆನಿಸಿತು.
ಆದರೆ ಹಿತವಾಗಿ ಕಂಡಿತು. ಅವಳು ಇಂಥ ಸ್ವಾಗತಕ್ಕೆ ಸಿದ್ಧಳಿಲ್ಲ. ಚರ್ಚ್ನ ಕಲಾಪಗಳೂ ಇಂಗ್ಲೀಷ್‌ನಲ್ಲಿದ್ದವು. ವಿವೇಕ ಮೇನ್ ಸ್ಪೀಕರ್ ಆಗಿದ್ದ.
ವಿವೇಕನಿಗೆ ಇಂಗ್ಲಿಷ್ ಭಾಷೆಯಲ್ಲಿದ್ದ ಪ್ರಭುತ್ವ, ಅವನ ಪ್ರಭಾವಕಾರಿ ಧ್ವನಿ ಮತ್ತು ಸ್ಪಷ್ಟ ಮಾತುಗಳನ್ನು ಪೂಜಾ ಗಮನಿಸುತ್ತಿದ್ದಳು.
ಇಂದು ಅವನು ಹೊಸ ಸೂಟು-ಬೂಟಿನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದ. ಪೂಜಾ ಎವೆಯಿಕ್ಕದೆ ಅವನನ್ನು ನೋಡುತ್ತಿದ್ದಳು. ಉದ್ದ ನಿಲುವು, ಪ್ರಶಸ್ತವಾದ ಹೆಗಲುಗಳು, ಮೋಹಕ ಚಹರೆ... ಕಣ್ಣುಗಳ ರಚನೆ, ತುಟಿಗಳ ಸೀಳು, ಮೂಗಿನ ಆಕಾರ ಎಲ್ಲವೂ ಅಳತೆಯಂತೆ ನೀಟಾಗಿದ್ದವು. ವಿವೇಕ ಇಪ್ಪತ್ತೇಳು-ಇಪ್ಪತ್ತೆಂಟರ ಯುವಕನಾಗಿದ್ದ !
ವಾದ್ಯಗಳ ಮಧುರ ತರಂಗಗಳೊಂದಿಗೆ ಜೀಸಸ್‌ನ ಹಾಡು ಪ್ರಾರಂಭವಾಯಿತು. ಸುಂದರ ಹಾಡುಗಳನ್ನು ಕೇಳಿ ಪೂಜಾಳ ಮನಸ್ಸು ಉಲ್ಲಸಿತಗೊಂಡಿತು.
“ನಿಜವಾಗಿ ಭಕ್ತಿ ಸಂಗೀತದಲ್ಲೂ ಅದ್ಭುತ ಆನಂದವಿದೆ” ಪೂಜಾ ತನ್ನಲ್ಲೇ ಹೇಳಿಕೊಂಡಳು.
ನಂತರ ವಿವೇಕ ಬೈಬಲ್‌ನ ಕೆಲವು ಅಧ್ಯಾಯಗಳನ್ನು ಓದಿ, ಆಕರ್ಷಕವಾಗಿ ಅವುಗಳನ್ನು ವ್ಯಾಖ್ಯಾನಿಸಿದ- “ಜೀವನದ ಉದ್ದೇಶ ಪರಿಪೂರ್ಣತೆಯಲ್ಲಿ ಆನಂದವನ್ನು ಪಡೆಯುವುದಲ್ಲ, ಬದಲಾಗಿ ಅಪರಿಪೂರ್ಣತೆಯಲ್ಲಿ ಆನಂದವನ್ನು ಅರಸುವುದಾಗಿದೆ...”
“ಅನಿಶ್ಚಿತತೆಯಲ್ಲಿಯೇ ಜೀವನ ಸುರಕ್ಷಿತವಾಗಿದೆ, ನಿಶ್ಚಿತತೆಯಲ್ಲಿ ಅಲ್ಲ”.
“ಮನುಷ್ಯ ಸಾವಿಗೆ ಭಯಪಡಬಾರದು. ಸಾವಿನ ಆಭಾಸ ಜೀವನವನ್ನು ಸರಿಯಾದ ರೀತಿಯಲ್ಲಿ ಬದುಕಲು ಪ್ರೇರಣೆ ನೀಡುತ್ತದೆ...”
ಬೈಬಲ್ ನುಡಿಗಳು ಪೂಜಾಳ ಮನಸ್ಸನ್ನು ಸ್ಪರ್ಶಿಸಿದವು.
ಪೂಜಾ ತನ್ನ ಡಿಟಿಯೂನ ಅಧ್ಯಯನದಲ್ಲಿ ತೊಡಗಿಕೊಂಡರೆ, ವಿವೇಕ ತನ್ನ ಮಿಶನರಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದ. ಇಬ್ಬರ ಕ್ಷೇತ್ರ ಬೇರೆಯಾಗಿತ್ತು... ಆದರೆ ಅವರ ಸಂಬಂಧ ಗಾಢವಾಗುತ್ತಿತ್ತು. ಇಬ್ಬರೂ ವಿವಾಹವಾಗಲು ಯೋಚಿಸಿದರು. ಒಮ್ಮೆ ವಿವೇಕ ನಗುತ್ತಾ ಹೇಳಿದ, “ನೀನು ಪೂಜಾ ಶರ್ಮಾ ಮತ್ತು ನಾನು ವಿಕ್ಕೀ ಕೆಮಡನ್... !”
“ಪೂಜಾ ಶರ್ಮಾ ಮತ್ತು ವಿಕ್ಕೀ ಕೆಮಡನ್‌ರ ವಿವಾಹ ಸಾಧ್ಯ. ಕೋರ್ಟ್ನಲ್ಲಿ ನಮ್ಮ ವಿವಾಹವಾಗುವುದು. ಕೋರ್ಟ್ ಜಾತಿ ಮತ್ತು ಧರ್ಮವನ್ನು ಕೇಳುವುದಿಲ್ಲ. ನಾಲ್ಕು ಜನ ಸಾಕ್ಷಿಗಳಿದ್ದು, ವಿವಾಹವಾಗುವವರು ವಯಸ್ಕರಾಗಿರಬೇಕು, ಅಷ್ಟೆ”.
ವಿವೇಕ ಪ್ರೀತಿಯಿಂದ ಪೂಜಾಳ ಕೈಯನ್ನು ಹಿಡಿದುಕೊಂಡು ತನ್ನ ಅಧರಗಳನ್ನು ಅವಳ ಅಧರಗಳ ಮೇಲಿಟ್ಟ. ವಿದೇಶದ ರಸ್ತೆಗಳಲ್ಲಿ ಈ ದೃಶ್ಯ ವಿಚಿತ್ರವಾಗಿರಲಿಲ್ಲ. ಅದೆಷ್ಟೋ ಯುವ ಜೋಡಿಗಳು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಬಸ್‌ಗಳಲ್ಲಿ, ಪಾರ್ಕ್ಗಳಲ್ಲಿ ಪರಸ್ಪರ ತಬ್ಬಿಕೊಂಡಿರುವುದನ್ನು ಕಾಣಬಹುದಿತ್ತು. ವಿವೇಕನೂ ಸ್ವಲ್ಪ ಈ ಪ್ರವಾಹಕ್ಕೆ ಬಂದಿದ್ದ. ತಾನೊಬ್ಬ ಮಿಶನರಿ, ತನಗೆ ಇಂಥ ಚೇಷ್ಟೆಗಳು ಶೋಭೆ ತರುವಂಥದ್ದಲ್ಲವೆಂಬುದನ್ನು ಅವನು ಮರೆತುಬಿಟ್ಟಿದ್ದ.
ಪೂಜಾ ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಳು. ಕೊನೆಯ ವರ್ಷವಾಗಿತ್ತು. ಕೋರ್ಸ್ ವರ್ಕ್ ಸಂಬಂಧಪಟ್ಟಂತೆ ಅಂಕಿ ಅಂಶಗಳನ್ನು ಸಂಗ್ರಹಿಸಲು ಸಾಮಾನ್ಯವಾಗಿ ಅಕ್ಕ-ಪಕ್ಕದ ದೇಶಗಳಿಗೆ ಹೋಗಬೇಕಾಗುತ್ತಿತ್ತು. ಈ ನಡುವೆ ಅವಳ ಕುಟುಂಬದವರು
ಅವಳಿಗೆ ಯೋಗ್ಯ ವರಾನ್ವೇಷಣೆಯನ್ನು ಪ್ರಾರಂಭಿಸಿದರು. ವಿದೇಶಿ ನೆಲ... ಮನಸ್ಸು ಭಾರತದ್ದು ಮತ್ತು ಭಾರತೀಯತೆಯೊಂದಿಗೆ ಕಲೆತದ್ದು.... ಈ ಜಗ್ಗಾಟ ಹೊರ ದೇಶದಲ್ಲಿ ನೆಲೆಸಿದ ಭಾರತೀಯರಿಗೆ, ತಮ್ಮ ಮಕ್ಕಳಿಗೆ ವರ-ವಧುವನ್ನು ಹುಡುಕುವಲ್ಲಿ ಸಾಮಾನ್ಯವಾಗಿ ಪೇಚಿಗೆ ಸಿಲುಕಿಸುತ್ತದೆ.
ಪೂಜಾಳ ಕುಟುಂಬದವರು ಅವಳಿಗೆ ಸುಶಿಕ್ಷಿತ, ಯೋಗ್ಯವಾದ ಹಾಗೂ ವಿವಾಹದ ನಂತರ ಭಾರತದಿಂದ ಡೆನ್ಮಾರ್ಕ್‌ಗೆ ಬಂದು ನೆಲೆಸುವ ಭಾರತೀಯ ಹುಡುಗನನ್ನು ಇಷ್ಟಪಡುತ್ತಿದ್ದರು. ಆದರೆ ಈ ಶೋಧನೆ ಸುಲಭವಿರಲಿಲ್ಲ. ಭಾರತದ ಸುಶಿಕ್ಷಿತ ಹಾಗೂ ಯೋಗ್ಯ ಯುವಕರಿಗೆ ಡೆನ್ಮಾರ್ಕ್ ಹೆಚ್ಚು ಆಕರ್ಷಿಸುವುದಿಲ್ಲ. ಅಮೆರಿಕಾ ಮತ್ತು ಇಂಗ್ಲೆಂಡ್ ಅವರನ್ನು ಆಕರ್ಷಿಸುತ್ತವೆ,
ಆದರೆ ಡೆನ್ಮಾರ್ಕ್ ಅವರ ಬಯಕೆಯ ಪಟ್ಟಿಯಲ್ಲಿ ಕೆಳಗಿದೆ.
ತನಗೆ ಗಂಡು ಹುಡುಕುವ ವಿಷಯ ಪೂಜಾಳ ಕಿವಿಗೂ ಬಿತ್ತು. ಅವಳು ಅವರಿಗೆ ವಿವೇಕನೊಂದಿಗೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದಳು. ವಿವೇಕ ತಮ್ಮ ಮಗಳ ಬದುಕಿನಲ್ಲಿ ಎಷ್ಟು ಸರಾಗವಾಗಿ ನುಗ್ಗಿ ಬಂದ, ಇದರ ಸುಳಿವೇ ತಮಗೆ ಸಿಗಲಿಲ್ಲವೆಂದು ಅವರಿಗೆ ಆಶ್ಚರ್ಯವಾಯಿತು !
ವಿವೇಕ ಪೂಜಾಳಿಗೆ 'ವರ'ವಾಗಬಹುದೆಂಬ ವಿಷಯವೇ ಅವರ ಮನಸ್ಸಿನಲ್ಲಿ ಮೂಡಿರಲಿಲ್ಲ.
ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸುನೀಲ್, ಸುಧಾ, ಹರಿಪ್ರಸಾದ್ ಮತ್ತು ಅವರ ಹೆಂಡತಿ ಎಲ್ಲರೂ ಒಟ್ಟಿಗೆ ಪೂಜಾಳಿಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದರು.
ಸುನೀಲ್ ಹೇಳಿದರು, “ಅವನ ವಿಚಾರ ಇಷ್ಟು ಕೆಟ್ಟದ್ದಿದೆಯೆಂದು ತಿಳಿದಿರಲಿಲ್ಲ. ತಿಳಿದಿದ್ದರೆ, ಅಂದು ಏರ್‌ಪೋರ್ಟ್ನಿಂದ ಅವನನ್ನು ನಮ್ಮ ಮನೆಗೆ ಕರೆತರುತ್ತಿರಲಿಲ್ಲ. ಏರ್‌ಪೋರ್ಟ್ನಲ್ಲಿ ಅವನ ಆರೋಗ್ಯ ಎಷ್ಟು ಹಾಳಾಗಿತ್ತೆಂದರೆ, ಅವನಿಗೆ ತಾನೆಲ್ಲಿಗೆ ಹೋಗಬೇಕೆಂಬುದೇ ತಿಳಿದಿರಲಿಲ್ಲ ! ಎಷ್ಟಾದರೂ ಅವನು ನಮ್ಮ ದೇಶದವನು ! ಮೊದಲ ಬಾರಿಗೆ ವಿದೇಶಕ್ಕೆ ಬಂದಿದ್ದಾನೆ,
ಮಾನವೀಯತೆಯ ದೃಷ್ಟಿಯಿಂದ ಇವನಿಗೆ ಸಹಾಯ ಮಾಡೋಣವೆಂದು ದಯೆ ತೋರಿದೆ. ಆಮೇಲೆ ಅನೇಕ ಬಾರಿ ಮನೆಗೆ ಕರೆಸಿ ಊಟ ಹಾಕಿದೆ. ಇಲ್ಲಿಯ ಜನರೊಂದಿಗೆ ಭೇಟಿ ಮಾಡಿಸಿದೆ. ಅವನೊಂದಿಗೆ ಕೋಪೆನ್‌ಹೇಗನ್‌ನಲ್ಲಿ ಅಡ್ಡಾಡಲು ಪೂಜಾಳಿಗೆ ಅವಕಾಶ ಮಾಡಿಕೊಟ್ಟೆ. ನೋಡು, ಅವನು ನಮ್ಮ ಒಳ್ಳೆಯತನವನ್ನು ದುರುಪಯೋಗಿಸಿಕೊಂಡ. ನಮ್ಮ ಮಗಳ ಬಗ್ಗೆ ಕೆಟ್ಟ ದೃಷ್ಟಿ
ಹಾಕಲು ಪ್ರಾರಂಭಿಸಿದ”.
ಸುನೀಲರ ಮಾತುಗಳಿಂದ ಪೂಜಾ ರೇಗಿದಳು. ಆದರೆ ಅವಳು ಅದನ್ನು ಹತ್ತಿಕ್ಕಿಕೊಳ್ಳಲು ಪ್ರಯತ್ನಿಸಿದಳು.
ಪೂಜಾಳ ಅಜ್ಜ ಹರಿಪ್ರಸಾದರು ಹೇಳಿದರು, “ಪೂಜಾ, ವಿವೇಕ ನಿನಗೆ ಸ್ವಲ್ಪವೂ ಯೋಗ್ಯನಾದ ಹುಡುಗನಲ್ಲ. ಅವನ ಜಾತಿ ಯಾವುದೋ, ಅವನ ಮನೆ-ಮಠವೇನೋ, ಒಂದೂ ತಿಳಿದಿಲ್ಲ”.
“ನನಗೆ ಅವನ ಜಾತಿ ಅಥವಾ ಧರ್ಮದಿಂದ ಏನೂ ಆಗಬೇಕಿಲ್ಲ.” ಪೂಜಾ ಹೇಳಿದಳು, “ಅವನೊಬ್ಬ ಒಳ್ಳೇ ಮನುಷ್ಯ, ನನಗಿಷ್ಟೇ ಸಾಕು. ನಾನು ಜಾತಿ, ಧರ್ಮವನ್ನಲ್ಲ, ಒಬ್ಬ ವ್ಯಕ್ತಿಯನ್ನು ಮದುವೆ ಮಾಡಿಕೊಳ್ಳಬೇಕಿದೆ”.
“ಪೂಜಾ, ಜಾತಿ ಮತ್ತು ಧರ್ಮದ ಬಗ್ಗೆ ನಾನು ಹೇಳ್ತಿಲ್ಲ. ಇವನ ಬದಲು ನೀನು ಡೆನಿಶ್ ವ್ಯಕ್ತಿಯನ್ನು ಮದುವೆಯಾಗು. ನಮಗೆ ಅಷ್ಟು ಬೇಸರವಾಗಲ್ಲ. ಡೆನಿಶ್ ವ್ಯಕ್ತಿಗೆ ಕಡೇ ಪಕ್ಷ ಒಂದು ಪ್ರತಿಷ್ಠಿತ ಅಸ್ತಿತ್ವವಾದರೂ ಇರುತ್ತೆ” ಎಂದರು ಹರಿಪ್ರಸಾದ್.
ಸುನೀಲರು ಪೂಜಾಳನ್ನು ತುಂಬಾ ನಿರಾಸೆಯಿಂದ ನೋಡಿದರು. ತಮ್ಮ ಮಗಳು ತಮ್ಮ ಭಾರತೀಯ ಮೌಲ್ಯಗಳೊಂದಿಗೆ ಕಲೆತಿರಲಿ, ತನ್ನ ತಾಯಿಯಂತೆ ಭಾರತೀಯನನ್ನೇ ವಿವಾಹವಾಗಲಿ ಎಂದು ಅವರು ತುಂಬಾ ಪ್ರಯತ್ನಿಸಿದ್ದರು. ಅವಳು ಭಾರತೀಯನನ್ನೇ ಮದುವೆಯಾಗುತ್ತಿದ್ದಾಳೆ. ಆದರೆ... ಅವರು ಕಳವಳದಿಂದ ಪೂಜಾಳಿಗೆ ಹೇಳಿದರು, “ಪೂಜಾ, ನಿನಗೆ ಇಂಡಿಯಾದ ಈ ಹುಡುಗರ
ಬಗ್ಗೆ ತಿಳಿದಿಲ್ಲ ! ವಿದೇಶಕ್ಕೆ ಬರುವ ಆಸೆಯಿಂದ ಏನು ಬೇಕಾದರೂ ಮಾಡ್ತಾರೆ. ಸುಳ್ಳು ಹೇಳ್ತಾರೆ. ವಿವೇಕ ವಿದೇಶಕ್ಕೆ ಬರೋದಕ್ಕೇ ಕ್ರಿಶ್ಚಿಯನ್ ಆಗಿದ್ದಾನೆ. ಅವನಿಗೆ ಯಾರೋ ಮಿಶನರಿ, ‘ನೀನು ಕ್ರಿಶ್ಚಿಯನ್ ಆಗು, ನಿನಗೆ ಯೂರೋಪ್‌ಗೆ ಹೋಗುವ ಅವಕಾಶ ಸಿಗುತ್ತೆ’ ಅಂತ ಹೇಳಿರಬಹುದು”.
“ಇಲ್ಲ, ಇದನ್ನು ನಾನು ನಂಬಲ್ಲ, ನನಗೆ ವಿವೇಕ ಚೆನ್ನಾಗಿ ಗೊತ್ತು. ಅವನ್ಯಾಕೆ ಕ್ರಿಶ್ಚಿಯನ್ ಆದ ಅಂತಲೂ ಚೆನ್ನಾಗಿ ಬಲ್ಲೆ.
ಅವನು ಹಿಂದೂ ಧರ್ಮದ ಬಗ್ಗೆ ಸ್ವಲ್ಪ ಸಂದಿಗ್ಧತೆಯಲ್ಲಿದ್ದ. ತನ್ನ ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮವನ್ನು ಸ್ವೀಕರಿಸುವುದು ಸಾಮಾನ್ಯ ತೀರ್ಮಾನವಲ್ಲ. ಧರ್ಮ-ಪರಿವರ್ತನೆ ವ್ಯಕ್ತಿಯ ಪೂರ್ಣ ಅಸ್ತಿತ್ವವನ್ನೇ ಬದಲಿಸಿಬಿಡುತ್ತದೆ. ಆದ್ದರಿಂದ ಅವನು ವಿದೇಶಕ್ಕೆ
ಬರುವ ಉದ್ದೇಶದಿಂದಲೇ ಕ್ರಿಶ್ಚಿಯನ್ ಆದ ಅನ್ನೋದು ಶುದ್ಧ ತಪ್ಪು. ನಾನು ವಿವೇಕನನ್ನು ಹೀಗೇ ಸುಮ್ನೆ ಪ್ರೀತಿಸಲಿಲ್ಲ, ಚೆನ್ನಾಗಿ ಯೋಚಿಸಿ, ಅವನನ್ನು ಪರೀಕ್ಷಿಸಿಯೇ ಪ್ರೀತಿಸಿದ್ದೇನೆ...” ಪೂಜಾಳ ಮಾತಿನಲ್ಲಿ ದೃಢತೆಯಿತ್ತು.
“ನಿನಗೆ ವಿವೇಕನ ಬಗ್ಗೆ ಏನೂ ಗೊತ್ತಿಲ್ಲ” ಹರಿಪ್ರಸಾದರು ಅವಳ ಮಾತನ್ನು ತಡೆದು ಹೇಳಿದರು, “ಹೇಗೆ ಗೊತ್ತಾಗುತ್ತೆ ?
ನೀನು ಬೆಳೆದಿದ್ದು ವಿದೇಶದಲ್ಲಿ. ನೀನು ನಿನ್ನ ದೇಶದ ಬಗ್ಗೆ, ಅಲ್ಲಿಯ ಜನರ ಬಗ್ಗೆ ಅಪರಿಚಿತೆ. ಆದರೆ ವಿವೇಕ ಹಿಂದೂವೂ ಅಲ್ಲ,
ಕ್ರಿಶ್ಚಿಯನ್ ಸಹ ಅಲ್ಲ. ಒಂದು ವೇಳೆ ಅವನಿಗೆ ಇನ್ನೂ ಸ್ವಲ್ಪ ಒಳ್ಳೆಯ ಅವಕಾಶ ಸಿಕ್ಕರೆ ಅವನು ಕ್ರಿಶ್ಚಿಯನ್‌ನಿಂದ ಮತ್ತೆ ಹಿಂದೂ
ಆಗ್ತಾನೆ ಅಥವಾ ಮತ್ತೇನೋ ಆಗ್ತಾನೆ... ಬೌದ್ಧ ಅಥವಾ ಯಹೂದಿ ಆದರೂ ಆಗಬಹುದು...”
ಪೂಜಾ ರೇಗಿ ಬುಸುಗುಟ್ಟುತ್ತಾ ಕಿರುಚಿದಳು, “ನೀವೇನೇ ಹೇಳಿ, ನಾನು ಅವನನ್ನೇ ಮದುವೆಯಾಗೋದು, ನಾನು ಅವನನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯನ್ನು ಆಟ ಅಂತ ತಿಳೀಬೇಡಿ. ಹಾಂ, ಒಂದು ವೇಳೆ ನೀವು ನನ್ನ ಮೇಲೆ ಬಲವಂತ ಮಾಡಿದ್ರೆ ನಾನು ಕಮ್ಯೂನ್‌ನಲ್ಲಿ ನಿಮ್ಮ ಬಗ್ಗೆ ದೂರು ಸಲ್ಲಿಸ್ತೇನೆ...” ಹೀಗೆಂದು ಅಲ್ಲಿಂದ ಪೂಜಾ ಹೊರಟು ಹೋದಳು.
ಅವಳ ಈ ರೋಷ ಮತ್ತು ಬೆದರಿಕೆಯಿಂದ ಕುಟುಂಬದವರು ಕಕ್ಕಾಬಿಕ್ಕಿಯಾದರು...
ವಿವೇಕನ ಪ್ರಸ್ತಾಪದ ವಿಷಯದಲ್ಲಿ, ಮನೆಯಲ್ಲಿ ಸಾಮಾನ್ಯವಾಗಿ ಜಗಳವುಂಟಾಗುತ್ತಿತ್ತು. ಸುಧಾ ಮತ್ತು ಸುನೀಲರು ಮಗಳ ಬಗ್ಗೆ ಒಂದು ದ್ವೇಷದ ಭಾವನೆಯಿಂದ ವರ್ತಿಸಲಾರಂಭಿಸಿದರು. ಪೂಜಾ ಇದುವರೆಗೆ ತನ್ನ ತಂದೆ-ತಾಯಿಯ ಪ್ರೀತಿಯನ್ನಷ್ಟೇ ಕಂಡಿದ್ದಳು. ಈಗ ಅವರ ಜಿಗುಪ್ಸೆಯನ್ನು ನೋಡುತ್ತಿದ್ದಳು; ಈ ಜಿಗುಪ್ಸೆ ಅವರ ಪ್ರೀತಿಗಿಂತಲೂ ಹೆಚ್ಚಿತ್ತು.
ಪೂಜಾ ಇಪ್ಪತ್ತನಾಲ್ಕನೇ ವಯಸ್ಸಿಗೆ ಕಾಲಿಟ್ಟ ಯುವತಿಯಾಗಿದ್ದು,ಡೆನ್ಮಾರ್ಕ್‌ನಲ್ಲಿ ಸ್ವಚ್ಛಂದ ವಾತಾವರಣದಲ್ಲಿ ಬೆಳೆದಿದ್ದಳು.
ಪೂಜಾ, ತನ್ನ ಸಹಪಾಠಿಗಳು ಮತ್ತು ಮಿತ್ರರ ಗುಂಪಿನಲ್ಲಿ ಸಮವಯಸ್ಕ ಹುಡುಗಿಯಾಗಿದ್ದಾಗ್ಯೂ ತನ್ನ ತಂದೆ-ತಾಯಿಯವರೊಂದಿಗೆ ಇಂದಿಗೂ ವಾಸಿಸುತ್ತಿದ್ದಳು. ಡೆನ್ಮಾರ್ಕ್ ಸಮಾಜದಲ್ಲಿ ಹುಡುಗ-ಹುಡುಗಿಯರಿಗೆ ವಯಸ್ಸು ಹದಿನೇಳು-ಹದಿನೆಂಟು ಆಗುತ್ತಲೇ ಅವರು ತಂದೆ-ತಾಯಿಗೆ ಗುಡ್‌ಬೈ ಹೇಳಿ ಸ್ವತಂತ್ರವಾಗಿದ್ದು ಬಿಡುವ ರೂಢಿ ಚಾಲ್ತಿಯಲ್ಲಿತ್ತು.
ಪೂಜಾ ಮನೆಯಲ್ಲಿ ತನ್ನ ಬಗ್ಗೆ ಹೆಚ್ಚುತ್ತಿದ್ದ ತಿರಸ್ಕಾರವನ್ನು ಸಹಿಸದಾದಳು. ವಿದ್ಯಾಭ್ಯಾಸದ ಕೊನೆಯ ವರ್ಷ ನಡೆಯುತ್ತಿತ್ತು.
ಮನೆಯಲ್ಲಿನ ಬಿಗಿತದ ವಾತಾವರಣ ಅವಳ ವಿದ್ಯಾಭ್ಯಾಸದಲ್ಲಿ ತಡೆಯನ್ನೊಡ್ಡುತ್ತಿತ್ತು. ಅವಳು ತನ್ನ ಮನೆಯನ್ನು ತ್ಯಜಿಸುವುದೇ ಉಚಿತವೆಂದು ತಿಳಿದಳು. ಅವಳ ಗೆಳತಿ ಮಾರ್ಥಾ ಡಿಟಿಯೂ ಕ್ಯಾಂಪಸ್ ಬಳಿ ಒಂಟಿಯಾಗಿ ವಾಸಿಸುತ್ತಿದ್ದಳು. ಪೂಜಾ ತನ್ನ ಲಗ್ಗೇಜಿನೊಂದಿಗೆ ಮಾರ್ಥಾಳ ಮನೆಗೆ ಹೊರಟು ಬಂದಳು.

ಪೂಜಾ ತನ್ನ ಮನೆ ಬಿಟ್ಟು ಹೋದ ವಿಷಯ ತಿಳಿದು ವಿವೇಕನಿಗೆ ಆಘಾತವಾಯಿತು. ಪೂಜಾ ತನ್ನ ಮತ್ತು ವಿವೇಕನ ನಡುವೆ ಪ್ರೀತಿ ಮತ್ತು ಪರಸ್ಪರ ಅರಿವನ್ನಷ್ಟೇ ಬಯಸುತ್ತಿದ್ದಳು. ಅವಳು ಅವನಿಗೆ ತಮ್ಮ ಮನೆಯಲ್ಲಿ ಘಟಿಸಿದ ವಿವಾದವನ್ನು ಹೇಳುವುದು ಉಚಿತವೆಂದು ತಿಳಿಯಲಿಲ್ಲ. ಅವಳಿಷ್ಟೇ ಹೇಳಿದಳು, “ವಿದ್ಯಾಭ್ಯಾಸದ ಕೊನೆಯ ವರ್ಷ ನಡೀತಿದೆ. ತಾಸ್ತುಪ್‌ನಿಂದ ಡಿಟಿಯೂ ಎಷ್ಟು
ದೂರದಲ್ಲಿದೆ ಎಂಬುದು ನಿಮಗೆ ಗೊತ್ತಿದೆ. ಹೋಗಿ ಬರಲು ಸಾಕಷ್ಟು ಸಮಯ ಹಿಡಿಯುತ್ತೆ. ಇಲ್ಲಿ ಮಾರ್ಥಾಳೊಂದಿಗೆ ಡಿಟಿಯೂ ಬಳಿ ಇದ್ದರೆ ಓದುವ ವಾತಾವರಣ ಸಿಗುತ್ತೆ. ಚೆನ್ನಾಗಿ ಓದಬಹುದು”
ತಮ್ಮ ಮಗಳು ವಿವೇಕನ ಪ್ರೇಮಪಾಶದಲ್ಲಿ ಪೂರ್ಣವಾಗಿ ಸಿಲುಕಿಕೊಂಡಿದ್ದಾಳೆಂಬ ವಿಷಯ ಸುಧಾ ಮತ್ತು ಸುನೀಲರಿಗೆ ಮನದಟ್ಟಾಯಿತು. ಅವಳನ್ನು ಅವಳ ನಿರ್ಧಾರದಿಂದ ಕದಲಿಸುವುದು ಸಾಧ್ಯವಿಲ್ಲ. ಒಂದು ವೇಳೆ ಅವಳು ಅವರ ವಿರುದ್ಧ ‘ಕಮ್ಯೂನ್’ನಲ್ಲಿ ದೂರು ಸಲ್ಲಿಸಿದರೆ ತಾವು ನ್ಯಾಯಾಲಯದ ಕಟಕಯಲ್ಲಿ ನಿಲ್ಲುವ ಸಮಯ ಬರುತ್ತೆ. ಈಗ್ಯೆ ಕೆಲವು ವರ್ಷಗಳಿಂದ
ಡೆನಿಶ್ ಸರ್ಕಾರ ಈ ಬಗ್ಗೆ ತುಂಬಾ ಜಾಗೃತಗೊಂಡಿದೆ. ಡೆನ್ಮಾರ್ಕ್‌ನಲ್ಲಿ ವಾಸಿಸುವ ಬೇರೆ ದೇಶದ ಜನರು ತಮ್ಮ ಮಕ್ಕಳ ವಿವಾಹದ ವಿಷಯದಲ್ಲಿ ಬಲವಂತ ಮಾಡಬಾರದೆಂದು ಇಲ್ಲಿಯ ಸರ್ಕಾರ ಕಠೋರವಾದ ಕಾನೂನನ್ನು ಮಾಡಿದೆ. ಡೆನ್ಮಾರ್ಕ್ ಮತ್ತು ಇನ್ನಿತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಚಾಲ್ತಿಯಲ್ಲಿರುವಂತೆ ಮಕ್ಕಳಿಗೆ ಅವರಿಚ್ಛೆಯಂತೆ ಅವರ ಜೀವನ ಸಂಗಾತಿಗಳನ್ನು
ಆಯ್ಕೆ ಮಾಡಿಕೊಳ್ಳುವ ಅವಕಾಶ ಕೊಡಬೇಕು. ಹೀಗಿರುವಾಗ ಏನು ಮಾಡುವುದು ? ... ಅವರು ತಮ್ಮ ಮಗಳ ಭಾವನೆಗಳೊಂದಿಗೂ ಆಟವಾಡಲು ಸಿದ್ಧರಿದ್ದರು.

ಶನಿವಾರ ಸಂಜೆ ಏಳು ಗಂಟೆಗೆ ತಮ್ಮ ಮನೆಗೆ ಡಿನ್ನರ್‌ಗೆ ಬರುವಂತೆ ವಿವೇಕನನ್ನು ಹರಿಪ್ರಸಾದರು ಫೋನ್‌ನಲ್ಲಿ ಆಹ್ವಾನಿಸಿದರು. ವಿವೇಕ ಆಮಂತ್ರಣವನ್ನು ಖುಷಿಯಿಂದ ಒಪ್ಪಿಕೊಂಡ, ಆದರೆ ತನ್ನನ್ನು ಪೂಜಾ ಡೆನ್ಮಾರ್ಕ್‌ನಲ್ಲಿ ಇಲ್ಲದಿದ್ದಾಗ ಕರೆಯಲಾಗಿದೆ ಎಂದು ಯೋಚಿಸಿ ಕಳವಳಗೊಂಡ. ಅವಳು ತನ್ನ ಒಂದು ಪ್ರಾಜೆಕ್ಟ್ ವರ್ಕ್ಗಾಗಿ ಫಿನ್‌ಲೆಂಡ್‌ಗೆ ಹೋಗಿದ್ದಾಳೆ. ಏನಾದರಾಗಲಿ,
ಅವನು ಅವರನ್ನು ಎದುರಿಸಲು ಯೋಚಿಸಿದ. ಪೂಜಾಳೊಂದಿಗೆ ವಿವಾಹಕ್ಕೂ ಮೊದಲು ಅವನಿಗೆ ಪೂಜಾಳ ಪರಿವಾರದವರಿಗೆ ತನ್ನ ಮುಂದಿನ ಕ್ರಮದ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಬೇಕೆಂಬ ವಿಷಯ ತಿಳಿದಿತ್ತು.

ವಿವೇಕ ಅವರ ಮನೆಗೆ ಹೋದಾಗ ಎಲ್ಲರೂ ಅವನನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಹರಿಪ್ರಸಾದರ ಮನೆಯಲ್ಲಿ ಸುಧಾ, ಸುನೀಲರಲ್ಲದೆ ಮತ್ತೊಬ್ಬರು ಸಜ್ಜನರಿದ್ದರು. ಹರಿಪ್ರಸಾದರು ವಿವೇಕನಿಗೆ ಅವರನ್ನು ಪರಿಚಯಿಸುತ್ತಾ ಹೇಳಿದರು, “ವಿವೇಕ, ಇವರು ಟೀಕಾಚಂದ್ರ ದೇವ್ ಅಂತ. ಇವರು ಯೂರೋಪಿಯನ್ ದೇಶಗಳ ಸಂಘ-ಶಾಖೆಗಳಿಗೆ ಪ್ರಚಾರಕರು. ಇವರ ವಾಸ ಲಂಡನ್‌ನಲ್ಲಿ.
ಆದರೆ ಸಂಘದ ಕಾರ್ಯ ನಿಮಿತ್ತ ಯೂರೋಪಿನ ಎಲ್ಲಾ ದೇಶಗಳಲ್ಲಿ ಸಂಚರಿಸುತ್ತಾರೆ. ಡೆನ್ಮಾರ್ಕ್‌ಗೆ ಬಂದಾಗಲೆಲ್ಲಾ ನಮ್ಮ ಮನೆಯಲ್ಲಿಯೇ ಉಳಿದು ನಮ್ಮ ಮೇಲೆ ಕೃಪೆ ತೋರುತ್ತಾರೆ.”
ಟೀಕಾಚಂದ್ರರು ಹರಿಪ್ರಸಾದರ ಮಾತಿಗೆ ಮುಗುಳ್ನಕ್ಕರು. ವಿವೇಕನೂ ಮೆಲ್ಲನೆ ಮುಗುಳ್ನಕ್ಕ.
ಹರಿಪ್ರಸಾದರು ವಿವೇಕನನ್ನು ಪರಿಚಯಿಸುತ್ತಾ ಟೀಕಾಚಂದ್ರರಿಗೆ ಹೇಳಿದರು, “ಇವರು ವಿವೇಕ ಅಂತ. ಇಲ್ಲಿ ಮಿಶನರಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ನಮ್ಮ ಪೂಜಾ ವಿವೇಕನನ್ನು ಮದುವೆಯಾಗಲು ಇಷ್ಟಪಟ್ಟಿದ್ದಾಳೆ”.
ಹರಿಪ್ರಸಾದರ ಈ ನಿರ್ಭೀತ ಹೇಳಿಕೆ ಕೇಳಿ ವಿವೇಕ ತಲೆಯನ್ನು ತಗ್ಗಿಸಿಕೊಂಡು ಮುಗುಳ್ನಕ್ಕ.
“ಆದರೆ ನಿಮ್ಮಿಬ್ಬರ ಮದುವೆ ಹೇಗೆ ಸಾಧ್ಯ ?” ಸುನೀಲರು ಒಮ್ಮೆಲೆ ಕೇಳಿದರು.
“ನಾವು ಕೋರ್ಟ್ನಲ್ಲಿ ಮದುವೆಯಾಗ್ತೀವಿ” ವಿವೇಕನ ಮಾತಿನಲ್ಲಿ ಒಂದು ನಿರ್ಧಾರವಿತ್ತು.
ಸುನೀಲರು ತಮ್ಮ ಕಣ್ಣುಗಳನ್ನು ಮುದುಡಿಕೊಂಡು ಮಾತಿನ ಗಂಭೀರತೆಯ ಬಗ್ಗೆ ಸ್ವಲ್ಪ ಹೊತ್ತು ಯೋಚಿಸಿದರು. ನಂತರ ಇದ್ದಕ್ಕಿದ್ದಂತೆ ಹೇಳಿದರು, “ನಾವು ಈ ಮದುವೆಯನ್ನು ಒಪ್ಪಲ್ಲ. ಪೂಜಾ ಹಿಂದೂ, ನೀನು ಕ್ರಿಶ್ಚಿಯನ್”.
ಹರಿಪ್ರಸಾದರು ನಗುತ್ತಾ ಹೇಳಿದರು, “ಈ ನಮ್ಮ ಹುಡುಗ ಹಿಂದೂವೇ. ಆದರೆ ಕೆಲವು ದಿನಗಳ ಮಟ್ಟಿಗೆ ಕ್ರಿಶ್ಚಿಯನ್ ಆಗಿದ್ದ”.
ವಿವೇಕ ಏನೋ ಹೇಳಬೇಕೆಂದಿದ್ದ. ಆದರೆ ಆಗಲೇ ಟೀಕಾಚಂದ್ರ ದೇವ್ ಕೆಮ್ಮಿ ತಮ್ಮ ಗಂಟಲನ್ನು ಸರಿಪಡಿಸಿಕೊಂಡರು.
ನಂತರ ಸೂಚನೆ ಕೊಡುತ್ತಾ ಕೇಳಿದರು, “ನಾವು ‘ಮರಳಿ ಮನೆಗೆ’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ನಮ್ಮ ಹಿಂದೂ ಧರ್ಮದಲ್ಲಿ ಈಗ ಮರಳಿ ಮನೆಗೆ ಅವಕಾಶವಿದೆ. ನಮ್ಮ ಸಹೋದರ-ಸಹೋದರಿಯರು ಯಾವುದೋ ಕಾರಣಕ್ಕೆ ತಮ್ಮ ಹಿಂದೂ
ಧರ್ಮವನ್ನು ತ್ಯಜಿಸುತ್ತಾರೆ, ಅವರು ಮತ್ತೆ ತಮ್ಮ ಧರ್ಮವನ್ನು ಸ್ವೀಕರಿಸಬಹುದು”.
“ವಿವೇಕ, ಮಿಶನರಿಯವರು ನಿನ್ನನ್ನು ದಾರಿತಪ್ಪಿಸಿದ್ದರು” ಹರಿಪ್ರಸಾದರು ಹೇಳಿದರು, “ನೀನು ದಾರಿ ತಪ್ಪಿದ್ದೆ. ನೋಡು, ನಿನ್ನ ತಂದೆ-ತಾಯಿ ಮತ್ತು ಸಹೋದರ-ಸಹೋದರಿಯರೂ, ನೀನು ಕ್ರಿಶ್ಚಿಯನ್ ಆಗಿದ್ದಕ್ಕೆ ನಿನ್ನ ಬಗ್ಗೆ ಸಿಟ್ಟಾಗಿದ್ದಾರೆ. ನೀನು ನಿನ್ನ ಮನೆಗೆ ಮರಳಿ ಬಾ”.
ವಿವೇಕ ಅವರನ್ನೆಲ್ಲಾ ಭ್ರಾಂತನಾಗಿ ನೋಡಿದ. ಸುನೀಲರು ಅವನ ಕೈಯನ್ನು ಹಿಡಿದು ಹೇಳಿದರು, “ನಮ್ಮ ಮಗಳು ನಿನ್ನನ್ನು ಪ್ರೀತಿಸಿದ್ದಾಳೆ. ನೀನು ಇಷ್ಟಾದರೂ ಮಾಡಬೇಕು. ನಿನ್ನ ಕುಟುಂದವರು ಹಿಂದೂಗಳು. ನಾವೂ ಹಿಂದೂಗಳು ! ನಮ್ಮ ಮಗಳು ಹಿಂದೂ. ನೀನು ಕ್ರಿಶ್ಚಿಯನ್, ನಾವು ಹೇಳುವುದನ್ನು ಕೇಳು, ನಿನ್ನ ಈ ಮಿಶನ್ ಮತ್ತು ಮಿಶನರಿಯನ್ನು ಬಿಟ್ಟು ಬಿಡು. ಮನೆಗೆ ಮರಳಿ
ಹೋಗಿ, ನಮ್ಮ ಮಗಳನ್ನು ಮದುವೆ ಮಾಡಿಕೋ”.
ಹರಿಪ್ರಸಾದರು ಹೇಳಿದರು, “ಪೂಜಾಳ ಬಳಿ ಡೆನಿಶ್ ನಾಗರಿಕತೆಯಿದೆ. ಅವಳ ಪತಿಯಾದರೆ ನೀನು ಡೆನ್ಮಾರ್ಕ್‌ನಲ್ಲಿರಬಹುದು, ಇಲ್ಲಿ ನೌಕರಿಯನ್ನೂ ಮಾಡಬಹುದು, ನೀನು ಡೆನ್ಮಾರ್ಕ್ ಬಿಟ್ಟು ಹೋಗಬೇಕಾಗುವುದಿಲ್ಲ. ಮೂರು ವರ್ಷಗಳಲ್ಲಿ ನಿನಗೆ ಡೆನ್ಮಾರ್ಕ್ ನಾಗರಿಕತೆಯೂ ಸಿಗುತ್ತೆ, ನಾವು ನಿನಗೆ ಚರ್ಚ್ನ ಪಾಸ್ಟರ್‌ಗಿಂತಲೂ ಒಳ್ಳೆಯ ನೌಕರಿ ಕೊಡಿಸ್ತೀವಿ. ನೀನು ಶಿಕ್ಷಿತ,
ಲಾ ಓದಿದ್ದೀಯ. ಒಂದು ಚರ್ಚ್ಗೆ ಪಾದರಿಯಾಗುವುದೇ ? ನಾವು ನಿನ್ನನ್ನಿಲ್ಲಿ ಲಾಯರ್ ಮಾಡ್ತೇವೆ. ಇಲ್ಲಿಯ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡು. ಜಡ್ಜ್ಗಳು ಮತ್ತು ಕ್ಲೈಯಿಂಟ್‌ಗಳು-ಎಲ್ಲರೂ ನಿನ್ನನ್ನು ಹೊಗಳುತ್ತಾರೆ”.
ಸುನೀಲ್ ಹೇಳಿದರು, “ನಮ್ಮ ಹತ್ರ ಹಣಕ್ಕೂ ಕೊರತೆಯಿಲ್ಲ. ನಾವು ಈ ದೇಶದಲ್ಲಿದ್ದುಕೊಂಡು ತುಂಬಾ ಸಂಪಾದನೆ ಮಾಡಿದ್ದೇವೆ. ನೀನಿಲ್ಲಿ ವ್ಯಾಪಾರ ಪ್ರಾರಂಭಿಸುವುದಾದರೆ ನಾವು ಬಂಡವಾಳವನ್ನೂ ಹಾಕ್ತೀವಿ”.
“ನಾನು ಮೊದ್ಲು ಪೂಜಾಳ ಹತ್ರ ಮಾತನಾಡಬೇಕಾಗುತ್ತೆ” ವಿವೇಕ ಹೇಳಿದ.
“ಪೂಜಾಳ ಹತ್ರ ನೀನೇನು ಮಾತನಾಡಬೇಕಿದೆ?” ಹರಿಪ್ರಸಾದರು ಹೇಳಿದರು, “ವಿದೇಶದಲ್ಲಿ ಬೆಳೆದ ಅವಳಿಗೆ ತನ್ನ ಸಂಪ್ರದಾಯ-ರೀತಿ-ನೀತಿ ತಿಳಿದಿಲ್ಲ. ಅವಳು ನಿನ್ನನ್ನು ಪ್ರೀತಿಸುತ್ತಾಳೆ, ನೀನು ಅವಳನ್ನು ಪ್ರೀತಿಸುತ್ತೀಯಾ ಎಂಬುದಷ್ಟೇ ಅವಳಿಗೆ ತಿಳಿದಿದೆ. ನೀನು ಹಿಂದೂ ಆಗಿ ಅವಳ ಬಳಿಗೆ ಹೋಗು. ಅವಳಿಗೆ ತುಂಬಾ ಸಂತೋಷವಾಗುತ್ತೆ. ನಿನ್ನ ನಿಜವಾದ ಪ್ರೀತಿ ಅವಳಿಗೆ
ತಿಳಿಯುತ್ತೆ”.
ಸುನೀಲರು ಹೇಳಿದರು, “ಅಲ್ದೆ, ಈ ಟೀಕಾಚಂದ್ರರೂ ರಾತ್ರಿಯ ಫ್ಲೈಟ್‌ನಿಂದ ಲಂಡನ್‌ಗೆ ಹೋಗಬೇಕಿದೆ. ಟೀಕಾಚಂದ್ರರೇ ‘ಮರಳಿ ಮನೆಗೆ’ ಸಂಬಂಧಿಸಿದಂತೆ ಅನುಷ್ಠಾನ ಮಾಡ್ತಾರೆ. ಇವರು ವಾಪಸ್ ಹೋದರೆ ನಿನ್ನ ಈ ‘ಮರಳಿ ಮನೆಗೆ’ ಕಾರ್ಯಕ್ರಮಕ್ಕೆ ತೊಂದ್ರೆಯಾಗುತ್ತೆ”.
“ಇವೆಲ್ಲಾ ಇಷ್ಟೊಂದು ಬೇಗ ಹೇಗಾಗುತ್ತೆ? ಮಿಶನರಿ ಕೋರ್ಸ್. ಕೆಬೀಸೀ ಮಿಶನ್‌ನ ಹಾಸ್ಟಲ್... ನಾನು ಮಿಶನರಿ ಅಂತ ಇಲ್ಲಿರೋದಕ್ಕೆ ಅನುಮತಿಯಿದೆ. ಮಿಶನರಿಯನ್ನು ಬಿಟ್ಟ ಕೂಡ್ಲೆ ನಾನು ಈ ದೇಶದಿಂದ ಹೊರಗೆ ಹೋಗಬೇಕಾಗುತ್ತೆ.”
ಹರಿಪ್ರಸಾದರು ಹೇಳಿದರು, “ನೀನೇನೂ ಬಿಡಬೇಕಾಗಿಲ್ಲ. ನಾವಿದ್ದೇವಲ್ಲ... ನಾವು ಪೂಜಾಳೊಂದಿಗೆ ನಿನ್ನ ಮದುವೆಯನ್ನು ನಾಡಿದ್ದು ಮಾಡಿಸ್ತೀವಿ. ನೀನು ಪೂಜಾಳ ಪತಿಯಾದ ಮೇಲೆ ಯಾರೂ ಸಹ ನಿನ್ನನ್ನು ಈ ದೇಶದಿಂದ ಹೊರಹಾಕಲು ಸಾಧ್ಯವಿಲ್ಲ.
ಹೋಗು, ಹೋಗಿ ಮಿಶನರಿಯ ವಿದ್ಯಾಭ್ಯಾಸವನ್ನು ಬಿಟ್‌ಬಿಡು. ಕೆಬೀಸೀ ಮಿಶನ್‌ನ ಮನೆಯನ್ನು ಖಾಲಿ ಮಾಡು. ನಿನ್ನ ಲಗ್ಗೇಜುಗಳೊಂದಿಗೆ ನಮ್ಮ ಮನೆಗೆ ಬಂದು ಬಿಡು. ನೀನೀಗ ನಮ್ಮ ಅಳಿಯ”.
ವಿವೇಕನ ಮುಖದಲ್ಲಿ ಇದ್ದಕ್ಕಿದ್ದಂತೆ ಸಂತೋಷ ಅರಳಿತು. ಅವನು ಕ್ರಿಶ್ಚಿಯನ್ ಆಗಿದ್ದಾಗ್ಯೂ, ಅವನ ಮನದ ಮೂಲೆಯೊಂದರಲ್ಲಿ ತಾನು ಹಿಂದೂ ಧರ್ಮವನ್ನು ತ್ಯಜಿಸಿದ ಬಗ್ಗೆ ವಿಷಾದವಿತ್ತು. ಅವನ ತಂದೆ-ತಾಯಿ ಮತ್ತು ಸಹೋದರ-ಸಹೋದರಿಯರು ಅವನು ಕ್ರಿಶ್ಚಿಯನ್ ಆಗಿದ್ದಕ್ಕೆ ಅವನಿಂದ ಸಂಬಂಧವನ್ನು ಕಡಿದುಕೊಂಡಿದ್ದು ಅವನಿಗೆ ತುಂಬಾ ದುಃಖದ ವಿಷಯವಾಗಿತ್ತು. ಅಲ್ಲದೆ, ಪೂಜಾ ಸಹ ಹಿಂದೂವಾಗಿದ್ದಳು. ಅವನಿಗೆ ತಾನು ಕ್ರಿಶ್ಚಿಯನ್ ಆಗಿ ಉಳಿಯುವಲ್ಲಿ ಯಾವುದೇ ವಿಧದ ಔಚಿತ್ಯ ಕಾಣಲಿಲ್ಲ. ಸುನೀಲ್, ಹರಿಪ್ರಸಾದ್ ಮತ್ತು ಟೀಕಾಚಂದ್ರರ ನಿರಂತರ ವಾದದಿಂದಾಗಿ ಅವನ ಮೆದುಳಿನ ಪರದೆ ಸರಿಯಿತು. ಅವನು ಮತ್ತೆ ಹಿಂದೂ ಆಗಲು ಒಪ್ಪಿಕೊಂಡ.

ಮಿಶನರಿಯ ವಿದ್ಯಾಭ್ಯಾಸ ಪೂರ್ಣಗೊಳ್ಳಲು ಇನ್ನು ಎರಡು ವರ್ಷಗಳ ಕಾಲಾವಕಾಶವಿದೆ, ಇನ್ನೂ ತನ್ನ ‘ಆರ್ಡೆನ್’(ಅಭಿಷೇಕ) ಸಹ ಆಗಿಲ್ಲ. ಆರ್ಡೆನ್ ಆಗುವುದಕ್ಕೂ ಮೊದಲು ಬೈಬಲ್ ವಿದ್ಯಾಭ್ಯಾಸವನ್ನು ಬಿಡಲು ಅಥವಾ ತನ್ನ ಧರ್ಮಕ್ಕೆ ಮರಳಿ ಹೋಗಲು ಅವಕಾಶವಿದೆ ಎಂದು ವಿವೇಕ ತನ್ನ ಮನಸ್ಸಿಗೆ ತಿಳಿವಳಿಕೆ ಹೇಳಿಕೊಂಡ.

ಮಾರನೆಯ ದಿನ ಅವನು ಮಿಶನರಿಯ ವಿದ್ಯಾಭ್ಯಾಸವನ್ನು ಬಿಡುವುದಾಗಿ ನೋಟೀಸ್ ಕೊಟ್ಟ . ಕೆಬೀಸೀ ಮಿಶನ್‌ನ ಕೋಣೆಯನ್ನು ಖಾಲಿ ಮಾಡಿದ. ಈ ಮಧ್ಯೆ ದೇವಸ್ಥಾನದಲ್ಲಿ ಯಜ್ಞ ಇತ್ಯಾದಿಗಳ ಬಗ್ಗೆ ಸಿದ್ಧತೆಗಳು ನಡೆದವು. ಅವನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಟೀಕಾಚಂದ್ರರು ಅಗ್ನಿಕುಂಡದೆದುರು ಕೂತು ಶ್ಲೋಕ ಮತ್ತು ಮಂತ್ರಗಳನ್ನು ಜಪಿಸಿ ಯಜ್ಞ ಮಾಡಿದರು. ಅವನಿಗೆ ಯಜ್ಞೋಪವೀತವನ್ನು ಧಾರಣೆ ಮಾಡಿಸಿದರು. ಅನುಷ್ಠಾನ ಪೂರ್ಣಗೊಂಡಿತು. ಅವನು ಮತ್ತೆ ಹಿಂದೂ ಆದ. ಇದೆಲ್ಲಾ ಎಷ್ಟು ಶೀಘ್ರವಾಗಿ ಮುಗಿಯಿತೆಂದರೆ ವಿವೇಕನಿಗೆ ಒಂದೂ ಅರ್ಥವಾಗಲಿಲ್ಲ. ಅಪರಾಹ್ನದ ಎರಡು ಗಂಟೆಯೊಳಗೆ ಇಷ್ಟೆಲ್ಲಾ ಮುಗಿದು ಹೋಗಿತ್ತು.
ಅವನ ಬದುಕು ಒಮ್ಮೆಲೆ ಬದಲಾಯಿಸಿತ್ತು. ಮಿಶನರಿ ಮತ್ತು ಕೆಬೀಸೀ ಮಿಶನ್ ಈಗ ಅವನ ಪಾಲಿಗೆ ಇತಿಹಾಸವಾಗಿದ್ದವು.

ಸುನೀಲ್ ಮತ್ತು ಹರಿಪ್ರಸಾದರು ಅವನ ಭಾವಿ ಬದುಕಿನ ನಿರ್ಣಾಯಕರಾಗಿದ್ದರು.
“ಸರಿ, ನೀನೀಗ ಮನೆಗೆ ಮರಳಿ ಬಂದೆ” ಟೀಕಾಚಂದ್ರ ದೇವ್ ಹೇಳಿದರು.
“ಇನ್ನು ನಾಳೆ ಪೂಜಾ ಫಿನ್‌ಲೆಂಡ್‌ನಿಂದ ಮರಳಿ ಬಂದ ಮೇಲೆ ಇದೇ ದೇವಸ್ಥಾನದಲ್ಲಿ ನಿಮ್ಮಿಬ್ಬರ ವಿವಾಹವನ್ನು ನೆರವೇರಿಸಲಾಗುವುದು”. ವಿವೇಕ ಮುಗುಳ್ನಕ್ಕ. ಈಗ ಸಂಭವಿಸಿದ ಘಟನೆಗಳ ಬಗ್ಗೆ ಅವನಿಗೆ ಸ್ವಲ್ಪವೂ ವಿಷಾದವಿರಲಿಲ್ಲ, ಅವನಿಗೆ ಒಂದು ರೀತಿಯಲ್ಲಿ ಖುಷಿಯಾಗಿತ್ತು. ಅವನು ದೇವಸ್ಥಾನದಿಂದ ಹರಿಪ್ರಸಾದರ ಮನೆಗೆ ಬಂದ, ತನ್ನ ಬಿಡಾರವನ್ನು ಕೆಬೀಸೀ
ಮಿಶನ್‌ನಿಂದ ತಂದು ಅವರ ಮನೆಯಲ್ಲಿ ಹೂಡಿದ.
ಅವನು ಹೇಗೋ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರೀಕ್ಷಣೆಯಲ್ಲಿ ಕಳೆದ. ಹರಿಪ್ರಸಾದರ ಮನೆಯಿಂದ ಟ್ಯಾಕ್ಸಿ ಹಿಡಿದು ನೇರವಾಗಿ ಡಿಟಿಯೂ, ಪೂಜಾಳ ಮನೆಗೆ ಹೋದ. ಕಾಲಿಂಗ್ ಬೆಲ್ ಒತ್ತಿದ. ಆಗ ತಾನೇ ಪೂಜಾ ಫಿನ್‌ಲೆಂಡ್‌ನಿಂದ ಮರಳಿ ಬಂದಿದ್ದಳು. ಅವಳೇ ಬಾಗಿಲನ್ನು ತೆರೆದಳು. ವಿವೇಕ ಪೂಜಾಳನ್ನು ನೋಡಿದೊಡನೆ ಖುಷಿಯಿಂದ ಹೇಳಿದ, “ನಾನು ಮರಳಿ
ಮನೆಗೆ ಬಂದಿದ್ದೇನೆ. ಕೆಮಡನ್‌ನಿಂದ ಮತ್ತೆ ಕಕ್ಕಡ್ ಆಗಿದ್ದೇನೆ. ಇದೆಲ್ಲಾ ನಿನಗಾಗಿ, ಪೂಜಾ ! ನಾನು ಈ ದೇಶದಲ್ಲಿ ನಿನ್ನ ಪತಿಯಾಗಿರಲು ಬಯಸುತ್ತೇನೆ, ಚರ್ಚ್ನ ಪಾದರಿಯಾಗಿರಲು ಬಯಸಲ್ಲ”.
ಪೂಜಾ ದಂಗಾದಳು !... ತುಂಬ ಹೊತ್ತು ಮಾತನಾಡದೆ ದುರುಗುಟ್ಟಿ ನೋಡಿದಳು... ಕ್ರಮೇಣ ಅವಳಿಗೆ ವಿಷಯ ಅರ್ಥವಾಯಿತು... ಅವಳು ಕಳೆದುಹೋದವಳಂತೆ ಹೇಳಿದಳು, “ಮಿಶನ್ ಮತು ಮಿಶನರಿ ನಿನ್ನ ಅಸ್ತಿತ್ವವಾಗಿತ್ತು. ನೀನೀಗ ನಿನ್ನ ಅಸ್ತಿತ್ವವನ್ನು ನಾಶಮಾಡಿಕೊಂಡೆ ! ನಾನು ನಿನ್ನನ್ನು, ನೀನೊಬ್ಬ ಮಿಶನರಿ ಎಂದೇ ಇಷ್ಟಪಟ್ಟಿದ್ದೆ. ಆದರೆ ನೀನೇನೂ ಅಲ್ಲವೇ ಅಲ್ಲ.
ನಾನು ನಿನ್ನನ್ನು ಹೇಗೆ ವಿವಾಹವಾಗಲಿ!”
“ಪೂಜಾ, ಇದೇನು ಹೀಗೆ ಹೇಳ್ತಿದ್ದೀಯ? ಹೀಗೆ ಹೇಳ್ಬೇಡ. ನಾನು ನಿನಗಾಗಿ ಹಿಂದೂ ಆಗಿದ್ದೇನೆ. ನಿಮ್ಮ ಕುಟುಂಬದವರು ಬಲವಂತ ಮಾಡಿದ್ದರಿಂದಲೇ ಕ್ರಿಶ್ಚಿಯಾನಿಟಿಯನ್ನು ಬಿಟ್ಟಿದ್ದೇನೆ” ಹೀಗೆಂದು ವಿವೇಕ ಅವಳನ್ನು ಬರಸೆಳೆದುಕೊಳ್ಳಲು ಮುಂದಕ್ಕೆ ಬಂದ.
ಪೂಜಾ ಅವನನ್ನು ದೂರ ತಳ್ಳುತ್ತಾ ಹೇಳಿದಳು, “ನನಗೆ ಜ್ಞಾನೋದಯವಾಗಿದೆ. ನೀನು ಸಮಯಸಾಧಕ, ಅವಕಾಶಗಳನ್ನು ಹುಡುಕಿ ಲಾಭ ಪಡೆಯುವಂತಹ ವ್ಯಕ್ತಿ ಅಂತ ನನ್ನ ಡ್ಯಾಡಿ ಹೇಳಿದ್ದು ಸರಿಯೇ ಆಗಿದೆ. ವಿದೇಶಕ್ಕೆ ಬರುವ ಆಸೆಯಿಂದ ನೀನು ಹಿಂದೂವಿನಿಂದ ಕ್ರಿಶ್ಚಿಯನ್ ಆದೆ; ಇನ್ನೂ ಒಳ್ಳೆಯ ಅವಕಾಶ ಸಿಗುತ್ತೆ ಅಂತ ಮತ್ತೆ ಹಿಂದೂ ಆದೆ. ನಿನಗೆ ಅವಕಾಶಗಳಷ್ಟೇ ಬೇಕು. ಸರಿಯಾಗಿ ಹೇಳಬೇಕೆಂದರೆ ನಿನಗೆ ನಿನ್ನದೆ ಆದ ಅಸ್ತಿತ್ವವೇ ಇಲ್ಲ, ನಿನ್ನದೇ ಆದ ಒಂದು ಮನಸ್ಸೂ ಇಲ್ಲ. ನಾನು ಇಂಥ ಮನುಷ್ಯನನ್ನು ಪತಿಯಾಗಿ ಎಂದೂ ಸ್ವೀಕರಿಸಲಾರೆ”.
“ ‘ಮರಳಿ ಮನೆಗೆ’ - ಇದು ನಿನ್ನ ಪಾಲಿಗೆ ಖಂಡಿತ ಸಂಭವಿಸಿದೆ. ಕ್ರಿಶ್ಚಿಯಾನಿಟಿಯನ್ನು ತ್ಯಜಿಸಿದ್ದರಿಂದಾಗಿ ನೀನು ಡೆನ್ಮಾರ್ಕ್‌ನಲ್ಲಿ ನೆಲೆಸುವ ಅಧಿಕಾರವನ್ನು ಕಳೆದುಕೊಂಡಿದ್ದೀಯ. ನಾನು ನಿನ್ನನ್ನು ಮದುವೆಯಾಗಲು ಸಿದ್ಧಳಿಲ್ಲ. ನೀನೀಗ ಭಾರತಕ್ಕೆ, ನಿನ್ನ ಮನೆಗೆ ಮರಳಿ ಹೋಗು. ಇದೇ ನಿನ್ನ ‘ಮರಳಿ ಮನೆಗೆ’ ಆಗಿದೆ” ಎಂದು ಪೂಜಾ ಅವನನ್ನು ಮನೆಯಿಂದ ಹೊರಗೆ ತಳ್ಳಿ ದಢಾರನೆ ಬಾಗಿಲನ್ನು ಮುಚ್ಚಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.