ಸುಧಾಕಾಂತ ಪಾರ್ಕ್ ಸಮೀಪದಿಂದ ಹಾದು ಹೋಗುತ್ತಿರುವಾಗ, ಒಂದು ಬೆಂಚಿನಲ್ಲಿ ತಪೋವಿಜಯ ಕೂತಿರುವುದನ್ನು ನೋಡಿದ. ಅವನು ಮತ್ತೂ ಸಮೀಪಕ್ಕೆ ಹೋದಾಗ ಅವನ ಪಕ್ಕದಲ್ಲಿ ಸುಂದರ ಯುವತಿಯೊಬ್ಬಳು ಕೂತಿರುವುದನ್ನೂ ನೋಡಿದ. ತಪೋವಿಜಯ ಆ ಯುವತಿಯ ಕೈಯನ್ನು ತನ್ನ ಕೈಗಳಲ್ಲಿ ಹಿಡಿದಿದ್ದ. ಅಂದರೆ ತಪೋವಿಜಯ ಪ್ರೀತಿಸುತ್ತಿದ್ದಾನೆ. ಸುಧಾಕಾಂತ ಒಂದು ಮರದ ಹಿಂದೆ ಹೋಗಿ ನಿಂತ.

ಆ ಯುವತಿಯ ಮುಖಾಕೃತಿಯ ಸೌಂದರ್ಯ ಅದ್ಭುತವಾಗಿತ್ತು. ಅವಳ ಶರೀರದ ರಚನೆ ಅಚ್ಚಿನಲ್ಲಿ ಎರಕ ಹೊಯ್ದಂತಿತ್ತು. ಆದರೆ ತಪೋವಿಜಯ ಪ್ರೀತಿ ಮಾಡುವುದೆಂದರೆ! ಛೀಃ ಛೀಃ...ಇದು ಅವನಿಗೆ ಶೋಭೆ ತರುವಂಥದ್ದಲ್ಲ.

ಯಾಕೆಂದರೆ ತಪೋವಿಜಯ ಅತ್ಯಂತ ದುಃಖಿ ಯುವಕನಾಗಿದ್ದ. ಬಡವನೂ ಆಗಿದ್ದ. ಅಲ್ಲದೆ ಅವನ ನೌಕರಿಯೂ ಅವನನ್ನು ಬಿಟ್ಟು ಅನೇಕ ದಿನಗಳಾಗಿದ್ದವು. ಖರ್ಚು-ವೆಚ್ಚವನ್ನು ಹೇಗೆ ನಿಭಾಯಿಸುತ್ತಿದ್ದಾನೆಂಬುದು ಆ ದೇವರಿಗೇ ಗೊತ್ತು! ಅವನಿಗೆ ತಂದೆ ಇರಲಿಲ್ಲ. ತಾಯಿ ಇದ್ದಳು. ಸಹೋದರರಿರಲಿಲ್ಲ. ಆದರೆ ನಾಲ್ವರು ಸಹೋದರಿಯರಿದ್ದರು. ಆದರೆ ಸುಧಾಕಾಂತ ತುಂಬಾ ಅದೃಷ್ಟವಂತ: ತಂದೆಯೂ ಇದ್ದರು, ತಾಯಿಯೂ ಇದ್ದಳು. ಮನೆಯೂ ಇತ್ತು, ಕಾರೂ ಇತ್ತು. ಸಹೋದರರೂ ಇದ್ದರು, ಸಹೋದರಿಯರೂ ಇದ್ದರು. ಅತ್ತಿಗೆಯರಿದ್ದರು. ಅಲ್ಲದೆ ನೌಕರಿಯೂ ಇತ್ತು. ಆದರೆ ಅವನ ಅದೃಷ್ಟದಲ್ಲಿ...
ಮರದ ಮರೆಯಿಂದಲೇ ಸುಧಾಕಾಂತ ಗಮನ ಹರಿಸಿದ. ತಪೋವಿಜಯ ಆ ಯುವತಿಯ ಗದ್ದದ ಮೇಲೆ ತನ್ನ ಕೈಯನ್ನಿಟ್ಟ, ಯುವತಿ ಸ್ವಲ್ಪ ನೊಂದಳು. ಸ್ವಲ್ಪ ಉದಾಸೀನತೆಯೂ ಅವಳನ್ನು ಆವರಿಸಿತು. ಅವಳ ಮುಖದಲ್ಲಿದ್ದ ನಗು ಮಾಯವಾಗಿತ್ತು. ಮಿಲನ ಮತ್ತು ದುಃಖ. ಇಲ್ಲಿ ನಿಂತಿದ್ದರೆ ಏನಾಗುವುದು? ಸುಧಾಕಾಂತ ಹೊರಡಲು ಅನುವಾದ; ಆದರೆ ಆಗಲೇ, ತಪೋವಿಜಯ ಬಾಗಿ ಯುವತಿಗೆ ಏನೋ ಹೇಳಿದ. ಅವನ ಮಾತನ್ನು ಕೇಳಿದೊಡನೆಯೇ ಯುವತಿ ಕಿಲಕಿಲನೆ ನಕ್ಕಳು. ಓಹ್! ಎಂಥ ನಗು; ಅದು ನಗುವಲ್ಲ ವಜ್ರವೇ ಉದುರಿದಂತಿತ್ತು!
‘ಅರೇ ರೇ ರೇ!’ ಸುಧಾಕಾಂತ ವಾಸ್ತವವಾಗಿಯೂ ಯುವತಿಯ ತುಟಿಗಳಿಂದ ಏನೋ ಜಾರಿ ಬಿದ್ದಂತಾದುದನ್ನು ಗಮನಿಸಿದ. ವಜ್ರ ಕೆಳಗೆ ಬೀಳುತ್ತಲೇ ಹಾರಿ-ಕುಣಿಯಿತು. ಅದು ಗಾಜಿನಂತೆ ಅತ್ಯಂತ ಹೊಳೆಯುವ ವಸ್ತುವಾಗಿತ್ತು. ಆದರೆ ಅದು ಗಾಜು ಆಗಿರಲಿಲ್ಲ. ವಜ್ರವಾಗಿತ್ತು. ಅದು ನಿಜವಾಗಿಯೂ ವಜ್ರವಾಗಿತ್ತು! ಕಿಸಿಕಿಸಿ ನಗುವಾಗಿತ್ತು. ತಪೋವಿಜಯ ಮೊಣಕಾಲುಗಳಲ್ಲಿ ಕುಳಿತು ವಜ್ರವನ್ನೆತ್ತಿಕೊಂಡ. ಮೆಲ್ಲ-ಮೆಲ್ಲನೆ ಅವನೂ ಎದ್ದು ನಿಂತ.
ಯುವತಿ ಹೊರಟು ಹೋದ ಮೇಲೆ ತಪೋವಿಜಯ ಸುಧಾಕಾಂತನೆಡೆಗೆ ಗಮನ ಹರಿಸುತ್ತಾ ಕೇಳಿದ, ‘ನೀನು ನನ್ನನ್ನು ಕರೆಯುತ್ತಿದ್ದೆಯಾ?’
‘ಹೂಂ.’
‘ಯಾಕೆ, ಹೇಳು?’
‘ಅಮ್ಮನಾಣೆ, ಅವಳ ನಗು ಎಷ್ಟು ಸುಂದರವಾಗಿತ್ತು!’ ಸುಧಾಕಾಂತ ನಗುತ್ತಾ ಹೇಳಿದ. ತಪೋವಿಜಯ ಮೌನವಾಗಿದ್ದ.
‘ಅವಳು ನಗುತ್ತಲೇ ವಜ್ರಗಳು ಉದುರುತ್ತವೆ.’
‘ಹೂಂ, ವಜ್ರಗಳು ಉದುರುತ್ತವೆ.’ ತಪೋವಿಜಯನ ಸ್ವರದಲ್ಲಿ ಅಸ್ಪಷ್ಟತೆಯಿತ್ತು. ‘ನಾನು ಅವಳ ನಗುವಿನಿಂದಾಗಿಯೇ ಉಳಿದಿದ್ದೇನೆ.’ ಎಂದು ತಪೋವಿಜಯ ಸಾಕಷ್ಟು ಹೊತ್ತು ಮತ್ತೆ ಮೌನ ವಹಿಸಿದ.
ಇಬ್ಬರೂ ತುಂಬಾ ಹೊತ್ತು ಅಡ್ಡಾಡಿದರು.
‘ನೀನು ಉಳಿದುಕೊಂಡಿದ್ದೀಯ, ಅದಕ್ಕೇ ನಿನ್ನ ಕುಟುಂಬದವರೂ ಉಳಿದಿದ್ದಾರೆ.’ ಸುಧಾಕಾಂತ ನಿಟ್ಟುಸಿರು ಬಿಡುತ್ತಾ ಹೇಳಿ ಹೊರಟು ಹೋಗಿದ್ದ.
ಅಂದು ಆ ಯುವತಿಯ ಬಗ್ಗೆ ಯೋಚಿಸಿ-ಯೋಚಿಸಿ ಸುಧಾಕಾಂತನ ಸಂಜೆ ಕಳೆದು ಹೋಗಿತ್ತು. ರಾತ್ರೆ ಹಾಸಿಗೆಯಲ್ಲಿ ವಿವೇಕವೂ ಕುಟುಕಿತ್ತು. ನಡುರಾತ್ರಿ ಸುಧಾಕಾಂತ ಕನಸನ್ನು ಕಂಡ...ಆ ಯುವತಿ ಅವನ ಪಕ್ಕದಲ್ಲಿ ಕೂತಿದ್ದಾಳೆ; ಅವಳು ಅಕಾರಣ ನಗುತ್ತಿದ್ದಾಳೆ. ಅವಳ ತುಟಿಗಳಿಂದ ಜಾರಿ-ಜಾರಿ ವಜ್ರಗಳು ಉದುರುತ್ತಿವೆ...
ಅವನು ಬೆಳ್ಳಂಬೆಳಿಗ್ಗೆ ಎರಡು ಗಂಟೆಗಳ ಕಾಲ ಪತ್ರಿಕೆಯೊಂದಿಗೆ ಅಂಟಿಕೊಂಡಿದ್ದ. ಮಧ್ಯಾಹ್ನದ ವೇಳೆಯಲ್ಲಿ ಲೇಡಿ ಟೈಪಿಸ್ಟ್ಗೆ ಮೂರು ಬಾರಿ ಗದರಿಸಿದ್ದ.

-2-

ಕಟ್ಟಕಡೆಗೆ ಸುಧಾಕಾಂತನೇ ಆ ಯುವತಿಯನ್ನು ವಿವಾಹವಾದ.
ತುಂಬಾ ನೊಂದಿದ್ದ ಕರುಣಾ ಬಡ ಯುವತಿಯಾಗಿದ್ದಳು. ಈ ಕಾರಣದಿಂದಲೇ ಸುಧಾಕಾಂತ ಅವಳನ್ನು ಮದುವೆಯಾದನೆಂದು ಎಲ್ಲರೂ ತಿಳಿದರು. ಮದುವೆಯಲ್ಲಿ ಸುಧಾಕಾಂತನಿಗೆ ಮಂಚ, ರೇಡಿಯೋ, ಆಭರಣಗಳು, ವಾಚ್-ಏನೂ ಸಿಕ್ಕಿರಲಿಲ್ಲ. ಕರುಣಾಳ ತಂದೆ ತುಂಬಾ ಬಡವರಾಗಿದ್ದರು. ಸುಧಾಕಾಂತನಂಥ ಹುಡುಗ ಇನ್ನೊಬ್ಬನಿರಲಾರನೆಂದು ಎಲ್ಲರೂ ಹೇಳಿದರು. ಆದರೆ ಸುಧಾಕಾಂತನ ತಂದೆ-ತಾಯಿ, ಅಣ್ಣ-ಅತ್ತಿಗೆ, ಅಕ್ಕ ಎಲ್ಲರೂ ಬೇಸರಗೊಂಡಿದ್ದರು. ಸುಧಾಕಾಂತ ಎಲ್ಲರಿಗೂ ಸಮಾಧಾನ ಹೇಳಿದ, ‘ವರದಕ್ಷಿಣೆ ಸಿಕ್ಕಲ್ಲವೆಂದು ಹೇಳಿದವರು ಯಾರು? ಕರುಣಾಳ ನಗುವೇ ಅತ್ಯಂತ ದುಬಾರಿ ವರದಕ್ಷಿಣೆ.’

ಅವನ ತಂದೆ ಗಂಭೀರರಾದರು. ತಾಯಿಯೂ ಮುಖ ಊದಿಸಿಕೊಂಡಿದ್ದಳು. ಅತ್ತಿಗೆಗೆ ಹೊಟ್ಟೆಕಿಚ್ಚು ಕಾಡಿತು. ಸಹೋದರಿಯರು ಪರಸ್ಪರ ನೋಡಿಕೊಂಡರು. ಸಂಬಂಧಿಕರು, ‘ಅಲ್ಲ...ಸೊಸೆಯ ನಗು ಮಾತ್ರ ಸಾಕೇ! ಒಡವೆ-ಆಭರಣಗಳಿಲ್ಲ!’ ಎಂದು ಸುಧಾಕಾಂತನ ಮಾವನ ಮನೆಯವರು ಹಳಿದರು. ಕೆಲವರು ಸುಧಾಕಾಂತನನ್ನು ಪ್ರಶಂಸಿಸಿ, ಅವನ ಯುವ-ಜಾಗೃತಿ, ಸಮಾಜ ಸುಧಾರಣೆಯ ನಿಲುವನ್ನು ಮೆಚ್ಚಿದರು. ಕೆಲವು ದಿನಗಳ ನಂತರ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟಗೊಂಡವು. ಪತ್ರಿಕೆಗಳು ಸುಧಾಕಾಂತನನ್ನು ಕೊಂಡಾಡಿದವು. ‘ವರದಕ್ಷಿಣೆ ತೆಗೆದುಕೊಳ್ಳುವುದು ಅಪರಾಧ. ವರದಕ್ಷಿಣೆಯಿಂದ ಉಪಯೋಗವಿಲ್ಲ, ವಧುವಿನ ಅಧರಗಳ ಮಧುರ ಮುಗುಳ್ನಗೆ ಸಾಕಲ್ಲವೇ?’ ಇತ್ಯಾದಿ-ಇತ್ಯಾದಿ ಮಾತುಗಳು ಪ್ರಚಾರಗೊಂಡವು.

ಕಡೆಗೊಂದು ದಿನ ಅವನ ತಂದೆಯ ಮುಖದಲ್ಲಿ ನಗು ಮೂಡಿತು. ತಾಯಿ ಸಹ ಖುಷಿಗೊಂಡಳು. ಅತ್ತಿಗೆಗೆ ಮತ್ತೆ ಹೊಟ್ಟೆಕಿಚ್ಚು ಕಾಡಿತು. ಸಹೋದರಿಯರು ಆಶ್ಚರ್ಯದಿಂದ ಪರಸ್ಪರ ನೋಡಿಕೊಂಡರು. ಅಣ್ಣ-ತಮ್ಮಂದಿರು ಕುತೂಹಲದ ಮುಖ ಹೊತ್ತು ನಿಂತರು.

‘ನನಗೇನೂ ಗೊತ್ತಿಲ್ವ...ನಾನು ಹಿಂದು-ಮುಂದು ಯೋಚಿಸದೆ ಮದುವೆ ಮಾಡಿಕೊಂಡಿದ್ದೇನೆಯೇ!’ ಸುಧಾಕಾಂತ ಹೇಳುತ್ತಲೇ ಇದ್ದ, ‘ಈಗಲೇ ತೋರಿಸುತ್ತೇನೆ. ಕೈ ಬಳೆಗೆ ಕನ್ನಡಿ ಯಾಕೆ? ಕರುಣಾ! ಒಮ್ಮೆ ನಗು...’

ಕರುಣಾ ನಗಲಿಲ್ಲ.
ನಗಲು ಪ್ರಯತ್ನಿಸಿದಳು, ಆದರೆ ನಗದಾದಳು.
ನಗದಿರಲು ಕಾರಣಗಳೇನಿರಬಹುದು...? ಅಮ್ಮ-ಅಪ್ಪ, ಅಣ್ಣ-ಅತ್ತಿಗೆ, ತಮ್ಮ-ತಂಗಿ, ಸಂಬಂಧಿಕರು ಇವರೆಲ್ಲರೆದುರು ಕರುಣಾ ಹೇಗೆ ನಗುವುದು? ನಗಲು ಕಾರಣವಿರಬೇಕು. ಆದರೆ ಅವಳ ನಗು ಇಷ್ಟು ಮೋಹಕವಾಗಿದ್ದು, ಆ ನಗುವಿನಿಂದ ವಜ್ರ ಉದುರುವುದಾದರೆ, ಇದನ್ನು ನೋಡಲು ಯಾರು ತಾನೇ ಬಯಸುವುದಿಲ್ಲ? ಎಲ್ಲರೂ ಉತ್ಸುಕರಾಗಿ ನೋಡಲು ಕೂತಿದ್ದರು. ಸುಧಾಕಾಂತ ಪದೇ-ಪದೇ ಅವಳ ಕಿವಿಯಲ್ಲಿ, ‘ಕರುಣಾ, ಸ್ವಲ್ಪ ನಗು’ ಎಂದು ಆಗ್ರಹಿಸುತ್ತಿದ್ದ. ಅದರೆ ಕರುಣಾ ಒಮ್ಮೆಯೂ ನಗಲಿಲ್ಲ. ನಗುವುದು ಸಾಧ್ಯವೂ ಇರಲಿಲ್ಲ.

ನೋಡು-ನೋಡುತ್ತಿರುವಂತೆಯೇ ಎಲ್ಲರ ಮುಖದಲ್ಲಿ ಉದಾಸೀನತೆ ಆವರಿಸಿತು. ಮನೆಯ ದೀಪಗಳೆಲ್ಲವೂ ಮಂಕಾದವು. ಸ್ನೇಹಿತರು-ಗೆಳೆಯರು, ಬಂಧುಗಳು-ಸಂಬಂಧಿಕರು ಮತ್ತು ಕರುಣಾಳ ವಜ್ರ ಉದುರುವ ನಗುವನ್ನು ನೋಡಲು ಬಂದವರೆಲ್ಲರೂ ಒಬ್ಬೊಬ್ಬರಂತೆ ಜೋಲು ಮುಖ ಹೊತ್ತು ಮರಳಿ ಹೋದರು. ಹೊರಡುವಾಗ ಒಬ್ಬ ಸಮಾಧಾನದ ಮಾತನ್ನು ಹೇಳಿದ, ‘ತುಂಬಾ ನೊಂದವನ ಮಗಳು, ನಗುವ ಅಭ್ಯಾಸ ರೂಢಿಸಿಕೊಳ್ಳಲು ಸಮಯ ಹಿಡಿಯುತ್ತದೆ.’ ಇನ್ನೊಬ್ಬರು ಹೇಳಿದರು, ‘ಇಲ್ಲ-ಇಲ್ಲ, ಹೀಗಲ್ಲ. ಇವಳು ಒಮ್ಮೆಲೆ ಇಷ್ಟು ಜನರನ್ನು ನೋಡಿ ದಿಗಿಲಾಗಿದ್ದಾಳೆ’. ಮಗುದೊಬ್ಬ ಹೇಳಿದ, ‘ನಿಜವಾಗಿ ಹೇಳಬೇಕೆಂದರೆ, ವಿಷಯ ಬೇರೆಯಿದೆ...’

‘ವಿಷಯ ಬೇರೆ!’ ಏನದು-ಇದು ಸುಧಾಕಾಂತನಿಗೆ ತಿಳಿದಿಲ್ಲವೇ? ತಪೋವಿಜಯ ಕರುಣಾಳನ್ನು ಪ್ರೀತಿಸುತ್ತಿದ್ದ. ಆದರೆ ಏನೀಗ- ಸುಧಾಕಾಂತ ತಪೋವಿಜಯನಿಗಿಂತ ಕರುಣಾಳನ್ನು ಹೆಚ್ಚಿ ಪ್ರೀತಿಸುತ್ತಾನೆ. ಪ್ರೀತಿಯ ಬಗ್ಗೆ ಸಮಸ್ಯೆಯಿಲ್ಲ. ಸಮಸ್ಯೆ ಎಂದರೆ ನಗುವ ಬಗ್ಗೆ. ಅಂದರೆ ನಿಜವಾವ ಸಮಸ್ಯೆ ವಜ್ರದ ಬಗ್ಗೆ ಇದೆ.

ತನ್ನ ಪ್ರೀತಿಯನ್ನು ಹೆಚ್ಚು ವ್ಯಕ್ತಪಡಿಸಲು ಸುಧಾಕಾಂತ ನಿತ್ಯ ಕಛೇರಿಯಿಂದ ಮನೆಗೆ ಮರಳಿ ಬರುವಾಗ ಹೆಂಡತಿಗೆ ಏನಾದರೂ ಉಡುಗೊರೆಯನ್ನು ಖಂಡಿತ ತರುತ್ತಿದ್ದ. ತಪೋವಿಜಯ ಅವಳಿಗೆ ಎಂದೂ ಯಾವ ಉಡುಗೊರೆಯನ್ನು ಕೊಟ್ಟಿರಲಿಲ್ಲ. ರಜಾ ದಿನಗಳಲ್ಲಿ ಕರುಣಾಳನ್ನು ಸುಧಾಕಾಂತ ಸಿನೆಮಾ, ಶಾಪಿಂಗ್, ರೆಸ್ಟೋರೆಂಟ್ ಅಥವಾ ಸರ್ಕಸ್...ಐಸ್‌ಕ್ರೀಮ್ ಅಥವಾ ಗೊಲ್‌ಗಪ್ಪಾ ತಿನ್ನಿಸಲು ಕರೆದೊಯ್ಯತ್ತಿದ್ದ. ತಪೋವಿಜಯ ಪಾರ್ಕಿನ ಬೆಂಚಿನಲ್ಲಿ ಕೂತು ಕರುಣಾಳೆದುರು ಅಂಗಲಾಚುತ್ತಿದ್ದ.
ನಂತರ ಕರುಣಾಳಿಗಾಗಿ ರೇಡಿಯೋಗ್ರಾಮ್ ಬಂತು, ಆಯ್ದ ರಿಕಾರ್ಡ್‌ಗಳು, ಅಟೋಮ್ಯಾಟಿಕ್ ಹೊಲಿಗೆ ಯಂತ್ರ, ಫ್ರಿಜ್, ಕವನಗಳ ಒಂದು ಡಜನ್ ಪುಸ್ತಕಗಳು. ಎರಡು ಡಜನ್ ಕಾದಂಬರಿಗಳು, ಮೂರು ಡಜನ್ ಸೀರೆಗಳು...ಎಲ್ಲವನ್ನೂ ಖರೀದಿಸಲಾಯಿತು.
ಸುಧಾಕಾಂತ ಶ್ರಮವಹಿಸಿ ಬಂಗಾಳಿ, ಇಂಗ್ಲಿಷ್, ಫ್ರೆಂಚಿನ ಆಯ್ದ ಕವನಗಳ ಎರಡೆರಡು, ನಾಲ್ಕು-ನಾಲ್ಕು ಸಾಲುಗಳನ್ನು ಬಾಯಿಪಾಠ ಮಾಡಿದ. ರವೀಂದ್ರರ ಸಂಗೀತವನ್ನು ಅಭ್ಯಾಸ ಮಾಡಿದ. ಎಸ್‌ಪ್ಲನೈಡ್ ಬುಕ್‌ಸ್ಟಾಲ್‌ನಿಂದ ‘ಹೌ ಟು ಲವ್ ಯುವರ್ ವೈಫ್’ ಪುಸ್ತಕವನ್ನು ಕೊಂಡ.

-3-

ಆದರೆ ಕರುಣಾಳ ಮುಖದಲ್ಲಿನ ಕರುಣೆ ಕೊನೆಗೊಳ್ಳಲಿಲ್ಲ.
ಸುಧಾಕಾಂತ ಮೌನಿಯಾಗಿ ಸಿಗರೇಟಿನ ದಮ್ ಎಳೆಯುತ್ತಿದ್ದ; ಹೊಗೆ ಕಾರುತ್ತಿದ್ದ.
ಒಂದು ದಿನ ಕರುಣಾ ಖಂಡಿತ ನಗುತ್ತಾಳೆ ಎಂದು ತಂದೆಗೆ ಸುಧಾಕಾಂತ ಆಶ್ವಾಸನೆ ಕೊಟ್ಟ. ‘ನಾನು ನನ್ನ ಕಣ್ಣಾರೆ ನೋಡಿದ್ದೆ. ಕರುಣಾ ನಕ್ಕ ಕೂಡಲೇ ಅವಳ ನಗುವಿನಿಂದ ವಜ್ರದ ತುಂಡೊಂದು ಬಿದ್ದಿತ್ತು’. ಎಂದು ತಾಯಿಗೂ ಆಶ್ವಾಸನೆ ಕೊಟ್ಟ. ಅತ್ತಿಗೆಗೆ ಸಮಾಧಾನ ಹೇಳುತ್ತಾ, ‘ಸ್ವಲ್ಪ ತಾಳ್ಮೆಯಿಂದಿರಿ, ತಾಳ್ಮೆಯಿಂದಿರಿ’. ಎಂದಿದ್ದ. ಸಹೋದರಿಗೆ, ‘ನೀನೇಕೆ ಇಷ್ಟು ಹೆದರುತ್ತಿದ್ದೀಯ...’ ಎಂದು ಕೇಳಿದ.

ಕಡೆಗೆ ಒಂದು ದಿನ ಅಂದರೆ ರಾತ್ರೆ ವೇಳೆಯಲ್ಲಿ ಸುಧಾಕಾಂತ ಮತ್ತು ಕರುಣಾ ಮಂಚದಲ್ಲಿ ಬೇರೆ-ಬೇರೆಯಾಗಿ ಮೌನದಿಂದ ಕೂತಿದ್ದರು. ಎದುರಿಗಿದ್ದ ಗೋಡೆಯಲ್ಲಿ ರಾಧಾಕೃಷ್ಣರ ಒಂದು ದೊಡ್ಡ ಚಿತ್ರವನ್ನು ಹಾಕಲಾಗಿತ್ತು. ಚಿತ್ರದಲ್ಲಿ ಕೃಷ್ಣ ರಾಧೆಯ ಗದ್ದದ ಮೇಲೆ ಕೈಯನ್ನಿಟ್ಟಿದ್ದ. ಮೇಲು ಭಾಗದಲ್ಲಿ ಕದಂಬದ ದೊಡ್ಡ-ದೊಡ್ಡ ಹೂಗಳು ಗೊಂಚಲಲ್ಲಿ ಅರಳಿದ್ದವು. ಸುಧಾಕಾಂತ ಕರುಣಾಳ ಗದ್ದದ ಮೇಲೆ ಕೈಯಿಟ್ಟು ಹೇಳಿದ, ‘ಕರುಣಾ!’
ಕರುಣಾ ಕಣ್ಣುಗಳನ್ನು ಪಿಳಿಕಿಸುತ್ತಾ ನೋಡಿದಳು.

‘ನೀನು ನಗುವುದಿಲ್ಲವೇ?’
ಕರುಣಾ ನೆಲವನ್ನು ನೋಡಿದಳು.

‘ನೀನು ನನ್ನ ಪರಿವಾರದ ಲಕ್ಷ್ಮೀ...’
ಕರುಣಾ ತಲೆ ತಗ್ಗಿಸಿದಳು.
‘ನಿನ್ನ ನಗುವಿನಲ್ಲಿ ನಮ್ಮ ಐಶ್ವರ್ಯ-ಸಂಪತ್ತು ಮತ್ತು ಸುಖ ಅಡಗಿದೆ’.
ಕರುಣಾ ಮೆಲ್ಲನೆ ಉಸಿರಾಡಿದಳು.
‘ನಾನು ನಿನ್ನ ನಗುವನ್ನೇ ನಂಬಿ ಕೂತಿದ್ದೇನೆ’.
ಕರುಣಾ, ಕರುಣೆಯಿಂದ ಪತಿಯನ್ನು ನೋಡಿದಳು. ಆದರೆ ನಗಲಿಲ್ಲ. ಕರುಣಾ ನಗುವನ್ನೇ ಮರೆತಂತಿತ್ತು. ಸುಧಾಕಾಂತ ಅಂಗಲಾಚಿದ.
‘ನೀನು ನನ್ನನ್ನು ಪ್ರೀತಿಸುವುದಿಲ್ಲ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ನೀನು ನಗಬಹುದಲ್ಲ!’
‘ಪ್ರೀತಿ ಕೆಲವರಿಗೆ ಸಿಕ್ಕರೆ, ಕೆಲವರಿಗೆ ಸಿಗುವುದಿಲ್ಲ. ಆದರೆ ಒಂದು ಮುಗುಳ್ನಗೆಯನ್ನು ಎಲ್ಲರೂ ಬಯಸುತ್ತಾರೆ’.

ಕರುಣಾ ಮನೆಯಿಂದ ಹೊರಗೆ ಹೊರಟಳು. ಸುಧಾಕಾಂತನ ಮುಖ ಮೆಲ್ಲ-ಮೆಲ್ಲನೆ ಬಾಡಿತು. ಎರಡೂ ಗಲ್ಲಗಳು ಹೂತು ಹೋದವು. ಮನೆಯಲ್ಲಿ ಅಲ್ಲಲ್ಲಿ ಜೇಡರ ಬಲೆ ತೂಗಾಡಿದವು. ನೀರು ಹನಿಯುತ್ತಿದ್ದರಿಂದ ಸೀಲಿಂಗ್‌ನಲ್ಲಿ ಬಿರುಕುಗಳಾದವು. ಈ ಬಿರುಕುಗಳು ತಾಡಕ ರಾಕ್ಷಸಿಯ ಮುಖದಂತೆ ಕಂಡವು. ಇಡೀ ಕೋಣೆ ಕ್ರಮೇಣ ಡ್ರೆಸಿಂಗ್ ಟೇಬಲ್, ಮಂಚ ಮತ್ತು ಕುರ್ಚಿಗಳ ಸುತ್ತಮುತ್ತ ಮುದುಡಿಕೊಂಡಿದೆ ಎಂದು ತೋರುತ್ತಿತ್ತು. ಮನೆಯ ವಾತಾವರಣದಲ್ಲಿ ವಿಚಿತ್ರ ಮೌನ ಕವಿಯಿತು. ಬಾಗಿಲುಗಳು, ಕಿಟಕಿಗಳು ರೇಲಿಂಗ್ ಎಲ್ಲವೂ ಕ್ರಮೇಣ ಜೀರ್ಣಾವಸ್ಥೆಯ ಹಂತಕ್ಕೆ ಹೋಗುತ್ತಿದ್ದವು.
ಸುಧಾಕಾಂತ ಕಛೇರಿಯಿಂದ ಮೌನಿಯಾಗಿ ಮನೆಗೆ ಮರಳಿ ಬರುತ್ತಿದ್ದ-ಮೌನಿಯಾಗಿ ಊಟ ಮಾಡುತ್ತಿದ್ದ, ಮೌನಿಯಾಗಿ ಮಲಗುತ್ತಿದ್ದ. ಮರುದಿನ ಇದೇ ದಾಟಿಯಲ್ಲಿ ಕಛೇರಿಗೆ ಹೋಗುತ್ತಿದ್ದ.
ದಿನಗಳು ಹೀಗೆಯೇ ಕಳೆಯುತ್ತಿದ್ದವು.
ಅಕಸ್ಮಾತ್ ಅದೊಂದು ದಿನ ತಪೋವಿಜಯನೊಂದಿಗೆ ಸುಧಾಕಾಂತನ ಭೇಟಿಯಾಯಿತು.
ಇದೇನು, ತಪೋವಿಜಯ ಇಷ್ಟು ಸೊರಗಿದ್ದಾನೆ! ಇವನ ಎಲುಬುಗಳು ಕಾಣಿಸುತ್ತಿವೆ. ಇವನ ಎರಡೂ ಕಣ್ಣುಗಳು ಒಳಗೆ ಹೂತುಹೋಗಿವೆ. ಗಲ್ಲಗಳು ಒಳಸೇರಿವೆ. ದವಡೆಗಳು ಕಂಪಿಸುತ್ತಿವೆ.
‘ತಪೋವಿಜಯ, ನಿನ್ನೆಲುಬು ಮೂಳೆಗಳು ಕಾಣಿಸುವಷ್ಟು ಸೊರಗಿದ್ದೀಯ...’
‘ಹೂಂ, ನೀನೂ ಸಹ...’
‘ಹೂಂ!’ ಇಬ್ಬರೂ ಮೌನ ವಹಿಸಿದರು. ಮೌನವಾಗಿಯೇ ಇಬ್ಬರೂ ಮುಂದಕ್ಕೆ ಸಾಗಿದರು.
‘ನನ್ನ ಈ ಸ್ಥಿತಿಗೆ ನನ್ನ ಹೆಂಡತಿ ನನ್ನನ್ನು ಪ್ರೀತಿಸದೇ ಇರುವ ಕಾರಣವಿರಬಹುದು’. ಸುಧಾಕಾಂತ ನಿಟ್ಟುಸಿರು ಬಿಟ್ಟ.

‘ಆದರೆ ನಿನಗೆ...ನಿನಗೆ ಈ ಪರಿಸ್ಥಿತಿ ಯಾಕೆ ಬಂತು?’
ಇದನ್ನು ಕೇಳಿದೊಡನೆಯೇ ತಪೋವಿಜಯನ ಕಣ್ಣುಗಳು ತುಂಬಿ ಬಂದವು, ‘ನಾನು ಬದುಕಿರಲು ಯಾರು ಆಶ್ವಾಸನೆಯನ್ನು ಕೊಡುತ್ತಾರೆ? ಅದಕ್ಕೇ ಸಾಯುತ್ತಿದ್ದೇನೆ...’
ಈ ಮಾತು ಕೇಳಿ ಸುಧಾಕಾಂತನಿಗೆ ಆಘಾತವಾಯಿತು. ಅವನು ಏನೋ ಯೋಚಿಸಿದ. ಅವನ ಹಣೆಯಲ್ಲಿ ಗೆರೆಗಳು ಮೂಡಿದವು, ‘ತಪೂ, ನಿನಗೆ ಗೊತ್ತಾ...’ ನಂತರ ಅವನು ಮೆಲ್ಲನೆ ಉಸಿರಾಡುತ್ತಾ, ತಲೆ ತಗ್ಗಿಸಿ ಹೇಳಿದ. ‘ನಾನು ಇದುವರೆಗೂ ಕರುಣಾಳ ತುಟಿಗಳಲ್ಲಿ ನಗುವನ್ನು ನೋಡಲಿಲ್ಲ...’
ತಪೋವಿಜಯ ಕಕ್ಕಾಬಿಕ್ಕಿಯಿಂದ ಅವನನ್ನೇ ನೋಡಿದ.

-4-

ಸುಧಾಕಾಂತ ತಪೋವಿಜಯನನ್ನು ತನ್ನ ಮನೆಗೆ ಕರೆತಂದ, ‘ನಿನ್ನನ್ನು ನೋಡಿ ಕರುಣಾಳ ತುಟಿಗಳಲ್ಲಿ ನಗು ಅರಳುವುದು. ನೀನು ಒಳಗೆ ಹೋಗು’.
‘ನೀನು?’
‘ನಾನು ಬರುವುದಿಲ್ಲ’. ಸುಧಾಕಾಂತ ಬಾಗಿಲ ಮರೆಯಲ್ಲಿ ನಿಂತು ಹೇಳಿದ, ‘ನಾನಿಲ್ಲೇ ನಿಂತು ವಜ್ರ ಉದುರುವ ನಗುವನ್ನು ನೋಡುತ್ತೇನೆ’.
‘ಗೆಳೆಯನ ಹೆಂಡತಿಯ ಹತ್ತಿರ ಗೆಳೆಯನೊಂದಿಗೇ ಹೋಗುವುದು ಸರಿ...’ ಎಂದು ತಪೋವಿಜಯ ಹೇಳುವಷ್ಟರಲ್ಲಿ ಸುಧಾಕಾಂತ ಅವನನ್ನು ಒಳಗೆ ತಳ್ಳಿದ.
ತಪೋವಿಜಯ ಒಳಗೆ ಹೋಗುತ್ತಲೇ ಮನೆಯ ಅಲ್ಮಾರುಗಳು, ಫ್ರಿಜ್, ಹೊಲಿಗೆ ಯಂತ್ರ, ರೇಡಿಯೋಗ್ರಾಮ್ ಮುಂತಾದವುಗಳು ಅವನನ್ನು ನೋಡಿ ಎಚ್ಚರಿಕೆಯ ಮುಖ-ಮುದ್ರೆಯಲ್ಲಿ ಪಂಕ್ತಿಬದ್ಧವಾಗಿ ನಿಂತು ತನ್ನನ್ನೇ ನೋಡುತ್ತಿರುವಂತೆ ಅನ್ನಿಸಿತು. ತಪೋವಿಜಯ ಹಿಂದಕ್ಕೆ ಹೊರಳಿದ. ಹಿಂದೆ ಒಂದು ಮಂಚವಿತ್ತು. ಮಂಚದಲ್ಲಿ... ಮಂಚದ ಹಿಂದೆ ಗೋಡೆಯಿತ್ತು. ಗೋಡೆಗೆ ಒಂದು ದೊಡ್ಡ ತೈಲಚಿತ್ರವನ್ನು ನೇತು ಹಾಕಲಾಗಿತ್ತು... ಕಮಲದ ಹೂ ಮತ್ತು ಕಮಲದ ಹೂವಿನ ಮೇಲೆ ಕೂತ ಕಮಲಾ...ಮಂಚದ ರಗ್ಗಿನ ಮೇಲೂ ಕಮಲದ ಹೂವು ಇತ್ತು. ಅದರ ಮೇಲೆ ಕರುಣಾ ಕೂತಿದ್ದಳು. ಇವಳೇ ಕರುಣಾ! ಏನಾಗಿದೆ ಕರುಣಾಳಿಗೆ! ಕರುಣಾ ಇಷ್ಟು ಯಾಕೆ ವಿಷಾದದಿಂದಿದ್ದಾಳೆ? ಅವಳ ಮುಖ ಹಳದಿಯಾಗಿತ್ತು. ತಪೋವಿಜಯ ದಂಗಾಗಿ ಅವಳನ್ನೇ ನೋಡಿದ.
‘ಕರುಣಾ, ನೀನು ಸುಧಾಕಾಂತನೊಂದಿಗೆ...’
ಆಗಲೇ ಕರುಣಾಳ ಕಣ್ಣುಗಳು ಸ್ಥಿರವಾದವು. ತಪೋವಿಜಯ ಒಮ್ಮೆ ತನ್ನ ಗಲ್ಲವನ್ನು ಕೆರದುಕೊಂಡ. ಒಮ್ಮೆ ಕುತ್ತಿಗೆಯನ್ನು ತುರಿಸಿಕೊಂಡ, ‘ಅವನೊಂದಿಗೆ ಮದುವೆಯಾದ ಮೇಲೆ ನೀನು ಅವನನ್ನೇ...’
ಕರುಣಾ ತಲೆ ತಗ್ಗಿಸಿದಳು.
‘ನೀನು ಇದುವರೆಗೂ...’
ಕರುಣಾ ಈಗ ಮುಖವನ್ನು ಬಾಗಿಸಿದಳು.
‘ನಿನ್ನ ತುಟಿಗಳಲ್ಲಿ ನಗು ಕಾಣದೆ ಎಷ್ಟು ದಿನಗಳಾದವೋ...’
ಕರುಣಾ ಮುಖವನ್ನು ಹಾಗೆಯೇ ಬಾಗಿಸಿಕೊಂಡಿದ್ದಳು.
ಸುಧಾಕಾಂತ ಮರೆಯಲ್ಲಿಯೇ ನಿಂತು, ತಪೋವಿಜಯ ಒಂದೊಂದೇ ಹೆಚ್ಚೆಗಳಿಂದ ಕರುಣಾಳಡೆಗೆ ಮುಂದುವರೆಯುತ್ತಿರುವುದನ್ನು ನೋಡಿದ. ಅವನು ಕರುಣಾಳ ಅತಿ ಸಮೀಪದಲ್ಲಿ ನಿಂತು ಪಿಸುಗುಟ್ಟುತ್ತಿದ್ದ, ‘ನನಗೆ ಯಾರೂ ಬದುಕು ಎಂದು ಹೇಳುವುದೇ ಇಲ್ಲ, ಹೀಗಾಗಿ ನನ್ನ ಪರಿಸ್ಥಿತಿ ಹೇಗಾಗಿದೆ ನೋಡು...!’
ಕರುಣಾ ತನ್ನ ಮುಖವನ್ನು ಮತ್ತೂ ಬಾಗಿಸಿದಳು.
ತಪೋವಿಜಯ ರಗ್ಗಿನೊಳಗಿನಿಂದ ತನ್ನ ಕಂಪಿಸುವ ಕೈಗಳನ್ನು ಹೊರತೆಗೆದ. ಕಂಪಿಸುವ ಕೈಗಳಿಂದಲೇ ಕರುಣಾಳ ಗದ್ದವನ್ನು ಸ್ಪರ್ಶಿಸಿದ. ಮೆಲ್ಲ-ಮೆಲ್ಲನೆ ಅವಳ ಮುಖವನ್ನು ಮೇಲೆತ್ತಿದ. ಕರುಣಾ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿದ್ದಳು. ಮುಖದಲ್ಲಿ ಮುಗುಳ್ನಗೆಯ ಲಕ್ಷಣಗಳೇ ಇರಲಿಲ್ಲ.
‘ನಾನು ಸತ್ತು ಹೋಗುತ್ತೇನೆ, ಆದರೆ ಅದಕ್ಕೂ ಮೊದಲು ನಿನ್ನ ತುಟಿಗಳಲ್ಲಿ ನಗುವನ್ನು ನೋಡಲು ಸಾಧ್ಯವಿಲ್ಲವೇ?’
ಕರುಣಾ ಕಣ್ಣುಗಳನ್ನು ತೆರೆದಳು. ಅಲ್ಲಿ ನಗುವಿನ ಸುಳಿವೂ ಇರಲಿಲ್ಲ. ಕಣ್ಣಿನಿಂದ ಒಂದು ಹನಿ ಕಣ್ಣೀರು ಉದುರಿತ್ತು.
ಅರೇ, ಇದೇನು...ಸುಧಾಕಾಂತ ಏನು ನೋಡಿದ! ಕಣ್ಣೀರಿನ ಹನಿ ಕೆಳಗೆ ಬೀಳುತ್ತಲೇ ಕುಣಿಯಲು ಪ್ರಾರಂಭಿಸಿತ್ತು. ಅರೇ, ಇದು ಮುತ್ತು! ತಪೋವಿಜಯ ಮೊಣಕಾಲುಗಳಲ್ಲಿ ಕೂತು ಮುತ್ತನ್ನು ಆರಿಸಿಕೊಂಡ. ಸುಧಾಕಾಂತ ಓಡಿ ಮನೆಯೊಳಗೆ ಬಂದ. ತಪೋವಿಜಯ ಮುತ್ತನ್ನು ಮೇಲಿನ ಜೇಬಿನಲ್ಲಿಟ್ಟುಕೊಂಡು ಮೆಲ್ಲ-ಮೆಲ್ಲನೆ ಮನೆಯಿಂದ ಹೊರ ಹೋಗುತ್ತಿದ್ದ. ಕರುಣಾ ಮೌನಿಯಾಗಿ ಕೂತಿದ್ದಳು. ಈಗ ಅವಳ ಕಣ್ಣುಗಳಲ್ಲಿ ಒಂದು ಹನಿ ಕಣ್ಣೀರೂ ಇರಲಿಲ್ಲ. ತುಟಿಗಳಲ್ಲಿ ನಗುವೂ ಇರಲಿಲ್ಲ.

ಬಂಗಾಳಿ ಮೂಲ: ಬಲರಾಮ್ ಬಸಾಕ್ ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.