ಮೂಲ: ಪರ್ಲ್ ಎಸ್. ಬಕ್, ಕನ್ನಡಕ್ಕೆ: ಎಂ.ಎಸ್.ರಘುನಾಥ್

ಅವರು ಈಗ ಹೊಸ ರಾಜಧಾನಿಯ ಮೂಲಕ ನಡೆದು ಹೋಗುತ್ತಿದ್ದರು, ಅಪರಿಚಿತ ಹಾಗೂ ದೂರದೇಶದವರಾಗಿ, ಹೌದು, ಅವರದೇ ಆದ ಜಮೀನುಗಳು ಈಗ ನಡೆಯುತ್ತಿರುವ ಈ ಸುಂದರ ರಸ್ತೆಯಿಂದ ಕೆಲವೇ ನೂರು ಮೈಲಿಗಳ ದೂರದಲ್ಲಿದ್ದರೂ ಸಹ. ಆದರೆ, ಅವರಿಗೆ ಅದು ಬಹಳ ದೂರದಂತೆ ಕಂಡು ಬಂದಿತ್ತು. ಅವರಿಗೆ ಯಾವಾಗಲೂ ಗೊತ್ತಿದ್ದ ಹಾಗೂ ಈ ಸಮಯದವರೆಗೆ ಸುರಕ್ಷಿತ ಎಂದು ತಿಳಿದುಕೊಂಡಿದ್ದ ಜಗತ್ತಿನಿಂದ ಯಾವುದೋ ಗೊತ್ತಿರದ ಶಕ್ತಿ ಅವರ ದೃಷ್ಟಿಯನ್ನು ತಕ್ಷಣ ಕಿತ್ತುಕೊಂಡಿತ್ತು. ತಮಗೆ ಪರಿಚಿತವಾದ ಹಳ್ಳಿಯ ಜಮೀನುಗಳು ಮತ್ತು ರಸ್ತೆಗಳಿಂದ, ಈಗ ಠೀವಿಯ ಹೊಸ ರಾಜಧಾನಿಯ ರಸ್ತೆಗೆ ಕಾಂಕ್ರೀಟ್ ಗೋಡೆಯ ಪಕ್ಕ, ನಿಧಾನವಾಗಿ ಹೆಜ್ಜೆ ಹಾಕುತ್ತಾ, ಇಲ್ಲಿಯವರೆಗೆ ನೋಡದ ಸಂಗತಿಗಳನ್ನು ನೋಡುತ್ತಾ ಹೋಗುತ್ತಿದ್ದರು. ಮೊದಲು ತಾವು ನೋಡಿರದ ಮೋಟಾರ್ ವಾಹನಗಳೂ ಇದ್ದವು. ಆದರೂ ಅವರು ಯಾವುದರ ಕಡೆಯೂ ನೋಡದೆ, ಕನಸಿನಲ್ಲಿ ಚಲಿಸುತ್ತಿದ್ದಂತೆ ನಡೆಯುತ್ತಿದ್ದರು.

ಈ ಸಮಯದಲ್ಲಿ ಅವರಲ್ಲಿ ನೂರಾರು ಜನರಿದ್ದರು. ಅವರು ಇತರರ ಕಡೆ ಹೇಗೆ ನೋಡದೆ ಇದ್ದರೋ, ಇತರರೂ ಅವರ ಕಡೆ ದೃಷ್ಟಿ ಹಾಕುತ್ತಿರಲಿಲ್ಲ. ಊರ ತುಂಬಾ ನಿರಾಶ್ರಿತರೇ, ಸಾವಿರಾರು ಮಂದಿ. ಎಂತಹದೋ ಬಟ್ಟೆ ಧರಿಸಿ, ಚಾಪೆಗಳನ್ನು ಹೊತ್ತುಕೊಂಡು ಊರಿನ ಆಚೆ ಆಶ್ರಯ ಪಡೆಯಲು ಬರುತ್ತಿದ್ದಂತೆ ಕಂಡು ಬಂತು. ಬೇರೆ ಸಮಯದಲ್ಲಾದರೇ ಇಂತಹ ಜನ ಶಿಬಿರಗಳ ಕಡೆ ನಡೆಯುವುದನ್ನು ನೋಡಬಹುದಿತ್ತು. ಮತ್ತೇ ಊರಿನ ಯಾರಾದರೂ ನೋಡಿದರೆ, ಅವರು ಸೊಟ್ಟ ಮುಖ ಮಾಡುತ್ತಿದ್ದರು; ‘ಮತ್ತಷ್ಟು ನಿರಾಶ್ರಿತರು – ಅದಕ್ಕೆ ಕೊನೆಯೇ ಇಲ್ಲವೆ? ಅವರಿಗೆಲ್ಲಾ ತಿನ್ನಲು ಕೊಡಬೇಕಾದರೆ, ನಾವು ಹಸಿವಿನಿಂದ ಸಾಯ ಬೇಕಾಗುತ್ತದೆ !’

ಈ ಕಹಿ ವಿಷಯ, ಭಯದಿಂದ ಹುಟ್ಟಿದ ಕಹಿ, ಅಂಗಡಿ ಮಾಲೀಕರು ರಸ್ತೆ ಕಡೆ ನೋಡುವಂತಾಯಿತು. ಅವರಲ್ಲಿ ಅನೇಕರು ಆಗಲೇ ಭಿಕ್ಷುಕರಂತೇ ಅಂಗಡಿ ಬಳಿ ಭಿಕ್ಷೆ ಬೇಡಲು ಬಂದಾಗ ಅವರ ಬಗ್ಗೆ ಒರಟಾಗಿ ವರ್ತಿಸಲು ಆರಂಭಿಸಿದ್ದರು. ಆ ನಿರಾಶ್ರಿತರು ಹೇಗೋ ಸ್ವಲ್ಪವಾದರೂ ಸಂಪಾದಿಸಲು ಪ್ರಯತ್ನಿಸುತ್ತಿದ್ದರು. ಕೆಲವು ರಿಕ್ಷಾ ಚಾಲಕರು ಅವರನ್ನು ಕಡಿಮೆ ದರಕ್ಕೆ ಕರೆದೊಯ್ಯಲು ಯತ್ನಿಸುತ್ತಿದ್ದರು. ಊರ ತುಂಬಾ ತುಂಬಿದ್ದ ನಿರಾಶ್ರಿತರು ಎಲ್ಲಾ ಬಾಗಿಲ ಬಳಿ ಗುಂಪುಕಟ್ಟಿಕೊಂಡು, ಬೇಡುತ್ತಾ, ಕೆಲವೊಮ್ಮೆ ರಸ್ತೆಯ ಮೇಲೆ ಸತ್ತವರಂತೆ ಹರಡಿಕೊಂಡು ಮಲಗಿದ್ದರು. ಅಂತಹವರ ಕಡೆ ಸಂಜೆಹೊತ್ತು ಯಾರು ತಾನೆ ನೋಡಲು ಸಾಧ್ಯವಿತ್ತು?

ಆದರೆ, ಇವರುಗಳು ಯಾವುದೇ ಸಾಮಾನ್ಯ ಜನರಲ್ಲ. ಆ ಪ್ರವಾಹದ ಸಮಯದಲ್ಲಿ ಹಸಿವಿನಿಂದ ಇರುತ್ತಿದ್ದ ಸಮುದಾಯದ ಕಾಕ-ಪೋಕರು ಅಲ್ಲ, ಈ ಸ್ತ್ರೀ-ಪುರುಷರು ಯಾವುದೇ ದೇಶ ಹೆಮ್ಮೆ ಪಡುವಂತಹವರಾಗಿದ್ದರು. ಅವರೆಲ್ಲರೂ ಒಂದೇ ಪ್ರಾಂತ್ಯಕ್ಕೆ ಸೇರಿದ ತಿಳಿದವರಾಗಿದ್ದು, ತಮ್ಮದೇ ನೂಲಿನಿಂದ ತೆಗೆದ ಬಟ್ಟೆಬರೆಗಳನ್ನು ಧರಿಸಿದ್ದರು. ತಮಗೆ ತೋಚಿದ ವಿನ್ಯಾಸದಲ್ಲಿ ಸಿದ್ದಪಡಿಸಿಕೊಂಡು. ಸ್ತ್ರೀಯರೆಲ್ಲರೂ ತಮಗೆ ಸರಿಯೆನಿಸಿದ ಪೋಷಾಕಿನಲ್ಲಿದ್ದರು. ಎಲ್ಲರೂ ಬಲಾಢ್ಯರೇ. ಆದರೆ, ಸ್ತ್ರೀಯರ ಕಾಲುಗಳು ಸೆಟೆದಿತ್ತು. ಅವರಲ್ಲಿ ಕೆಲವು ಯುವಕರಿದ್ದರು, ಕೆಲವು ಮಕ್ಕಳನ್ನು ಬುಟ್ಟಿಗಳಲ್ಲಿ ಕೂಡಿಸಿಕೊಂಡು ಹೆಗಲ ಮೇಲೆ ಹೊರುತ್ತಿದ್ದರು. ಆದರೆ, ಯಾವುದೇ ತರುಣಿಯರಾಗಲೀ, ಮಕ್ಕಳಾಗಲೀ ಇರಲಿಲ್ಲ. ಪ್ರತಿಯೊಬ್ಬ ಗಂಡು, ಹೆಣ್ಣು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡಿದ್ದರು. ಹೊರೆಯೆಂದರೆ, ಹೆಚ್ಚಾಗಿ ಹಾಸಿಗೆಯೇ ಅಥವಾ ಹತ್ತಿಯಿಂದ ಮಾಡಿದ ರಜಾಯಿ, ಹಾಸಿಗೆ ಬಟ್ಟೆಗಳು ಶುಭ್ರವಾಗಿಯೇ ಇದ್ದವು. ಪ್ರತಿಯೊಂದು ರಜಾಯಿಯ ಮೇಲೆ ಚಾಪೆಯ ತುಂಡು, ಕೆಲವರು ಕಬ್ಬಿಣದ ಕಡಾಯಿಯನ್ನು ಹೊತ್ತುಕೊಂಡಿದ್ದರು. ಈ ಕಡಾಯಿಗಳನ್ನು ಹಳ್ಳಿಯ ಒಲೆಗಳ ಮೇಲಿಟ್ಟು ಬಳಸುತ್ತಿದ್ದುದೇ. ಆದರೆ, ಯಾವುದೇ ಬುಟ್ಟಿಯಲ್ಲೂ ಆಹಾರದ ಚೂರು ಸಹ ಇರಲಿಲ್ಲ. ಅಥವಾ ಅಡಿಗೆ ತಯಾರಿಸಿದ್ದ ಗುರುತು ಕಾಣುತ್ತಿರಲಿಲ್ಲ.

ಹೀಗೆ ತಿನ್ನುವ ಆಹಾರದ ಕೊರತೆ ಗೋಚರವಾಗಿದ್ದು, ಓರ್ವ ವ್ಯಕ್ತಿ ಜನಗಳ ಮುಖವನ್ನು ನೋಡಿದಾಗ. ಮೊದಲ ನೋಟದಲ್ಲೇ ಅವರುಗಳು ಸ್ವಲ್ಪ ಕಳೆಯಿರುವಂತೆ ಕಂಡುಬಂದರೂ, ಹತ್ತಿರದಿಂದ ನೋಡಿದಾಗ ಹಸಿವಿನಿಂದ ಸಾಕಷ್ಟು ಬಳಲಿದ್ದಂತೆ ಕಂಡು ಬಂತು. ಅವರುಗಳಿಗೆ ಈ ಹೊಸ ಸ್ಥಳದ ಅಪರಿಚಿತ ದೃಶ್ಯಗಳು ಅವರ ಪಾಲಿಗೆ ಕಂಡುಬಂದಿರಲಿಲ್ಲ. ಕಾರಣ ಏನನ್ನು ನೋಡಿದರೂ ಅವರಿಗೆ ಸಾವೇ ಹತ್ತಿರವಾಗಿದ್ದಂತೆ ಕಂಡು ಬಂದಿತ್ತು. ಯಾವುದೇ ಹೊಸ ದೃಶ್ಯ ಅವರ ಕುತೂಹಲವನ್ನು ತಣಿಸಲು ಸಾಧ್ಯವಿರಲಿಲ್ಲ. ತಮ್ಮದೇ ಆದ ಜಮೀನಿನಲ್ಲಿ ಅವರುಗಳು ಮೊದಲಿನಿಂದ ನೆಲೆಯೂರಿದ್ದರೂ, ಹಸಿವು ಅವರನ್ನು ಅಲ್ಲಿಂದ ಆಚೆಗೆ ಅಟ್ಟಿತ್ತು. ಹೀಗೆ, ಅವರುಗಳು ಕಾಣದ, ಮೌನವಾದ ಅಪರಿಚಿತ ಜಾಗಕ್ಕೆ, ಸಾಯುವುದನ್ನು ಮಾತ್ರ ತಿಳಿದು, ಜೀವಿಸುವುದಕ್ಕೆ ಅಪರಿಚಿತರಾಗಿ ಹೆಜ್ಜೆ ಹಾಕುತ್ತಿದ್ದರು.

ಈ ಮೌನಿಗಳಾದ ಸ್ತ್ರೀ-ಪುರುಷರ ಉದ್ದನೆಯ ಮೆರವಣಿಗೆಯ ಕೊನೆಯಲ್ಲಿ ಓರ್ವ ವೃದ್ಧ ಕಂಡುಬಂದ. ಅವನ ಕೈಯಲ್ಲಿ ಎರಡು ಬುಟ್ಟಿಗಳ ಹೊರೆ, ಅವನ ಹೆಗಲಿನ ಮೇಲೆ ಭಾರಬಿದ್ದಿತ್ತು. ಅದರಲ್ಲೊಂದು ಮಡಿಸಿದ ಹಾಸಿಗೆ, ಮತ್ತೊಂದು ಕಡಾಯಿ. ಆದರೆ ಅಲ್ಲಿದ್ದುದು ಒಂದೇ ಒಂದು ಕಡಾಯಿ. ಮತ್ತೊಂದು ಬುಟ್ಟಿಯಲ್ಲಿ, ಹಳೆಯ ಹರಿದಿದ್ದ, ಆದರೂ ಶುಭ್ರವಾಗಿದ್ದ ಹಾಸಿಗೆ. ಹೊರೆ ಹಗುರುವಾಗಿದ್ದರೂ, ಆ ವೃದ್ಧನಿಗೆ ಅದು ಭಾರವಾಗಿತ್ತು. ಬೇರೆ ಸಮಯದಲ್ಲಾದರೆ ಅವನು ವಯಸ್ಸಿಗೆ ಮೀರಿ ಕೆಲಸ ಮಾಡುತ್ತಿದ್ದನು, ಪ್ರಾಯಶಃ ಇತ್ತೀಚಿನ ವರ್ಷಗಳಲ್ಲಿ ಇಂತಹ ಪರಿಶ್ರಮಕ್ಕೆ ಹೊಂದಿಕೊಳ್ಳದವನಾಗಿದ್ದನು. ತೂರಾಡುತ್ತಾ ನಡೆಯುತ್ತಿದ್ದಾಗ ಅವನ ಉಸಿರು ಶಿಳ್ಳೆಯಂತೆ ಕೇಳಿಸುತ್ತಿತ್ತು. ಅವನಿಗಿಂತ ಮುಂದೆ ನಡೆಯುತ್ತಿದ್ದ ಬಹಳ ಜನಸಂದಣಿಯವರೆಗೆ ದೃಷ್ಟಿ ಬೀರಿ ತನ್ನ ಕಣ್ಣುಗಳಿಗೆ ನೋವುಂಟು ಮಾಡಿಕೊಳ್ಳುತ್ತಿದ್ದ. ಅವನ ಸುಕ್ಕುಗಟ್ಟಿದ ವಯಸ್ಸಾದ ಮುಖ ಒಂದು ರೀತಿಯಲ್ಲಿ ಏದುಸಿರು ಬಿಡುವ ವೇದನೆಯನ್ನು ತೋರಿಸುತ್ತಿತ್ತು.

ತಕ್ಷಣವೇ, ಮುಂದಕ್ಕೆ ನಡೆಯಲಾರದವನಾದ. ತನ್ನ ಹೆಗಲಿನ ಹೊರೆಯನ್ನು ಸಡಿಲ ಮಾಡಿಕೊಂಡು ನೆಲದ ಮೇಲೆ ಕುಸಿದ : ತನ್ನ ತಲೆಯನ್ನು ತನ್ನ ಮೊಣಕಾಲುಗಳ ಮಧ್ಯೆ ಹುದುಗಿಸಿಕೊಂಡು ಮುಚ್ಚಿದ ಕಣ್ಣುಗಳಿಂದ ನಿರಾಶೆಯಿಂದ ಉಸಿರು ಬಿಡುತ್ತಿದ್ದ. ಹಸಿವಿನಿಂದ ಬಳಲುತ್ತಿದ್ದ ಆತನಿಗೆ ಕೆನ್ನೆಗಳ ಮೇಲೆ ಅವನ ರಕ್ತ ಅಲ್ಲಲ್ಲಿ ಕಾಣಿಸುತ್ತಿತ್ತು. ಆಗ, ರಸ್ತೆಯಲ್ಲಿ ಬಿಸಿಯಾದ ಶ್ಯಾವಿಗೆಯನ್ನು ಮಾರುತ್ತಿದ್ದ ಹರಕುಬಟ್ಟೆಯ ವ್ಯಾಪಾರಿ ಹತ್ತಿರ ನಿಂತ, ತನ್ನ ವ್ಯಾಪಾರದ ಕೂಗನ್ನು ಹಾಕುತ್ತಾ. ಆಗ ಅವನು ನಿಂತ ಬೆಳಕು ವೃದ್ಧನ ಬಳಲಿದ ಆಕೃತಿಯ ಮೇಲೆ ಬಿತ್ತು. ಓರ್ವ ವ್ಯಕ್ತಿ ಏನನ್ನೋ ಗೊಣಗುತ್ತಾ ಅವನೆಡೆ ನೋಡುತ್ತಾ ಹೇಳುತ್ತಿದ್ದ ;

‘ನಾನು ಇಂದು ಈ ಶ್ಯಾವಿಗೆಯನ್ನಲ್ಲದೇ, ಮತ್ತಿನ್ನೇನನ್ನೂ ಕೊಡಲು ಸಾಧ್ಯವಿಲ್ಲ – ಆದರೆ, ಇಲ್ಲಿದ್ದಾನೆ ಓರ್ವ ವೃದ್ಧ. ಅವನಿಗೆ ಮಾತ್ರ ನಾನು ಇಂದು ಕಷ್ಟಪಟ್ಟು ಸಂಪಾದಿಸಿದ ಒಂದು ಬೆಳ್ಳಿಯ ನಾಣ್ಯವನ್ನು ನೀಡುತ್ತೇನೆ. ನಾಳೆ ನನಗೆ ಇನ್ನೇನೊ ಸಿಗಬಹುದು. ನನ್ನ ವೃದ್ಧ ತಂದೆ ಜೀವಿಸಿದ್ದಿದ್ದರೆ, ಅವನಿಗೆ ಅದನ್ನು ಕೊಡುತ್ತಿದ್ದೆ.’ ಅವನು ತನ್ನ ಜೇಬಿನಲ್ಲಿ ತಡಕಾಡಿ ಹಳೆಯ ನಡುಪಟ್ಟಿಯಿಂದ ಒಂದು ಬೆಳ್ಳಿಯ ನಾಣ್ಯವನ್ನು ಹೊರ ತೆಗೆದ. ಮತ್ತೆ ಒಂದು ಕ್ಷಣದ ಅನುಮಾನ ಮತ್ತು ಗೊಣಗುವಿಕೆಯ ನಂತರ ಅದಕ್ಕೊಂದು ತಾಮ್ರದ ನಾಣ್ಯವನ್ನು ಸೇರಿಸಿದ.

‘ನೋಡಿ ತಾತ, ನೀವು ಈ ಶ್ಯಾವಿಗೆಯನ್ನು ತಿನ್ನುವುದನ್ನು ನೋಡುತ್ತೇನೆ.’ ಸ್ವಲ್ಪ ಕಹಿಯಾದ ಮೃದುತ್ವದಿಂದಲೇ ಹೇಳಿದ. ಆ ವೃದ್ಧ ನಿಧಾನವಾಗಿ ಕತ್ತೆತ್ತಿದ, ಬೆಳ್ಳಿಯನ್ನು ಕಂಡರೂ ಅದಕ್ಕೆ ಕೈ ಹಾಕದೇ, ಹೇಳಿದ ; ‘ಸ್ವಾಮಿ, ನಾನು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಸ್ವಾಮಿ, ನಮಗೆ ಒಳ್ಳೆಯ ಜಮೀನಿದೆ. ಇಲ್ಲಿಯವರೆಗೆ ಎಂದೂ ಹಸಿವಿನಿಂದ ಬಳಲಿರಲಿಲ್ಲ, ಒಳ್ಳೆ ಜಮೀನೇ ಇದೆ. ಆದರೆ. ಈ ವರ್ಷ ಮಾತ್ರ ನದಿಯ ಮಟ್ಟ ಹೆಚ್ಚಾಗಿ, ಒಳ್ಳೆಯ ಜಮೀನು ಹೊಂದಿರುವವರೂ ಉಪವಾಸ ಸೊರಗುವಂತಾಗಿದೆ. ಸ್ವಾಮಿ, ನಮ್ಮ ಬಳಿ ಬಿತ್ತನೆ ಬೀಜ ಕೂಡ ಉಳಿದಿಲ್ಲ. ಅದನ್ನು ತಿಂದುಬಿಟ್ಟಿದ್ದೇವೆ. ಅದನ್ನು ತಿನ್ನಲು ಸಾದ್ಯವಿಲ್ಲ ಎಂದು ಅವರಿಗೆ ಹೇಳಿದೆ. ಆದರೆ, ಚಿಕ್ಕ ವಯಸ್ಸಿನವರಾದ ಅವರು ಹಸಿವಿನಿಂದಾಗಿ ಅದನ್ನೂ ತಿಂದು ಬಿಟ್ಟರು. ‘ತಗೊಳಿ’, ಅವನು ಹೇಳಿದ, ನಾಣ್ಯವನ್ನು ಆ ವೃದ್ಧನ ಮೇಲು ಹೊದಿಕೆಯಲ್ಲಿ ಬೀಳಿಸುತ್ತಾ, ತನ್ನ ದಾರಿಯಲ್ಲಿ ನಿಟ್ಟುಸಿರಿನಿಂದ ನಡೆದ.

ಆ ವ್ಯಾಪಾರಿ ಮಾರುತ್ತಿದ್ದ ಶ್ಯಾವಿಗೆಯ ಬಟ್ಟಲನ್ನು ಸಿದ್ದಗೊಳಿಸಿ, ಕೂಗಿದ : ‘ನಿಮ್ಮಲ್ಲಿ ಎಷ್ಟು ಜನ ತಿನ್ನುತ್ತೀರಾ, ಸ್ವಾಮಿ?’ ಅ ವೃದ್ಧ ಅಲುಗಾಡಿದ. ತನ್ನ ಮೇಲು ಹೊದಿಕೆಯಲ್ಲಿ ಕಾತರದಿಂದ ನೋಡಲು ಎರಡು ನಾಣ್ಯಗಳು ಕಂಡವು, ಒಂದು ತಾಮ್ರದ್ದು, ಮತ್ತೊಂದು ಬೆಳ್ಳಿಯದು. ಅವನು ಹೇಳಿದ : ‘ಒಂದು ಸಣ್ಣ ಬೋಸಿಯಷ್ಟು ಸಾಕು.’

‘ಒಂದು ಸಣ್ಣ ಬೋಸಿಯಷ್ಟು ತಿನ್ನಲು ಸಾಧ್ಯ ತಾನೇ?’ ಆಶ್ಚರ್ಯದಿಂದ ವ್ಯಾಪಾರಿ ಕೇಳಿದ.

‘ಅದು ನನಗಲ್ಲ’ ವೃದ್ಧ ಉತ್ತರಿಸಿದ.

ವ್ಯಾಪಾರಿ ಆಶ್ಚರ್ಯಚಿಕಿತನಾಗಿ ನೋಡಿದ, ಆದರೆ ಒಬ್ಬ ಸರಳ ವ್ಯಕ್ತಿಯಾಗಿ ಅವನು ಏನನ್ನೂ ಹೇಳದೇ ಬೋಸಿಯಲ್ಲಿ ಸ್ವಲ್ಪ ಶ್ಯಾವಿಗೆಯನ್ನು ಸಿದ್ದಪಡಿಸಿ ಕೂಗಿದ ‘ನೋಡಿ ಇಲ್ಲಿ’, ಯಾರು ತಿನ್ನುತ್ತಾರೆ ಅಂತ ಕಾದು ನೋಡಿದ.

ಆಗ ಆ ವೃದ್ಧ ಬಹಳ ಕಷ್ಟಪಟ್ಟು ಎದ್ದು, ತನ್ನ ನಡುಗುವ ಕೈಗಳಲ್ಲಿ ಬೋಸಿಯನ್ನು ತೆಗೆದುಕೊಂಡು ಮತ್ತೊಂದು ಬುಟ್ಟಿಯಲ್ಲಿ ಹುಡುಕಿದ. ವ್ಯಾಪಾರಿ ಅದನ್ನು ದಿಟ್ಟಿಸುತ್ತಿದ್ದಂತೆ, ಆ ವೃದ್ಧ ರಜಾಯಿಯನ್ನು ತನ್ನ ಕಡೆ ಎಳೆದುಕೊಂಡು, ಅಲ್ಲಿ ಮಲಗಿದ್ದ ಚಿಕ್ಕ ಹುಡುಗನ ಮುಖವನ್ನು ನೋಡಿದ. ಬೇರೆಯವರಾಗಿದ್ದರೆ, ಆ ಹುಡುಗ ಸತ್ತೇ ಹೋಗಿರಬಹುದೆಂದು ಕೊಳ್ಳುತ್ತಿದ್ದರು. ಆದರೆ, ಆ ವೃದ್ಧ ಆ ಬೋಸಿಯಿಂದ ತಿನ್ನಲು ಕತ್ತು ಎತ್ತಿ ನಿಧಾನವಾಗಿ ಅದರಲ್ಲಿನ ಬಿಸಿ ಮಿಶ್ರಣವನ್ನು ಬಾಯಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ. ಆ ವೃದ್ಧ ತನಗೆ ತಾನೇ ಗೊಣಗಿಕೊಂಡ.

‘ನೋಡಲ್ಲಿ, ನನ್ನ ಪ್ರೀತಿಪಾತ್ರ – ಅಲ್ಲಿ ನನ್ನ ಕೂಸು –‘

‘ನಿಮ್ಮ ಮೊಮ್ಮಗುವೇ?’ ವ್ಯಾಪಾರಿ ಕೇಳಿದ.

‘ಹೌದು’ ಎಂದು ವೃದ್ಧ ತಲೆಯಾಡಿಸಿದ. ‘ನನ್ನ ಒಬ್ಬನೇ ಮಗನ ಮಗು. ನನ್ನ ಮಗ ಮತ್ತು ಅವನ ಹೆಂಡತಿ ಇಬ್ಬರೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಉಕ್ಕಿದ ನೀರಿನಲ್ಲಿ ಮುಳುಗಿ ಹೋದರು.’

ಅವನು ಮಗುವಿಗೆ ಹೊದಿಸಿ ಮೃದುವಾಗಿ ನೇವರಿಸಿದ. ಅಲ್ಲೇ ಹರಡಿಕೊಂಡು ಕುಳಿತು ಬೋಸಿಯಲ್ಲಿ ಕೊನೆಯ ಅಗುಳಿನವರೆಗೆ ಇದ್ದುದನ್ನು ನಿಧಾನವಾಗಿ ತಿಂದು ಮುಗಿಸಿದ. ಆಗ ತಿಂದು ಸಮಾಧಾನದಿಂದ ಬೋಸಿಯನ್ನು ವ್ಯಾಪಾರಿಗೆ ಮರಳಿ ನೀಡಿದ.

‘ಆದರೆ, ನಿನ್ನ ಬಳಿ ಇನ್ನೂ ಆ ಬೆಳ್ಳಿ ನಾಣ್ಯ ಇದೆ ಅಲ್ಲವಾ?’ ವ್ಯಾಪಾರಿ ಕೇಳಿದ, ಆ ವೃದ್ಧ ಮತ್ತೇನ್ನನ್ನು ಕೇಳದಿದ್ದಾಗ ಆಶ್ಚರ್ಯಗೊಂಡ.

ವೃದ್ಧ ತಲೆ ಅಲ್ಲಾಡಿಸಿದ. ‘ಇದು ಬಿತ್ತ ಬೇಕಾದ ಬೀಜಕ್ಕಾಗಿ’, ವೃದ್ಧ ಉತ್ತರಿಸಿದ. ‘ನಾನು ಅದನ್ನು ನೋಡಿದಾಗ, ಅದರಿಂದ ಬೀಜ ಕೊಳ್ಳಬಹುದೆಂದು ಅನಿಸಿತು. ಅವರುಗಳೆಲ್ಲಾ ಬೀಜವನ್ನು ತಿಂದು ಮುಗಿಸಿದರು. ಆದರೆ, ಯಾವುದರಿಂದ ಭೂಮಿಯನ್ನು ಬಿತ್ತಲು ಸಾಧ್ಯ?’

ವ್ಯಾಪಾರಿ ಹೇಳಿದ, ‘ನಾನೇ ಅಷ್ಟು ಬಡವನಾಗಿಲ್ಲದಿದ್ದರೆ, ನಾನು ನಿನಗೆ ಮತ್ತೊಂದು ಬೋಸಿಯಷ್ಟು ತಿನ್ನಲು ಕೊಡುತ್ತಿದ್ದೆ. ಆದರೆ, ಬೆಳ್ಳಿ ನಾಣ್ಯವನ್ನು ಹೊಂದಿರುವವನಿಗೆ ತಿನ್ನಲು ಕೊಡುವುದೆಂದರೆ.....’ ತಲೆ ಅಲ್ಲಾಡಿಸಿದ ಗೊತ್ತಾಗದಂತೆ.

‘ತಮ್ಮಾ, ನಾನು ನಿಮಗೆ ಏನನ್ನೂ ಕೊಡು ಎಂದು ಕೇಳುವುದಿಲ್ಲ.’ ವೃದ್ಧ ಹೇಳಿದ. ‘ನಿನಗೆ ಅರ್ಥವಾಗುವುದಿಲ್ಲ ಎಂದು ನನಗೆ ಗೊತ್ತು. ಆದರೆ ನಿನಗೆ ಭೂಮಿ ಇರುತ್ತಿದ್ದರೆ, ಅದರಲ್ಲಿ ಬಿತ್ತಲು ಬೀಜ ಬೇಕು ಎಂಬುದು ನಿನಗೆ ಗೊತ್ತಿರುತ್ತಿತ್ತು. ಇಲ್ಲದಿದ್ದರೆ, ಮತ್ತೊಂದು ವರ್ಷಕ್ಕೂ ನೀವು ಹಸಿವಿನಿಂದ ಬಳಲಬೇಕಾಗುತ್ತದೆ. ಈ ನನ್ನ ಮೊಮ್ಮಗುವಿಗೆ ನಾನು ಮಾಡಬಹುದೇನೆಂದರೆ, ಆ ಭೂಮಿಗಾಗಿ ಸ್ವಲ್ಪ ಬೀಜವನ್ನು ಕೊಳ್ಳುವುದು - ಹೌದು. ನಾನು ಸಾಯುವುದಾದರೂ, ಇತರರು ಅದನ್ನು ಬಿತ್ತಿ ಜಮೀನನ್ನು ಬಿತ್ತನೆಗೆ ಯೋಗ್ಯ ಮಾಡಬಹುದು.’

ತನ್ನ ಹೊರೆಯನ್ನು ಮತ್ತೆ ಹೊತ್ತುಕೊಂಡ, ನಡುಗುವ ಕಾಲುಗಳಿಂದ. ಮುಂದೆ ಕಾಣುತ್ತಿದ್ದ ಉದ್ದನೆಯ ರಸ್ತೆಯ ಜನಸಂದಣಿಯನ್ನು ಆಯಾಸದಿಂದ ದಿಟ್ಟಿಸುತ್ತಾ, ತೂರಾಡುವಂತೆ ಮುನ್ನಡೆದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.