ಭರತನ ಎದೆಯಲ್ಲಿ ಕಳವಳ. ಕಳೆದ ಒಂದು ವಾರದಿಂದ ಮೂಡಿದ್ದ ಸಂಭ್ರಮದ ಛಾಯೆ ಇಂದು ಏಕಾಕಿ ಇಲ್ಲವಾಗಿತ್ತು. ಆಸ್ಪತ್ರೆಯ ಮೇಲಿನ ವಾರ್ಡಿನಿಂದ ಸಾಮಾನುಗಳನ್ನು ಒಂದೊಂದಾಗಿ ತಂದು ತಮ್ಮನ ಕಾರಿಗೆ ತುಂಬುತ್ತಿದ್ದನಾದರೂ.. ಮನಸ್ಸು ಬೇರೆಯದ್ದೇ ಯೋಚಿಸುತ್ತಿತ್ತು. ಇವನ ಉತ್ತರಕ್ಕಾಗಿ ಕಾದು ಪ್ರಶ್ನಿಸಿದವರು ಅನಿವಾರ್ಯವಾಗಿ ಕೇಳಿದ್ದನ್ನೆ ಎರಡುಮೂರು ಬಾರಿ ಕೇಳಬೇಕಾಗಿ ಬಂದಿತ್ತು. ಒಟ್ಟಿನಲ್ಲಿ ಆತನ ದೇಹ ಮಾತ್ರ ಇಲ್ಲಿದ್ದು ಮನಸ್ಸು ಅಯೋಮಯವಾಗಿತ್ತು.

ಭರತ ಭವಾನಿ ಪ್ರೀತಿಸಿ ವಿವಾಹವಾಗಿ ವರ್ಷ ಕಳೆದುದ್ದರ ಫಲವಾಗಿ ಕಳೆದ ವಾರವಷ್ಟೆ ನಗರದ ಐಶಾರಾಮಿ ನರ್ಸಿಂಗ್ ಹೋಮ್‍ನಲ್ಲಿ ಗಂಡು ಮಗು ಜನಿಸಿತ್ತು. ಇದೇ ಮೊದಲ ಬಾರಿಗೆ ಅಕ್ಕ ಭವಾನಿಯನ್ನು ನೋಡಲು ಬಂದಿದ್ದ ದೊಡ್ಡಪ್ಪನ ಮಗ ರಾಜ, ಹಾಸ್ಪಿಟಲ್‍ನ ಸ್ಪೆಷಲ್ ಡಿಲಕ್ಸ್ರೂಮಿನ ಡೋರಿಗೆ ಹೊರಗಿ ದೂರದಿಂದಲೆ ಗದ್ದಕ್ಕೆ ಕೈಕೊಟ್ಟುಕೊಂಡು ಅಕ್ಕನನ್ನೂ ಅಕ್ಕನ ಅಸುಗೂಸನ್ನು ನೋಡುವಂತೆಯೂ ನೋಡದಂತೆಯೂ ಆಡುತ್ತಿದ್ದ. ರಾಜ ಹಾಗೆ ವರ್ತಿಸಲೂ ಒಂದು ಕಾರಣವಿತ್ತು. ಅಕ್ಕಳದ್ದು ಕೇವಲ ಪ್ರೇಮ ವಿವಾಹವಾಗಿರದೆ ಅಂತರ್ಜಾತಿಯದ್ದೆಂಬುದು ಆತನಿಗೆ ತಿಳಿದಿತ್ತು.

ಒಂದೇ ಕಚೇರಿಯಲ್ಲಿ ಒಟ್ಟಿಗೆ ಕೆಲಸಕ್ಕೆ ಸೇರಿದ್ದೂ ಸೇರಿ ಅವರಿಬ್ಬರ ಆಲೋಚನೆಗಳು ಒಂದೇ ಆಗಿದ್ದುದರಿಂದ ನಡುವೆ ಸ್ನೇಹ ಬೆಳೆದು ಪ್ರೇಮವಾಗಲು ಹೆಚ್ಚೇನು ಸಮಯ ಹಿಡಿದಿರಲಿಲ್ಲ. ಕಡು ಸಂಪ್ರದಾಯಸ್ಥ ಜಾತಿ ಹಿನ್ನೆಲೆಯ ಭವಾನಿ ತನಗೆ ಓದಿ ನೌಕರಿ ಹಿಡಿಯುವಷ್ಟು ಸ್ವತಂತ್ರಿಸಿದ ಅಪ್ಪ ಅಮ್ಮನನ್ನು ಒಪ್ಪಿಸಿಯೇ ಆಗಬೇಕೆಂದು ಹಠ ಹಿಡಿದದ್ದರ ಪರಿಣಾಮವಾಗಿ ವಿವಾಹವೆಂಬುದು ಐದಾರು ವರ್ಷದ ಮಟ್ಟಿಗೆ ಬಗೆಹರಿಯದ ಕಗ್ಗಂಟಾಗಿತ್ತು. ಇದರಿಂದಾಗಿ ತನ್ನ ಹೆರಿಡಿಟಿಯ ಕಾರಣವೂ ಸೇರಿ ಈಗಾಗಲೆ ಅರ್ಧ ಬೋಳುತಲೆಯಾಗಿದ್ದ ಭರತ ಪೂರ್ತಿ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿ ಚಿಂತಾಕ್ರಾಂತನಾಗಿದ್ದ. ಅಪ್ಪ ಅಮ್ಮನನ್ನು ಒಪ್ಪಿಸಿ ಕರೆತರುವ ಸತತ ಪ್ರಯತ್ನಗಳು ವಿಫಲವಾದ್ದರಿಂದ ಕೊನೆಗೊಂದು ದಿನ ರಿಜಿಸ್ಟರ್ ಆಫೀಸ್‍ನಲ್ಲಿ ಎರಡು ಹನಿ ಕಣ್ಣೀರು ತೊಟ್ಟಿಕ್ಕಿಸಿಯೇ ಹಾರ ಬದಲಾಯಿಸಿಕೊಳ್ಳಲು ಭವಾನಿ ಸಹಕರಿಸಿದ್ದಳು.

ತಾನು ಇಷ್ಟಪಟ್ಟಿರುವ ಹುಡುಗ ತಾವೆಲ್ಲ ಮುಟ್ಟಿಸಿಕೊಳ್ಳದಿರುವ ಅಸ್ಪೃಶ್ಯನೆಂಬ ಸುಡುಕೆಂಡದಂತ ವಾಸ್ತವಕ್ಕಿಂತ ತಮಗಿಂತ ಮೇಲ್ಜಾತಿಯವನೆಂದು ಹೇಳುವ ಸುಳ್ಳೇ ಅಪ್ಪ ಅಮ್ಮನನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಹಿತವೆನಿಸಿ, ಭವಾನಿ ಹಾಗೆಯೇ ಹೇಳಿದ್ದಳು. ತನ್ನ ಅಳಿಯನಾಗುತ್ತಿರುವವನು ನಮಗಿಂತ ಮೇಲ್ಜಾತಿಯವನೆಂದು ನಂಬಿದರೂ ಮಗಳು ಎಸಗಿದ ದ್ರೋಹಕ್ಕೆ ನೊಂದ ಜೀವ ದೂರದಿಂದಲೇ ಹಾರೈಸಿ ಸುಮ್ಮನಾಗಿತ್ತು.

ಹೀಗೆ ಮೊದಲ ಎರಡುಮೂರು ತಿಂಗಳು ಬಿಗುಮಾನದಿಂದಲೇ ಕೂಡಿದ್ದು ಅಪ್ಪ ಅಮ್ಮ ಮಗಳನ್ನಾಗಲೀ, ಮಗಳು ಅಪ್ಪ ಅಮ್ಮನನ್ನಾಗಲೀ ದಿನವೂ ನೆನೆವುದೇ ಆಗಿದ್ದರೂ.. ಒಟ್ಟುಗೂಡಿ ಸಂದಿಸುವುದಕ್ಕೆ ಮುಂದಾಗಿರಲಿಲ್ಲ.

ಆಗೊಮ್ಮೆ ಹೇಗೋ ಮಗಳು ಮೂರುತಿಂಗಳ ಗರ್ಭಿಣಿಯಾಗುವುದರೊಂದಿಗೆ ಊಟ ಸೇರದೆ ಹೊತ್ತೂ ಬೋಗೂ ವಾಂತಿ ಮಾಡುತ್ತಿರುವುದನ್ನು ಪತ್ತೆಹಚ್ಚಿಕೊಂಡ ಅಪ್ಪ, ಕರುಳ ಸಂಕಟ ತಾಳಲಾರದೆ ಒಂದು ದಿನ ಯಾರದೋ ಕೈಯಲ್ಲಿ ಮಗಳಿಗೆ ಕರೆ ಮಾಡಿಸಿದ್ದ. ಅಂದು ಫೋನ್ ಮಾತಾಡಿದ್ದಕ್ಕಿಂತ ಕಣ್ಣೀರಾದದ್ದೆ ಹೆಚ್ಚು. ಹೀಗೆ ಶುರುವಾದ ಮರುಜೇಣಿಗೆ ನಿಧಾನಕ್ಕೆ ಮಗಳ ಸಂಕಟಕ್ಕಾಗಿ ಅವಳಿರುವಲ್ಲಿಗೇ ಆಗೊಮ್ಮೆ ಈಗೊಮ್ಮೆ ಬರುವಂತಾಯಿತು. ಮೊದಮೊದಲು ಬರುವಾಗ ಇದ್ದ ಬಿಗುಮಾನ ಅಳಿಯನ ಅತಿಯಾದ ಹೊಂದಿಕೊಳ್ಳುವ ಗುಣದಿಂದಾಗಿ ಮುಂದಿನ ಎರಡುಮೂರನೆಯ ಭೇಟಿಗಳಲ್ಲಿ ಅಪ್ಪನ ಜೊತೆಗೆ ಅಮ್ಮನು, ಭವಾನಿಯ ತಂಗಿಯೂ.. ಕೊನೆ ಕೊನೆಗೆ ತಂಗಿಯ ಚಿಕ್ಕ ಪುಟ್ಟ ಮಕ್ಕಳುಗಳೂ ಬಂದು ಸ್ವಚ್ಚಂದವಾಗಿ ದೊಡ್ಡಪ್ಪ ದೊಡ್ಡಮ್ಮ ಎಂದು ಮನೆ ತುಂಬ ಆಡಿಕೊಳ್ಳುವಂತಾಯಿತು.

ನಮ್ಮಿಬ್ಬರ ಪ್ರೇಮವಿವಾಹ ಎಲ್ಲಿ ಭವಾನಿಯ ಹೆತ್ತವರ ಜೀವ ತೆಗೆದುಬಿಡುತ್ತದೋ ಎಂದು ದಿಗಿಲು ಬೀಳುತ್ತಿದ್ದ ಭರತ ಈಗ ಆಬಗೆಯ ಆತಂಕದಿಂದ ದೂರಾಗಿ ಇನ್ನೊಂದು ಬಗೆಯ ಒತ್ತಡಕ್ಕೆ ಸಿಲುಕಿದ್ದ. ಭರತನದು ಈಗ ತಾನಿರುವ ನಗರದಿಂದ ಸ್ವಲ್ಪವೇ ದೂರದಲ್ಲಿರುವ ಹಳ್ಳಿಯಾದರೂ.. ಆ ಹಳ್ಳಿಯ ತನ್ನ ಮೂಲವನ್ನು ಬಲವಂತವಾಗಿ ತನ್ನ ಹೆಂಡತಿ ತವರಿನವರಿಂದ ಗೋಪ್ಯವಾಗಿಟ್ಟಿದ್ದ. ಮಗಳು ಜಾತಿ ಬಿಟ್ಟು ವಿವಾಹವಾಗಿದ್ದಾಳೆಂದು ತಿಳಿದಿದ್ದರೂ ತಮಗಿಂತ ಮೇಲ್ಜಾತಿಯಲ್ಲಿ ಎಂದು ನಂಬಿದ್ದ ಅಪ್ಪ ಅಮ್ಮನಿಗೆ ಭರತನ ಮೂಲ ಸ್ಥಳದ ಪರಿಚಯದಿಂದ ಈತನ ನಿಜ ಜಾತಿ ಸ್ಫೋಟಗೊಳ್ಳುವ ಅಪಾಯವಿತ್ತು. ಹಾಗಾಗಿ ಭರತ ಮನೆಗೆ ಬರಲು ರೂಢಿಸಿಕೊಂಡಿದ್ದ ಅತ್ತೆ ಮಾವರಿಗೆ ತನ್ನೂರು ಯಾವುದೆಂದು ಹೇಳುವ ಗೋಜಿಗೆ ಹೋಗಿರಲಿಲ್ಲ. ಅಳಿಯನ ಮೂಲದ ಬಗ್ಗೆ ಸಾಕಷ್ಟು ಕುತೂಹಲಿಗಳಾಗಿದ್ದರೂ ಪುಣ್ಯಕ್ಕೆ ಎಂದೂ ಸಹ ನೇರವಾಗಿ ಭರತನ ಜಾತಿ ಬಗೆಗಾಗಲಿ, ಸ್ಥಳದ ಬಗೆಗಾಗಲಿ ಕೇಳಿರಲಿಲ್ಲ. ನಗರದ ಕೋರೈಸುವ ರಂಗು ಭರತನ ಕಪ್ಪು ಬಿಳುಪಿನ ಹಳ್ಳಿಯ ಪ್ರಶ್ನೆಯನ್ನು ಮುಚ್ಚಿಹಾಕಿತ್ತು.

ಭರತನೂ ಸಹ ತಾನು ಭವಾನಿಯನ್ನು ಗೆದ್ದಂತೆಯೇ ತನ್ನ ನಡವಳಿಕೆಗಳಿಂದಾಗಿ ಅವರ ಅಪ್ಪ ಅಮ್ಮನ ಮನವನ್ನು ಗೆಲ್ಲಬೇಕೆಂಬ ತತ್ವದಲ್ಲಿ ನಂಬಿಕೆ ಇಟ್ಟು.. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದ. ಕಾಕತಾಳೀಯವೆಂಬಂತೆ ವಿವಾಹವಾದ ಮೊದಲ ವರ್ಷದಲ್ಲೆ ಭರತನಿಗೆ ಅದಕ್ಕಾಗಿ ಸಾಕಷ್ಟು ಅವಕಾಶಗಳು ಒದಗಿ ಬಂದವು. ಭವಾನಿಯ ತಾಯಿಗೆ ಕಣ್ಣಿನ ಪೊರೆತೆಗಿಸಬೇಕಾದ, ಒಂಟೆತ್ತು ಕಟ್ಟಿಕೊಂಡಿದ್ದ ನಾದಿನಿಯ ಗಂಡನಿಗೆ ಕುಂಟೆ ಹೂಡಲು ಇನ್ನೊಂದು ಕೊಳ್ಳಲು ಹಣದ ತುರ್ತು ಬಂದಾಗ... ಇಂತಹ ಯಾವುದೇ ಅವಕಾಶವನ್ನೂ ಕೈಚೆಲ್ಲದೆ ನಿಷ್ಠೆಯಿಂದ ನೆರವೇರಿಸಿಕೊಂಡು ಬಂದು ನೆಂಟರಿಗೆ ಅಚ್ಚು ಮೆಚ್ಚಾದ. ಎಂದೂ ಆಸ್ಪತ್ರೆ ಮುಖ ನೋಡದ ಭವಾನಿಯ ಹೊಗೆಸೊಪ್ಪಜ್ಜಿಗೆ ಗಂಟಲು ಆಪರೇಷನ್ ಆದಾಗ ಹಣದ ನೆರವಿನ ಜೊತೆಗೆ ಒಂದೆರೆಡು ರಾತ್ರಿ ಆಸ್ಪತ್ರೆಯಲ್ಲೆ ಇದ್ದು ಎಲ್ಲವನ್ನು ನೋಡಿಕೊಂಡದ್ದು ಕಡು ಸಂಪ್ರದಾಯನಿಷ್ಟ ಅಜ್ಜಿಯಿಂದಲೂ ‘ನಾವೇ ಹುಡುಕಿ ನೋಡಿದ್ರು ಇಂಥ ಅಳಿಯುನ್ನ ತರಕಾಗ್ತಿರ್ಲಿಲ್ಲ, ನನ್ನ ಕೈಹಿಡ್ಕಂಡು ನೆಡಿಸೈತೆ ಆ ಮಗ, ಅದು ಯಾವ ಜಾತಿನಾರ ಆಗಿರ್ಲಿ ನನ್ನ ಮೊಮ್ಮಗ್ನೆಯ’ ಎಂಬ ಶಭಾಷ್‍ಗಿರಿ ಮಾತುಗಳನ್ನ ಆಡಿತ್ತು.

ಇಷ್ಟೆಲ್ಲ ಅನು ತನುವಿನ ನಡುವೆ ಭವಾನಿ ಗರ್ಭಕ್ಕೆ ಮೂರಾಗಿ ಆರಾಗಿ ಒಂಭತ್ತು ತುಂಬುವಷ್ಟರಲ್ಲಿ ಅನುಮಾನಿಸಿದವರು, ದ್ವೇಷಿಸಿದವರು, ಕುಹುಕವಾಡಿದವರು ಎಲ್ಲರೂ ಒಮ್ಮೆ ಭವಾನಿ ಭರತರಿದ್ದ ನಗರದ ಬಾಡಿಗೆ ಮನೆಗೆ ಬಂದೋಗುವಂತಾಯಿತು. ಅಂತೂ ಗರ್ಭ ಬಲಿತು ಕೈಕಾಲು ಆಡುವಷ್ಟರಲ್ಲಿ ಭವಾನಿ ಮನೆಯವರ ಅನುಮಾನ, ಅಪನಂಬಿಕೆ, ಬಿಗುಮಾನಗಳು ದೂರಾಗಿ ಪರಸ್ಪರ ಪ್ರೀತಿ ವಾತ್ಸಲ್ಯ, ನಂಬಿಕೆಗಳು ಕೈಕಾಲಾಡತೊಡಗಿದವು.

ಎಂಟು ತುಂಬಿ ಒಂಬತ್ತಕ್ಕೆ ಬಿದ್ದಾಗ ಭವಾನಿಯ ಅಪ್ಪ ಸಂಪ್ರದಾಯದಂತೆ ಹಿರಿಮಗಳ ಚೊಚ್ಚಲ ಬಾಣಂತನವನ್ನ ತವರು ಮನೆಯಲ್ಲೇ ಮಾಡಬೇಕು ಅದಕ್ಕಾಗಿ ಅಳಿಯ ಮಗಳಿಬ್ಬರೂ ಊರಿಗೆ ಬರಲೇಬೇಕು ಎಂದು ಬೇಡಿಕೆ ಇಟ್ಟರು. ಮಗಳು ನಿರುತ್ತರಳಾಗಿ ತೀರ್ಮಾನಕ್ಕಾಗಿ ಭರತನ ಮುಖವನ್ನೇ ದಿಟ್ಟಿಸಿ ನೋಡಿದರೆ, ತಮಿಳಿನ ಸೈರೋಟ್ ಸಿನಿಮಾವನ್ನು ನಾಕಾರು ಬಾರಿ ನೋಡಿದ್ದ ಭರತ್ ಇದಕ್ಕೆ ಸುತರಾಮ್ ಒಪ್ಪದೆ ಹೆಂಡತಿಯನ್ನು ಕಳುಹಿಸಿಕೊಡದಿರಲು ಇಲ್ಲದ ಕುಂಟುನೆಪಗಳನ್ನು ಹುಡುಕಿದ. ಬೇಸರಗೊಂಡ ಅಪ್ಪ ನಿರಾಶೆಯಿಂದಲೇ ಊರಿನ ಬಸ್ ಹತ್ತಿದನಾದರೂ.. ಗಂಡ ಎಷ್ಟೇ ಪ್ರೀತಿ ತೋರಿದರೂ, ಅತ್ತೆ ಮಾವ ಎಷ್ಟೇ ಸವೆದುಕೊಂಡರೂ ಮಗಳ ಚೊಚ್ಚಲ ಬಾಣಂತನದಲ್ಲಿ ತಾಯಿ ಆರೈಕೆ ಸಿಕ್ಕಂತಾಗುತ್ತದೆಯೇ, ಹೆತ್ತವಳ ಹತ್ತಿರ ಇದ್ದ ಸಲುಗೆ ಅತ್ತೆ ಮಾವನಲ್ಲಿ ಸಿಗುತ್ತದೆಯೇ ಎಂದು ಮಗಳ ಮೇಲೆ ಕನಿಕರಿಸಿ ಒಂದು ನಿರ್ಧಾರಕ್ಕೆ ಬಂದ.

ಸೊಸೆಯನ್ನು ಅವರು ಕಳುಹಿಸದಿದ್ದರೇನಂತೆ, ಹೆತ್ತವರಾಗಿ ನಾವು ಮಾಡಬೇಕಾದ ಕರ್ತವ್ಯವನ್ನ ಮಾಡಲೇಬೇಕು ಎಂದು ಮಗಳ ಬಾಣಂತನಕ್ಕೆ ಭವಾನಿಯ ತಾಯಿಯನ್ನೆ ಒಂದೆರೆಡು ತಿಂಗಳ ಮಟ್ಟಿಗೆ ಅಳಿಯನೂರಿಗೆ ಕಳುಹಿಸಿಕೊಡೋಣ ಎಂದು ತೀರ್ಮಾನಿಸಿದ. ಅದರಂತೆ ಒಂದು ಮಧ್ಯ ರಾತ್ರಿ ಭವಾನಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆಂಬ ಖುದ್ದು ಅಳಿಯನ ಕರೆಯ ಮೇರೆಗೆ ಅಂದು ಬೆಳಗಾಗೋದ್ರೊಳಗೆ ಅತ್ತೆ, ಮಾವ, ನಾದಿನಿ ಎಲ್ಲರೂ ಆಸ್ಪತ್ರೆಯ ಮುಂದೆ ಇಳಿದರು. ಆ ರಾತ್ರಿಯೇ ಹೆರಿಗೆಯಾಗಿ ಭವಾನಿ ಗಂಡುಮಗುವನ್ನು ಹೆತ್ತಿದ್ದಳು. ಗುಂಡುಗುಂಡಕೆ ಮುದ್ದಾಗಿದ್ದ ಮಗು ಭರತನ ಅಪ್ಪ ಅಮ್ಮನನ್ನು ಮೊದಲ ಬಾರಿಗೆ ತಾತನ ಪಟ್ಟಕ್ಕೇರಿಸಿದರೆ, ಭವಾನಿಯ ಮನೆಯಲ್ಲಿ ಕಳವಾಗಿದ್ದ ಎಷ್ಟೋ ದಿನದ ಸಂಭ್ರಮವನ್ನ ಮತ್ತೆ ತರಿಸಿತ್ತು.

ವೈದ್ಯರು ಸಿಜೆರಿಯನ್ ಮಾಡಿ ಮಗು ತೆಗೆದಿದ್ದರಿಂದ ಏಳುದಿನಗಳ ಕಾಲ ಆಸ್ಪತ್ರೆಯಲ್ಲೆ ಇದ್ದು ಮಗು ಬಾಣಂತಿಯನ್ನು ನೋಡಿಕೊಳ್ಳಬೇಕಾಯಿತು. ಹೊಲ, ಮನೆ ಬದುಕಿನ ಭವಾನಿಯ ಅಪ್ಪ ಅಮ್ಮರಿಗೆ ಅದಷ್ಟೂ ದಿನ ಊರುಬಿಟ್ಟು ಬಂದು ದೂರದ ಆಸ್ಪತ್ರೆಯಲ್ಲಿ ಕಳೆಯುವುದು ಅಸಾಧ್ಯವಾದ ಕೆಲಸವಾದ್ದರಿಂದ ಮೊದಲ ಒಂದೆರೆಡು ದಿನವಿದ್ದು, ಮೂರನೆ ದಿನ ಕಿರಿ ಮಗಳು ಚಿತ್ತಮ್ಮಳಿಗೆ ಮಗ ಬಾಣ್ತಿ ನೋಡಿಕೊಂಡಿರಲು ನೇಮಿಸಿ ಬರ ಭಾನುವಾರ ತಮ್ಮ ಶಾಂತನನ್ನು ಕಳುಹಿಸುವುದಾಗಿ ಹೇಳಿ ಬಸ್ ಹತ್ತಿದರು.

ಕಿರಿಮಗಳು ಚಿತ್ತಮ್ಮನನ್ನು ತವರು ಸಂಬಂಧ ಉಳಿಸಿಕೊಳ್ಳಲೋಸುಗ ಸ್ವಂತ ತಮ್ಮನಿಗೇ ಮದುವೆ ಮಾಡಿಕೊಂಡಿದ್ದರಿಂದ ತಾಯಿಯ ಕಷ್ಟ ಸುಖಕ್ಕೆ ಅವಳು ನೆರವಾಗುವುದಿತ್ತು. ಅಂತೆಯೇ ಚಿತ್ತಮ್ಮಳ ಗಂಡ ಭವಾನಿಯ ಬಾಣಂತನಕ್ಕೆ ಒಂದೆರೆಡು ವಾರದ ಮಟ್ಟಿಗೆ ಭರತನ ಮನೆಗೆ ಹೆಂಡತಿಯನ್ನು ಕಳುಹಿಸಿಕೊಡಲು ಒಪ್ಪಿದ್ದ.

ಭರತನಾದರೂ ಅಪ್ಪನಾದ ಖುಷಿಯಲ್ಲಿ ಆಸ್ಪತ್ರೆಯಲ್ಲಿದ್ದಷ್ಟೂ ಕಾಲ ಮಗನ ಕಣ್ಣು ಮೂಗು ಕೈಕಾಲು ನೋಡಿಕೊಂಡು ಎಲ್ಲವನ್ನೂ ಮೈಮರೆತು ನಿರುಮ್ಮಳವಾಗಿದ್ದ. ಆಸ್ಪತ್ರೆಯನ್ನು ಬಿಡಬೇಕಾದ ದಿನ ಬಂದೇ ಬಿಟ್ಟಿತು. ನಗರದಲ್ಲಿ ಶಾಖದ ನೀರ್ ಕೊಟ್ಟು, ಬೇಳೆಸಾರ್ ಬಿಟ್ಟು ಬಾಣಂತನ ಮಾಡುವವರಾಗಲಿ, ಮಗಿಗೆ ಎಣ್ಣೆ ಹಚ್ಚಿ ಮಕಾಡೆ ಮಲಗಿಸಿಕೊಂಡು ನೀರುಯ್ದು ತೊಲ್ಟೆ ತೆಗೆಯುವರಾಗಲೀ ಇಲ್ಲದ ಕಾರಣಕ್ಕೆ ಈ ಎಲ್ಲ ಅನುಕೂಲವಿರುವ ಹಳ್ಳಿ ಮನೆಗೆ ಹೋಗಲೇಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಭರತನಿಗೇನೊ ಹಳ್ಳಿ ಮನೆಯಲ್ಲಿರುವುದೇ ಅಚ್ಚುಮೆಚ್ಚು. ಆದರೆ ‘ನೀವೆಲ್ಲಿರ್ತಿರೊ ಅಲ್ಲೆ ಒಂದೆರೆಡು ತಿಂಗಳಾಗತಕ ಇದ್ದು ಬಾಣಂತನ ಮುಗಿಸ್ಕೆಂಡು ಬತ್ತೀವಿ’ ಎಂದು ಭವಾನಿಯ ಮನೆಯವರು ಸಂಪ್ರದಾಯ ಪಾಲನೆಗಾಗಿ ಹಿಂದೆ ಬಿದ್ದಿರುವ ಈ ಹೊತ್ತಿನಲ್ಲಿ ಅದು ಕಷ್ಟವಾಗಿತ್ತು.

ನಗರದಲ್ಲಾದರೆ ಆ ಜಾತಿ ಈ ಜಾತಿ ಎನ್ನದೆ ಎಲ್ಲ ಜಾತಿಯವರ ಮನೆಗಳು ಅಕ್ಕ ಪಕ್ಕದಲ್ಲೆ ಇದ್ದು ಹಳ್ಳಿಯಂತೆ ಒಂದೇ ಜಾತಿಯವು ಹಿಡಿಯಾಗಿ ಒಂದೇ ಕಡೆ ಸಿಗುವುದಿಲ್ಲ. ಇಲ್ಲಿ ಆಗುವವರಿಗಿಂತ ಆಗದವರೆ ಹೆಚ್ಚು. ಇಂಥ ಸಂದರ್ಭದಲ್ಲಿ ಭವಾನಿಯ ಮನೆಯವರಿಗೆ ಅಳಿಯನ ನಿಜ ಜಾತಿ ಸುಲಭಕ್ಕೆ ತಿಳಿದು ಅವರು ಆಘಾತಕ್ಕೊಳಗಾಗುವುದು ಶತಸಿದ್ಧ ಎಂದು ಭಾವಿಸಿದ್ದ ಭರತ ಎಲ್ಲವೂ ತಿಳಿಯಾಗುವವರೆಗೆ ನಗರವಾಸವೇ ನಮಗೊಂದು ಪರಿಹಾರ ಎಂದು ಭಾವಿಸಿ ಅಲ್ಲೆ ಇದ್ದನಾದರೂ ಈಗ ಅನಿವಾರ್ಯವಾಗಿ ಊರಿಗೆ ಹಿಂದಿರುಗಬೇಕಾಗಿತ್ತು.

ಭವಾನಿಯ ಬಾಣಂತನಕ್ಕಾಗಿ ತಂಗಿ ಚಿತ್ತಮ್ಮಳೂ ಊರಮನೆಗೆ ಹೊರಟು ನಿಂತಿರುವ ಈ ಹೊತ್ತಿನಲ್ಲಿ ಭರತನಿಗೆ ಇದನ್ನು ನಿಭಾಯಿಸುವ ಬಗೆ ಹೇಗೆಂದು ತಿಳಿಯದೆ ಗೊಂದಲದಗೂಡಾದ. ಪರಿಸ್ಥಿತಿ ಎಲ್ಲವೂ ಕೈಮೀರಿ ನಡೆಯುತ್ತಿರುವುದರಿಂದ ಸಂದರ್ಭ ಹೇಗೆ ಬರುತ್ತದೋ ಹಾಗೆ ಎಂದು ನಿರ್ಧರಿಸಿ ಆಸ್ಪತ್ರೆಯ ಮೇಲಿನ ವಾರ್ಡಿನಲ್ಲಿದ್ದ ಬಟ್ಟೆ ಗಂಟುಗಳು, ತೊಟ್ಟಿಲು, ಆಸ್ಪತ್ರೆ ಚೀಟಿಗಳು, ಸಿರಪ್ಪಿನ ಬಾಟಲ್ಗಳು ಎಲ್ಲವನ್ನು ಒಂದೊಂದಾಗಿ ತಂದು ಕಾರಿನಲ್ಲಿಟ್ಟು ಮುಂಭಾಗದಲ್ಲಿ ಕೂತು ಯೋಚನಾಮಗ್ನನಾದ. ಬಾಣಂತಿ ಭವಾನಿಯ ಪಕ್ಕದಲ್ಲಿ ಬೆಚ್ಚಗೆ ಸುತ್ತಿರುವ ಮಗುವನ್ನು ಅವುಚಿ ಬಂದ ಚಿತ್ತಮ್ಮ ಕಾರಿನಲ್ಲಿ ತಾನೂ ಕೂತಳು.

ಮಾವ ನಮಗಿಂತ ಮೇಲ್ಜಾತಿಯವನೆಂದು ನಂಬಿ ಮೊದಲ ಬಾರಿಗೆ ಊರಿಗೆ ಬರುತ್ತಿರುವ ಚಿತ್ತಮ್ಮಳ ಭ್ರಮೆ ಒಡೆದು ಹೋಗಲು ಹಟ್ಟಿ ಪ್ರವೇಶದ ಪ್ರಾರಂಭದಲ್ಲೇ ಬಹುದೊಡ್ಡ ಅವಕಾಶವೊಂದಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಹಟ್ಟಿಯ ಯುವಕರನ್ನು ಸಂಗಡಿಸಿ, ಹಣ ಎತ್ತಿ, ಹತ್ತಾರು ಸಾವಿರ ಮಾಡಿ ಶಿಲ್ಪಿ ವಿಶ್ವಣ್ಣನಿಂದ ಕೆತ್ತಿಸಿ ತಂದು ಹಟ್ಟಿ ಪ್ರವೇಶ ದ್ವಾರದಲ್ಲೆ ಪ್ರತಿಷ್ಠಾಪಿಸಿದ್ದ ಆಳೆತ್ತರದ ಅಂಬೇಡ್ಕರ್ ಪ್ರತಿಮೆ! ಅದು ಒಂಚೂರೂ ಶೇಡ್ ಆಗದೆ ಇದ್ದಲ್ಲಿಯೇ ಇದ್ದುದು ಭರತನ ಪೀಕಲಾಟಕ್ಕೆ ಕಾರಣವಾಗಿ.. ಮುಂಚಿತವಾಗಿಯೇ ತನ್ನ ಇನ್ನೊಬ್ಬ ಸ್ನೇಹಿತನಿಗೆ ಕರೆ ಮಾಡಿ ಹೇಗಾದರೂ ಸರಿಯೆ ಅದನ್ನು ಒಂಚೂರು ಮರೆಯಾಗುವಂತೆ ಮಾಡಲು ಸೂಚಿಸಿದ್ದ.

ಅದರಂತೆ ಭರತನ ಸ್ನೇಹಿತ ಮಂಜು ತನ್ನ ಇನ್ನಿಬ್ಬರು ಒಡನಾಡಿಗಳ ಜೊತೆ ಸೇರಿ ಯಾರೋ ಎತ್ತಲೋ ಕಟ್ಟಿದ್ದ ರಾಜಕಾರಣಿಗಳ ಸಮಾವೇಶದ ದೊಡ್ಡ ಫ್ಲೆಕ್ಸ್ ಒಂದನ್ನು ತಂದು ಪ್ರತಿಮೆ ಮರೆಯಾಗುವಂತೆ ಕಟ್ಟಿದರು. ವಿಚಿತ್ರವೆಂದರೆ ಇದೇ ಗೆಳೆಯರು ಕಳೆದ ವರ್ಷ ಊರೊಳ್ಳರು ತಮ್ಮ ಉಡಿಸಲಮ್ಮ ದೇವಿ ಜಾತ್ರೆಗೆ ಶುಭಕೋರುವ ಫ್ಲೆಕ್ಸ್ ಅನ್ನು ಅಂಬೇಡ್ಕರ್ ಪ್ರತಿಮೆ ಮುಂದೆ ಕಟ್ಟಿದಾಗ ಗಲಾಟೆ ಮಾಡಿ ತೆರವುಗೊಳಿಸಿದ್ದರು!

ಉದ್ದೇಶಿಸಿದಂತೆಯೇ ಭರತನ ಕಾರು ಮೊಬ್ಬುಗತ್ತಲು ಮಾಡಿಕೊಂಡೆ ಊರು, ಊರಿಂದ ಹಟ್ಟಿ, ಹಟ್ಟಿಯೊಳಗಿರುವ ಮನೆ ಪ್ರವೇಶಿಸಿತು. ಭರತನ ಮನೆ ಹಳ್ಳಿಯಲ್ಲಿದ್ದರೂ ನಗರದಲ್ಲಿರುವಂತೆಯೇ ಸುಸಜ್ಜಿತವಾಗಿ ಎಲ್ಲವನ್ನೂ ಮನೆಯೊಳಗೇ ಹೊಂದಿ ಸುಬೀಕ್ಷವಾಗಿತ್ತು. ನೌಕರಸ್ಥ ಒಂದು ಕುಟುಂಬ ಸುಬೀಕ್ಷವಾಗಿದ್ದರೆ ಸಾಕೆ ತಮ್ಮ ಪರಂಪರೆ, ಸಂಸ್ಕೃತಿ, ಬದುಕು ಬವಣೆಗಳ ಕಡೆಗೆ ಬೆಳಕು ಚೆಲ್ಲುವ ಹಲವು ಕುರುಹುಗಳು ಗುಡಿಸಲುಗಳ ರೂಪದಲ್ಲಿ, ಬಾಡು ಸಿಗಿಯುವ ಹಿತ್ತಲಿನ ರೂಪದಲ್ಲಿ, ಉದ್ಯೋಗ ಮಾಡುವ ಸಾಮಗ್ರಿ ರೂಪದಲ್ಲಿ, ಕಲೆ, ಭಾಷೆ, ಬಣ್ಣ, ಬೈಗುಳದ ರೂಪದಲ್ಲಿ ಸುತ್ತಲೂ ಹರಡಿತ್ತು.

ಕಾರು ಮನೆ ತಲುಪಿದ ತಕ್ಷಣ ಮಗ ಬಾಣ್ತಿ ನೋಡಲು ಅಕ್ಕ ಪಕ್ಕದವರೆಲ್ಲರೂ ಸೇರಿಕೊಂಡು ಕಣ್ಣಾಸ್ರ ತೆಗೆದು ದೀಪ ಬೆಳಗಿ ಮನೆತುಂಬಿಕೊಂಡರು. ಅದಾಗಲೆ ರಾತ್ರಿಯಾಗಿದ್ದರಿಂದ ಆ ದಿನ ಯಾವ ಆತಂಕವಿಲ್ಲದೆ ಕಳೆದುಹೋಯಿತು. ಇನ್ನು ಬೆಳಿಗ್ಗೆ, ಮಧ್ಯಾಹ್ನ ಎಲ್ಲ ಸಮಯದಲ್ಲೂ ಚಿತ್ತಮ್ಮಳಿಗೆ ಹಟ್ಟಿಯ ಇತರರ ಸಂಪರ್ಕವಾಗದಂತೆ ಕಾಯುವುದೇ ಮನೆಯವರ ದೊಡ್ಡ ಕೆಲಸವಾಯಿತು. ಚಿತ್ತಮ್ಮಳಿಗಾದರೂ ಬಾಣ್ತಿ ಮನೆ ಕೆಲಸದ ನಡುವೆ ಅವರಿವರ ಬಳಿ ನಿಂತು ಮಾತಾಡುವಷ್ಟು ಪುರಸೊತ್ತಾದೂ ಎಲ್ಲಾದೀತು? ಅದು ಅಲ್ಲದೆ ಹೊಸ ಜಾಗ, ಹೊಸ ಜನ!

ಹೀಗೆ ವಾರ ಕಳೆಯಿತು. ಭರತನ ಮನೆಯ ಹಿಂಬದಿಯ ಕಿಟಕಿಯಲ್ಲಿ ಹೆಣ್ಣೆಂಗಸೊಂದು ಸದಾ ಇತ್ತಲೇ ನೋಡುತ್ತ ಚಿತ್ತಮ್ಮಳ ಚಿತ್ತವನ್ನು ಹೇಗಾದರೂ ಮಾಡಿ ಸೆಳೆಯಬೇಕೆಂದು ಹವಣಿಸುತ್ತಿತ್ತು. ಸತತ ಪ್ರಯತ್ನದ ಫಲವಾಗಿ ಚಿತ್ತಮ್ಮಳೂ ಅವಳನ್ನ ನೋಡಿದಾಗ ಸ್ನೇಹದ ನಗೆ ಚೆಲ್ಲುವಂತಾಯಿತು. ಒಂದು ಮಧ್ಯಾಹ್ನ ಅತ್ತೆ ಮಾವ ಹೊಲಕ್ಕೋಗಿದ್ದರು. ಭರತ ಕೆಲಸಕ್ಕೋಗಿದ್ದ. ಬಿಸಿ ನೀರಿನ ಸ್ನಾನವಾಗಿದ್ದರಿಂದ ಮಗು ಬಾಣ್ತಿಯೂ ಜೋಮತ್ತಿದಂತಾಗಿ ಮಲಗಿದ್ದರು. ಕಿಟಕಿಯಿಂದ ದನಿ ‘ಆಯ್ತೇನ್ರಿ ಎಲ್ಲ ಕೆಲ್ಸ’ ಅಂದಿತು. ‘ಊ ಅಕ್ಕರೆ ಆಯ್ತು, ಅಕ್ಕ ಮಲ್ಗೈತೆ, ಈಗ ತಿಂಡಿ ತಿನ್ಬೇಕು’ ಅಂದಳು ಚಿತ್ತಮ್ಮ. ‘ಹೇ ಬನ್ರಿ, ನಮ್ಮನೆಲೆ ತಿನ್ನಿವ್ರಂತೆ’ ಎಂದು ಎಷ್ಟು ಬೇಡವೆಂದರೂ ಒತ್ತಡ ಹಾಕಿ ಕಿಟಕಿ ಗೆಳತಿ ಚಿತ್ತಮ್ಮಳನ್ನು ಅವಳ ಮನೆಗೆ ಕರೆಸಿಕೊಂಡಳು. ತಟ್ಟೆಗೆ ತಿಂಡಿ ಹಾಕಿಕೊಟ್ಟ ಕಿಟಕಿ ಗೆಳತಿ ಚಿತ್ತಮ್ಮಳೆ ವಿಷಯಕ್ಕೆ ಬರುತ್ತಾಳೆಂದು ಕಾದು ಸಾಕಾದಳು. ಚಿತ್ತಮ್ಮ ಏನೂ ಮಾತಾಡದೆ ಇದ್ದಾಗ.. ಕಿಟಕಿಯವಳೇ ಮುಂದುವರೆದು ತನ್ನ ಮನದಿಚ್ಚೆಯಂತೆ ‘ನೀವು ಯಾವ ಜನ?’ ಎಂದು ಕೇಳೇ ಬಿಟ್ಟಳು. ಸತ್ಯವನ್ನೆ ಹೇಳಿದ ಚಿತ್ತಮ್ಮ ಮರು ಮಾತಿಗಾಗಿ ‘ನೀವು ಯಾವ ಜನನಕ್ಕ?’ ಅಂದಳು. ಈ ಪ್ರಶ್ನೆಗಾಗಿಯೇ ವಾರದಿಂದ ಕಾದಿದ್ದ ಕಿಟಕಿಯಾಕೆ ‘ನಾವು ಇಂಥ ಜನ, ನಿಮ್ಮ ಭಾವನ ಮನೆರು ನಾವು ಅಣ್ತಂದಿರೆ ಆಗ್ಬೇಕು’ ಎಂದು ನಿಜವೆಂಬ ನಿಜವನ್ನು ಅತ್ಯುತ್ಸಾಹದಿಂದ ಬಿಟ್ಟುಕೊಟ್ಟಳು.

ಇನ್ನ ಚಿತ್ತಮ್ಮಳಿಗೆ ತುತ್ತು ಇಳಿಯದಾಯಿತು. ಕೈತೊಳೆದುಕೊಂಡು ಆಚೆ ಬಂದ ಚಿತ್ತಮ್ಮ ಮನೆ ಹೊಕ್ಕು ಮಲಗಿದ್ದ ಬಾಣ್ತಿಯನ್ನು ಎಬ್ಬಿಸಿ ‘ಏನೆ ಅಕ್ಕ, ಇಂಥ ಮೋಸನ ನೀನು ಮಾಡದು, ನನ್ಗೆಲ್ಲ ಗೊತ್ತಾಗೋತು, ನಿನ ಗಂಡ ಇಂಥ ಜಾತಿನಂಥೆ, ಇಂಥರ್ಜೊತೆ ಮದ್ವೆ ಆಗಿ ನೀನ್ ಕೆಟ್ಟಿದ್ದು ಅಲ್ದೆ ನನ್ನ ತಂದಿಕ್ಕೆಂಡು ನನ್ ಕುಲನು ಕೆಡಿಸ್ದೆ, ನಮ್ಮ ದೇವ್ರಿಗೆ ತಟ್ಟು ಮುಟ್ಟು ಆಗ್ದು ಅಂತ ನಿಂಗೆ ಗೊತ್ತಿಲ್ವ? ಹಟ್ಟಿಗೆ ಗೊತ್ತಾದ್ರೆ ಕುಲ್ದಿಂದ ಹೊರಿಕಾಕ್ತರೆ, ಥೂ.. ಇಂಥರ ಮನೆಲಿ ವಾರ ಯಂಗೆ ಕಳುದ್ನಪ್ಪ ಚಿತ್ತಪ್ಪ’ ಅಂತ ತನ್ನ ದೇವರನ್ನು ನೆನೆಯುತ್ತ ತನ್ನನ್ನು ತಾನು ಶಪಿಸಿಕೊಂಡು ‘ಇನ್ನೊಂದ್ ಕ್ಷಣನು ಇಲ್ಲಿರಲ್ಲ, ಊರಿಗೋಗಿ ಎಲ್ಲರ್ಗು ಹೇಳ್ಬುಡ್ತಿನಿ’ ಎಂದು ಅಕ್ಕ ಎಷ್ಟೇ ಸಮಾಧಾನ ಮಾಡಕೆ ನೋಡಿರು ಇರ್ದೆ ತೊಟ್ಲಲ್ಲಿ ಮಲ್ಗಿದ್ದ ಆ ಮಗನು ಕಿಸ್ದು ನೋಡ್ದಂಗೆ ಬ್ಯಾಗ ಯಳ್ಕಂಡು ಹೊಲ್ಟೇ ಬಿಟ್ಟಳು. ಇದನ್ನೇ ಬಯಸಿ ಎದಿರು ನೋಡುತ್ತಿದ್ದ ಕಿಟಕಿಯಾಕೆ ಈಗ ಸಮಾಧಾನಗೊಂಡಂತೆ ದಡುಕ್ ಅಂತ ಕಿಟಕಿ ಮುಚ್ಚಿಕೊಂಡಳು.

ನೆನ್ನೆ ರಾತ್ರಿ ಫೋನ್ ಮಾಡಿದಾಗ ಅಪ್ಪ, ‘ಮಗ ನೋಡಂಗೆ ಆಗೈತೆ ಕಣವ್ವ ನಾಳಿಕೆ ಬತ್ತಿವಿ’ ಅಂದಿತ್ತು. ಅಪ್ಪನಿಂದ ಫೋನ್ ಇಸ್ಕಂಡ ಮಾತಾಡಿದ ಅವ್ವ, ‘ಯಂಗೈತೆ ನಮ್ ಬಂಗಾರ, ಸಿಂಗಾರ, ಚಿನ್ನ, ರನ್ನ, ಗಿಳಿ ಮೂತಿ’ ಅಂದು ‘ಶಾಂತ್ನು ಹೊಲ್ಟವ್ನೆ ಕಣವ್ವ ನಾಳಿಕೆ ಕರ್ಕಂಡು ಬತ್ತಿವಿ’ ಅಂತ ಹೇಳಿತ್ತು. ತಾನು ಮದುವೆ ಆದಾಗಿನಿಂದ ಮುನಿಸಿಕೊಂಡು ಮಾತಾಡ್ಸದ ಬಿಟ್ಟಿದ್ದ, ತಾನು ಬೆಳೆಸಿದ ಪ್ರೀತಿಯ ತಮ್ಮ ನಾಳೆ ಅಪ್ಪ ಅವ್ವರ ಜೊತೆ ಬರ್ತನೆ ಅಂತ ಕೇಳಿದ ಭವಾನಿ ಸಂಭ್ರಮಗೊಂಡಿದ್ದಳು.

ಚಿತ್ತಮ್ಮ ಹೋದ ಹೊತ್ತಿನಿಂದಲೂ ಆಕಡೆಯಿಂದ ಯಾರಾದರೂ ಬರ್ತರ ಅಂತ ಭವಾನಿ ನೋಡುತ್ತಲೇ ಇದ್ದಾಳೆ. ವಾರ ತಿಂಗಳಾದ್ರು ತವರಿನ ದಾರಿ ಕಾಣುಸ್ತಲೆ ಇಲ್ಲ! ಚಿತ್ತಮ್ಮ ಏನ್ ಹೇಳಿ, ಏನ್ ಬಿಟ್ಳೊ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.