ಎಫ್.ಎಂ.ನಂದಗಾವ

``ರೀ ಫಾದರ್, ನಿಮಗ ಗೊತ್ತದನೋ ಇಲ್ಲೋ? ಸನ್ 1971ರ ರಾಷ್ಟ್ರೀಯ ಗೌರವದ ಅವಮಾನ ತಡೆ ಕಾಯಿದೆ ಪ್ರಕಾರ, ನಮ್ಮ ರಾಷ್ಟ್ರಧ್ವಜಕ್ಕ ಅವಮಾನ ಮಾಡಿದವರಿಗೆ, ಧ್ವಜ ಸಂಹಿತೆ ಉಲ್ಲಂಘಿಸಿದವರಿಗೆ ಒಂದ ವರ್ಷದ ಜೈಲ ಶಿಕ್ಷಾ ಅದ’’

``ಕಲ್ತವರು, ಒಂದ ಸಾಲಿ ಹೆಡ್ ಮಾಸ್ತರ್ ಆಗಿರೂ ನಿಮಗ, ನಾವ.. ನಾವ ಬಂದ ನಿಮಗ ಬುದ್ಧಿ ಹೇಳೂ ಪರಿಸ್ಥಿತಿ ನಮಗ ಬರ್ತದ ಅನಕೊಂಡಿರಲಿಲ್ಲ’’
ಕಾರ್ಗಿಲ್ ಕರ್ನಲ್.ಎಲ್. ಕಬಾಡೆ ಅವರು, ವ್ಯಂಗ್ಯವಾಗಿ ಹಂಗಿಸುವ ಧಾಟಿಯಲ್ಲಿ ತಿವಿಯುತ್ತ ಮಾತನಾಡ ತೊಡಗಿದ್ದರು.
ಲಕ್ಷ್ಮಣಸಾ ಕಬಾಡೆ ಅವರ ಹೆಸರು. ಅವರು ಭೂ ಸೇನೆಯಲ್ಲಿ ಕರ್ನಲ್ ಆಗಿದ್ದವರು. ಕಾರ್ಗಿಲ್ ಯುದ್ಧದಲ್ಲಿ ಅವರೂ ಭಾಗವಹಿಸಿದ್ದರು. ಹೀಗಾಗಿ ಅವರು ಕಾರ್ಗಿಲ್ ಕರ್ನಲ್ ಲಕ್ಷ್ಮಣಸಾ ಕಬಾಡೆ ಎಂದು ಕರೆಸಿಕೊಳ್ಳುತ್ತಿದ್ದರು.
ಸಕ್ರಿ ಸಾಮುವೇಲಪ್ಪ ಅವರು, ನಡುವ ಬಾಯಿ ಹಾಕಿದರು.
``ಅಲ್ರಿ ಕಬಾಡೆ ಅವರ, ಇವತ್ತ ನಮಗ ಎರಡ ಹಬ್ಬ, ಒಂದು ನಮ್ಮ ದೇಶದ ಅಜಾದಿ ಹಬ್ಬ, ಇನ್ನೊಂದು ನಮ್ಮವ್ವ ಮರಿಯವ್ವಳ ಸ್ವರ್ಗಾರೋಹಣದ ಹಬ್ಬ. ಹಬ್ಬದ ದಿನಾ ನಿಮ್ಮದೇನ ತಕರಾರು ಅಂತೀನಿ. ಈಗ ಹಂತಾದ್ದ ಏನಾಗೇದ ಅಂತ ನಮ್ಮ ಸ್ವಾಮ್ಯಾರ ಜೋಡಿ ವಾದಾ ಮಾಡಕ್ಹತ್ತೀರಿ?’’
``ನಿಮಗ ನಿಮಗ ನಿಮ್ಮ ಸ್ವಾಮ್ಯಾರು ದೊಡ್ಡೋರ ಇರಬೇಕ. ತಲಿ ತಗ್ಗಿಸಿ ಹೋಗೂ ನಿಮಗ ಹೆಂಗ ಕಾಣಸ್ತದ?’’
``ನಮ್ಮ ಸ್ವಾಮ್ಯಾರು ನಮಗ ಇರ್ಲಿ. ನಮಗ ಏನ್ ಕಾಣಿಸಬೇಕಾಗೇದ, ಅದನ್ನರ ಸ್ವಲ್ಪ ಬಿಡಿಸಿ ಹೇಳ್ರೆಪಾ?’’
``ಏನ್ ಹೇಳೂದ ನಿಮಗ? ನಿಮ್ಮ ಸ್ವಾಮ್ಯಾರ ಮೈಯಾಗ ಎಚ್ಚರ ಇದ್ರ ಹಿಂಗ ಆಗತಿತ್ತ. ಪೋಲಿಸರಿಗೆ ಮತ್ತು ಮಾಮಲೇದಾರ್ ಕಚೇರಿಗೆ ಸುದ್ದಿ ಮುಟ್ಟಿಸೇದ. ಅವರು ಇನ್ನೇನ ಬಂದ ಬರ್ತಾರ. ಆವಾಗ ಎಲ್ಲಾನೂ ಎಲ್ಲಾರಿಗೂ ಗೊತ್ತಾಗ್ತದ, ತಡಕೊಳ್ರಿ.’’

ಇದೆಲ್ಲಾ ಶುರು ಆಗಿದ್ದು ಮೇ ಸೂಟಿ ಇದ್ದಾಗ.
ಕಾರ್ಗಿಲ್ ಕರ್ನಲ್ ಎಲ್. ಕಬಾಡೆ ಅವರು, ಮನೋಹರ ಮೆಹರವಾಡೆ ಅವರ ಮಗ್ಗಲ ಮನೆಯವರು. ಮೆಹರವಾಡೆ ಅವರ ಮಗ ಮಹೇಶ ತಮ್ಮ ಕನ್ನಡ ಸಾಲಿ ಸಹಪಾಠಿಗಳಾದ ಜಗದೀಶ್ ಜರತಾರಘರ, ದಿಲೀಪ್ ಪವಾರ್, ಶಂಕರಪ್ಪ ಮಠಪತಿ ಅವರೊಂದಿಗೆ, ತಮ್ಮ ತಮ್ಮ ಸೈಕಲ್‍ಗಳ ಮೇಲೆ ಜಾಲಿ ರೈಡ್ ಹೊರಟಿದ್ದರು.
ಕಮಲಾಪುರದ ರಸ್ತೆಯಲ್ಲಿ ಎರಡೂ ಬದಿಯಲ್ಲಿನ ಗಿಡಮರಗಳ ನೆರಳಲ್ಲಿ ಅವರ ಸೈಕಲ್ ಸವಾರಿ ಸಾಗಿತ್ತು. ಹಾವಿನ ನಡೆಯಲ್ಲಿ ಸೈಕಲ್ ಓಡಿಸುತ್ತಾ, ಬಳಕುತ್ತಾ ಹುಡುಗರು ಹುಡುಗಾಟವಾಡುತ್ತಾ ಸಾಗಿದ್ದರು.
ಕವಣೆಗೋಲು ಮತ್ತು ಮಾಟವಾದ ಸಣ್ಣ ಸಣ್ಣ ಬೆಣಚು ಕಲ್ಲುಗಳನ್ನು ಅವರು ಕಿಸೆಯಲ್ಲಿ ತುಂಬಿಸಿಕೊಂಡಿದ್ದರು. ಒಬ್ಬನ ಕಿಸೆಯಲ್ಲಿ ಚಿಕ್ಕ ಉಪ್ಪಿನ ಕಾಗದದ ಪೊಟ್ಟಣವಿದ್ದರೆ, ಇನ್ನೊಬ್ಬನ ಕಿಸೆಯಲ್ಲಿ ಕೆಂಪು ಖಾರದ ಪುಡಿಯ ಪೊಟ್ಟಣವಿತ್ತು. ರಸ್ತೆ ಬದಿಯ ಮಾವಿನ ಮರಗಳಲ್ಲಿನ ಕಹಿ ಮಧುರ ದೋರಕಾಯಿಗಳನ್ನು ಕೆಡವಿ ತಿನ್ನಬೇಕೆಂದು ಲೆಕ್ಕಾಚಾರ ಮಾಡಿಕೊಂಡಿದ್ದರು.
ವಿಜಯದ ಸಂಕೇತವನ್ನು ತೋರುವ ಇಂಗ್ಲಿಷ್ ವಿ ಅಕ್ಷರದ ಆಕಾರವನ್ನು ಹೋಲುವ, ಟಿಸಿಲೊಡೆದ ಎರಡೂ ಬದಿಯ ಬೆರಳು ಗಾತ್ರದ ತೋಳಿಗೆ ಸೈಕಲ್ ಟಯರ್ ನ ಉದ್ದನೇ ರಬ್ಬರ್ ತುಂಡನ್ನು ಬಿಗಿದು, ಕೊನೆಯಲ್ಲಿ ಚರ್ಮದ ಆಯತಾಕಾರದ ತುಂಡಿನಲ್ಲಿ ಬೆಣಚು ಕಲ್ಲುನ್ನಿಟ್ಟು ರಬ್ಬರ್ ಎಳೆದು ಗುರಿಯಿಟ್ಟು ಹಣ್ಣಿನ ತುಂಬಿಗೆ ಗುರಿ ಇಟ್ಟು ಹೊಡೆದರೆ ಹಣ್ಣು ಕ್ಷಣಮಾತ್ರದಲ್ಲಿ ಕೆಳಗುರುಳುತ್ತಿತ್ತು. ಈ ಕವಣೆಗೋಲು ಕಲ್ಲು ಹೊಡೆಯುವುದರಲ್ಲಿ ಜಗದೀಶನದ್ದು ಎತ್ತಿದ ಕೈ. ಹತ್ತಿದರೂ ಕೈಗೆಟುಕದ ಹಣ್ಣು ಕೀಳಲು ಅದು ಹೇಳಿಮಾಡಿಸಿದ ವಿಧಾನ.
ರಾಮನಗರ ದಾಟಿ ಮುಂದ ಮಹಗಾಂವ ಕ್ರಾಸ್ ಹೋಗುತ್ತಿದ್ದಂತೆಯೇ ಎಡಗಡೆ ಹೈಸ್ಕೂಲ್ ಕಟ್ಟಡ ಕಾಣ ಸಿತು. ಪಕ್ಕದಲ್ಲಿ ಮೈದಾನವಿದ್ದರೆ ಇನ್ನೊಂದು ಕಡೆ ಚರ್ಚು ಇತ್ತು. ಚರ್ಚ ಹಿಂಬದಿಯಲ್ಲಿ ಒಂದು ಹಿರಿದಾದ ಹೆಂಚಿನ ಮನೆ ಕಾಣಿಸುತ್ತಿತ್ತು. ಹೆಂಚಿನ ಮನೆಯ ಸುತ್ತಮುತ್ತ ಗಿಡಗಂಟಿಗಳನ್ನು ಬೆಳೆಯಲಾಗಿತ್ತು.
ಅದರಲ್ಲೊಂದು ಮಾವಿನ ಮರವಿತ್ತು. ಮರದ ತುಂಬೆಲ್ಲಾ ಮಾವಿನ ಹಣ್ಣುಗಳ ಗೊಂಚಲು ಗೊಂಚಲಾಗಿ ತೊನೆದಾಡುತ್ತಿದ್ದವು. ಹಳದಿ ಬಣ್ಣದ ಹಣ್ಣುಗಳ ಮೇಲೆ ಕೆಂಪನೆಯ ಬಣ್ಣ ತುಟಿಯ ಮೇಲಿನ ಬಣ್ಣದಂತೆ ಮಿರಿಮಿರಿ ಮಿರುಗುತ್ತಿತ್ತು. ಹುಳಿ ಮಾವಿನ ಕಾಯಿಗಳನ್ನು ಹುಡುಕಿಕೊಂಡ ಹೊರಟ ಹುಡುಗರಿಗೆ ರಸಭರಿತ ಮಾವಿನ ಹಣ್ಣಿನ ಗಿಡವೇ ತೊಡರಗಾಲು ಹಾಕಿದಂತಾಗಿತ್ತು.
ಸೈಕಲ್ ಬದಿಗೆ ನಿಲ್ಲಿಸಿದವರೇ, ಒಬ್ಬೊಬ್ಬರಾಗಿ ಕಳ್ಳ ಹೆಜ್ಜೆಯಲ್ಲಿ ಹೈಸ್ಕೂಲ್ ಆವರಣದೊಳಗೆ ನುಗ್ಗಿದರು. ಸೂಕ್ತವಾದ ಮರೆಯ ಜಾಗ ಹುಡುಕಿಕೊಂಡು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮಹೇಶ ಮಾವಿನ ಮರ ಹತ್ತಿದರೆ, ಇನ್ನೊಬ್ಬಾಂವ ಜಗದೀಶ ಕವಣೆಗೋಲನ್ನು ಸಿದ್ಧಪಡಿಸಿ ಬೆಣಚುಗಲ್ಲುಗಳನ್ನು ತೂರಿಬಿಡಲು ಮುಂದಾದ. ಉಳಿದ ಶಂಕರಪ್ಪ ಮತ್ತು ದಿಲೀಪ್ ಹಣ್ಣುಗಳ ಹಿಡಿಯೋಕೆ ಕೆಳಗೆ ನಿಂತಿದ್ದರು. ಮರ ಹತ್ತಿದ್ದ ಮಹೇಶ, ನಾಲ್ಕೈದು ಹಣ್ಣು ಕಿತ್ತು ದಿಲೀಪನ ಕೈಗೆ ಮುಟ್ಟಿಸಿದ್ದ. ಅವಸರಗೇಡಿ ಜಗದೀಶ ಕವಣೆಗೋಲಿನಿಂದ ಕಲ್ಲು ಹಾರಿಸಿದಾಗ, ಅದು ನೇರವಾಗಿ ತೆರೆದ ಕಿಟಕಿ ಗಾಜಿಗೆ ಹೊಡೆದು, ಅಲ್ಲಿಂದ ಚಿಮ್ಮಿ ಅಲ್ಲೇ ಮಂಚದ ಮೇಲೆ ಮಲಗಿದ್ದವರ ಹಣೆಗೆ ಬಡೆದಿತ್ತು.
``ಅಯ್ಯೋ ಹಣೆ’’ ಎನ್ನುತ್ತಾ ಮಲಗಿದ್ದವರು ಎದ್ದು ಹೊರಗಡೆ ಬರುತ್ತಿದ್ದಂತೆಯೇ, ಹುಡುಗರು ಅಲ್ಲಿಂದ ಎದ್ದೆನೋ ಬಿದ್ದೆನೋ ಎನ್ನುತ್ತಾ ಓಡಿದರು. ಹಣೆಗೆ ಪೆಟ್ಟಾಗಿದ್ದವರು ಹೊರಗೆ ಹುಡುಗರು ಓಡುವುದನ್ನು ಕಂಡರು. ಅದೇ ಹೊತ್ತಿಗೆ ಎದುರಿಗೆ ಬಂದ ಹೈಸ್ಕೂಲ್ ಪಿ ಟಿ ಮಾಸ್ಟರ್ ಮಹಾಂತಪ್ಪ ಅವರಿಂದ ದಿಲೀಪ ಮತ್ತು ಜಗದೀಶ ತಪ್ಪಿಸಿಕೊಂಡರು. ಮರ ಏರಿದ್ದ ಮಹೇಶ್‍ನನ್ನು ಮಹಾಂತಪ್ಪ ಹಿಡಿದೇ ಬಿಟ್ಟರು.
ಫಾದರ್ ಪೀಟರ್ ಅವರ ಹಣೆಗೆ ಕವಣೆ ಗಲ್ಲಿನ ಪೆಟ್ಟು ಬಿದ್ದು ರಕ್ತ ಜಿನುಗುತ್ತಿತ್ತು. ಸಿಟ್ಟಿನಲ್ಲಿದ್ದ ಅವರು, ಮಹಾಂತಪ್ಪ ಹಿಡಿದುಕೊಂಡು ಬಂದಿದ ಹುಡುಗನ ಕೆನ್ನೆಗೆ ಬಾರು ಮೂಡುವ ಹಾಗೇ ಜೋರಾಗಿ ಬಾರಿಸಿದರು. ಹುಡುಗ ಮಹೇಶನ ಅಳು ಜೋರಾಗುತ್ತಿದ್ದಂತೆಯೇ ಅವನನ್ನು ಬಿಟ್ಟು ಕಳುಹಿಸಿದ್ದರು. ಡಾಕ್ಟರ್ ನಿಕ್ಕಿ ಅವರಿಗೆ ಸುದ್ದಿ ಮುಟ್ಟಿಸಿದ್ದರು.

ಇಷ್ಟಾಗಿ ಅರ್ಧ ಗಂಟೆ ಕಳೆದಿರಲಿಲ್ಲ, ಹುಡುಗ ಮಹೇಶನ ತಂದೆ ಚಂದ್ರಕಾಂತ ಮೆಹರವಾಡೆ, ಕರ್ನಲ್ ಕಬಾಡೆ ಅವರೊಂದಿಗೆ ಶಾಲಾ ಕಚೇರಿ ಮುಂದೆ ನಿಂತು ಪಂಚಾಯ್ತಿ ಶುರು ಮಾಡಿದ್ದರು. ಶಾಲೆಯ ಅಂಗಳದ ಮಕ್ಕಳ ಗದ್ದಲದ ವಿಷಯ ಗೊತ್ತಾಗುತ್ತಿದ್ದಂತೆಯೇ ಕ್ರಿಶ್ಚಿಯನ್ ಕಂಪೌಂಡಿನ ಕೆಲವು ಹಿರಿಕರೂ ಬಂದು ನಿಂತಿದ್ದರು. ಅದರಲ್ಲಿ ಸಕ್ರಿ ಸಾಮುವೇಲಪ್ಪ ಅವರೂ ಇದ್ದರು.
``ನಿಮ್ಮ ಫಾದರ್, ನಮ್ಮ ಮೆಹರವಾಡೇ ಅವರ ಮಗನ ಕಪಾಳಕ್ಕ ಬಾರ ಬರೂ ಹಂಗ ಹೊಡದಾರ. ಮಕ್ಕಳು ಗಿಡ ಹತ್ತಾರ, ಕಾಯಿ ಹರಿತಾರ. ಅವಕ್ಕ ಶಿಕ್ಷಾ ಕೊಡೂದ ಅಂದ್ರ ಹಿಂಗ ಕೊಡೂದ?’’ ಕರ್ನಲ್ ಕಬಾಡೆ ಪ್ರಶ್ನಿಸಿದರು.
``ನಿಮ್ಮ ಹುಡುಗ ನಮ್ಮ ಸಾಲಿ ಹೆಡ್ ಮಾಸ್ಟರ್ ಆಗಿರೋ ಫಾದರ ಹಣ ಗೆ ಕಲ್ಲಿಂದ ಹೊಡದಾರ.’’ ಪಿ ಇ ಮಾಸ್ಟರ ಮಹಾಂತಪ್ಪ ನಡುವೆ ಬಾಯಿ ಹಾಕಿದರು.
``ಹುಡುಗರು ಅಂದ್ರ ಗದ್ದಲಾ ಮಾಡೇ ಮಾಡ್ತಾರ’’ ಮೆಹರವಾಡೆ ತಮ್ಮ ಮಗನ ಪರ ವಕಾಲತ್ತು ವಹಿಸಿದರು.
``ಅದ ಕಲ್ಲ ತಪ್ಪಿ ಕಣ್ಣಿಗೆ ಬಿದ್ದಿದ್ದರ?’’

``ಮತ್ತ, ಮೂರು ಹುಡುಗರು ಬಂದಿದ್ದರು. ಕವಣ ಕಲ್ಲ ಹೊಡದ, ಫಾದರ್ ಮನಿ ಕಿಟಕಿ ಎರಡ ಗಾಜ ಒಡದಾವ. ಏನಿಲ್ಲಂದರೂ ಅವಕ್ಕ ಮತ್ತ ಹೊಸಾ ಗಾಜ ಹಾಕಸಬೇಕು ಅಂದರ ನೂರು ಐದನೂರು ರೂಪಾಯಿ ಖರ್ಚ ಆಗೇ ಆಗ್ತದ. ಮಳಿಗಾಲ ಶುರು ಆಗೇದ. ಸುಮ್ಮನ ಬಿಡಾಕ ಆಗ್ತದ?’’ ಮಹಾಂತಪ್ಪ ಘಟನೆಯ ಬಗೆಗೆ ಮತ್ತಷ್ಟು ಮಾಹಿತಿ ಒದಗಿಸಿದರು.

ಫಾದರ್ ಪೀಟರ್ ಅವರ ಹಣೆಗೆ ಪ್ರಥಮ ಚಿಕಿತ್ಸೆ ನೀಡಿದ ಡಾಕ್ಟರ್ ನಿಕ್ಕ್ಕಿ ಅವರು ಒಂದ ಸಣ್ಣ ಪಟ್ಟಿ ಕಟ್ಟಿದ್ದರು. ನಿಕ್ಕಿ ಅನ್ನೂದು ಡಾಕ್ಟರ್ ಹೆಸರಲ್ಲ. ಅವರ ಕಡೆ ಹೋದರ್ ನಿಕ್ಕಿ ಆರಾಮ ಆಗ್ತದ ಅಂತ ಮಂದಿ ಮಾತಾಡ್ತಾರ. ಆ ಡಾಕ್ಟರ್ ಹೆಸರು ನಿಕೋಲಸ್ ಡಿಸೋಜಾ. ಡಾ. ನಿಕೋಲಸ್ ಮತ್ತು ಫಾದರ್ ಪೀಟರ್ ಅವರು ಶಾಲಾ ಕಚೇರಿ ಕಡೆಗೆ ಬರುತಿರುವುದು ಕಾಣ ಸುತ್ತ್ತಿದ್ದಂತೆಯೇ ಕರ್ನಲ್ ಕಬಾಡೆ ಅವರ ಮಾತುಗಳು ಜೋರಾಗತೊಡಗಿದ್ದವು.
ಡಾಕ್ಟರ್ ನಿಕೋಲಸ್ ಅವರ ಬಗೆಗೆ ಎಲ್ಲರಿಗೂ ಗೌರವ. ಹೀಗಾಗಿ, ಫಾದರ್ ಪೀಟರ್ ಮತ್ತು ಡಾಕ್ಟರ್ ನಿಕೋಲಸ್ ಅವರು ತೀರ ಹತ್ತಿರ ಬರುತ್ತಿದ್ದಂತೆಯೇ ಮಾತುಗಳು ಕ್ಷೀಣ ಸಿದವು.
``ಕರ್ನಲ್ ಸಾಹೇಬರ ಬರ್ರಿ, ಹೊರಗ ಏನ ಗದ್ದಲಾ? ಒಳಗ ಕೂತ ಮಾತಾಡೂಣು’’ ಫಾದರ್ ಕರೆದಾಗ ಎಲ್ಲರೂ ಕಚೇರಿಯೊಳಗೆ ಸೇರಿಕೊಂಡರು.

``ಫಾದರ್, ನೀವು ನಮ್ಮ ಮಕ್ಕಳಿಗೆ ಹಂಗ ಹೊಡಿಬಾರದಾಗಿತ್ತು’’ ಕರ್ನಲ್ ಕಬಾಡೆ ಆಕ್ಷೇಪಿಸುವ ದನಿಯಲ್ಲಿ ಹೇಳಿದರು.
``ಕರ್ನಲ್ ಸಾಹೇಬರ, ನಿಮ್ಮ ಹುಡುಗರು ಏನ ಮಾಡ್ಯಾರ ನಿಮಗ ಗೊತ್ತದ ಅಲಾ?’’
``... ... ...’’ ಪ್ರಶ್ನೆಗೆ ಯಾವ ಉತ್ತರವೂ ಬರಲಿಲ್ಲ.
ಫಾದರ್ ಹಣೆಯ ಮೇಲಿನ ಗಾಯದ ಬ್ಯಾಂಡೇಜು ಅವರ ಬಾಯಿ ಕಟ್ಟಿಬಿಟ್ಟಿತ್ತು.
``ನೋಡ್ರಿ ಕರ್ನಲ್ ಕಬಾಡೆ ಅವರ, ಹುಡುಗುರದ್ದು ಆಟ ಆಡೂ ವಯಸ್ಸು, ಏನೋ ಹಣ್ಣಿಗೆ ಆಸೆ ಬಿದ್ದ ಗಿಡ ಹತ್ಯಾರ, ಕಲ್ಲೂ ಹೊಡದಾರ. ಆದರ ಏನಾತು? ಫಾದರ್ ಹಣೆಗೆ ಕಲ್ಲೇಟ ಬಿತ್ತು. ಅವರು ಸಿಟ್ಟಿನ ಭರದಾಗ, ಒಂದೇಟ ಹೊಡದಾರ ಕೈಗ ಸಿಕ್ಕ ಹುಡುಗನಿಗೆ. ಇದನ್ನ ದೊಡ್ಡದ ಮಾಡೂದ ಬ್ಯಾಡ’’ ಡಾಕ್ಟರ್ ಆಡಿದ ತೂಕದ ಮಾತುಗಳಿಗೆ ಎರಡೂ ಪಕ್ಷದವರು ಸುಮ್ಮನಾಗಬೇಕಾಯಿತು.
``ಸರಿ ಡಾಕ್ಟರ್, ಬರ್ತೀವಿ.’’ ಎನ್ನುತ್ತಾ ಡಾಕ್ಟರ್ ನಿಕೋಲಸ್ ಅವರ ಮಾತಿಗೆ ಕಟ್ಟುಬಿದ್ದು ಕರ್ನಲ್ ಕಬಾಡೆ ಮತ್ತು ಚಂದ್ರಕಾಂತ ಮೆಹರವಾಡೆ ಅವರು ಬಿಗುಮಾನದಿಂದಲೇ ಹೊರನಡೆದರು..
ಬಾಗಿಲು ದಾಟಿ ಮುಂದೆ ಹೋಗುತ್ತಿದ್ದಂತೆಯೇ, ``ಈಗ ಹೋಗೂಣ ನಡೀರಿ ಮೆರವಾಡೆ, ಎಲ್ಲಿಗೆ ಹೋಗ್ತಾರ? ಇಂದಿಲ್ಲ ನಾಳೆ ನಮ್ಮ ಕೈಯಾಗ ಸಿಗಾಕ ಬೇಕು. ಆಗ ಛಂದಂಗಿ ಮದವಿ ಮಾಡೂಣು. ಮುಂದಿನ ಸಾರಿ ಶಂಕರಪ್ಪ ಮಠಪತಿ ಅವರ ಅಪ್ಪ ಪಂಚಾಕ್ಷರಿ ಮಠಪತಿ ಅವರನ್ನೂ ಕರಕೊಂಡ ಬರೂಣ, ಜೋರ ಮಾಡಾಕ ಇನ್ನೊಬ್ಬರು ಸಿಕ್ಕಂಗಾಗ್ತದ’’ ಅನಕೋತ ಹೋಗಿದ್ದರು ಕಾರ್ಗಿಲ್ ಕರ್ನಲ್ ಕಬಾಡೆ ಅವರು.

ಮುಂದ, ಅಗಸ್ಟ್ ಪಂದ್ರಾ ದಿವಸ ಮಧ್ಯಾನ್ನ ಹನ್ನೆರಡಕ್ಕ ಮತ್ತ ಕರ್ನಲ್ ಕಬಾಡಿ ಅವರು, ಅವರ ದೊಸ್ತ ಚಂದ್ರಕಾಂತ ಮೆಹರವಾಡೆ ಜೋಡಿ ಬಂದಿದ್ದರು. ಈ ಸಲ ಪಂಚಾಕ್ಷರಿ ಮಠಪತಿ ಅವರೂ ಅವರ ಜೋಡಿ ಶಾಲೆಗೆ ಬಂದಿದ್ದರು.
ಅವರನ್ನ ಕರೆದುಕೊಂಡು ಹೈಸ್ಕೂಲ್ ಕಚೇರಿಯೊಳಗ ಕೂಡಿಸಿಕೊಂಡ ಫಾದರ್ ಮಾತಾಡ್ತಿದ್ದರು. ಅದ ಹೊತ್ತಿನಲ್ಲಿ ಸಕ್ಕರಿ ಸಾಮುವೇಲಪ್ಪ ಅವರು ತಮ್ಮ ಮಗನ ಮದವಿ ನಿಕ್ಕಿ ಆಗಿದ್ದರಿಂದ, ಮುಂದಿನ ಸಂಗತಿಗಳ ಬಗ್ಗೆ ವಿಚಾರಿಸಲು ಫಾದರ್ ಹತ್ತಿರ ಬಂದಿದ್ದರು.
ಮದುವೆಗಿರಬಹುದಾದ ವಿಘ್ನಗಳ ತಡೆಯಲು ನಾಲ್ಕುವಾರ ಗುಡಿಯಲ್ಲಿ ಮದುವೆಗೆ ಗೊತ್ತು ಮಾಡಿದ ವರ ಮತ್ತು ಕನ್ನೆಯರ ಮಾಹಿತಿ ಸಾರುವಿಕೆಯ ಬಗೆಗೆ ಗುರುಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಇದಕ್ಕಾಗಿ ನಾಳೆ ಗುರುಗಳ ಹಂತ್ಯಾಕ ಹೋದರಾಯಿತು ಅನಕೊಂಡವರು, ಓಣ್ಯಾನ ಕೆಲವು ಹುಡುಗರು ಮೊಬೈಲ್ ನೋಡಿ ಮುಸಿ ಮುಸಿ ನಗೂದ ನೋಡಿ, ಜಬರಿಸಿ ಕೇಳಿದಾಗ ಸಾಲ್ಯಾಗ ಧ್ವಜಾರೋಹಣ ನಡದಾಗ, ಸಾಲಿನಲ್ಲಿ ಹಿಂದಿದ್ದ ಹುಡುಗರು ಕದ್ದುಮುಚ್ಚಿ ತಂದಿದ್ದ ಮೊಬೈಲನಲ್ಲಿ ಧ್ವಜ ಉಪರಾಟಿ ಹಾರಿದ್ದನ್ನ ರಿಕಾರ್ಡ ಮಾಡಿದ್ದ ಸಂಗತಿ ಗೊತ್ತಾತು. ಅದನ್ನೂ ಗುರುಗಳಿಗೆ ತಿಳಿಸಿದರಾಯಿತು. ಮತ್ತ ಅದನ್ನ ಹುಡುಗರು ಹಂಚಕೊಳ್ಳತಿದ್ದುದನ್ನ ತಡಿಯೂದ ಹೆಂಗ ಗೊತ್ತ ಆಗದ, ನಿಂತ ಕಾಲಿಲೇ ಹಂಗ ಗುಡಿಗೆ ಓಡಿ ಬಂದಿದ್ದರು.
ಅಲ್ಲಿ ನೋಡಿದರ, ಸಕ್ಕರಿ ಸಾಮುವೇಲಪ್ಪ ಗುಡಿ ಮುಟ್ಟಿ, ಗುರುಗಳ ಮನಿ ಹೊಸ್ತಲಾ ತುಳಿಯೂದರಾಗ, ಕಾರ್ಗಿಲ್ ಕರ್ನಲ್ ಕಬಾಡಿ, ಅವರ ಖಾಸಾ ದೋಸ್ತ ಮೆಹರವಾಡಿ ಮತ್ತ ಪಂಚಾಕ್ಷರಿ ಮಠಪತಿ ಅವರುಗಳ ಸವಾರಿ ಬಂದಾಗಿತ್ತು. ಸ್ವಾಮ್ಯಾರ ಮುಂದ ಕೂತವರು, ದನಿ ಏರಿಸಿ ಜಗಳಾ ಮಾಡಾವರಂಗ ಮಾತಾಡು ಧಾಟಿಯಲ್ಲಿ ಮಾತ ಶುರು ಮಾಡಿದ್ದರು.
``ಫಾದರ್, ಇಂದ ಏನ ಮಾಡಿದೀರಿ ಗೊತ್ತದ ಏನ್?’’
ಫಾದರ್ ಗೆ ಇವರು ಬಂದಾಗಲೇ ಇವರು ಬಂದ ಕಾರಣದ ಸುಳಿವು ಸಿಕ್ಕಿತ್ತು. ಬೆಳಿಗ್ಗೆ ಮಾತೆ ಮರಿಯಮ್ಮಳ ಸ್ವರ್ಗಾರೋಹಣದ ಹಬ್ಬದ ಪೂಜೆಯನ್ನು ಮುಗಿಸಿದ ಮೇಲೆ ಎಂಟ ಗಂಟೆ ಮೂವತ್ತು ನಿಮಿಷಕ್ಕೆ ಶಾಲೆಯಲ್ಲಿ ಧ್ವಜಾರೋಹಣ ನಡೆಸಲಾಗಿತ್ತು. ಪ್ರತಿ ವರ್ಷವೂ ಮಾತೆ ಮರಿಯಮ್ಮಳ ಸ್ವರ್ಗಾರೋಹಣದ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆಗಳನ್ನು ಒಂದೇ ದಿನ ಆಚರಿಸುವ ಪದ್ಧತಿ ಸಹಜ ಸಂಗತಿಯಾಗಿದ್ದರೂ, ಈ ಸಾರಿ ಒಂದು ಎಡವಟ್ಟು ಸಂಭವಿಸಿತ್ತು.
ಹೈಸ್ಕೂಲ್ ಕಚೇರಿಯ ಕಪಾಟಿನಲ್ಲಿದ್ದ ತಿರಂಗಾ ಬಣ್ಣದ ರಾಷ್ಟ್ರಧ್ವಜವನ್ನು ಒಗೆದು ಮಡಿ ಮಾಡಿ, ಸಜ್ಜುಮಾಡುವಲ್ಲಿ ಸ್ವಲ್ಪ ವಿಳಂಬವಾಗಿತ್ತು. ಅವಸರ ಅವಸರದಲ್ಲಿ ಸ್ವಲ್ಪ ನೀರು ಚಿಮುಕಿಸಿ, ಬಗೆಬಗೆಯ ಹೂವಿನ ಮೊಗ್ಗುಗಳನ್ನು ಧ್ವಜದ ವಸ್ತ್ರದಲ್ಲಿ ಕಟ್ಟಿ, ಧ್ವಜಸ್ಥಂಬಕ್ಕೆ ಬಿಗಿಯಲಾಗಿತ್ತು. ಗಡಿಬಿಡಿಯಲ್ಲಿ ಧ್ವಜವನ್ನು ಉಪರಾಟಿ ಕಟ್ಟಿದ್ದರಿಂದ ಬೆಳಿಗ್ಗೆ ಧ್ವಜಾರೋಹಣ ಮಾಡಿದಾಗ ಅದು ತಲೆಕೆಳಗಾಗಿ ಹಾರಾಡಿತ್ತು. ತಪ್ಪು ಗೊತ್ತಾದ ತಕ್ಷಣ, ಫಾದರ್ ಉಪರಾಟಿ ಹಾರುತ್ತಿದ್ದ ಧ್ವಜವನ್ನು ತಕ್ಷಣ ಕೆಳಗಿಳಿಸಿ, ಮತ್ತೆ ಅದನ್ನು ಸರಿಪಡಿಸಿ ಹಾರಿಸಿದ್ದರು. ಈ ಬಾರಿ ಧ್ವಜ ಹಾರಿಸಿದಾಗ ಹೂವುಗಳು ಉದುರಿ ಬೀಳಲಿಲ್ಲ ಅಷ್ಟೇ.

``ಕರ್ನಲ್ ಸಾಹೇಬರ, ಎಲ್ಲಾ ಸರಿ ಮಾಡಿದೆಯೆಲ್ಲಾ?’’
``ಹೌದರಿ ಸ್ವಾಮ್ಯಾರ, ನೀವು ಸರಿಪಡಿಸಿದ್ದೀರಿ. ಆದರ, ನೀವು ಸರಿಪಡಿಸೂ ಮೊದಲಿನ ಉಪರಾಟಿ ಧ್ವಜದ ಹಾರಾಟ ನಮ್ಮ ಮೊಬೈಲ್‍ನಾಗ ಹರದಾಡಕತ್ತಾವ, ನೋಡ್ರಿಲ್ಲಿ’’
ಕರ್ನಲ್ ಕಬಾಡೆ, ತಮ್ಮಲ್ಲಿನ ಮೋಬೈಲ್ ಅನ್ನು ಫಾದರ್ ಎದುರು ಹಿಡಿದರು. ಅದರಲ್ಲಿ ಶಾಲೆಯ ಧ್ವಜಸ್ತಂಭದಲ್ಲಿ ರಾಷ್ಡ್ರಧ್ವಜ ಬುಡಮೇಲಾಗಿ ಹಾರುತ್ತಿರುವುದು ಕಾಣತ್ತಿತ್ತು. ಅದರ ಹಿನ್ನೆಲೆಯಲ್ಲಿ ಶಾಲೆಯ ಬೋರ್ಡು ಮಸಕು ಮಸಕಾಗಿ ಕಾಣುತ್ತಿತ್ತು.
ಈ ಪ್ರಕರಣ, ಈ ತರಹ ಲಂಬಿಸಬಹುದು ಎಂಬ ಅಂದಾಜು ಫಾದರ್ ಪೀಟರ್ ಅವರಿಗೆ ಇದ್ದುದರಿಂದ, ಧ್ವಜಾರೋಹಣದ ಕಾರ್ಯಕ್ರಮ ಮುಗಿದ ತಕ್ಷಣ ಆದ ತಪ್ಪನ್ನು ತಾಲ್ಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ರ ಗಮನಕ್ಕೆ ತಂದು, ಅದಕ್ಕಾಗಿ ವಿಷಾಧಿಸಿ ಪತ್ರ ಬರೆದು ಕ್ಷಮೆ ಕೋರಿದ್ದರು. ಹೀಗಾಗಿ ಫಾದರ್ ಪೀಟರ್ ಅವರು ಧೈರ್ಯದಿಂದಲೇ ಇದ್ದರು.
ಫಾದರ್ ಮುಖದಲ್ಲಿ ಗೆಲುವು ಇರುವುದನ್ನು ಗಮನಿಸಿ, ಕಚೇರಿಯ ಕೊಠಡಿಯಿಂದ ಹೊರಗೆ ಬಂದ ಕರ್ನಲ್ ಕಬಾಡೆ ಅವರು, ತಹಶೀಲ್ದಾರ್ ಕಚೇರಿಯಲ್ಲಿನ ತಮ್ಮ ಪರಿಚಯಸ್ಥ ಸಿಬ್ಬಂದಿಯನ್ನು ಸಂಪರ್ಕಿಸಿ ಈ ಕುರಿತು ವಿಚಾರಿಸಿದರು. ಸಿಬ್ಬಂದಿ ತಿಳಿಸಿದ ಸಂಗತಿಯನ್ನು ಕೇಳಿ, ಕಾರ್ಗಿಲ್ ಕರ್ನಲ್ ಕಬಾಡಿ ಅವರ ಮುಖ ಬಾಡಿದಂತೆ ಆಗಿತ್ತು.
ಖಾಲಿ ಕೈ ಬೀಸಿಕೊಂಡು ಹಾಗೆಯೇ ಹೊರಟ ಕಾರ್ಗಿಲ್ ಕರ್ನಲ್ ಕಬಾಡೆ, ಮನೋಹರ ಮೆಹರವಾಡೆ ಮತ್ತು ಪಂಚಾಕ್ಷರಿ ಮಠಪತಿ ಅವರು ತಲೆ ಕೆಳಗೆ ಮಾಡಿಕೊಂಡು ಸಾಗಿದ್ದರು. ಕಾರ್ಗಿಲ್ ಕರ್ನಲ್ ಕಬಾಡಿ ಸುಮ್ಮನೇ ಒಂದು ಸಾರಿ ಹಿಂದುರುಗಿ ನೋಡಿದರು. ಗಕ್ಕನೇ ನಿಂತೆ ಬಿಟ್ಟರು.
ಮೆಹರವಾಡೆ ಮತ್ತು ಮಠಪತಿ ಅವರನ್ನು ಅಲ್ಲಿಯೇ ಬಿಟ್ಟು ಸರಸರನೇ ನಡೆದು ಚರ್ಚಿನ ಮುಂಭಾಗಕ್ಕೆ ಹೋಗಿ ನಿಂತರು.
ಚರ್ಚಿನ ಪಕ್ಕದಲ್ಲಿ ಒಂದು ಕಡೆಗೆ ಕಟ್ಟೆ ಕಟ್ಟಿದ ಜಾಗದ ಮಲೆ ಹಿತ್ತಾಳೆಯ ಧ್ವಜಸ್ತಂಭವಿತ್ತು. ಅದರ ಮೇಲೆ ಮಾತೆಮರಿಯಮ್ಮಳ ಚಿತ್ರವಿರುವ ಪಟ ಹಾರುತ್ತಿತ್ತು.
ಆ ಕಂಬವೋ ದೇವಾಲಯದ ಎದುರಿಗಿನ ಗರುಡಗಂಬದ ಮಾದರಿಯಲ್ಲಿ ಮಿರಿಮಿರಿ ಮಿಂಚುತ್ತಿತ್ತು.
ಅಲ್ಲೇ ಪಕ್ಕದಲ್ಲಿ ತುಸು ದೂರದಲ್ಲಿ ಮಾಮೂಲಿ ಧ್ವಜಸ್ತಂಭದ ಮಾದರಿಯ ಬಳಿ ಬಣ್ಣ ಬಳಿದಿದ್ದ ಬಿದರಿನದ್ದೋ, ಕಬ್ಬಿಣದ್ದೋ ಕಂಬದಂತಿರುವ ಇನ್ನೊಂದು ಕಂಬವಿತ್ತು. ಆ ಕಂಬದ ಮೇಲೆ ಆಯತಾಕಾರದ ತಿರಂಗಾ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಝಂಡಾ ಹಾರಾಡುತ್ತಿತ್ತು! ಬಿಳಿಯ ಬಣ್ಣದ ಪಟ್ಟಿಯ ನಡುವೆ ನೀಲಿ ಬಣ್ಣದ 24 ಹಲ್ಲುಗಳ ಅಶೋಕ ಚಕ್ರವಿತ್ತು.
`ಹಾಂ, ಫಾದರ್ ಸಿಕ್ಕಿಬಿಟ್ಟರು ಈಗ’ ಅಂದುಕೊಂಡರು ಕಾರ್ಗಿಲ್ ಕರ್ನಲ್ ಕಬಾಡೆ ಅವರು. ‘ರಾಷ್ಟ್ರೀಯ ಧ್ವಜ ಸಂಹಿತೆಯ ಪ್ರಕಾರ, ಬೇರೆ ಧ್ವಜಗಳೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವ ಧ್ವಜವೂ ರಾಷ್ಟ್ರಧ್ವಜಕ್ಕಿಂತ ಮೇಲೆ ಹಾರಿಸಬಾರದು. ಆದರೆ ಇಲ್ಲಿ ರಾಷ್ಟ್ರಧ್ವಜಕ್ಕಿಂತ ಅಂದವಾದ ಧ್ವಜಸ್ತಂಬದ ಮೇಲೆ ಇವರ ಧಾರ್ಮಿಕ ಧ್ವಜ ಹಾರುತ್ತಿದೆ. ಮತ್ತೆ ಆ ಧ್ವಜದ ಎತ್ತರ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಾಡುವಂತೆ ಎನ್ನಿಸುತ್ತಿದೆಯಲ್ಲ?’ ಎಂಬ ಪ್ರಶ್ನೆ ಕರ್ನಲ್ ಕಬಾಡೆ ಅವರನ್ನು ಕಾಡತೊಡಗಿತ್ತು.
ಈ ಹಿಂದೆ ಧ್ವಜಸಂಹಿತೆಯ ಪ್ರಕಾರ, ಸರ್ಕಾರಿ ಕಟ್ಟಡಗಳನ್ನು ಹೊರತುಪಡಿಸಿ ಖಾಸಗಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತಿರಲಿಲ್ಲ. ಆದರೆ, ಸುಪ್ರೀಂ ಕೋರ್ಟ ಆದೇಶದ ಹಿನ್ನಲೆಯಲ್ಲಿ 2002ರಲ್ಲಿ ತಿದ್ದುಪಡಿ ತಂದು ಖಾಸಗಿಯವರೂ ಧ್ವಜ ಹಾರಿಸಬಹುದು ಎಂದು ಧ್ವಜ ಸಂಹಿತೆಯಲ್ಲಿ ತಿದ್ದುಪಡಿತರಲಾಯಿತು. ಬೇರೆ ಬಾವುಟಗಳು ರಾಷ್ಟ್ರಧ್ವಜಕ್ಕಿಂತ ಮೇಲೆ ಹಾರುವಂತಿಲ್ಲ. ಅದು ಶಿಷ್ಟಾಚಾರ. ಇಲ್ಲಿ ದೇಶದ ಬಾವುಟದ ಶಿಷ್ಟಾಚಾರಕ್ಕೆ ಭಂಗತರಲಾಗಿದೆ. ಇಂಥ ಅಪರಾಧಗಳಿಗೆ ಕನಿಷ್ಟ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲುವಾಸದ ಶಿಕ್ಷೆ, ಜೊತೆಗೆ ಜುಲ್ಮಾನೆಯನ್ನು ವಿಧಿಸಬಹುದಾಗಿದೆ.
ಚರ್ಚಿನ ಸಮೀಪಕ್ಕೆ ಹೋದ ಕರ್ನಲ್ ಕಬಾಡೆ ಅವರಿಗೆ ಚರ್ಚಿನ ಮುಂದಿನ ಗರುಡಗಂಬದ ಮೇಲೆ ಹಾಗೂ ಸನಿಹದ ಸಾಮಾನ್ಯ ಕಂಬದ ಮೇಲೆ ಹಾರುತ್ತಿರುವ ಬಾವುಟಗಳಲ್ಲಿ ಯಾವುದು ಮೇಲೆ ಹಾರುತ್ತಿದೆ? ಯಾವುದು ಕೆಳಗೆ ಹಾರುತ್ತಿದೆ? ಎಂಬುದನ್ನು ನಿರ್ಧರಿಸಲು ಸಾಧ್ಯವಾಗದೇ ಹಾಗೆಯೇ ನಿಂತಲ್ಲಿಯೇ ನಿಂತುಬಿಟ್ಟಿದ್ದರು. ನಂತರ ಅದೇ ಗೊಂದಲದಲ್ಲಿ ಮುಂಗೈಗಳನ್ನು ಹಿಚುಕಿಕೊಳ್ಳುತ್ತಾ ತಮ್ಮೊಳಗಿನ ತುಮಲವನ್ನು ತಣ ಸಿಕೊಳ್ಳಲು ಪ್ರಯತ್ನಿಸುತ್ತಾ, ಮೆಹರವಾಡೆ ಅವರೊಂದಿಗೆ ಹಿಂದಿರುಗತೊಡಗಿದ್ದರು.
`ಮೂರ ಮಂದಿ ಬ್ಯಾಡ, ಮೂರಕ್ಕ ಮೂರಾಬಟ್ಟಿ ಆಗ್ತದ. ಆಗೂ ಕೆಲಸ ಆಗೂದಿಲ್ಲ. ಕೆಲಸ ಕೆಡ್ತದ ಅಂತ ಬಡಕೊಂಡೆ. ನೀವ್ ನನ್ನ ಮಾತ ಕೇಳಲಿಲ್ಲ. ನನ್ನೂ ಜೋಡಿ ಎಳಕೊಂಡ ಬಂದ್ರಿ. ಕಡೀಕ ಏನಾತ ನೋಡ್ರಿ?’ ಪಂಚಾಕ್ಷರಿ ಮಠಪತಿ ಅವರ ಅವರ ಜೋಡಿ ವಟಾವಟಾ ಮಾತಹಚ್ಚಗೊಂಡ ಹೊಂಟಿದ್ದರು.

ಈಗ, ಫಾದರ್ ಪೀಟರ್ ಕಮಲಾಪುರ ಹತ್ತಿರದ ಮಹಗಾಂವ ಕ್ರಾಸ್ ಮಗ್ಗುಲಲ್ಲಿರುವ ಶಾಲೆಯಲ್ಲಿಲ್ಲ. ಅಲ್ಲಿನ ಧರ್ಮಕೇಂದ್ರದ ಗುರೂವು ಅಲ್ಲ ಈಗ. ಆದರೆ, ಆಗಸ್ಟ್ ಪಂದ್ರಾ ಬಂದಾಗಲೆಲ್ಲಾ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಅವರು ಪಟ್ಟಪಡಿಪಾಟಲು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತೆ ಕಾಡುತ್ತಲೇ ಇರುತ್ತದೆ.
ಆಗಿನ್ನೂ ಹಳೆಯ ಧ್ವಜ ಸಂಹಿತೆ ಜಾರಿಯಲ್ಲಿದ್ದ ಕಾಲ. ತಾನು ಗೆದ್ದ ಸಂಸದರ ಸಂಖ್ಯೆಯನ್ನು ಆಧರಿಸಿ, ಪಕ್ಷವೊಂದು ತನ್ನ ಪೂರ್ತಿ ಸಾಮಥ್ರ್ಯದ ಮೇಲೆ ಏಕಾಂಗಿಯಾಗಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣ ಹಿಡಿದ ನಂತರ, `ಅಂಬೇಡ್ಕರರ ಸಂವಿಧಾನ ಬದಲೇ ಬದಲಸ್ತೀವಿ’ ಎಂಬ ಮಾತುಗಳು ಕೇಳಿಬರತೊಡಗಿದ್ದವು.
ಅಂಥದೇ ಹುನ್ನಾರದ ಅಂಗವಾಗಿಯೋ ಎನ್ನುವಂತೆ, 2021ರ ಡಿಸೆಂಬರ್ ನಲ್ಲಿ ರಾಷ್ಟ್ರಧ್ವಜ ಸಂಹಿತಿಗೆ ಹೊಸರೂಪ ಕೊಡುವ ಹೆಸರಿನಲ್ಲಿ ಹುಸಿ ದೇಶಪ್ರೇಮವನ್ನು ಉದ್ದೀಪಿಸುವ ನಿಟ್ಟಿನಲ್ಲಿ ಪ್ರಮುಖ ತಿದ್ದುಪಡಿಗಳನ್ನು ಮಾಡಲಾಯಿತು.
ಈ ಹೊಸ ತಿದ್ದುಪಡಿ ಜಾರಿಯಾಗುವ ಮುನ್ನ, 1950ರಲ್ಲಿ, 1971ರಲ್ಲಿ ಮತ್ತು 2002ರಲ್ಲಿ ಜಾರಿಗೆ ಬಂದಧ್ವಜ ಪ್ರದರ್ಶನ ಮತ್ತು ಬಳಕೆಯ ಧ್ವಜ ಸಂಹಿತೆ ಜಾರಿಯಲ್ಲಿತ್ತು.
ಧ್ವಜವನ್ನು ತೀವ್ರವಾಗಿ ಹಾರಿಸಬೇಕು. ಇಳಿಸುವಾಗ ನಿಧಾನವಾಗಿ ಇಳಿಸಬೇಕು. ಧ್ವಜವನ್ನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತನಕ ಮಾತ್ರ ಹಾರಿಸಬೇಕು. ರಾಷ್ಟ್ರಧ್ವಜ ಕೆಲವು ಕಡೆ ಎಲ್ಲಾ ದಿನಗಳಲ್ಲೂ, ಇನ್ನೂ ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಬೇಕು. ಮನ ಬಂದಡೆ ಧ್ವಜವನ್ನು ಹಾರಿಸುವಂತಿರಲಿಲ್ಲ. ಧ್ವಜ ಹಾರಿಸುವಾಗ ಧ್ವಜದ ಹಸಿರು ಬಣ್ಣ ಕೆಳಗೆ ಇರಬೇಕು. ಮೇಲೆ ಕೇಸರಿ ಬಣ್ಣದ ಪಟ್ಟಿ ಇದ್ದರೆ, ಮಧ್ಯದ ಬಿಳಿ ಪಟ್ಟಿಯಲ್ಲಿ 24 ಗೆರೆಗಳಿರುವ ನೀಲಿ ಅಶೋಕ ಚಕ್ರವಿರುತ್ತದೆ. ಧ್ವಜವನ್ನು ಶುದ್ಧ ಖಾದಿಯಿಂದಲೇ ಮಾಡಿಸಿರಬೇಕು. ಹಾರುತ್ತಿರುವ ಧ್ವಜ ಹಾಳಾಗದಂತೆ ಕಾಪಾಡಬೇಕು. ಅದಕ್ಕೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧವಾಗಿತ್ತು.
ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವ ಅಧಿಕೃತ ವಾರಸುದಾರರು ಎಂದು ಸ್ವಯಂ ಘೋಷಿಸಿಕೊಂಡಿದ್ದ ಕೆಲವು ಸರ್ಕಾರಿ ಕೃಪಾಪೋಷಿತ ಸಂಘಟನೆಗಳು ಆಡಿದ್ದೇ ಆಟ ಎನ್ನುವ ಕಾಲ ಅದಾಗಿತ್ತು. ಅಂಥ ಒಂದು ಸಂಘಟನೆಯ ಸದಸ್ಯನೊಬ್ಬನ್ನ ಕೆಂಗಣ ್ಣಗೆ ಗುರಿಯಾಗಿ, ಆಕಸ್ಮಿಕವಾಗಿ ಜರುಗಿದ ತಪ್ಪಿನ ಹೊಣೆ ಹೊತ್ತು ಸ್ವಲ್ಪ ಹೊತ್ತು ಫಾದರ್ ಪೀಟರ್ ಅವರು ಮಾನಸಿಕ ಕಿರಿಕಿರಿ ಅನುಭವಿಸಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ 2021 ತಿದ್ದುಪಡಿಯ ಹಿನ್ನೆಲೆಯಲ್ಲಿ, 2022ರ ಸಾಲಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜನ ಹೆಮ್ಮೆಯಿಂದ ಸಕ್ರಿಯವಾಗಿ ಆಚರಿಸುವಂತೆ ಮಾಡಲು, ಕೇಂದ್ರ ಸರ್ಕಾರದ ಚುಕ್ಕಾಣ ಹಿಡಿದಿರುವ ಪಕ್ಷವು, ಮನೆಮನೆಗಳ ಮೇಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ ಝಂಡಾ) ಹಾರಿಸುವ ಒತ್ತಾಯದ ಮಾಘಸ್ನಾನದ ಅಭಿಯಾನ ಆರಂಭಿಸಿತ್ತು. `ಇಲ್ಲದ ಒಣಾ ಉಸಾಬರಿ ಯಾಕೆ ಮೈಮೇಲೆ ಎಳೆದುಕೊಳ್ಳುವುದು ಎಂದುಕೊಂಡು’, ಸಕ್ರಿ ಸಾಮುವೇಲಪ್ಪನಾದ ನಾನು, ಮತ್ತು ನನ್ನ ಓಣಿಯ ಗೆಳೆಯರೆಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಿದ್ದೆವು.
ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಶಾಸಕರು, ಸಂಸದರು ಇದಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಜನ ಆಗಸ್ಟ್ 13 ರಿಂದ 15ರ ವರೆಗೆ ನಡೆದ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ಅಭಿಯಾನದ ನಂತರದಲ್ಲಿ ಎಲ್ಲೆಂದರಲ್ಲಿ ಹಾರಾಡಿದ್ದ ಧ್ವಜಗಳ ಮರ್ಯಾದೆ ಮೂರು ಕಾಸಿನ ಪಾಲಾಗಿತ್ತು ಎಂಬುದನ್ನು ಎಲ್ಲರೂ ಕಂಡಿದ್ದಾರೆ. ಫಾದರ್ ಪೀಟರ್ ಅವರು, ಈಗ ಎಲ್ಲಿದ್ದಾರೆ ಎಂಬ ಮಾಹಿತಿ ನನಗಿಲ್ಲ. `ಅವರು ಎಲ್ಲೇ ಇರಲಿ ಅವರು ಆರೋಗ್ಯವಂತರಾಗಿ ಸುಖದಿಂದಿರಲಿ’ ಎಂದು ನನ್ನ ಅನುದಿನದ ಪ್ರಾರ್ಥನೆಗಳಲ್ಲಿ ತಪ್ಪದೇ ಕೇಳಿಕೊಳ್ಳುತ್ತಿರುತ್ತೇನೆ.
ರಾಷ್ಟ್ರಪ್ರೇಮವನ್ನು ಸಂವಿಧಾನವನ್ನು ಪಾಲಿಸುವಲ್ಲಿ ಬದ್ಧತೆ ತೋರಬೇಕು. ಹುಸಿ ದೇಶಪ್ರೇಮದಲ್ಲಿ ಧ್ವಜ ಹಾರಿಸಿ ನಂತರ ಮರೆತು ಬಿಡುವುದಲ್ಲ. ಕಾರ್ಗಿಲ್ ಕರ್ನಲ್ ಕಬಾಡೆ, ಮೆಹರವಾಡೆ ಅಂಥವರಲ್ಲಿರುವ ಬೇರೆಯವರ ಬಗೆಗಿನ ಅಪನಂಬಿಕೆಗಳು, ಅವಿಶ್ವಾಸಗಳು ಅಳಿಯಲಿ, ನಮ್ಮ ನಾಡಿನ ಪುರಾತನ ವೈಶ್ವಿಕ ಪ್ರಾರ್ಥನೆ `ಸರ್ವೇ ಜನಾಃ ಸುಖಿನೋ ಭವಂತು’ (ಎಲ್ಲ ಜೀವಿಗಳು ಸುಖವಾಗಿರಲಿ) ಮತ್ತು ನಮ್ಮ ಹಳೆಯ ಸಂಸತ್ತಿನ ಪ್ರವೇಶದ್ವಾರದಲ್ಲಿ ಕೆತ್ತಲಾಗಿರುವ ಮಹಾ ಉಪನಿಷತ್ತಿನ `ವಸುದೈವ ಕುಟುಂಬಕಂ’ (ಜಗತ್ತು ಒಂದು ಕುಟುಂಬ) ಶ್ಲೋಕದ ಭಾವಗಳು ನೆಲೆಗೊಳ್ಳಲಿ. ನಿಜವಾದ ದೇಶಪ್ರೇಮ, ಭಾತೃತ್ವ, ಸ್ವಾತಂತ್ರ್ಯದ ಆಶಯಗಳು ಅವರಲ್ಲಿ ಮೂಡಲಿ ಎಂದು ಹಾರೈಸುವುದಷ್ಟೆ ನನ್ನ ಪಾಲಿಗೆ ಉಳಿದಿದೆ.
–ಎಫ್. ಎಂ. ನಂದಗಾವ್
ಮುಗಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.