ಆನಂದಲಹರೀ
ಲೇ: ಲಕ್ಷ್ಮೀಶ ತೋಳ್ಪಾಡಿ
ಪ್ರ: ಅಭಿನವ ಪ್ರಕಾಶನ, ನಂ. 17/18–2, ಮೊದಲನೆಯ ಮುಖ್ಯರಸ್ತೆ,
ಮಾರೇನಹಳ್ಳಿ, ವಿಜಯನಗರ, ಬೆಂಗಳೂರು–560 040

ಲಕ್ಷ್ಮೀಶ ತೋಳ್ಪಾಡಿಯವರ ‘ಆನಂದಲಹರೀ’ ಕನ್ನಡದಲ್ಲಿ ಈಚೆಗೆ ಬಂದಿರುವ ಒಂದು ಗಹನವಾದ ಕೃತಿ. ಶಂಕರಾಚಾರ್ಯರು ಬರೆದಿರುವರೆನ್ನಲಾದ ಸೌಂದರ್ಯಲಹರಿಯ ಮೊದಲ ಭಾಗದ ಕುರಿತಾದ ಪರಾಮರ್ಶೆ ಈ ಪುಸ್ತಕ. ಇದರ ಮೊದಲ ಭಾಗ “ಆನಂದಲಹರಿಯಲ್ಲಿ ‘ತಂತ್ರ’ದ ತಾತ್ವಿಕ ಚಿಂತನೆಯ ಹೊಳಹುಗಳಿವೆ. ಇದು ಬಯಲಿದ್ದಂತೆ. ಎರಡನೆಯ ಭಾಗ ಸೌಂದರ್ಯಲಹರಿಯಲ್ಲಿ ಶ್ರೀ ಸುಂದರಿಯ ಅಡಿ ಮುಡಿಯ ಬಣ್ಣನೆಯ ನಿರ್ಭರತೆ ಇದೆ.

ಇದು ಬಯಲಿನಲ್ಲಿಯೇ ಆಕಾರಗೊಂಡ ಆಲಯವಿದ್ದಂತೆ. ಈ ಎರಡು ಲಹರಿಗಳೊಳಗೆ ಬಯಲು-–ಆಲಯಗಳ ನಡುವೆ ಸಂಬಂಧವೇ ಮನೆ ಮಾಡಿದೆ. ಶಿವ–-ಶಕ್ತಿಗಳೆಂಬ ಎರಡು ತತ್ವಗಳ ಪರಸ್ಪರತೆ ಮತ್ತು ಈ ಪರಸ್ಪರತೆಯಿಂದಲೇ ಸೃಷ್ಟಿ ಎಂದು ಹೇಳುವ ‘ಸೌಂದರ್ಯಲಹರಿ’...”

ಶಂಕರ ಮತ್ತು ಅವರ ಯಾವುದೇ ಪಠ್ಯಗಳೆಲ್ಲ ಪ್ರತಿಗಾಮಿ ಎಂದು ತಿರಸ್ಕರಿಸಲ್ಪಡುತ್ತಿರುವ ಈ ಕಾಲದಲ್ಲಿ ಈ ಕೃತಿಯ ಮಾತೇಕೆ ಎಂದು ಅಚ್ಚರಿಯಾಗುತ್ತದೆ. ಆದರೆ, ಆಳವಾದ ಧ್ಯಾನದಿಂದ ಹೆಕ್ಕಿ ತೆಗೆದಂತಿರುವ ಇಲ್ಲಿನ ಮಾತುಗಳೆಲ್ಲ ಪ್ರಗತಿಪರ–ಪ್ರತಿಗಾಮಿ ಎಂಬ ನಮ್ಮ ಈ ಕಾಲದ ಸರಳ ವಿಂಗಡಣೆಯನ್ನು ಭಂಗಿಸುವಂತಿದೆ. ಜೊತೆಗೆ, ಧರ್ಮ-–ಮತಗಳಾಗಿ ಹರಳುಗಟ್ಟುವ ಮುಂಚಿನ ಮನುಷ್ಯನ ಯಾವುದೇ ಸಂಸ್ಕೃತಿಯ ಮೂಲದಲ್ಲಿರುವ ಅಧ್ಯಾತ್ಮವನ್ನು ಕಂಡರಿಸುವಂತಿದೆ. ಎಲ್ಲಿಂದ ವಿಜ್ಞಾನ-–ಅಧ್ಯಾತ್ಮಗಳು ಕವಲೊಡೆಯುತ್ತವೋ ಆ ಮೂಲ ನಿಜವನ್ನು ಮುಟ್ಟಿ ನೋಡುವುದರಲ್ಲಿ ಈ ಕೃತಿ ಆಸಕ್ತವಾಗಿದೆ.

ಈ ಪ್ರಯತ್ನ ಜಡ ಪಾಂಡಿತ್ಯದ್ದಾಗಿಲ್ಲದೇ ರಸದೃಷ್ಟಿಯದಾಗಿರುವುದು ಈ ಕೃತಿಯನ್ನು ಕಾವ್ಯದಂತೆ ಓದಬಹುದಾದಷ್ಟು ರಂಜನೀಯಗೊಳಿಸುತ್ತದೆ. ಅದು ಈ ಕೃತಿಯನ್ನು ಓದುವ ಸುಖ! ಕವಿತೆಗೆ ಕಾರಣವಾಗಬಹುದಾದ ಇಂಥ ಸಾಲುಗಳನ್ನು ನೋಡಿ: (ಇದು ಶಂಕರರ ರಚನೆಯೋ ಅಲ್ಲವೋ ಎಂದು ತೀರ್ಮಾನ ಮಾಡುವುದರ ಅನಗತ್ಯತೆಯನ್ನು ಸೂಚಿಸುತ್ತ) ‘ಲಹರಿಯ ಅನುಭವಕ್ಕೆ ಹೊಳೆಯ ಹಂಗೇಕೆ? ಹೊಳೆಯಲ್ಲಿ ಈಸು ಬೀಳುವುದಕ್ಕೆ ಆ ಹೊಳೆಯ ಹೆಸರಾದರೂ ಗೊತ್ತಿರಬೇಕೇನು?’ ಅಥವಾ, ‘ಮಾತು ತಾನು ಸೋಲದೆ ನಿಜಕ್ಕೂ ಗೆಲ್ಲಲಾರದು. ತಬ್ಬಲಿಗಲ್ಲವೆ ಲೋಕದ ಪ್ರೀತಿ ಸಿಕ್ಕುವುದು?’, ‘ಮಗುವಿನ ಅಳುವಿನಲ್ಲಿ ತಾಯಿ ತನ್ನ ಹಾಜರಿ ಹಾಕಿದಳು’ ಇತ್ಯಾದಿ. ಇಂಥ ಮಾತು ಅನೇಕವಿದೆ.

ಅದು ಬರೀ ಅಂಥ ಮಾತುಗಳ ಪ್ರಶ್ನೆ ಮಾತ್ರ ಅಲ್ಲ. ಎಲ್ಲವನ್ನೂ ಕಾವ್ಯದ ಮಾನದಂಡದಿಂದ ನೋಡುವ ಒಂದು ದೃಷ್ಟಿ. ಲೇಖಕರಲ್ಲಿ ನಮಗೆ ಹೆಚ್ಚು ಸತ್ಯವೆನ್ನಿಸುವುದೂ ಅವರ ಆಧ್ಯಾತ್ಮಿಕ ನಂಬಿಕೆಗಿಂತಲೂ ಈ ಕಾವ್ಯದೃಷ್ಟಿಯೇ.

ಶಿವ ಎಂಬ ಮೂಲ ತತ್ವ ನಿರ್ಲಿಪ್ತ; ಶಕ್ತಿ ಎಂಬುದು ಕ್ರಿಯಾಶೀಲ. ಒಂದು ಇದ್ದೂ ಇಲ್ಲದಂತಿರುವ ಅಪ್ರಜ್ಞೆ; ಮತ್ತೊಂದು ತನ್ನರಿವನ್ನು ಹೊಂದಿರುವ, ಅದನ್ನು ಉಂಟು ಮಾಡಲೂ ಬಲ್ಲ ಪ್ರಜ್ಞೆ. ಇವೆರೆಡರ ಮಿಲನದಿಂದ ಎಲ್ಲ ಸೃಷ್ಟಿ. ‘ಹುಟ್ಟಲರಿದು ತೃಣ ಮಾತ್ರ ಅವರು ಕೂಡದೇನೆ ಗೂಢ’ ಎಂದಿದ್ದಾರೆ ಬೇಂದ್ರೆ. ಆನಂದಲಹರಿಯನ್ನು ಸೃಜನಶೀಲವಾಗಿ ಅನುಭವಗೊಳಿಸುವಾಗ ಲೇಖಕರು ಬೇಂದ್ರೆಯ ಅನುವಾದವನ್ನು ಆಶ್ರಯಿಸುತ್ತಾರೆ.

‘ಶಿವನು ಶಕ್ತಿಯುತನಾದರೇಯೆ ಜಗ ಪಡೆಯಲಾಪನವನು/ ಇಲ್ಲದಿರಲು ಮಿಡುಕಾಟ ಕೂಡ ಅವಗಿಲ್ಲ ಅವನು ಶವನು.’ ಶಿವ ಶಕ್ತಿ ಮಿಲನದಿಂದ ಉಂಟಾದ ಸೃಷ್ಟಿ ಆ ವಿದ್ಯಮಾನದ್ದೇ ಪ್ರತಿಬಿಂಬ. ಆನಂದಲಹರಿಯ ಮೂಲಕ ಲೇಖಕ ಇಂಥ ಸೃಜನಶೀಲತೆಯ ನಾನಾ ಮನಸ್ಥಿತಿ ಮತ್ತು ಅವಸ್ಥೆಗಳ ಕುರಿತೇ ಧ್ಯಾನಿಸುವುದು ನಮಗೆ ಮುಖ್ಯವೆನಿಸುತ್ತದೆ.

ಸೃಷ್ಟಿ ಎಂಬುದು ಜಡವಾದ್ದಲ್ಲ. ‘ಶಿವ–ಶಕ್ತಿ ಮಿಲನದಿಂದ ಯಾವಾಗ ವಿಶ್ವ ಸಂವಾದದ ಅನುಭವವಾಯಿತೋ ಆಗ ಪ್ರಾಪಂಚಿಕತೆಯ, ವಾಸ್ತವಿಕತೆಯ ಅರ್ಥವೇ ಬೇರೆಯಾಯಿತು. ವಸ್ತು ಪ್ರಪಂಚದಲ್ಲಿ ರಸದ ವಿದ್ಯುತ್ ಪ್ರವಾಹ ಒಳಗಿಂದಲೇ ಹರಿಯತೊಡಗಿತು. ಆಗ ವಸ್ತು ಪ್ರಪಂಚ ಕಲಾ ಪ್ರಪಂಚವಾಯಿತು. ತಂತ್ರಕ್ಕೂ ಕಲೆಗೂ ನಿಕಟ ಸಂಬಂಧವಿದೆ’ ಎನ್ನುವ ಲೇಖಕ, ಕವಿದೃಷ್ಟಿಗೆ ವಾಸ್ತವ ಎಂಬುದು ಇರುವಂತೆಯೇ ಸಾಂಕೇತಿಕವಾದ ಕಾಣ್ಕೆಯಾಗುವ ಕ್ರಮವನ್ನು ಹೇಳುತ್ತಾರೆ. ಇದು ಮನುಷ್ಯನ ಆಧ್ಯಾತ್ಮಿಕತೆಯ ಉಗಮ ಕೂಡ.

ಯಾಕೆಂದರೆ ಆ ಮೂಲ ನಿಜಕ್ಕೆ ಒಂದು ಹೆಸರಿಡಬೇಕಾದರೆ ಅದನ್ನು ಧರ್ಮ ಎನ್ನುವುದಕ್ಕಿಂತ, ವೈಚಾರಿಕತೆ ಎನ್ನುವುದಕ್ಕಿಂತ, ಕಾವ್ಯ ಎನ್ನುವುದು ಹೆಚ್ಚು ಉಚಿತ ಮತ್ತು ನಿರಪಾಯಕಾರಿಯಾದೀತು. ಹಾಗೆ ನೋಡಿದರೆ ಶಿವ–ಶಕ್ತಿ ಬೆರೆಯುವುದು ನಮ್ಮಲ್ಲಿಯೇ, ನಮ್ಮೊಳಗೇ. ಈ ಅರಿವು ನಮ್ಮನ್ನು ಬದುಕಿನ ಸತತ ಆನಂದದ ಅನುಭೂತಿಗೆ ಕೊಂಡೊಯ್ಯಬಹುದಾದಂತೆ ನಮ್ಮ ಹಲವಾರು ಪ್ರಾಪಂಚಿಕ ಸಂಕಟಗಳಿಗೂ ಪರಿಹಾರವೇನೋ ಎನಿಸುತ್ತದೆ.

ಲಕ್ಷ್ಮೀಶರ ಕೃತಿ ಅಂಥ ನಿಜವನ್ನು ಶೋಧಿಸುವ ಕೃತಿಯಾದ್ದರಿಂದಲೇ ಸದ್ಯದಲ್ಲೇ ಅರ್ಥಪೂರ್ಣವೆನ್ನಿಸಿ, ‘ಸನಾತನ’ ಎಂಬ ಕಲ್ಮಶದಿಂದ ಪಾರಾಗುತ್ತದೆ.

ಒಂದೇ ಓದಿಗೆ ಮನನ ಮಾಡಲಾಗದ ಬರಹ ಇದು. ಅದೇ ಇದರ ಚಂದ ಕೂಡ. ಇದರ ಕಾವ್ಯಮಯತೆಯಂತೆಯೇ ಗದ್ಯದ ಸೊಗಸೂ ಹೆಚ್ಚಿನದು. ತತ್ವ–ದರ್ಶನಗಳಲ್ಲಿ ಬಳಕೆ ಇರುವವರು ಇದನ್ನು ಇನ್ನೂ ಹೆಚ್ಚು ಜಿಜ್ಞಾಸೆ ಮಾಡಿ ಓದಬಲ್ಲರು. ಹಾಗಿಲ್ಲದ ಸೂಕ್ಷ್ಮ ಮನಸ್ಸಿನವರಿಗೂ ಇದರ ಓದು ಸೃಜನಶೀಲತೆಯ ಆನಂದ ಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.