ಸಿದ್ಧ ಪಠ್ಯಗಳ ಕಲಿಕೆಯ ಚೌಕಟ್ಟಿನಾಚೆಗೆ ಮಕ್ಕಳನ್ನು ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಕೊಂಡವರು ಅಭಿಜಿತ್ ಸಿನ್ಹಾ. ಗ್ರಾಮೀಣ ಮಕ್ಕಳನ್ನು ರೊಬಾಟಿಕ್ಸ್ ಪ್ರಯೋಗಗಳಿಗೆ ತೊಡಗಲು ಪ್ರೇರೇಪಿಸಲೆಂದೇ ಡಿಇಎಫ್‌ವೈ ಶಾಲೆಯನ್ನು ಆರಂಭಿಸಿದರು.

ಮಕ್ಕಳು ತಾಂತ್ರಿಕವಾಗಿ ಮುಂದುವರೆಯಲು ‘ಸ್ವಯಂ ಕಲಿಕೆ’ ಪರಿಕಲ್ಪನೆಯಲ್ಲಿ ಹೊಸ ಆವಿಷ್ಕಾರಗಳಿಗೆ ಬೆಂಬಲವಾಗಿ ನಿಂತರು. ಇಂದು ಡಿಇಎಫ್‌ವೈ ಎಂಬ ಈ ಶಾಲೆಯಲ್ಲಿ ಪುಟ್ಟ ತಂತ್ರಜ್ಞರು ರೂಪುಗೊಳ್ಳುತ್ತಿದ್ದಾರೆ...

ಇದು ಶಾಲೆ, ಆದರೆ ಪಠ್ಯವಿಲ್ಲ. ಈ ಶಾಲೆಯಲ್ಲಿ ಶಿಕ್ಷಕರೂ ಇಲ್ಲ, ಕ್ಲಾಸ್ ರೂಮಿನಲ್ಲಿ ಕೂರಬೇಕೆನ್ನುವ ನಿಯಮವೂ ಇಲ್ಲ. ವಿಜ್ಞಾನ, ಗಣಿತ, ಇಂಗ್ಲಿಷ್... ಹೀಗೆ ಒಂದಾದ ನಂತರ ಒಂದರಂತೆ ತರಗತಿಗಳೂ ನಡೆಯುವುದಿಲ್ಲ. ಚಿತ್ರ ಬಿಡಿಸಬೇಕು ಎಂದರೆ ಇಡೀ ದಿನ ಬಣ್ಣದೊಂದಿಗೆ ಆಡುತ್ತಾ ಇರಬಹುದು.

ಇಲ್ಲಿ ಇರುವ ವಿದ್ಯಾರ್ಥಿಗಳೆಲ್ಲರೂ ಏಕಲವ್ಯರು. ತಮಗೆ ಬೇಕೆನಿಸುವ ಮಾಹಿತಿಯನ್ನು ಇಂಟರ್‌ನೆಟ್ ಮೂಲಕ ಪಡೆದು ತಾವೇ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.

ಇಂತಹ ಶಿಕ್ಷಣ ಕ್ರಾಂತಿಯಾಗುತ್ತಿರುವುದು ಡಿಇಎಫ್‌ವೈ ಎಂಬ ಶಾಲೆಯಲ್ಲಿ. ಬೆಂಗಳೂರು ಗ್ರಾಮಾಂತರ ಭಾಗದ ಕಗ್ಗಲೀಪುರದಲ್ಲಿ ಮತ್ತು ಮಂಗಳೂರಿನ ಬಜ್ಪೆಯಲ್ಲಿ ಇಂತಹದೊಂದು ಸ್ವ ಕಲಿಕೆ ಶಾಲೆ ಆರಂಭಿಸಿದ್ದಾರೆ ಅಭಿಜಿತ್ ಸಿನ್ಹಾ.

ಮುಂಬೈನಲ್ಲಿ ಎಂಜಿನಿಯರಿಂಗ್ ಮುಗಿಸಿ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದ ಅಭಿಜಿತ್ ಸಿನ್ಹಾ, ಮಾಡುತ್ತಿದ್ದ ಕೆಲಸದಲ್ಲಿ ಅರ್ಥವಿಲ್ಲ ಎನಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಬೆಂಗಳೂರು ನಗರದಲ್ಲೂ ಇರಲು ಬೇಸರವೆನಿಸಿ ಬೆಂಗಳೂರು ಗ್ರಾಮಾಂತರ ಪ್ರದೇಶ ಬಂಜರಪಾಳ್ಯದಲ್ಲಿರುವ ಜಾಗಾ ಕಂಪೆನಿ ಸೇರಿದರು.

ಈ ಊರಿನ ಮಕ್ಕಳು ಅಭಿಜಿತ್ ಮೊಬೈಲ್ ಪಡೆದು ಇಂಟರ್‌ನೆಟ್ ಬಳಸುವುದು, ಗೇಮ್ ಡೌನ್‌ಲೋಡ್ ಮಾಡಿ ಆಡುವುದು, ಅವರ ಶಾಲೆಯ ಅಸೈನ್‌ಮೆಂಟ್‌ಗೆ ಬೇಕಾದ ಹೊಸ ವಿಷಯಗಳನ್ನು ಮೊಬೈಲ್‌ನಲ್ಲಿ ಕಲಿಯುತ್ತಿರುವುದನ್ನು ನೋಡಿದ ಅಭಿಜಿತ್‌ಗೆ, ಕಲಿಕೆಗೆ ಎಷ್ಟೆಲ್ಲಾ ದಾರಿಯಿದೆ ಎನಿಸಿ ಖುಷಿಪಟ್ಟರು.

ಹೀಗಾಗಿ ಮಕ್ಕಳಿಗೆ ತಂತ್ರಜ್ಞಾನ ಕಲಿಕೆಯಲ್ಲಿ ಇದ್ದ ಆಸಕ್ತಿಗೆ ಪ್ರೋತ್ಸಾಹ ನೀಡಲು ಬಂಜರಪಾಳ್ಯದಲ್ಲಿ ಡಿಇಎಫ್‌ವೈ- ಡಿಸೈನ್ ಎಜುಕೇಷನ್ ಫಾರ್ ಯುವರ್‌ಸೆಲ್ಫ್ (DEFY-Design education for yourself) ಎಂಬ ಹೆಸರಿನಲ್ಲಿ ಶಾಲೆಯನ್ನು 2014 ಮಾರ್ಚ್‌ನಲ್ಲಿ ಆರಂಭಿಸಿದರು. ಮಕ್ಕಳು ತಮ್ಮ ಶಾಲೆಗೆ ಹೋಗುತ್ತಾ, ಸಂಜೆ ವೇಳೆ ಇಲ್ಲಿಗೆ ಬರುತ್ತಾರೆ. ತಮ್ಮ ಆಸಕ್ತಿಗೆ ಅನುಗುಣವಾಗಿ ತಮಗೆ ಬೇಕಾದ್ದನ್ನು ಕಲಿಯುತ್ತಾರೆ.

‘ಇಂದು ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಆಸಕ್ತಿಗೆ ಅನುಗುಣವಾಗಿ ಪಠ್ಯ ರೂಪುಗೊಂಡಿದೆ. ಇಂಥದ್ದೇ ಕಲಿಯಬೇಕೆನ್ನುವ ಚೌಕಟ್ಟನ್ನು ಮಕ್ಕಳ ಮೇಲೆ ಹೇರಲಾಗುತ್ತಿದೆ. ಇದೆಲ್ಲಕ್ಕೂ ಮೀರಿ ಪಾರಂಪರಿಕ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾಗಿ ನಾವು ಡಿಇಎಫ್‌ವೈ ಶಾಲೆ ಆರಂಭಿಸಿದ್ದೇವೆ’ ಎನ್ನುತ್ತಾರೆ ಅಭಿಜಿತ್ ಸಿನ್ಹಾ.

ಪಠ್ಯವಿಲ್ಲ, ಪರೀಕ್ಷೆ ಇಲ್ಲ
ಏಳು ವರ್ಷದ ಮಗು ಇಲ್ಲಿ ರೊಬಾಟಿಕ್ಸ್ ಕಲಿಯುತ್ತೆ, 70 ವರ್ಷದ ಅಜ್ಜ ಅ,ಆ,ಇ,ಈ ಕಲಿಯುತ್ತಾರೆ. ಎಲ್ಲಾ ವಯೋಮಾನದ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳೂ ಇಲ್ಲಿ ಇದ್ದಾರೆ.

‘ಡಿಇಎಫ್‌ವೈ’–ಇದು ‘ಶಾಲೆ’ಯಲ್ಲ, ಕಲಿಕೆಯ ಸ್ಥಳವಷ್ಟೆ. ಎನ್ನುವ ಅಭಿಜಿತ್, ‘ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆದರೆ ಮಕ್ಕಳ ಆಸಕ್ತಿ ಏನು, ಅವರು ಏನು ಕಲಿಯಬಯಸುತ್ತಾರೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ.

‘ಕಲಿಕೆಗೆ ಒಂದು ಸ್ಥಳ’ವನ್ನು ಮಾಡಬೇಕು ಎಂಬ ಆಶಯದಿಂದ ಬಂಜರಪಾಳ್ಯದಲ್ಲಿ ಒಂದು ಮನೆ ಬಾಡಿಗೆಗೆ ಪಡೆದು ಅಲ್ಲಿ ಐದಾರು ಲ್ಯಾಪ್‌ಟಾಪ್ ಅಳವಡಿಸಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿ ಮಕ್ಕಳಿಗೆ ಬಂದು ಆಟವಾಡಿಕೊಳ್ಳುವಂತೆ ಹೇಳಿದ್ದಾರೆ.

ಮೊದಲು ಕಂಪ್ಯೂಟರ್ ಜ್ಞಾನ ಇಲ್ಲದ ಮಕ್ಕಳಿಗೆ ಲ್ಯಾಪ್‌ಟಾಪ್ ಬಳಕೆ ಮಾಡುವುದು, ಇಂಟರ್‌ನೆಟ್ ಬಳಸಿ ಗೇಮ್ ಆಡುವುದು, ಯುಟ್ಯೂಬ್ ವೀಕ್ಷಣೆ, ಇ–ಮೇಲ್ ಅಕೌಂಟ್ ಮಾಡುವುದು ಹೀಗೆ ಮೂಲವಿಷಯಗಳನ್ನು ಹೇಳಿಕೊಟ್ಟಿದ್ದಾರೆ ಅಭಿಜಿತ್.

ತೋರಿಸಿದ್ದ ಬೆರಳಿನ ಜೊತೆ ಹಸ್ತವನ್ನು ನುಂಗಿರುವ ಮಕ್ಕಳು, ಇಂದು ತಮಗೆ ಬೇಕಾದ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ತಮ್ಮ ಶಾಲೆಯ ಅಸೈನ್‌ಮೆಂಟುಗಳನ್ನೂ ಹೆಚ್ಚು ಕ್ರಿಯಾಶೀಲತೆಯಿಂದ ಸಿದ್ಧಪಡಿಸುತ್ತಿದ್ದಾರೆ.

‘ಮಕ್ಕಳಿಗೆ ಬೇಕಾದ ವಸ್ತುಗಳನ್ನು ತರಿಸಿಕೊಡುವುದಷ್ಟೇ ನನ್ನ ಕೆಲಸ. ಇಲ್ಲಿ ಶಿಕ್ಷಕರಿಲ್ಲ, ‘ಸ್ವಯಂ ಕಲಿಕೆ’ಯೇ ಶಾಲೆಯ ಮಂತ್ರ. ನಾವು ಒಟ್ಟು 15 ಮಂದಿ ಡಿಇಎಫ್‌ವೈ ಸಂಸ್ಥೆಯಲ್ಲಿದ್ದೇವೆ, ಸಂಸ್ಥೆ ನಡೆಸಲು ಹಣ ಹೊಂದಿಸುವುದು, ಶಾಲೆಯ ಡಿಸೈನ್ ಮಾಡುವುದು ಇತರೆ ಕೆಲಸವನ್ನು ಮಾಡುತ್ತೇವೆ.

ಇನ್ನು ಕಲಿಕೆಯೆಲ್ಲಾ ಮಕ್ಕಳದ್ದೆ’ ಎನ್ನುತ್ತಾರೆ ಅಭಿಜಿತ್. 2 ವರ್ಷ ಬಂಜರಪಾಳ್ಯದಲ್ಲಿ ಇದ್ದ ಡಿಇಎಫ್‌ವೈ ಶಾಲೆ ಈ ವರ್ಷದಿಂದ ಕಗ್ಗಲೀಪುರಕ್ಕೆ ಸ್ಥಳಾಂತರಗೊಂಡಿದೆ.

‘ನನ್ನ ಮಗಳು ಲೈಟು, ಬ್ಯಾಟರಿ ಅಂತ ಏನೇನೋ ಮಾಡುತ್ತಿರುತ್ತಾಳೆ. ನನಗೆ ಅದೆಲ್ಲ ಗೊತ್ತಾಗಲ್ಲ, ಕಂಪ್ಯೂಟರ್ ಕಲಿಸಿಕೊಡುವಷ್ಟು ವ್ಯವಸ್ಥೆ ನಮ್ಮ ಹಳ್ಳಿಯಲ್ಲಿ ಇಲ್ಲ. ಡಿಇಎಫ್‌ವೈ ಶಾಲೆಯಲ್ಲಿ ದೀಪಿಕಾ, ಕುಶಾಲ್ ವಿಜ್ಞಾನ ಹೇಳಿಕೊಡುತ್ತಾರೆ. ಅಲ್ಲಿ ಕಲಿತು ಬರುತ್ತಿದ್ದಾಳೆ. ಇದು ಖುಷಿಯ ವಿಚಾರ’ ಎನ್ನುತ್ತಾರೆ ಉಸ್ನಾ ಕೌಸರ್ ತಾಯಿ.

ಗ್ಲೈಡರ್ ವಿಮಾನ ತಯಾರಿಸುತ್ತಿರುವ ಏಕಲವ್ಯ!
ಡಿಇಎಫ್‌ವೈನಲ್ಲಿ ಸಣ್ಣ ಸೂಜಿಯಿಂದ ಹಿಡಿದು, ಬಿಸಾಡಿದ ಹಳೆ ಪ್ಲಾಸ್ಟಿಕ್ ಬಾಟಲ್, ವೈರ್, ತಂತಿ, ಸೈಕಲ್ ಚೈನು, ಸುತ್ತಿಗೆ, ಸ್ಕ್ರೂ ಡ್ರೈವರ್, ಇಕ್ಕಳ, ಸೈಕಲ್ ಬ್ಯಾಟರಿ, ಎಲ್‌ಇಡಿ ಲೈಟ್, ಓಲ್ಟರ್, ಬಲ್ಬ್, ಲ್ಯಾಪ್‌ಟಾಪ್, ಸೊಪ್ಪು, ಬಣ್ಣ, ಹಾಳೆ, ತರಕಾರಿ, ಮಣ್ಣು ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಇವೆಲ್ಲಾ ಮಕ್ಕಳ ಪ್ರಯೋಗದ ವಸ್ತುಗಳು. ಅಡುಗೆ ಆಟ ಆಡಬೇಕು ಎನಿಸಿದರೆ ಒಂದಿಷ್ಟು ಅಕ್ಕಿ ಹಾಕಿ ಒಲೆ ಹಚ್ಚಿಕೊಂಡು ಅನ್ನ ಸಿದ್ಧಪಡಿಸುತ್ತಾರೆ.

ಫ್ಯಾನ್ ಸಂಪರ್ಕವಿರುವ ವೋಲ್ಟ್‌ಗೆ ಐದು ಬಲ್ಬ್‌ಗಳನ್ನು ಕಟ್ಟಿದ್ದಾರೆ. ಗಾಳಿ ಹೆಚ್ಚು ಕಡಿಮೆ ಮಾಡುವ ರೆಗ್ಯುಲೇಟರ್ ತಿರುಗಿಸಿದರೆ ಬಲ್ಬ್‌ನ ಬೆಳಕು ಹೆಚ್ಚು ಕಡಿಮೆಯಾಗುವಂತೆ ಮಾಡಿದ್ದಾರೆ ಅಜಯ್ ಮತ್ತು ಗೋಪಿ. ತಂತ್ರಜ್ಞಾನದೊಂದಿಗೆ ಕೃಷಿ ಬಗ್ಗೆಯೂ ಆಸಕ್ತಿ ಇರುವ ಶ್ರೀಧರ್, ‘ಬೆಳಿಗ್ಗೆಯಿಂದ ಬಣ್ಣದಾಟ ಆಡಿ ಸಾಕಾಯ್ತು, ನಾನು ಇವತ್ತು ಕ್ಯಾರೆಟ್ ಬೆಳೆಯುತ್ತೇನೆ’ ಎನ್ನುತ್ತಾನೆ.

ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಂಟರ್‌ನೆಟ್ ಮೂಲಕ ಮಾಹಿತಿಯನ್ನು ಪಡೆದು ಇದುವರೆಗೂ ಹತ್ತಾರು ಪ್ರಯೋಗಗಳನ್ನು ಮಾಡಿ ತೋರಿದ್ದಾರೆ ಮಕ್ಕಳು.

ಡಿಇಎಫ್‌ವೈನಲ್ಲಿ ಸಿಗುವ ಸೌಲಭ್ಯಕ್ಕೂ ಮೀರಿ ತಮ್ಮ ಪ್ರತಿಭೆಯನ್ನು ತೋರುತ್ತಿರುವವರು 19 ವರ್ಷದ ಕುಶಾಲ್. ಐಟಿಐ ಓದಿರುವ ಕುಶಾಲ್‌ಗೆ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಆಸಕ್ತಿ ಹೆಚ್ಚು.

ಯುಟ್ಯೂಬ್‌ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ತಯಾರಿಕೆ ಬಗ್ಗೆ ತಿಳಿದುಕೊಂಡು ಏರ್‌ಬೋಟ್, ರಿಮೋಟ್ ಕಾರ್, ಸಣ್ಣ ಗ್ಲೈಡರ್ ವಿಮಾನ ತಯಾರಿಸಿದ್ದಾರೆ. ಯಾವ ಎಲೆಕ್ಟ್ರಾನಿಕ್ ವಸ್ತುವಾದರೂ ಬಿಚ್ಚಿ ಮತ್ತೆ ಸೇರಿಸುವುದು, ರಿಪೇರಿ ಮಾಡುವುದು ಕುಶಾಲ್‌ಗೆ ಸುಲಭದ ಕೆಲಸ.

ಇನ್ನು ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ತರಬಯಸುವ ಹುಡುಗ ಅಜೇಯ. ಹಿರೋಶಿಮಾ ಕೃಷಿ ಪದ್ಧತಿಯಲ್ಲಿ ಇರುವ ‘ಅಕ್ವಾಪೊನಿಕ್ಸ್’ ಬಗ್ಗೆ ಅಭ್ಯಾಸ ನಡೆಸಿದ್ದಾನೆ. ಕೃಷಿ ಜೊತೆಗೆ ಮೀನು ಸಾಕಾಣಿಕೆ ಮಾಡುವ ‘ಅಕ್ವಾಪೊನಿಕ್ಸ್’ ಪದ್ಧತಿಯನ್ನು ಕರ್ನಾಟಕದಲ್ಲೂ ಮಾಡುವ ಸಾಧ್ಯತೆಗಳ ಬಗ್ಗೆ ಪ್ರಯೋಗ ನಡೆಸುತ್ತಿದ್ದಾನೆ.

ಕಲೆ ಬಗ್ಗೆ ಆಸಕ್ತಿ ಇರುವ ಇದೇ ಗ್ರಾಮದ ದೀಪಿಕಾ ಕ್ವಿಲ್ಲಿಂಗ್ ಪೇಪರ್‌ನಲ್ಲಿ ಓಲೆ ತಯಾರಿಸುತ್ತಿದ್ದಾರೆ. ಮಕ್ಕಳು ಡಿಇಎಫ್‌ವೈ ಸಂಸ್ಥೆಗೆ ಹೋಗಿ ಇಂಟರ್‌ನೆಟ್, ಕಂಪ್ಯೂಟರ್ ಬಗ್ಗೆ ಕಲಿಯುವುದನ್ನು ನೋಡಿದ ಪೋಷಕರಿಗೂ ಕಂಪ್ಯೂಟರ್ ಬಗ್ಗೆ ಆಸಕ್ತಿ ಮೂಡಿ ಅವರು ಕೂಡ ಸಂಸ್ಥೆಗೆ ಭೇಟಿ ನೀಡುತ್ತಿದ್ದಾರೆ.

ವಿನೋದಾ, ಫೌಜಿಯಾ ಬಿಡುವಿನ ವೇಳೆ ಡಿಇಎಫ್‌ವೈಗೆ ಭೇಟಿ ನೀಡಿ ಟೈಲರಿಂಗ್, ಕಿವಿ ಓಲೆ ತಯಾರಿಕೆ, ಟೈಪಿಂಗ್ ಕಲಿಯುತ್ತಿದ್ದಾರೆ.
ಡಿಇಎಫ್‌ವೈ ತಂಡದ ಭವಿಷ್ಯದ ಯೋಜನೆ: ಡಿಇಎಫ್‌ವೈ ಸಂಸ್ಥೆ ಹುಟ್ಟು ಹಾಕಿದ್ದು ಅಭಿಜಿತ್. ಎಂಜಿನಿಯರಿಂಗ್ ಓದಿ ಸಾರ್ಟ್‌ಅಪ್ ಶುರು ಮಾಡಿದ ಗೆಳೆಯರಾದ ಮೇಘಾ ಶರ್ಮ, ಅರವಿಂದ ಇವರ ವಿಭಿನ್ನ ಪ್ರಯೋಗ ಮೆಚ್ಚಿ ಡಿಇಎಫ್‌ವೈ ಸಂಸ್ಥೆಯ ಉಪ ನಿರ್ದೇಶಕರಾಗಿದ್ದಾರೆ.

ಕಗ್ಗಲೀಪುರದ ದೀಪಿಕಾ, ಕುಶಾಲ್, ಅಜೇಯ ಮೊದಲು ಈ ಸಂಸ್ಥೆಯಲ್ಲಿ ಕಲಿಯಲು ಸೇರಿದವರು, ಇಂದು ಡಿಇಎಫ್‌ವೈ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ.

ಇವರೊಂದಿಗೆ ಸಂಕಲ್ಪ್, ರಾಶಿ, ಅಭಿನವ್, ಸಾಗರ್, ಪಲ್ಲವಿ, ವಿವೇಕ್, ಸ್ಮಿತಾ, ಮೆಕ್ಸಿಕೊದ ಸ್ಟೀಫನ್ ಸಂಬಳದ ಅಪೇಕ್ಷೆ ಇಲ್ಲದೆ ಈ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ. ಡಿಇಎಫ್‌ವೈ ಸಂಸ್ಥೆ ನಡೆಸಲು ಯಾವುದೇ ಎನ್‌ಜಿಒ ಅಥವಾ ಸರ್ಕಾರದ ಮುಂದೆ ನಿಲ್ಲದೆ ಸಾರ್ವಜನಿಕ ದೇಣಿಗೆಯಲ್ಲಿ ನಡೆಸುತ್ತಿದ್ದಾರೆ.

ಈ ಶಾಲೆ ನಡೆಸಲು ತಿಂಗಳಿಗೆ 20 ಸಾವಿರ ವೆಚ್ಚ ತಗಲುತ್ತಿದೆ. ಸದ್ಯಕ್ಕೆ ಬೆಂಗಳೂರು ಗ್ರಾಮಾಂತರ, ಮಂಗಳೂರಿನಲ್ಲಿ ಡಿಇಎಫ್‌ವೈ ಸಂಸ್ಥೆ ಆರಂಭಗೊಂಡಿದೆ. ಭವಿಷ್ಯದಲ್ಲಿ ಹುಬ್ಬಳ್ಳಿ, ಪುಣೆಯಲ್ಲೂ ತೆರೆಯುವ ಆಸೆ ಅಭಿಜಿತ್‌ಗೆ ಇದೆ.

ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಸಮಾಜಮುಖಿ ಕೆಲಸ ಮಾಡಲು ಬಯಸಿರುವ ಅಭಿಜಿತ್, ಮೋಟಾರ್ ಬೈಕ್‌ಗೆ ಸ್ಟ್ರೆಚರ್ ಅಳವಡಿಸಿ ಒಬ್ಬ ವ್ಯಕ್ತಿಯನ್ನು ಸಾಗಿಸಬಹುದಾದ ಬೈಕ್ ಆ್ಯಂಬುಲೆನ್ಸ್ ಮಾದರಿ ಸಿದ್ಧಪಡಿಸಿದ್ದಾರೆ.

‘ಆಫ್ರಿಕಾದ ಉಗಾಂಡದಲ್ಲಿ ಶಿಶು ಮರಣ ಸಂಖ್ಯೆ ಹೆಚ್ಚಿದೆ. ಹುಟ್ಟಿದ ನೂರು ಮಕ್ಕಳಲ್ಲಿ ಬದುಕಿ ಉಳಿಯುವುದೇ 45 ಮಕ್ಕಳು. ಗ್ರಾಮಾಂತರ ಪ್ರದೇಶದಿಂದ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲೇ ಹಲವು ಮಕ್ಕಳು ಮೃತಪಟ್ಟಿರುತ್ತವೆ. ಇಂಥ ಕಡೆ ವೈದ್ಯಕೀಯ ಸೇವೆ ಮಾಡುವ ಹಂಬಲವಿದೆ’ ಎನ್ನುತ್ತಾರೆ ಅಭಿಜಿತ್.

ಹಾಗೇ ಉಗಾಂಡದ ಮಕ್ಕಳಿಗೂ, ಕಲಿಕೆಯಲ್ಲಿ ತಾಂತ್ರಿಕತೆ ಅಳವಡಿಕೆಯಂಥ ಶಿಕ್ಷಣದ ಹೊಸ ಆಯಾಮಗಳನ್ನು ಪರಿಚಯಿಸುವ ಆಶಯವಿರುವ ಅಭಿಜಿತ್, ಅಲ್ಲೂ ಡಿಇಎಫ್‌ವೈ ಸಂಸ್ಥೆಯನ್ನು ತೆರೆಯಲಿದ್ದಾರೆ.

ವಿಡಿಯೊ ನೋಡಲು ಈ ಲಿಂಕ್ ಕ್ಲಿಕ್ಕಿಸಿ: http://bit.ly/28Y0Avn

ಅಭಿಜಿತ್ ಅವರ ಸಂಪರ್ಕಕ್ಕೆ: 8105874995.

ಪ್ರಯೋಗಗಳ ಸರಮಾಲೆ
19 ವರ್ಷದ ಕುಶಾಲ್, ಮಹಿಳೆಯರು ಆತ್ಮರಕ್ಷಣೆ ಮಾಡಿಕೊಳ್ಳುವ ಯಂತ್ರ ಕಂಡುಹಿಡಿದಿದ್ದಾನೆ, ಅದು ಸೊಳ್ಳೆ ಹೊಡೆಯುವ ಬ್ಯಾಟ್‌ನಿಂದ. ಬ್ಯಾಟ್ ಜಾಲರಿ ಭಾಗವನ್ನು ತೆಗೆದು ತುದಿಗೆ ವೈಯರ್ ಅಳವಡಿಸಿದ್ದಾನೆ. ಯಾರಾದರೂ ದಾಳಿ ಮಾಡಿದರೆ ಬ್ಯಾಟ್‌ನ ಗುಂಡಿ ಒತ್ತಿದರೆ ಸಾಕು, ದಾಳಿಕೋರನಿಗೆ ಶಾಕ್ ಹೊಡೆಯುತ್ತದೆ. ಆದರೆ ಕಡಿಮೆ ವೋಲ್ಟ್ ಇರುವುದರಿಂದ ಯಾವುದೇ ಪ್ರಾಣಾಪಾಯವಿಲ್ಲ.

ಮನೆ ಕಟ್ಟಿಸುತ್ತಿದ್ದ ಕಾರಣ ಶೆಡ್‌ನಲ್ಲಿ ವಾಸಿಸುತ್ತಿತ್ತು ನವೀನ್ ಕುಟುಂಬ. ಇವರ ಶೆಡ್ಡಿಗೆ ವಿದ್ಯುತ್ ಸಂಪರ್ಕವಿಲ್ಲ, ಹಾಗಾಗಿ ನವೀನ್ ‘ನೈಟ್ ಲ್ಯಾಂಪ್’ ಕಂಡು ಹಿಡಿದಿದ್ದಾನೆ. ಇದೇ ದೀಪದಿಂದ ಒಂದು ತಿಂಗಳ ಕಾಲ ಬೆಳಕು ಪಡೆದಿದ್ದಾನೆ. ಜೊತೆಗೆ ಸೌಂಡ್ ಸೆನ್ಸಿಂಗ್ ಡಾಲ್ ತಯಾರಿಸಿದ್ದಾನೆ.

ಡಿಇಎಫ್‌ವೈ ಶಾಲೆಯಲ್ಲಿ ಹರೀಶ್ ಮತ್ತು ಚರ್ಕ್ರವರ್ತಿ ‘ಡಿಸಿ ಮೋಟಾರ್ ಜನರೇಟರ್, ನವೀನ್ ಜುಗಾಡ್ ‘ಸೆಕ್ಯೂರಿಟಿ ಅಲಾರ್ಮ್’, ಮಧುಸೂದನ್ ‘ಬಲೂನ್ ಟಾಯ್ ಕಾರ್’, ದೀಪಕ್ ‘ಟಿನ್ ಬೋಟ್’, ಮೋಹನ್ ‘ಏರ್ ಟಾಯ್ ಕಾರ್’, ಶಿವು ‘ಬ್ಲಿಂಕಿಂಗ್ ಪೇಪರ್ ಮಾಸ್ಕ್’, ಹಬೀಯ ಮತ್ತು ಸುಮಯ ಸೇರಿ ‘ಬಾಟಲ್ ಫ್ಲವರ್’, ‘ಪೇಪರ್ ಫ್ಲವರ್’,

ದೀಪಕ್ ‘ವಿಂಡ್ ರೇಸ್ ಕಾರ್’, ಪವನ್ ‘ರಾಕೆಟ್’, ಹರೀಶ್ ‘ಸೋಲಾರ್ ಫ್ಯಾನ್’, ಲೋಕೇಶ್ ‘3ಡಿ ಸ್ಟ್ರಕ್ಚರ್’, ಸೋಮಶೇಖರ್ ‘ಬಾಟಲ್ ಕಾರ್’, ರಾಮ್ ಪ್ರವೇಶ್ ‘ಯುಎಸ್‌ಬಿ ಫ್ಯಾನ್’, ಹರೀಶ್ ‘ಫೋಟೊ ಸೆನ್ಸಿಂಗ್ ಐರನ್‌ಮ್ಯಾನ್ ಫೇಸ್’ ಹೀಗೆ ಹಲವು ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.