ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget Analysis | ಉದ್ಯಮ ಪೂರಕ; ಸಂಶೋಧನೆಗೆ ಒತ್ತು

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಮಂಡಿಸಿದ 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಇನ್ನಷ್ಟು ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ, ನಿರಂತರ ಸಂಶೋಧನೆಗಳಿಗೆ ನಾಂದಿ ಹಾಡಲಿದೆ. 

ಭಾರತದ ಬ್ಯಾಂಕಿಂಗ್‌ ವ್ಯವಸ್ಥೆ ಹಾಗೂ ಹಣಕಾಸು ನೆರವಿನ ವ್ಯವಸ್ಥೆಗಳು ಉತ್ಪಾದನೆ, ಸಿದ್ಧ ವಸ್ತುಗಳು, ಇತರೆ ಸ್ವತ್ತುಗಳ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದು ಕಂಪನಿ, ಉದ್ಯಮ ಆರಂಭಿಸುವಾಗ ಅದು ಭವಿಷ್ಯದಲ್ಲಿ ಯಶಸ್ವಿಯಾಗಲಿದೆಯೇ?, ಲಾಭ ತಂದುಕೊಡಲಿದೆಯೇ? ಹೊಸ ಉದ್ಯಮಗಳು ಆರಂಭಿಕ ಸಮಸ್ಯೆಗಳಿಂದ ಮುಕ್ತವಾಗಿವೆಯೇ ಎನ್ನುವುದರ ಆಧಾರದ ಮೇಲೆ ನೀಡುವ ಸಾಲದ ಮೊತ್ತವನ್ನು ನಿಗದಿ ಮಾಡಲಾಗುತ್ತದೆ.

ವಿಶ್ವದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ, ತಂತ್ರಜ್ಞಾನ ಆಧಾರಿತ ಉದಯೋನ್ಮುಖ ಉದ್ಯಮಗಳಿಗೆ ನಿರೀಕ್ಷಿತ ಹಣಕಾಸಿನ ನೆರವು ಯಾವುದೇ ಮೂಲದಿಂದ ದೊರೆಯುತ್ತಿಲ್ಲ ಎನ್ನುವುದು ಕಟು ವಾಸ್ತವ. ಕೃತಕ ಬುದ್ಧಿಮತ್ತೆ, ಡ್ರೋನ್‌ಗಳ ಅಭಿವೃದ್ಧಿ, ಆಧುನಿಕ ವೈದ್ಯಕೀಯ, ರೋಬಾಟಿಕ್‌ನಂತಹ ತಂತ್ರಜ್ಞಾನ ಆಧಾರಿತ ಉದ್ಯಮದಲ್ಲಿ ಯುವ ಜನರು ಯಶಸ್ಸು ಕಾಣಬೇಕಾದರೆ, ತಮ್ಮದೇ ಕಂಪನಿ ಆರಂಭಕ್ಕೆ ಮೊದಲು ಬಹಳ ಸಂಶೋಧನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಅಪಾರ ಸಮಯ ಹಾಗೂ ಹಣದ ಅವಶ್ಯ ಇರುತ್ತದೆ. ದೇಶದ ಯಾವ ಬ್ಯಾಂಕ್‌ ಅಥವಾ ಹಣಕಾಸಿನ ಸಂಸ್ಥೆಯೂ ಸಂಶೋಧನಾ ಕಾರ್ಯಕ್ಕೆ ನೆರವು ನೀಡುವುದೇ ಇಲ್ಲ. ಇಂತಹ ಸೂಕ್ಷ್ಮಗಳನ್ನೂ ಗಮನದಲ್ಲಿಟ್ಟುಕೊಂಡು ಉದ್ಯಮ ಸ್ಥಾಪಿಸುವ ಯುವ ಜನರಿಗೆ ಕೇಂದ್ರ ಬಜೆಟ್‌ನಲ್ಲಿ ₹1 ಲಕ್ಷ ಕೋಟಿ ಮೀಸಲಿಡುವ ನಿರ್ಧಾರ ಪ್ರಕಟಿಸಲಾಗಿದೆ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲಸೌಲಭ್ಯ ಕಲ್ಪಿಸುವ ನಿರ್ಧಾರ ಭವಿಷ್ಯದ ತಂತ್ರಜ್ಞಾನ ಭಾರತ ನಿರ್ಮಾಣಕ್ಕೆ ನಾಂದಿಹಾಡಲಿದೆ.

ಆತ್ಮನಿರ್ಭರ್‌ ಭಾರತಕ್ಕೆ ಪೂರಕವಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತರುವ ಆಶಯವನ್ನೂ ಬಜೆಟ್‌ ಒಳಗೊಂಡಿದೆ. ರಕ್ಷಣಾ ವಲಯ ಬಲಪಡಿಸಲು, ಸೈಬರ್‌ ಸೆಕ್ಯೂರಿಟಿಗೆ ಒತ್ತು ನೀಡಲು ಇಂತಹ ಪ್ರೋತ್ಸಾಹಗಳು ಪ್ರೇರಕವಾಗಿವೆ. 

ದೇಶದ ಸ್ಥಳೀಯ ಪ್ರವಾಸೋದ್ಯಮ ಬಲಪಡಿಸುವ ಆಲೋಚನೆಯೂ ಅತ್ಯಂತ ಮಹತ್ವದ ವಿಚಾರ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಯ ಜತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ. ಹೋಟೆಲ್‌ಗಳು, ರೆಸಾರ್ಟ್‌, ಸಾರಿಗೆ ಅಂಗಡಿ–ಮುಂಗಟ್ಟುಗಳ ಬೆಳವಣಿಗೆ ಜತೆಗೆ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯಲಿವೆ. ಕರ್ನಾಟಕ ಈಚೆಗೆ ಘೋಷಿಸಿದ ‘ನಮ್ಮ ಸ್ಮಾರಕ’ ಯೋಜನೆಯಲ್ಲೇ 25 ಸಾವಿರ ಸ್ಮಾರಕಗಳನ್ನು ಗುರುತಿಸಲಾಗಿದೆ. ಇಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಬಜೆಟ್‌ ನೆರವಾಗಲಿದೆ.

ಮಾಲಿನ್ಯರಹಿತ ಸುಂದರ ಪರಿಸರದ ಪರಿಕಲ್ಪನೆಯಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್‌ ವಾಹನಗಳ ಪಾತ್ರ ಮಹತ್ವದ್ದಾಗಿದೆ. ಕೇಂದ್ರ ಬಜೆಟ್‌ನಲ್ಲಿ ಇವಿ ವಾಹನಗಳಿಗೆ ಸಾಕಷ್ಟು ಅನುಕೂಲಕರ ಅಂಶಗಳನ್ನು ಪ್ರಕಟಿಸಲಾಗಿದೆ. ಇದು ಬರಿ ವಾಹನಗಳನ್ನು ಖರೀದಿಸುವವರಿಗೆ ಅಷ್ಟೇ ಅಲ್ಲ, ಬ್ಯಾಟರಿ ಉತ್ಪಾದನೆ, ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ, ನಿರ್ವಹಣೆ, ಉದ್ಯೋಗ ಸೇರಿದಂತೆ ಹಲವು ಆಯಾಮಗಳಲ್ಲಿ ಸ್ಥಳೀಯ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ವಿದ್ಯುತ್‌ ಘಟಕ ಅಳವಡಿಸುವ ಯೋಜನೆ ಉತ್ಪಾದನೆ, ಉದ್ಯೋಗಕ್ಕೆ ದಾರಿ ಮಾಡಿಕೊಡುವುದಲ್ಲದೇ ಸಾಂಪ್ರದಾಯಿಕ ವಿದ್ಯುತ್‌ ಬಳಕೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ, ಗ್ರಾಮೀಣರು ವಿದ್ಯುತ್‌ ಸ್ವಾವಲಂಬನೆ ಪಡೆಯಲು ಕಾರಣವಾಗಲಿದೆ. ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆಗೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಮುದ್ರಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುಕೂಲಕರ ಸೂತ್ರಗಳನ್ನು ಪರಿಚಯಿಸಲಾಗಿದೆ. ಕೃಷಿ ಉಪಕಸುಬು ಹೈನುಗಾರಿಕೆಯನ್ನು ಬಲಪಡಿಸಲು, ಹಾಲು, ಮೊಸರು ತುಪ್ಪ ಹಾಗೂ ಹಾಲಿನ ಬಳಕೆಯ ಇತರೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಹಲವು ಪ್ರೋತ್ಸಾಹದಾಯಕ ಅಂಶಗಳನ್ನು ಘೋಷಿಸಲಾಗಿದೆ. 

(ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಒನ್ ಬ್ರಿಡ್ಜ್‌ ಮತ್ತು ಅಧ್ಯಕ್ಷ ಟೈ ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT