ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
EXPLAINER: ಆರ್ಥಿಕ ಸದೃಢತೆಗೆ ಚೀನಾದ ಮಾಸ್ಟರ್ ಪ್ಲಾನ್; ಭಾರತಕ್ಕೆ ಇದು ಮಾದರಿಯೇ?
EXPLAINER: ಆರ್ಥಿಕ ಸದೃಢತೆಗೆ ಚೀನಾದ ಮಾಸ್ಟರ್ ಪ್ಲಾನ್; ಭಾರತಕ್ಕೆ ಇದು ಮಾದರಿಯೇ?
Published 3 ಜುಲೈ 2024, 11:20 IST
Last Updated 3 ಜುಲೈ 2024, 11:20 IST
ಅಕ್ಷರ ಗಾತ್ರ

ಬೀಜಿಂಗ್: ಸಂಕಷ್ಟದಲ್ಲಿರುವ ಹಣಕಾಸು ಸಂಸ್ಥೆಗಳಿಗೆ ಆಪತ್‌ನಿಧಿ ಸ್ಥಾಪಿಸುವ ಮೂಲಕ ಆರ್ಥಿಕ ಸದೃಢಗೊಳಿಸುವ ಕಾನೂನು ಜಾರಿಗೆ ತರಲು ಚೀನಾ ಮುಂದಡಿ ಇಟ್ಟಿದೆ. ಆ ಮೂಲಕ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವು ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಅಪಾಯಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಯೋಜನೆ ರೂಪಿಸಿದೆ.

ದೇಶದ ಚುನಾಯಿತ ಪ್ರತಿನಿಧಿಗಳ ಅತ್ಯುನ್ನತ ವೇದಿಕೆಯಾದ ನ್ಯಾಷನಲ್ ಪೀಪಲ್ಸ್‌ ಕಾಂಗ್ರೆಸ್ (ಎನ್‌ಪಿಸಿ)ನ ಸ್ಥಾಯಿ ಸಮಿತಿಯು ಈ ಕುರಿತ ಪರಿಷ್ಕೃತ ಮಸೂದೆಯನ್ನು ಎರಡನೇ ಬಾರಿಗೆ ಪರಾಮರ್ಶೆಗೆ ಒಳಪಡಿಸುತ್ತಿದೆ. ಯಾವುದೇ ಮಸೂದೆಯನ್ನು ಮೂರು ಬಾರಿ ಪರಿಷ್ಕರಣೆಗೆ ಒಳಪಡಿಸಿದ ನಂತರವೇ ಮಸೂದೆ ಅಂಗೀಕಾರಗೊಳ್ಳುತ್ತದೆ.

ಆರ್ಥಿಕ ಸ್ಥಿರತೆ ಖಾತರಿ ನಿಧಿ ಎಂದರೇನು?

ಈ ನೂತನ ಮಸೂದೆಯು ದೇಶದ 66 ಟ್ರಿಲಿಯನ್ ಅಮೆರಿಕನ್ ಡಾಲರ್‌ ಆರ್ಥಿಕತೆಗೆ ಒಳಪಡುವ ಬ್ಯಾಂಕುಗಳು, ವಿಮಾದಾರರು, ಆಸ್ತಿ ನಿರ್ವಹಣೆದಾರ ಸಂಸ್ಥೆಗಳಿಗೆ ಎದುರಾಗುವ ಅಪಾಯಗಳನ್ನು ನಿರ್ವಹಿಸುವ ವ್ಯವಸ್ಥೆಯಾಗಿದೆ. ಈ ಕಾನೂನು ಮೂಲಕ ಭವಿಷ್ಯದಲ್ಲಿನ ಅಪಾಯ ತಡೆಗಟ್ಟುವುದು, ಸೂಕ್ತ ನಿರ್ಣಯ ಕೈಗೊಳ್ಳುವುದು ಹಾಗೂ ಅವುಗಳನ್ನು ಪರಿಹರಿಸುವುದಾಗಿದೆ.

ಈ ಮೊದಲು ವಾಣಿಜ್ಯ ಬ್ಯಾಂಕುಗಳು ಹಾಗೂ ವಿಮೆ ಸಂಸ್ಥೆಗಳಿಗಾಗಿಯೇ ನಿರ್ದಿಷ್ಟ ಮಸೂದೆಯೊಂದನ್ನು ಚೀನಾ ಜಾರಿಗೆ ತಂದಿತ್ತು. ಆದರೆ ಈಗ ಜಾರಿಗೆ ತರಲು ಹೊರಟಿರುವ ಮಸೂದೆಯು ಹಿಂದಿನ ಕಾಯ್ದೆಯಲ್ಲಿ ಸೃಷ್ಟಿಯಾಗಿರುವ ಅಂತರವನ್ನು ತುಂಬಲಿದೆ ಎಂದು ಚೀನಾದ ಹಣಕಾಸು ಸಲಹಾ ಸಂಸ್ಥೆ ಜುನ್‌ಹಿ ಅಭಿಪ್ರಾಯಪಟ್ಟಿದೆ.

‘ವ್ಯವಸ್ಥಿತ ಆರ್ಥಿಕ ಅಪಾಯವನ್ನು ನಿಯಂತ್ರಿಸಲು ಹಾಗೂ ಸಂಸ್ಥೆಗಳ ನಡುವೆ ಪರಸ್ಪರ ಮೇಲ್ವಿಚಾರಣೆಗೆ ಈ ಉನ್ನತ ಮಟ್ಟದ ವ್ಯವಸ್ಥೆ ಸಹಾಯವಾಗಲಿದೆ. ದೇಶದಲ್ಲಿರುವ ವಿವಿಧ ಹಣಕಾಸು ನಿಯಂತ್ರಣ ಸಂಸ್ಥೆಗಳು ಹಾಗೂ ಮಾರುಕಟ್ಟೆ ಪಾಲುದಾರರನ್ನು ಆರ್ಥಿಕ ಅಪಾಯಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಉತ್ತಮ ಸಮನ್ವಯ ಸಾಧಿಸುವುದು ಇದರ ಮುಖ್ಯ ಉದ್ದೇಶ’ ಎಂದು ಹೌತೈ ಸೆಕ್ಯುರಿಟೀಸ್‌ ತನ್ನ ವರದಿಯಲ್ಲಿ ಹೇಳಿದೆ.

ಈ ನೂತನ ಮಸೂದೆ ಕುರಿತ ಮೊದಲ ಸಭೆ 2022ರ ಡಿಸೆಂಬರ್‌ನಲ್ಲಿ ನಡೆಯಿತು. ಇದರ 2ನೇ ಸಭೆ ಕಳೆದ ಸೋಮವಾರ ನಡೆದಿದೆ. 

ಹಣಕಾಸು ಸ್ಥಿರತೆ ನಿಧಿ ಎಂದರೇನು ಹಾಗೂ ಇದು ಹೇಗೆ ನೆರವಾಗಲಿದೆ?

ಈ ಕಾನೂನಿನ ಪ್ರಮುಖ ಅಂಶವೆಂದರೆ ಹಣಕಾಸು ಸ್ಥಿರತೆ ಖಾತ್ರಿ ನಿಧಿಯನ್ನು ಸ್ಥಾಪಿಸುತ್ತದೆ. ಸಂಕಷ್ಟ ಎದುರಾದಾಗ ಹಣಕಾಸು ಸಂಸ್ಥೆಗಳಿಗೆ ನೆರವಾಗುವ ಬ್ಯಾಕ್‌ಅಪ್‌ನಂತೆ ಇದು ಕೆಲಸ ಮಾಡಲಿದೆ. ಹಣಕಾಸು ಸಂಸ್ಥೆಗಳ ಮೂಲಕವೇ ಈ ನಿಧಿಗೆ ಹಣ ಸಂಗ್ರಹಿಸಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಚೀನಾ ಕೇಂದ್ರೀಯ ಬ್ಯಾಂಕ್‌ ಕಡಿಮೆ ಬಡ್ಡಿದರದ ಸಾಲವನ್ನು ನೀಡುತ್ತಿದ್ದು, ಸರಳ ಮರುಪಾವತಿಗೂ ಸೌಲಭ್ಯ ನೀಡಿದೆ. ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವುಗಳನ್ನು ಲಾಭದ ಹಾದಿಗೆ ತರುವುದು ಹಾಗೂ ಆದಾಯದಿಂದ ಬರುವ ಹಣವನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದರಿಂದ ದೇಶದ ಪ್ರಮುಖ ಬ್ಯಾಂಕ್ ಹಾಗೂ ವಿಮಾ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ ಅದನ್ನು ವ್ಯವಸ್ಥಿತವಾಗಿ ಮೇಲೆತ್ತಲು ಮಸೂದೆ ನೆರವಾಗಲಿದೆ. ಅಪಾಯ ಎದುರಾದ ಸಂದರ್ಭದಲ್ಲಿ ಸಂಸ್ಥೆಗಳು ಮೊದಲು ಸ್ವತಃ ಎದ್ದುನಿಲ್ಲಲು ನೆರವಾಗಬೇಕು. ನಂತರ ಸಾಲಮುಕ್ತವಾಗಲು ಹಾಗೂ ನಷ್ಟವನ್ನು ಭರಿಸಲು ಬಾಹ್ಯ ನೆರವನ್ನು ಪಡೆಯಬಹುದು ಎಂದು ತಜ್ಞರು ಹೇಳಿದ್ದಾರೆ.

ಹಣಕಾಸು ಸ್ಥಿರತೆ ಖಾತ್ರಿ ನಿಧಿಯ ಗಾತ್ರ ಎಷ್ಟು ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ. ಆದಾಗ್ಯೂ, 2022ರಲ್ಲಿ ಬ್ಯಾಂಕಿಂಗ್ ನಿಯಂತ್ರಕರು ಹೇಳಿರುವ ಪ್ರಕಾರ ಆರಂಭಿಕ ಮೊತ್ತ 8.89 ಶತಕೋಟಿ (₹742 ಶತಕೋಟಿ/ 64.6 ಶತಕೋಟಿ ಯಾನ್) ಅಮೆರಿಕನ್ ಡಾಲರ್‌ ಎಂದು ಅಂದಾಜಿಸಲಾಗಿದೆ. ನಂತರದ ದಿನಗಳಲ್ಲಿ ಪ್ರತಿ ವರ್ಷ 120ರಿಂದ 180 ಶತಕೋಟಿ ಯಾನ್‌ನಷ್ಟು ಸಂಗ್ರಹವಾಗುವ ಗುರಿ ಇದೆ. ಇದು ಗಂಭೀರ ಆರ್ಥಿಕ ಪರಿಸ್ಥಿತಿ ಎದುರಿಸಲು ನೆರವಾಗಲಿದೆ.

ಚೀನಾಕ್ಕೆ ಈ ನಿಧಿ ಸ್ಥಾಪನೆಯ ಅಗತ್ಯವೇನಿದೆ ಈಗ?

ವಿಮಾ ಗ್ಯಾರಂಟಿ ನಿಧಿ ಹಾಗೂ ನಂಬಿಕೆ ಗ್ಯಾರಂಟಿ ನಿಧಿಯನ್ನು ಚೀನಾ ಈಗಾಗಲೇ ಸ್ಥಾಪಿಸಿದೆ. ಆದರೆ ವ್ಯವಸ್ಥಿತ ಹಣಕಾಸು ಅಪಾಯಗಳನ್ನು ಎದುರಿಸಲು ಇವಿಷ್ಟೇ ಸಾಕಾಗದು ಎಂಬುದು ಚೀನಾದ ಅಂದಾಜು.

2019ರಲ್ಲಿ ದೇಶದ ಅತಿ ದೊಡ್ಡ ಅಡಮಾನ ಬ್ಯಾಂಕ್ ಬೋಷಾಂಗ್ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮೇಲೇರಲು ಅರ್ಧಕ್ಕಿಂತಲೂ ಹೆಚ್ಚಿನ ವಿಮಾ ಹಣವನ್ನು ಇದು ಖರ್ಚು ಮಾಡಿತ್ತು.

ಆಸ್ತಿ ಬಿಕ್ಕಟ್ಟು ಹಾಗೂ ದೇಶದ ಮಂದಗತಿಯ ಆರ್ಥಿಕತೆಯಿಂದ ಹೊರಬರುವ ಯತ್ನ ಸೇರಿದಂತೆ ಚೀನಾ ಆರ್ಥಿಕ ವ್ಯವಸ್ಥೆಯು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿರುವ ಸಣ್ಣ ಹಾಗೂ ಮಧ್ಯಮ ಗಾತ್ರದ ಬ್ಯಾಂಕುಗಳು ದುರ್ಬಲ ಆರ್ಥಿಕ ಪರಿಸ್ಥಿತಿಯಲ್ಲಿವೆ.

ಸ್ಥಳೀಯ ಆಡಳಿತಗಳಿಗೆ ಹಣಕಾಸು ಸೃಷ್ಟಿಸಲು ಯೋಜನೆ ರೂಪಿಸುವ ಸ್ವಾತಂತ್ರ್ಯವನ್ನು ಚೀನಾ ನೀಡಿತ್ತು. ಆಗ ಪಡೆದ 9 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಸಾಲ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿತ್ತು. ಈ ಸಾಲವು ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಅಪಾಯದ ಮುನ್ಸೂಚನೆ ಎಂದೇ ಭಾವಿಸಿದ ಚೀನಾ, ಪ್ರಾದೇಶಿಕ ಬ್ಯಾಂಕುಗಳನ್ನೂ ಒಳಗೊಂಡು ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಎದುರಾಗಬಹುದಾದ ಸಂಕಷ್ಟಗಳಿಗೆ ಮಾರ್ಗೋಪಾಯ ಕಂಡುಕೊಳ್ಳುವ ಯತ್ನ ನಡೆಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಲ್ಲಿರುವ ವ್ಯವಸ್ಥೆಯೊಂದಿಗೆ ಈ ನಿಧಿಯು ಚೀನಾವನ್ನು ಸಂಯೋಜಿಸಲಿದೆ. ಜಗತ್ತಿನ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರಗಳಾದ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟವು ಇಂಥ ನಿಧಿಗಳನ್ನು ಸ್ಥಾಪಿಸಿಕೊಂಡಿವೆ. ಇವುಗಳ ಮೂಲಕ ಆಯಾ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಹಣಕಾಸು ಸಂಸ್ಥೆಗಳಿಗೆ ನೆರವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT