ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru-Mysuru Highway: ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಾಯೋಗಿಕ ಜಾರಿ
Published 24 ಜುಲೈ 2024, 23:52 IST
Last Updated 24 ಜುಲೈ 2024, 23:52 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಟೋಲ್‌ ಪ್ಲಾಜಾಗಳ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಿರ್ಧರಿಸಿದೆ.

‘ಹರಿಯಾಣದ ಪಾಣಿಪತ್‌–ಹಿಸಾರ್‌ ರಾಷ್ಟ್ರೀಯ ಹೆದ್ದಾರಿ 709ರಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಆಯ್ದ ಹೆದ್ದಾರಿಗಳಲ್ಲಿ ಜಿಎನ್‌ಎಸ್ಎಸ್‌ (ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ) ಆಧಾರಿತ ಎಲೆಕ್ಟ್ರಾನಿಕ್‌ ಟೋಲ್ ಕಲೆಕ್ಷನ್‌ (ಇಟಿಸಿ) ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ಬುಧವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆ ಬಳಸಿಕೊಂಡೇ ಜಿಎನ್‌ಎಸ್‌ಎಸ್‌–ಇಟಿಸಿ ವ್ಯವಸ್ಥೆಯು ಅನುಷ್ಠಾನಗೊಳ್ಳಲಿದೆ. ಕೆಲವು ದಿನಗಳವರೆಗೆ ಹಾಲಿ ಇರುವ ಆರ್‌ಎಫ್‌ಐಡಿ– ಇಟಿಸಿ (ರೇಡಿಯೊ ಪ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ಮತ್ತು ಹೊಸ ವ್ಯವಸ್ಥೆ ಎರಡೂ ಜಾರಿಯಲ್ಲಿ ಇರಲಿವೆ ಎಂದು ಹೇಳಲಾಗಿದೆ.

ಲಾಜಿಸ್ಟಿಕ್ಸ್‌ ಸೇವೆ ಸುಧಾರಣೆ:

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾಜಿಸ್ಟಿಕ್ಸ್ ಸೇವೆಯನ್ನು ಸುಧಾರಿಸಬೇಕಿದೆ. ಇ–ವೇ ಬಿಲ್‌ ಮತ್ತು ಟೋಲ್ ಸಂಗ್ರಹದ ದತ್ತಾಂಶವನ್ನು ವಿಶ್ಲೇಷಿಸಬೇಕಿದೆ. ವಾಹನ ಸಂಚಾರದ ಬಗ್ಗೆ ಸಮೀಕ್ಷೆ ನಡೆಸಬೇಕಿದೆ. ಇದಕ್ಕೆ ಅನುಗುಣವಾಗಿ ಪಿಎಂ ಗತಿಶಕ್ತಿ ಯೋಜನೆಯಡಿ ಸಮಗ್ರ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಗಡ್ಕರಿ ಅವರು, ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಹೆದ್ದಾರಿ ಕಾಮಗಾರಿಗಳ ವಿಳಂಬಕ್ಕೆ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಅತಿಕ್ರಮಣ ತೆರವು, ಕಾನೂನು ಮತ್ತು ಸುವ್ಯವಸ್ಥೆಯು ಸವಾಲಾಗಿದೆ. ಗುತ್ತಿಗೆದಾರರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಮಳೆ, ಪ್ರವಾಹ, ಭೂಕುಸಿತ ಸೇರಿ ಹಲವು ಕಾರಣಗಳು ಕಾಮಗಾರಿಯ ವಿಳಂಬಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

2014ರಿಂದ ಇಲ್ಲಿಯವರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಹೆದ್ದಾರಿ ಯೋಜನೆಗಳ ಪೂರ್ಣಕ್ಕೆ ₹3.77 ಲಕ್ಷ ಕೋಟಿ ಸಾಲ ಪಡೆದಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 20 ಸಾವಿರ ಕಿ.ಮೀ. ಉದ್ದದಷ್ಟು ಹೆದ್ದಾರಿ ನಿರ್ಮಾಣಕ್ಕೆ ಸಚಿವಾಲಯವು ಮುಂದಾಗಿದೆ. ಇದರಲ್ಲಿ ಹಾಲಿ ನಿರ್ಮಾಣ ಹಂತದಲ್ಲಿರುವ ಮತ್ತು ಅನುಮೋದನೆ ನೀಡಿರುವ ಹೆದ್ದಾರಿಗಳು ಸೇರಿವೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ ಕಾಲಮಿತಿಯೊಳಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೂರ್ಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬವು ಬಹುಮುಖ್ಯ ಕಾರಣವಾಗಿದೆ 

-ನಿತಿನ್‌ ಗಡ್ಕರಿ ಕೇಂದ್ರ ಸಾರಿಗೆ ಸಚಿವ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT