ಭಾರತದ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರ ಹುಟ್ಟುಹಬ್ಬದ (ಮಾರ್ಚ್ 23) ಹಿನ್ನೆಲೆಯಲ್ಲಿ, ಅವರ ರಾಜಕೀಯ ತತ್ವಜ್ಞಾನದ ಕೆಲವು ಮುಖ್ಯ ಅಂಶಗಳನ್ನು ಇಲ್ಲಿ ಮುಂದಿಡಬಯಸುತ್ತೇವೆ. ಭಾರತ ಇಂದು ಎದುರಿಸುತ್ತಿರುವ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಭಾರತೀಯ ಸೆಕ್ಯುಲರ್‌ವಾದ ಹೊಸ ಬಗೆಯ ಚೈತನ್ಯಶೀಲತೆಯನ್ನು ಪಡೆದುಕೊಳ್ಳಲು ಇದು ನೆರವಾಗಬಹುದು.

ನಿರ್ವಿವಾದವಾಗಿಯೂ ಲೋಹಿಯಾ ವಸಾಹತುಶಾಹಿ ವಿರೋಧಿ ಚಿಂತಕ. ವಸಾಹತುಶಾಹಿಯು ಭಾರತದಂತಹ ಸಮಾಜಗಳಲ್ಲಿ ಉಂಟುಮಾಡಿದ ಬೌದ್ಧಿಕ-ಸಾಂಸ್ಕೃತಿಕ ಅನಾಹುತಗಳ ಕುರಿತು ಅವರಿಗೆ ಆಳವಾದ ಕಳವಳಗಳಿದ್ದವು. ಆದ್ದರಿಂದ ಕಣ್ಣಿಗೆ ಕಾಣುವ ವಸಾಹತುಶಾಹಿಯ ರಾಜಕೀಯ ಪ್ರಭುತ್ವಕ್ಕಿಂತಲೂ; ಅದು ಭಾರತದ ಜನಸಮುದಾಯಗಳ ಮೇಲೆ ಸಾಧಿಸಿದ– ಸಾಧಿಸುತ್ತಿರುವ ಸಾಂಸ್ಕೃತಿಕ ಯಾಜಮಾನ್ಯ ಅವರಿಗೆ ಭಯಂಕರವಾಗಿ ಕಾಣಿಸಿತು. ಈ ಹಿನ್ನೆಲೆಯಲ್ಲಿ ಲೋಹಿಯಾ ಅವರು ವಸಾಹತುಶಾಹಿಗೆ ತೋರಿಸಿದ ಪ್ರತಿರೋಧ ಅವರನ್ನು ನಮ್ಮ ದೇಶ-ಕಾಲದ ಪ್ರಮುಖ ವಸಾಹತೋತ್ತರ ಚಿಂತಕನನ್ನಾಗಿ ನೋಡುವಂತೆ ನಮ್ಮನ್ನು ಆಗ್ರಹಿಸುತ್ತದೆ.

ಸರಳವಾಗಿ ಹೇಳುವುದಾದರೆ, ಲೋಹಿಯಾ ಒಬ್ಬ ಅಪ್ಪಟ ದೇಶಸ್ನೇಹಿ. ಆದರೆ ಅವರಿಗೆ ದೇಶ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಅದು ಜನ-ಸಮುದಾಯಗಳ ಭಾವಶೀಲ ಆಶೋತ್ತರಗಳ ಒಂದು ಪ್ರತೀಕ ಅಥವಾ ದೇಶವಾಸಿಗಳೇ ದೇಶ. ಈ ಜನರ ಪ್ರಜಾತಾಂತ್ರಿಕ ಆಶೋತ್ತರಗಳ ಸಾಧನೆಗಾಗಿ ಶ್ರಮಿಸುವುದೇ ದೇಶಭಕ್ತಿ. ಲೋಹಿಯಾರ ದೇಶಸ್ನೇಹ ಯಾವ ಸಂದರ್ಭದಲ್ಲಿಯೂ ಒರಟಾಗಿ ವ್ಯಕ್ತಗೊಳ್ಳಲಿಲ್ಲ. ಸ್ವ-ಪ್ರತಿಫಲನಶೀಲತೆ ಹಾಗೂ ಸ್ವ-ವಿಮರ್ಶೆಗಳಿಂದ ಹರಿತಗೊಂಡ ಅವರ ದೇಶಪ್ರೀತಿಯನ್ನು ಲೋಹಿಯಾರ ಕೆಲವು ಟೀಕಾಕಾರರು ಉಗ್ರರಾಷ್ಟ್ರವಾದವೆಂದು ಬಗೆದರು. ರಾಷ್ಟ್ರವಾದದ ಚರಿತ್ರೆಯಲ್ಲಿ ವ್ಯಾಪಿಸಿಕೊಂಡಿರುವ ಹಿಂಸೆ- ರಕ್ತಪಾತದ ಸ್ಪಷ್ಟ ಅರಿವು ಲೋಹಿಯಾರಿಗೆ ಇತ್ತು. ಅಂಕೆಯಿಲ್ಲದ ರಾಷ್ಟ್ರವಾದದ ಅತಿರೇಕಗಳನ್ನು ಜರ್ಮನಿಯ ತನ್ನ ವಾಸ್ತವ್ಯದ ಸಂದರ್ಭದಲ್ಲಿ ಪ್ರತ್ಯಕ್ಷ ಕಂಡಿದ್ದ ಲೋಹಿಯಾರಿಗೆ ರಾಷ್ಟ್ರವಾದ ಎನ್ನುವುದು ಪಳಗಿಸಬೇಕಾದ ಒಂದು ವಿದ್ಯಮಾನವಾಗಿತ್ತು. ಈ ದಿಸೆಯಲ್ಲಿ ರಾಷ್ಟ್ರಪ್ರಭುತ್ವದ ಅಧಿಕಾರಶಾಹಿ ಅಟ್ಟಹಾಸವನ್ನು ನಿಯಂತ್ರಿಸಲು ಲೋಹಿಯಾ ಅವರು ನಾಗರಿಕ ಅಸಹಕಾರ, ಕ್ರಿಯಾಶೀಲ ಪೌರತ್ವ ಹಾಗೂ ಅಧಿಕಾರ ವಿಕೇಂದ್ರೀಕರಣದ ನೆಲೆಯ ವಿಚಾರಶೀಲ ಪ್ರಜಾತಂತ್ರದ ತಾತ್ವಿಕ ಕಲ್ಪನೆಯನ್ನು ಮುಂದಿರಿಸಿದ್ದರು ಹಾಗೂ ರಾಷ್ಟ್ರವಾದವನ್ನು ಪ್ರಜಾತಂತ್ರದೊಂದಿಗೆ ಬೆಸೆಯುವ ಪ್ರಯತ್ನವನ್ನು ನಡೆಸಿದ್ದರು.

ಲೋಹಿಯಾ ಪ್ರತಿಪಾದಿಸಿದ ದೇಶಭಕ್ತಿಯ ನೆಲೆಯ ರಾಷ್ಟ್ರವಾದ ಸಂಕುಚಿತವಾದುದಾಗಿರಲಿಲ್ಲ. ರಾಷ್ಟ್ರಪ್ರಭುತ್ವಗಳ ಸೀಮಿತ ಚೌಕಟ್ಟುಗಳನ್ನು ದಾಟುವ ಲೋಹಿಯಾರ ಈ ವಿಶ್ವಾತ್ಮಕ ನೆಲೆಯ ರಾಷ್ಟ್ರವಾದ ಒಂದು ಜಾಗತಿಕ ಸರ್ಕಾರವನ್ನು ಮತ್ತು ಜಾಗತಿಕ ಸಂಸತ್ತನ್ನು ಪರಿಕಲ್ಪಿಸುತ್ತದೆಮತ್ತು ರಾಷ್ಟ್ರಪ್ರಭುತ್ವಗಳು ಈ ಪ್ರಜಾತಾಂತ್ರಿಕ ವಿಶ್ವವ್ಯವಸ್ಥೆಯ ಅನುಯಾಯಿಗಳಾಗಬೇಕೆಂದು ಒತ್ತಾಯಿಸುತ್ತದೆ. ಲೋಹಿಯಾರ ಪ್ರಜಾತಾಂತ್ರಿಕ ವಿಶ್ವದೃಷ್ಟಿಯಲ್ಲಿ ಅಂತಿಮವಾಗಿ ರಾಷ್ಟ್ರವಾದ ಗೌಣವಾಗಿ ಸಮಾನತೆಯ ನೆಲೆಯ ಸಪ್ತಕ್ರಾಂತಿಯ ಪರಿಕಲ್ಪನೆ ಪ್ರಜ್ವಲಿಸುತ್ತದೆ. ಹ್ಞೂಂಕರಿಸುವ ರಾಷ್ಟ್ರವಾದಕ್ಕೆ ಪ್ರಜಾತಂತ್ರದ ಮೂಗುದಾರಗಳನ್ನು ತೊಡಿಸುವ ಚಿಂತನೆ ನಡೆಸಿದ ಲೋಹಿಯಾ ತಮ್ಮ ತಾತ್ವಿಕ ರಾಜಕಾರಣದ ಪರಿಪ್ರೇಕ್ಷ್ಯದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಸೆಕ್ಯುಲರ್ ನೆಲೆಯ ಪ್ರತಿಸ್ಪಂದನಗಳನ್ನು ನೀಡಿದರು.

ಧರ್ಮವನ್ನು ಲೋಹಿಯಾ ನಾಲ್ಕು ನೆಲೆಗಳಲ್ಲಿ ವಿಶ್ಲೇಷಿಸುತ್ತಾರೆ. ಅವರ ದೃಷ್ಟಿಯಲ್ಲಿ, ಮಾನವನ ಆಧ್ಯಾತ್ಮಿಕ ಆಶಯ ಹಾಗೂ ಆತಂಕಗಳ ಪ್ರಸ್ಥಭೂಮಿಯೇ ಧರ್ಮ. ಮಾನವನ ಆಧ್ಯಾತ್ಮಿಕ ಹುಡುಕಾಟ-ಆಶೋತ್ತರಗಳ ಪ್ರತಿಬಿಂಬವಾಗಿ ಧರ್ಮ, ಮಾನವ ಬದುಕಿಗೆ ಅನಿವಾರ್ಯವಾದದ್ದು ಎಂದು ಲೋಹಿಯಾ ತಿಳಿಯುತ್ತಾರೆ.

ಎರಡನೆಯದಾಗಿ, ಧರ್ಮವು ಜನಸಮುದಾಯಗಳ ಸಾಮಾಜಿಕ ಸಂಘಟನೆಯ ನೀತಿಸೂತ್ರ. ಜನರನ್ನು ನೈತಿಕ ಕಟ್ಟುಪಾಡುಗಳಲ್ಲಿ ಹೆಣೆದು ಅವರ ನಡೆ-ನುಡಿಗಳನ್ನು ತಿದ್ದುವ ಕೆಲಸವನ್ನು ಧರ್ಮ ಮಾಡುತ್ತದೆ. ಈ ಅರ್ಥದಲ್ಲಿ ಧರ್ಮಕ್ಕೆ ಒಂದು ಸಾಮುದಾಯಿಕ ಆಯಾಮವಿದ್ದು; ಅದು ರಾಜಕಾರಣದ ಜೊತೆಗೂಡಿ ಇರುವಂತಹುದು. ಅಂದರೆ ಧರ್ಮ ಮತ್ತು ರಾಜಕಾರಣ ಸಾಮುದಾಯಿಕ ಸಂಘಟನೆಯ ಎರಡು ಆಧಾರ ಸ್ತಂಭಗಳೆಂದು ಲೋಹಿಯಾ ತಿಳಿಯುತ್ತಾರೆ. ಹೀಗೆ ಲೋಹಿಯಾ ಪ್ರಕಾರ ಧರ್ಮ ಮತ್ತು ರಾಜಕಾರಣ ಒಂದೇ ಕರ್ತವ್ಯದ ಎರಡು ವಿಭಿನ್ನ ನಿರ್ವಹಣೆಗಳು.

ಮೂರನೆಯದಾಗಿ, ಲೋಹಿಯಾ ಅವರು ಧರ್ಮ, ಮಾನವನ ವೈಯಕ್ತಿಕ ನೈತಿಕ ಚಾರಿತ್ರ್ಯವನ್ನು ರೂಪುಗೊಳಿಸುವ ವಿದ್ಯಮಾನವೆಂದು ತಿಳಿಯುತ್ತಾರೆ. ಮನುಷ್ಯ ಸ್ವಾರ್ಥವನ್ನು ದಾಟುವಂತೆ ಮಾಡಿ ಆತನನ್ನು ಸಾಮುದಾಯಿಕ ಬದುಕಿಗೆ ಬದ್ಧನಾಗುವಂತೆ ಧರ್ಮ ಮಾಡುತ್ತದೆ. ಹಾಗಾಗಿ ಲೋಹಿಯಾ ಧರ್ಮ ‘ಸ್ವ’ವನ್ನು ವಿಕಸನಗೊಳಿಸುವ ಮತ್ತು ‘ಸ್ವ’ವನ್ನು ಸಂಕುಚಿತ ಹಿತಾಸಕ್ತಿಯಿಂದ ಮುಕ್ತಗೊಳಿಸುವ ಬಿಡುಗಡೆಯ ದಾರಿಯೆಂದು ಬಗೆಯುತ್ತಾರೆ.

ನಾಲ್ಕನೆಯದಾಗಿ, ಧರ್ಮ ಈಗ ಧರಿಸಿರುವ ಕರಾಳ ಮುಖಗಳ ಕುರಿತು ತಮ್ಮ ಸ್ಪಷ್ಟ ಅಸಮ್ಮತಿಯನ್ನು ಲೋಹಿಯಾ ವ್ಯಕ್ತಪಡಿಸುತ್ತಾರೆ. ಧರ್ಮ ತನ್ನ ಆಧ್ಯಾತ್ಮಿಕ ಸೆಳೆತವಾಗಿ ಮತ್ತು ಒಂದು ನೈತಿಕ ಸಾಮುದಾಯಿಕ ತತ್ವವಾಗಿ ನಮ್ಮನ್ನು ಪ್ರಭಾವಿಸುವುದಕ್ಕೂ; ಅದು ಸಂಘಟಿತಗೊಂಡು ಇಂದು ವಿರೂಪಗೊಂಡಿರುವುದಕ್ಕೂ ಇರುವ ಅಗಾಧವಾದ ಅಂತರವನ್ನು ಅವರು ಗುರುತಿಸುತ್ತಾರೆ. ಧರ್ಮ ಸಾಂಸ್ಥೀಕರಣಗೊಂಡು ಭ್ರಷ್ಟತೆ, ಸಂಕುಚಿತತೆ, ಮತಾಂಧತೆ ಹಾಗೂ ಅಸಮಾನತೆಗಳ ನೆಲೆಬೀಡಾಗಿ ಪರಿವರ್ತಿತಗೊಂಡ ಚಾರಿತ್ರಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಕ್ರಿಯೆಗಳನ್ನು ನಿಖರವಾಗಿ ಗುರುತಿಸುವ ಲೋಹಿಯಾ, ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸುವ ಧರ್ಮವನ್ನು ತ್ಯಾಜ್ಯಯೋಗ್ಯ ಎಂದು ಭಾವಿಸುತ್ತಾರೆ. ಹಾಗಿದ್ದೂ ಜನಸಮುದಾಯಗಳಲ್ಲಿ ಧರ್ಮ ಮತ್ತು ಧಾರ್ಮಿಕತೆ ಬೀರುವ ಪ್ರಭಾವಗಳನ್ನು ಹಾಗೂ ಜನಜೀವನದಲ್ಲಿ ಅದು ಪಡೆದುಕೊಂಡಿರುವ ಸ್ಥಾನಮಾನಗಳನ್ನು ಗಂಭೀರವಾಗಿ ಪರಿಗಣಿಸುವ ಲೋಹಿಯಾ ಅವರಿಗೆ ಧರ್ಮ ಅದರ ಎಲ್ಲಾ ಆಯಾಮಗಳಲ್ಲಿ ನಿರಂತರ ಚಿಂತನೆಯನ್ನು ಹಾಗೂ ಸ್ವವಿಮರ್ಶೆಯನ್ನು ಉದ್ದೀಪಿಸುವ ಸೈದ್ಧಾಂತಿಕ ವಿದ್ಯಮಾನ.

ಧರ್ಮದ ಕುರಿತಾದ ಈ ಚಿಂತನೆಗಳ ಹಿನ್ನೆಲೆಯಲ್ಲಿ ಲೋಹಿಯಾ, ಹಿಂದೂ ಧರ್ಮವನ್ನು ವಿಮರ್ಶಿಸುತ್ತಾರೆ. ಹಿಂದೂ ಧರ್ಮದಲ್ಲಿಯೂ ಲಾಗಾಯ್ತಿನಿಂದಲೂ ಮತಾಂಧ ಎಂದು ಕರೆಯಬಹುದಾದ ಮತ್ತು ಉದಾರ ಎಂದು ಕರೆಯಬಹುದಾದ ಪ್ರವೃತ್ತಿಗಳ ನಡುವೆ ನಿರಂತರ ಹಣಾಹಣಿ ನಡೆಯುತ್ತಲೇ ಬಂದಿದೆ. ಹಿಂದೂ ಧರ್ಮದಲ್ಲಿ ಮತಾಂಧ ಪ್ರವೃತ್ತಿಗಳು ಔದಾರ್ಯದ ಪ್ರವೃತ್ತಿಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಿ ಅವುಗಳನ್ನು ಕ್ಷೀಣಗೊಳಿಸಿದಾಗ ಹಿಂದೂ ಧರ್ಮವು ಜಾತಿಪಂಥಗಳ ಸಂಕುಚಿತತೆಯಲ್ಲಿ ಸಿಲುಕಿಕೊಂಡು ಅಸಮಾನ ಸಂಬಂಧಗಳ ಜಾಲವಾಗಿ ಕಾಣಿಸುತ್ತದೆ. ಅಂತೆಯೇ ಹಿಂದೂ ಧರ್ಮದೊಳಗಿನ ಉದಾರವಾದಿ ಪ್ರಜಾತಾಂತ್ರಿಕ ಆಶಯಗಳು ಚೈತನ್ಯಶೀಲಗೊಂಡಾಗ ಜಾತಿ-ಮತ-ಪಂಥಗಳ ಜಟಿಲ ಸಂಬಂಧಗಳು ಸಡಿಲಗೊಂಡು ಸಮಾನತೆಯ ಲೌಕಿಕ ಆಶಯಗಳು ಮುನ್ನೆಲೆಗೆ ಬರುತ್ತವೆ. ಈ ಪ್ರಕ್ರಿಯೆ ಎಲ್ಲಾ ಧರ್ಮಗಳಂತೆಯೇ ಹಿಂದೂ ಧರ್ಮದಲ್ಲಿಯೂ ನಿರಂತರವಾಗಿ ಸಂಭವಿಸುತ್ತಾ ಬಂದಿದೆಯೆಂದು ಲೋಹಿಯಾ ಪ್ರತಿಪಾದಿಸುತ್ತಾರೆ.

ಹಿಂದೂ ಧರ್ಮದೊಳಗೆ ಚಾರಿತ್ರಿಕವಾಗಿ ನಡೆಯುತ್ತಾ ಬಂದಿರುವ ಮತಾಂಧತೆ- ಉದಾರತೆಗಳ ಹಣಾಹಣಿಯಲ್ಲಿ ಯಾವುದು ಯಾವುದರ ಮೇಲೆ ಹಿಡಿತವನ್ನು ಸಾಧಿಸಿತು ಮತ್ತು ಹೇಗೆ ಎನ್ನುವುದನ್ನು ತಿಳಿಯುವುದರ ಜೊತೆಗೆ, ಈ ಹಣಾಹಣಿಯಲ್ಲಿ ನಾವು ಎಲ್ಲಿದ್ದೇವೆ, ಮತಾಂಧತೆ-ಉದಾರತೆಗಳಲ್ಲಿ ನಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಲೋಹಿಯಾರಿಗೆ ಬಹಳ ಮುಖ್ಯವಾಗುತ್ತದೆ. ನಮ್ಮ ಇಂದಿನ ಸಾಂಸ್ಕೃತಿಕ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಲೋಹಿಯಾರ ಈ ವಿಚಾರಗಳು ಭಾರತೀಯ ಸೆಕ್ಯುಲರ್‌ವಾದವನ್ನು ಚೈತನ್ಯಶೀಲಗೊಳಿಸುತ್ತವೆ ಎಂದು ನಾವು ತಿಳಿಯುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.