ಭಾರತದಲ್ಲಿ ಗುಲಾಮಿ ಸಾಮ್ರಾಜ್ಯ ಅಂತ ಒಂದು ಆಗಿಹೋಗಿದೆ ಅಂತ ಚರಿತ್ರೆಯಲ್ಲಿ ಓದಿದ್ದೇವೆ. ಕ್ರಿಸ್ತಶಕ 1206ರಿಂದ 1290ರವರೆಗೆ ಆಳ್ವಿಕೆ ನಡೆಸಿದ ಈ ಸಾಮ್ರಾಜ್ಯದ ಸ್ಥಾಪಕ ಕುತುಬುದ್ದೀನ್ ಐಬಕ್. ಆತ ಮೊಹಮ್ಮದ್ ಘೋರಿಯ ಗುಲಾಮನಾಗಿದ್ದ ಎಂಬ ಕಾರಣಕ್ಕೆ ‘ಗುಲಾಮಿ’ ಎಂಬ ವಿಶೇಷಣ ಆ ಸಾಮ್ರಾಜ್ಯದ ಹೆಸರಿಗೆ ಬೆಸೆದುಕೊಂಡದ್ದು. ಮನುಷ್ಯ ಮನುಷ್ಯನಿಗೆ ಮಾರಾಟವಾಗುವ ವ್ಯವಹಾರಕ್ಕೆ ಗುಲಾಮಿ ಪದ್ಧತಿ ಅಂತ ಹೆಸರು. ಆ ಪದ್ಧತಿ ಈಗ ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ.

ಆದರೆ, ಈ ಕಾಲದಲ್ಲೂ ಹಣಕ್ಕೆ ಅಥವಾ ಇನ್ಯಾವುದೋ ‘ತೃಪ್ತಿ’ಗೆ ತಮ್ಮನ್ನು ತಾವು ಮಾರಿಕೊಂಡ ಯಾಇನ್ನೊಬ್ಬರಿಂದ ಖರೀದಿಸಲ್ಪಟ್ಟ ಮಂದಿಯನ್ನು ಗುಲಾಮರು ಅಂತ ಕರೆಯಲು ಅಡ್ಡಿಯಿಲ್ಲ. ಅವರನ್ನು ಹಾಗೆ ಕರೆಯಬಹುದಾದರೆ, ಅಂತಹ ಮಂದಿಯ ‘ಸಹಕಾರ’ದಿಂದ ಸ್ಥಾಪನೆಯಾದ ಒಂದು ಸರ್ಕಾರವನ್ನು ಗುಲಾಮಿ ಸರ್ಕಾರ ಅಂತ ಕರೆಯಬಹುದಲ್ಲಾ? ಹೌದು ಎಂದಾದರೆ, ಮಂಗಳವಾರ ಕರ್ನಾಟಕದಲ್ಲಿ ಅಧಿಕೃತವಾಗಿ ಅಧಿಕಾರಕ್ಕೆ ಬಂದ ಅರ್ಧ ಮಂತ್ರಿಮಂಡಲದ ಸರ್ಕಾರವನ್ನು ಏನಂತ ಕರೆಯುವುದು? ಗುಲಾಮಿ ಸಾಮ್ರಾಜ್ಯ 2.0?

ಹೇಳಿ ಕೇಳಿ ಇದು ಖರೀದಿಗೊಳಗಾದ 17 ಮಂದಿಯ ಮುಲಾಜಿನಲ್ಲಿ ರಚನೆಯಾದ ಸರ್ಕಾರ. ಮಾತ್ರವಲ್ಲ, 34 ಸಚಿವ ಸ್ಥಾನಗಳ ಪೈಕಿ 16 ಸ್ಥಾನಗಳನ್ನು, ಖರೀದಿಸಿದ ಮಂದಿಗೆ ಈ ಸರ್ಕಾರ ಮೀಸಲಿರಿಸಿದೆ. ಅವರೆಲ್ಲಾ ಕಾನೂನು ಹೇರಿದ ವನವಾಸ ಮುಗಿಸಿ ಬರುವವರೆಗೆ ಅವರಿಗಾಗಿ ಮೀಸಲಿಟ್ಟ ಪೀಠಗಳ ಮೇಲೆ ಅವರಿಗೆ ನೀಡಿದ ಭರವಸೆಯ ಪಾದುಕೆಗಳನ್ನು ಇರಿಸಿಕೊಂಡು ರಾಮರಾಜ್ಯ ನಡೆಸಲು ಹೊರಟಿದೆ. ಹಾಗಿರುವಾಗ, ಇಂತಹದ್ದೊಂದು ಸರ್ಕಾರಕ್ಕೆ ಸೂಕ್ತವಾಗುವ ಬೇರೆ ಯಾವುದಾದರೂ ಹೆಸರು ಇದೆಯೇ?

ಬಿಜೆಪಿ ಅಧಿಕಾರ ವಹಿಸಿಕೊಂಡಾಗಿನಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅಧಿಕಾರ ಹಿಡಿಯಲು ಎಂಥ ನೀಚ ಮಾರ್ಗಗಳನ್ನು ಅನುಸರಿಸಿದರೂ ಸರಿ, ಒಮ್ಮೆ ಅಧಿಕಾರ ಕೈಗೆ ಬಂದುಬಿಟ್ಟರೆ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ ಎನ್ನುವ ಸತ್ಯ ಅದು. ಈ ಸತ್ಯವನ್ನು ಬಿಜೆಪಿಯ ಹಾಗೆ ಯಾವ ಪಕ್ಷವೂ ಸಾಕ್ಷಾತ್ಕರಿಸಿಕೊಂಡಿಲ್ಲ. ಆ ಪಕ್ಷದ ಮಂದಿ ಹೊಂದಿರುವ ಭಂಡ ಧೈರ್ಯದ ಮೂಲ ಇರುವುದೇ ಈ ಸಾಕ್ಷಾತ್ಕಾರದಲ್ಲಿ. ಆಪರೇಷನ್ ಕಮಲ 2.0 ಕೇವಲ ಮೂರು ವಾರಗಳ ಅವಧಿಯಲ್ಲಿ ಹಳೆಯ ಶಿಲಾಯುಗದ ಪಳೆಯುಳಿಕೆ ಎಂಬಷ್ಟು ಹಳತಾಗಿಬಿಟ್ಟಿದೆ. ಮಂತ್ರಿಮಂಡಲ ರಚನೆಯಾದ ಮೇಲೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ನೋಡುತ್ತಿದ್ದರೆ, ಸಂಪೂರ್ಣ ಜನಾದೇಶ ಪಡೆದ ಹೊಸ ಸರ್ಕಾರವೇ ಅಧಿಕಾರಕ್ಕೆ ಬಂದಿದೆಯೇನೋ ಎನ್ನುವ ಧಾಟಿಯಲ್ಲಿ ಹೊಸ ನಿರೀಕ್ಷೆಗಳ ಬಗ್ಗೆ, ಹೊಸ ಭರವಸೆಗಳ ಬಗ್ಗೆ ಚಿಂತನ– ಮಂಥನ ನಡೆಯುತ್ತಿದೆ.

ಅತ್ತ ರಾಜಕೀಯದ ಮಾರುಕಟ್ಟೆಯಲ್ಲಿ ತಮ್ಮನ್ನು ತಾವೇ ವಿಕ್ರಯಿಸಿಕೊಂಡ ಮಾಜಿ (ಅನರ್ಹ) ಶಾಸಕರು ಅಜ್ಞಾತವಾಸ ಮುಗಿಸಿ ಯಾವುದೇ ಎಗ್ಗಿಲ್ಲದೆ ಪುರಪ್ರವೇಶ ಮಾಡಿದ್ದಾರೆ. ಕೆಲವರಿಗೆ ವೀರ ಸ್ವಾಗತ ದೊರಕಿದೆ. ಸುಪ್ರೀಂ ಕೋರ್ಟ್ ಏನಾದರೂ ಅವರ ಅನರ್ಹತೆಯನ್ನು ಅಸಿಂಧುಗೊಳಿಸಿದರೆ ಅವರೆಲ್ಲಾ ಹೊಸ ಹೀರೊಗಳಾಗಿ ಮರುಜನ್ಮ ಪಡೆಯಬಹುದು. ಕೋರ್ಟ್ ತೀರ್ಪು ಹೇಗಾದರೂ ಬರಲಿ, ಇದನ್ನೆಲ್ಲಾ ನೋಡುತ್ತಿದ್ದರೆ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಬರಲಿರುವ ಉಪ ಚುನಾವಣೆಗಳನ್ನು ಬಿಜೆಪಿ ಹೊಸದೊಂದು ಧರ್ಮಯುದ್ಧ ಎಂಬಂತೆ ಬಿಂಬಿಸಿ ಜಯಿಸಿಕೊಳ್ಳುವುದೊಂದೇ ಬಾಕಿ. ಎಲ್ಲವೂ ಇಷ್ಟೊಂದು ಸಲೀಸಾಗಿ ನಡೆದುಹೋಗಬಹುದು, ಎಲ್ಲವೂ ಇಷ್ಟು ಬೇಗ ಮರೆತುಹೋಗಬಹುದು, ಪ್ರತಿಭಟನೆಯ ಸಣ್ಣದೊಂದು ಸೊಲ್ಲೂ ಎಲ್ಲೂ ಕೇಳದೇ ಹೋದೀತು ಎಂದು ಸ್ವತಃ ಬಿಜೆಪಿಯೂ ನಿರೀಕ್ಷಿಸಿರಲಾರದು. ರಾಜಕೀಯ ಪಕ್ಷಗಳಿಗೇನೋ ಗರ ಬಡಿದಿದೆ ಅಂತ ಭಾವಿಸೋಣ. ಹಾಗೆಂದು ಕರ್ನಾಟಕದ ನಾಗರಿಕ ಸಮಾಜ ಈ ಮಟ್ಟದಲ್ಲಿ ಶುಷ್ಕವಾಗಿಬಿಟ್ಟದ್ದು ಹೇಗೆ? ರಾಜ್ಯದ ಪ್ರಜ್ಞಾವಂತಿಕೆ ಈ ಮಟ್ಟಿಗೆ ಸೊರಗಿದ್ದು ಯಾಕೆ?

ಇನ್ನೇನು ಮಾಡಲು ಸಾಧ್ಯ? ಇನ್ನೇನು ಮಾಡಲು ಉಳಿದಿದೆ ಎನ್ನುವ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಏನು ಮಾಡಬಹುದು, ಏನು ಮಾಡಿದರೆ ಏನು ಆಗಬಹುದು ಎನ್ನುವುದಕ್ಕಿಂತ ಮುಖ್ಯವಾಗಿ, ಇಡೀ ಪ್ರಕರಣಕ್ಕೆ ದೊರಕಿದ ಸ್ವೀಕಾರಾರ್ಹತೆ ಇದೆಯಲ್ಲ ಅದು ದಂಗುಬಡಿಸುವಂತಹುದು. ಸಮ್ಮಿಶ್ರ ಸರ್ಕಾರ ಪತನವಾದ ಬಗ್ಗೆ ಯಾರಿಗೂ ವಿಶೇಷವಾದ ಬೇಸರವಾಗಲೀ ಮರುಕವಾಗಲೀ ಇಲ್ಲ ಎನ್ನುವುದು ಸಕಾರಣವಾದ ಬೆಳವಣಿಗೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಡಬಿಡಂಗಿತನ ಮತ್ತು ಅವುಗಳ ಮೈತ್ರಿಕೂಟದ ಒಳಗಣ ವೈರುಧ್ಯದ ಕಾರಣಗಳಿಂದಾಗಿ ಆ ಸರ್ಕಾರದ ಬಗ್ಗೆ ಯಾರಿಗೂ ದೊಡ್ಡ ಮಟ್ಟದ ಒಲವಾಗಲೀ, ಅಭಿಮಾನವಾಗಲೀ ಇರುವುದಕ್ಕೆ ಸಾಧ್ಯವಿರಲಿಲ್ಲ ಎನ್ನುವುದನ್ನೂ ಒಪ್ಪೋಣ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆ ಇತ್ತು ಎನ್ನುವ ವಿಚಾರವು ಅದರ ಪತನಕ್ಕೆ ಬಿಜೆಪಿ ಹೆಣೆದ ದುಷ್ಟ ತಂತ್ರಗಾರಿಕೆಯ ಸಮರ್ಥನೆಯೂ ಆಗಬಾರದು, ಅದರ ಸ್ವೀಕಾರಾರ್ಹತೆಗೂ ಕಾರಣವಾಗಬಾರದು. ಆದರೆ ಅವೆರಡೂ ಈಗ ಆಗಿವೆ.

ವಾಸ್ತವವಾಗಿ ನಡೆದದ್ದು ಏನೆಂದರೆ, ಒಂದು ಅರ್ಧನೈತಿಕ ಸರ್ಕಾರ ಹೋಗಿ ಪೂರ್ತಿ ಅನೈತಿಕವಾದ ಸರ್ಕಾರ ಬಂದದ್ದು ಎಂಬ ಸತ್ಯ, ಒಟ್ಟು ಘಟನಾವಳಿಗಳ ಓಘದಲ್ಲಿ, ವಸ್ತು-ವಿಚಾರರಹಿತ ಚರ್ಚೆಗಳ ಭರಾಟೆಯಲ್ಲಿ ಕಳೆದೇಹೋಯಿತು. ಬಿಜೆಪಿಗೆ ಅದೇ ಬೇಕಿತ್ತು. 2018ರ ಚುನಾವಣೆಯಲ್ಲಿ 104 ಸ್ಥಾನ ಪಡೆದ ತಾನು ವಿರೋಧ ಪಕ್ಷವಾಗಿ ಇರುವುದು ಮತ್ತು ಕೇವಲ 37 ಸ್ಥಾನಗಳನ್ನು ಪಡೆದ ಜೆಡಿಎಸ್, ಕಾಂಗ್ರೆಸ್ಸಿನ ಬೆಂಬಲದೊಂದಿಗೆ ಅಧಿಕಾರದಲ್ಲಿ ಇರುವುದು ಪ್ರಜಾತಂತ್ರದ ಕಗ್ಗೊಲೆ ಎಂಬ ತನ್ನ ವಾದ ಬಿಜೆಪಿಗೆ ಸಕಲ ದುರ್ಮಾರ್ಗಗಳನ್ನೂ ಸಮರ್ಥಿಸಿಕೊಳ್ಳಲು ಇದ್ದ ಅಸ್ತ್ರವಾಗಿತ್ತು. ಮೇಲ್ನೋಟಕ್ಕೆ ಇದು ಸರಿ ಎನ್ನಿಸಬಹುದು. ಈ ವಾದದ ಹಿಂದಿನ ಬಿಜೆಪಿಯ ಒಡಲುರಿಯನ್ನೂ ಅರ್ಥೈಸಿಕೊಳ್ಳಬಹುದು. ಆದರೆ ಬಿಜೆಪಿಯದ್ದು ಟೊಳ್ಳುವಾದವಾಗಿತ್ತು. ಈಗಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರಾದರೂ ಒಂದೇ ಒಂದು ವೋಟಿನಿಂದ ಗೆದ್ದ ಎನ್ನುವ ಕಾರಣಕ್ಕೆ ಆತನ ಗೆಲುವು ಅಲ್ಪವೆಂದಾಗುವುದಿಲ್ಲ, ಒಂದೇ ಒಂದು ವೋಟಿನಲ್ಲಿ ಸೋತವನ ಸೋಲೂ ಸೋಲಲ್ಲ ಎಂದಾಗುವುದಿಲ್ಲ. ಅದೇ ರೀತಿ, ಬಿಜೆಪಿಗೆ ಸರಳ ಬಹುಮತಕ್ಕೆ ಕೇವಲ ಎಂಟು ಸ್ಥಾನಗಳಷ್ಟೇ ಕಡಿಮೆ ಬಂದದ್ದು ಎನ್ನುವ ಕಾರಣಕ್ಕೆ ಅದರ ಸೋಲು ಸಂಪೂರ್ಣ ಸೋಲಲ್ಲ ಎನ್ನುವ ವಾದ ಮಂಡಿಸುವ ಅವಕಾಶವೇ ಇಲ್ಲ.

ಯಾವುದೇ ಪಕ್ಷ ಸರಳ ಬಹುಮತಕ್ಕಿಂತ ಒಂದು ಸ್ಥಾನವನ್ನಷ್ಟೇ ಹೆಚ್ಚು ಪಡೆದುಕೊಂಡರೂ ಅದಕ್ಕೆ ಸಂಪೂರ್ಣ ಅಧಿಕಾರ ಪ್ರಾಪ್ತವಾಗುವಂತೆ, ಸರಳ ಬಹುಮತಕ್ಕಿಂತ ಒಂದೇ ಒಂದು ಸ್ಥಾನ ಕಡಿಮೆ ಬಂದ ಪಕ್ಷಕ್ಕೆ ಸಂಪೂರ್ಣ ಸೋಲು ಪ್ರಾಪ್ತವಾಗುತ್ತದೆ. ಇದು ವಾಸ್ತವ. ಆದುದರಿಂದ ಅಂದಿನ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಿದ್ದು ಪ್ರಜಾತಂತ್ರದ ಕಗ್ಗೊಲೆ ಎಂದೂ, ಆ ಕಾರಣಕ್ಕೆ ತಾನು ಏನೇ ಮಾಡಿಯಾದರೂ ಅಧಿಕಾರ ಸಂಪಾದಿಸುವುದು ಸರಿಯೆಂದೂ ಬಿಜೆಪಿ ವರ್ತಿಸಿದ್ದನ್ನು ಯಾವ ಅರ್ಥದಲ್ಲಿ ನೋಡಿದರೂ ಸ್ವೀಕರಿಸಲು ಸಾಧ್ಯವಿಲ್ಲ.

ಸಮ್ಮಿಶ್ರ ಸರ್ಕಾರಕ್ಕೆ ಹೋಲಿಸಿದರೆ ಈಗ ಅಸ್ತಿತ್ವಕ್ಕೆ ಬಂದಿರುವುದು ಸಂಪೂರ್ಣವಾದ ಅನೈತಿಕ ಸರ್ಕಾರ. ಮಾತ್ರವಲ್ಲ, ಇದು ಸಂಪೂರ್ಣ ಸಂವಿಧಾನಬಾಹಿರ ಮಾರ್ಗಗಳನ್ನು ಅನುಸರಿಸಿ ಅಧಿಕಾರಕ್ಕೆ ಬಂದ ಸರ್ಕಾರ ಎನ್ನುವ ಸತ್ಯ ಒಂದು ಕ್ಷಣವೂ ಮರೆಯುವಂತಹುದಲ್ಲ. ಮುಂದೆ ಬಿಜೆಪಿ ಉಪಚುನಾವಣೆಗಳನ್ನು ಗೆದ್ದು ಸಂಖ್ಯೆ ಸಂಪಾದಿಸಿಕೊಂಡ ನಂತರವೂ ಸರ್ಕಾರಕ್ಕೆ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಸ್ವೀಕಾರಾರ್ಹತೆ ಪ್ರಾಪ್ತವಾಗುವುದಿಲ್ಲ. ಅದು ಕೇವಲ ತಾಂತ್ರಿಕ ಕಾರಣಕ್ಕೆ ಅಸ್ತಿತ್ವ ಪಡೆದಿರುವ ಸರ್ಕಾರವಾಗಿಯೇ ಉಳಿಯುತ್ತದೆ. ಯಾಕೆಂದರೆ, ಉಪಚುನಾವಣೆಗಳೇ ಅಸಲಿಗೆ ಅನೈತಿಕ ಎನ್ನುವ ಕಾರಣಕ್ಕೆ. ಈ ಸತ್ಯದ ಸಂಕಲೆಯಲ್ಲಿ ಈ ಸರ್ಕಾರವನ್ನು ಸದಾ ಬಂಧಿಸಿಡಬೇಕಿದೆ. ಆದರೆ ಅಂತಹದ್ದೊಂದು ಪ್ರಜ್ಞಾವಂತಿಕೆಯು ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಕಣ್ಮರೆಯಾಗಿಬಿಟ್ಟಿದೆ. ಒಂದು ಗುಲಾಮಿ ಸಾಮ್ರಾಜ್ಯದ ಮುಂದೆ ಪ್ರಜ್ಞಾವಂತ ಜನರೂ ಗುಲಾಮಗಿರಿಯನ್ನು ಒಪ್ಪಿಕೊಂಡಂತೆ ತೋರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.