ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ |
ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ||
ನರನಾರಿಯರ ಪರಸ್ಪರ ಮೋಹದಲಿ ಮಾಯೆ |
ನಿರವಿಸಿಹಳಂಕುಶವ – ಮಂಕುತಿಮ್ಮ || 405 ||

ಪದ-ಅರ್ಥ: ನಿಜೈಕ್ಯ= ನಿಜರೂಪ, ತನ್ನೊಟ್ಟನವನರಸಲೆಚ್ಚರಿಸುತ= ತನ್ನ+ಒಟ್ಟನ್ (ನಿಜರೂಪವನ್ನು)+ ಅವನು+ ಅರಸಲ್ (ಹುಡುಕಾಡಲು)+ ಎಚ್ಚರಿಸಲ್, ನಿರವಿಸಿಹಳಂಕುಶವ= ನಿರವಿಸಿಹಳು (ನಿರ್ಮಿಸಿದ್ದಾಳೆ)+ ಅಂಕುಶವ.

ವಾಚ್ಯಾರ್ಥ: ಪರಬ್ರಹ್ಮ, ದೇಹಭಾವದಲ್ಲಿ ಸೇರಿಕೊಂಡು ತನ್ನ ನಿಜಸ್ವರೂಪವನ್ನು ಮರೆತಾಗ, ತನ್ನ ನೈಜತೆಯನ್ನು ಅವನು ಅರಸಲೆಂದು, ಎಚ್ಚರಿಸಲು, ಮಾಯೆ ನರ-ನಾರಿಯರ ಪರಸ್ಪರ ಮೋಹದ ಅಂಕುಶವನ್ನಿಟ್ಟಿದ್ದಾಳೆ.

ವಿವರಣೆ: ಪರಬ್ರಹ್ಮ ವಸ್ತು ಎಂದಿದ್ದರೂ ಒಂದೇ, ಅದಕ್ಕೆ ಯಾವ ಮೋಹ ಮಾಯೆಯ ಜಂಜಡವಿಲ್ಲ. ಆದರೆ ಪ್ರಪಂಚದ ಸೃಷ್ಟಿಗೆ ಅದು ಕೋಟಿ, ಕೋಟಿ ರೂಪಗಳಲ್ಲಿ ಹೊಮ್ಮಿ ನಿಂತಿತು. ಹಾಗೆಯೇ ದೇಹಭಾವದಲ್ಲಿದ್ದಾಗ ಅದು ಪ್ರಪಂಚದಲ್ಲಿ ಸಂತೋಷವನ್ನು ಪಡುತ್ತಾ, ತಾನೇ ದೇಹವೆಂದು ಭಾವಿಸಿಕೊಂಡು ತನ್ನ ನೈಜಸ್ವರೂಪವನ್ನು ಮರೆಯುತ್ತದಂತೆ. ಭಗವಂತ ನಾರದರನ್ನು ಕೇಳಿದನಂತೆ, ‘ಮನುಷ್ಯರಿಗೆ ಭೂಲೋಕದಲ್ಲಿ ಯಾಕೆ ಅಂಥ ಆಕರ್ಷಣೆ, ಭೂಮಿಯನ್ನು ಬಿಟ್ಟು ಬರಲು ಅಳುತ್ತಾರಲ್ಲ?’. ನಾರದ ಹೇಳಿದ, ‘ಸ್ವಾಮಿ, ನೀನೊಮ್ಮೆ ಹೋಗಿ ನೋಡು’, ಭಗವಂತ ಭೂಮಿಗೆ ಹಂದಿಯಾಗಿ ಬಂದ. ಅವನಿಗೊಬ್ಬ ಹೆಣ್ಣು ಹಂದಿ ಸಂಗಾತಿಯಾಗಿ ಬಂದಳು. ಆಕೆಯ
ರೂಪಕ್ಕೆ, ಒಯ್ಯಾರಕ್ಕೆ ಮಣಿದ ಭಗವಂತ ಆಕೆಯೊಂದಿಗೇ ಇದ್ದ. ಅನೇಕ ಮರಿಗಳಾದವು. ವರ್ಷಗಳು ಕಳೆದವು. ಭಗವಂತನ ಅವಸ್ಥೆ ನೋಡಲು ನಾರದ ಬಂದ. ಕೊಳಚೆಯ ರಾಡಿಯಲ್ಲಿ ಆನಂದವಾಗಿ ಮಲಗಿದೆ ಹಂದಿಯ ಪರಿವಾರ. ನಾರದ ಕೂಗಿದ, ‘ಭಗವಂತ ಏನು ನಿನ್ನ ಅವಸ್ಥೆ? ವೈಕುಂಠವನ್ನು ಬಿಟ್ಟು ಈ ಕೊಳಕಿನಲ್ಲಿ ಹೊರಳಾಡುತ್ತಿದ್ದೀಯಲ್ಲ. ಸಾಕು ಬಾ. ಸ್ವರ್ಗಕ್ಕೆ ಹೋಗೋಣ’. ಭಗವಂತ ಹೇಳಿದ,
‘ಇದು ಎಷ್ಟು ಆನಂದವಾಗಿದೆ. ಇದಕ್ಕಿಂತ ಹೆಚ್ಚಿನ ಸುಖ ಸ್ವರ್ಗದಲ್ಲೇನು ಇದ್ದೀತು?’, ನಾರದ ಭೂಲೋಕದ ಪ್ರೇಮದ ಸೆಳೆತದ ತೀವ್ರತೆಗೆ ಬೆರಗಾದ.

ಕಗ್ಗ ಈ ಕಥೆಯ ಸ್ವಾರಸ್ಯವನ್ನು ಸುಂದರವಾಗಿ ಹೇಳುತ್ತದೆ. ದೇಹ ಭಾವದಲ್ಲಿದ್ದ ಪರಬ್ರಹ್ಮ ತನ್ನ ನೈಜತೆಯನ್ನು ಮರೆದಾಗ, ಅವನನ್ನು ಎಚ್ಚರಿಸಿ, ನೆನಪಿಸಲು ಮಾಯೆ ಒಂದು ಅಂಕುಶವನ್ನು ಬಳಸುತ್ತಾಳೆ. ಆ ಅಂಕುಶವೇ ಪುರುಷ-ಸ್ತ್ರೀಯರ ಮೋಹದ ಬಲೆ. ಪ್ರಪಂಚದಲ್ಲಿ ಅತ್ಯಂತ ತೀವ್ರವಾದ ಆಕರ್ಷಣೆ ಇದು. ಇದರ ಮೋಹದಲ್ಲಿ ಬಿದ್ದ ಮನುಷ್ಯ ಒದ್ದಾಡುತ್ತಾನೆ, ಕಷ್ಟಪಡುತ್ತಾನೆ, ಏನೇನೋ ಕರ್ಮಗಳನ್ನು ಮಾಡುತ್ತಾನೆ. ಅದಕ್ಕೆ ಪಶ್ಚಾತ್ತಾಪಪಟ್ಟು ನರಳುತ್ತಾನೆ. ಆಗ ಈ ಪ್ರಪಂಚದ ನೋವು, ಏಳು-ಬೀಳು ಸಾಕೆನ್ನಿಸುತ್ತದೆ. ಆಗ ಮನಸ್ಸು ಒಳಗೆ ತಿರುಗುತ್ತದೆ, ಆತ್ಮದರ್ಶನವಾಗುತ್ತದೆ. ಇದೊಂದು ದೃಷ್ಟಿ. ಇನ್ನೊಂದು ದೃಷ್ಟಿಯಂತೆ ನರ-ನಾರಿಯರ ಪರಸ್ಪರ ಆಕರ್ಷಣೆಯಿಂದ ಆನಂದ ದೊರಕುವುದು. ಆ ಆನಂದವೂ ಬ್ರಹ್ಮಚೈತನ್ಯವೇ. ಆದ್ದರಿಂದ ಅದರಿಂದಲೂ ಐಕ್ಯತೆ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.