ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |

ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||

ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |

ಪೌರುಷದ ನದಿಯಂತು – ಮಂಕುತಿಮ್ಮ || 535 ||

ಪದ-ಅರ್ಥ: ನೆರೆ=ಪ್ರವಾಹ, ತನ್ನೆದುರಿನಣೆಕಟ್ಟನೊದೆಯುವುದು=ತನ್ನ+ಎದುರಿನ+ಅಣೆಕಟ್ಟನು (ಆಣೆಕಟ್ಟು)+ಒದೆಯುವುದು, ಏರಿಗಳನಿಕ್ಕೆಲದಿ=ಏರಿಗಳನ್ನು (ಬದಿಗಳನ್ನು)+ಇಕ್ಕೆಲದಿ(ಎರಡು ಬದಿಗೆ)

ವಾಚ್ಯಾರ್ಥ: ನೀರಿನ ಪ್ರವಾಹ ತನ್ನ ಮುಂದಿದ್ದ ಆಣೆಕಟ್ಟನ್ನು ಒದೆಯುತ್ತದೆ. ನದಿಯ ಬದಿಗಳನ್ನು ಭದ್ರವಾಗಿ ಕಟ್ಟದಿದ್ದರೆ ಅದು ಊರನ್ನು ಕೊಚ್ಚುವುದು. ಎರಡು ಬದಿಗೂ ಏರಿಗಳನ್ನು ಕಟ್ಟಿದರೆ ಅದು ಒಂದೇ ಸಮನಾಗಿ ಹರಿಯುತ್ತದೆ. ಪೌರುಷದ ನದಿಯ ಹರಿವೂ ಹೀಗೆಯೇ

ವಿವರಣೆ: ನದಿಗೆ ಮಹಾಪೂರ ಬಂದಾಗ ಅದರ ರಭಸ ಭಯ ಹುಟ್ಟಿಸುತ್ತದೆ. 2013 ರಲ್ಲಿ ಕೇದಾರನಾಥ್‌ದಲ್ಲಿ ಆದ ಪ್ರವಾಹದ ಭಯಂಕರತೆಯನ್ನು ನಾವೆಲ್ಲ ಕೇಳಿದ್ದೇವೆ, ದೂರದರ್ಶನದಲ್ಲಿ ಕಂಡಿದ್ದೇವೆ. ಅದೆಂಥ ಶಕ್ತಿ ಆ ನೀರಿಗೆ! ದೇವಸ್ಥಾನವೊಂದನ್ನುಳಿಸಿ ಸುತ್ತಮುತ್ತಲಿನ ಕಟ್ಟಡಗಳನ್ನು, ಸೇತುವೆಗಳನ್ನು ತರಗೆಲೆಗಳಂತೆ ಕಿತ್ತು ಹಾಕಿತು ಪ್ರವಾಹ. ದೊಡ್ಡ ದೊಡ್ಡ ಬಂಡೆಗಳು ಪರ್ವತಶಿಖರಗಳಿಂದ ಉರುಳುರುಳಿ ಬಿದ್ದದ್ದನ್ನು ನೋಡಿದಾಗ ಆ ನೀರಿನ ಶಕ್ತಿಯ ಅರಿವಾಗಿತ್ತು. ಹೀಗೆ ನೀರಿಗೆ ಪ್ರವಾಹ ಬಂದರೆ ಅದು ತನ್ನೆದುರಿಗೆ ಇದ್ದ ಎಲ್ಲ ಅಡೆತಡೆಗಳನ್ನು ಕಿತ್ತು ಹಾಕುತ್ತ ಮುನ್ನಡೆಯುತ್ತದೆ.

ಜುಲೈ 12, 1961 ರ ಹಿಂದಿನ ದಿನ ಭಯಂಕರ ಮಳೆ ಬಿತ್ತು. ಮರುದಿನ ಪುಣೆ ನಗರದ ಪಕ್ಕದಲ್ಲಿದ್ದ ಪಾನ್‌ಶೆಟ್ ಅಣೆಕಟ್ಟು ಒಡೆಯಿತು. ನೀರು ಪುಣೆ ನಗರಕ್ಕೆ ನುಗ್ಗಿ ಮಾಡಿದ ಅನಾಹುತವನ್ನು ಆ ತಲೆಮಾರಿನ ಜನ ಮರೆಯುವುದು ಸಾಧ್ಯವಿಲ್ಲ. ಸಾವಿರಾರು ಜನ ಸತ್ತು ಪುಣೆ ನಗರದ ಮುಕ್ಕಾಲು ಭಾಗ ನೀರಿನಲ್ಲಿ ನಿಂತು ಕಟ್ಟಡಗಳು ಕುಸಿದುಹೋದವು. ಮರಳಿ ಒಂದು ಹಂತಕ್ಕೆ ಬರಲು ನಗರಕ್ಕೆ ಒಂದು ದಶಕವೇ ಬೇಕಾಯಿತು. ನೀರು ಕಾಲುವೆಯಲ್ಲಿ ಹರಿದಾಗ ಎಲ್ಲಿಗೆ ಹೋಗಬೇಕೋ ಅಲ್ಲಿಗೇ ಹೋಗುತ್ತದೆ. ನೀರಿಗೆ ಕಾಲುವೆಯ ಬದಿಗಳಿರದಿದ್ದರೆ ಎಲ್ಲಿ ಬೇಡವೋ ಅಲ್ಲಿಗೇ ಹೋಗಿ ಅಪಾಯವನ್ನುಂಟು ಮಾಡುತ್ತದೆ. ಬದಿಗಳು ಗಟ್ಟಿಯಾಗಿದ್ದರೆ ಮಾತ್ರ ನೀರು ಒಂದೇ ಸಮನೆ ಹರಿಯುತ್ತ ತನ್ನ ಗಮ್ಯವನ್ನು ಸೇರುತ್ತದೆ.

ಮೊದಲ ಮೂರು ಸಾಲುಗಳಲ್ಲಿ ನೀರಿನ ಪ್ರವಾಹದ ಬಗ್ಗೆ ಹೇಳುತ್ತ ಕೊನೆಯ ಸಾಲಿನಲ್ಲಿ ಕಗ್ಗ ಅದನ್ನು ಪೌರುಷಕ್ಕೆ ಹೋಲಿಸುತ್ತದೆ. ನಿಗ್ರಹವಿಲ್ಲದ ನೀರು ಅನಾಹುತ ಮಾಡುವಂತೆ ಸಂಯಮವಿಲ್ಲದ ಪೌರುಷ ಕೂಡ ಭಯಂಕರ ಪರಿಣಾಮಗಳನ್ನು ಮಾಡುತ್ತದೆ. ಪೌರುಷತ್ವದ ಪ್ರವಾಹಕ್ಕೆ ಎರಡು ದಡಗಳು. ಒಂದು ಧರ್ಮ, ಮತ್ತೊಂದು ಸಂಯಮ. ಈ ಎರಡು ಬದಿಗಳು ಗಟ್ಟಿಯಾಗಿದ್ದರೆ ಪೌರುಷತ್ವ, ಧೀಮಂತಿಕೆಯಾಗುತ್ತದೆ. ಅದಕ್ಕೆ ಶ್ರೀರಾಮ ಒಂದು ಸುಂದರ ಉದಾಹರಣೆ. ಅಸಾಮಾನ್ಯ ಶಕ್ತಿ ಇದ್ದರೂ ಆತ ಎಂದಿಗೂ ಅದನ್ನು ಅಶಕ್ತರ ಮೇಲೆ, ಅನುಚಿತ ಸಂದರ್ಭಗಳಲ್ಲಿ ಬಳಸಲಿಲ್ಲ. ಅದಕ್ಕೇ ಅವನು ಮರ್ಯಾದಾ ಪುರುಷೋತ್ತಮನಾದ. ತನ್ನ ಕೋಪ, ಅಸೂಯೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳದ, ಧರ್ಮ, ಸಂಯಮಗಳ ಕಟ್ಟುಗಳನ್ನು ಮೀರಿದ ಅಶ್ವತ್ಥಾಮ, ಶೌರ್ಯವಿದ್ದೂ, ಆತ್ಮಘಾತಕನಾದ. ಧರ್ಮ, ಸಂಯಮಗಳ ದಂಡೆಗಳಿಲ್ಲದ ಪೌರುಷ, ಕ್ರೌರ್ಯವಾಗುತ್ತದೆ, ಭದ್ರ ಬದಿಗಳಿಲ್ಲದ ಪ್ರವಾಹದಂತೆ ಅಪಾಯಕಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.