ಲೋಕಸಭೆ ಚುನಾವಣೆ ಮುಗಿದ ತರುವಾಯ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ದೇಶದ ಗಮನವನ್ನೂ ಸೆಳೆದಿವೆ. ‘ಹೇಳುವುದು ಆಚಾರ, ಮಾಡುವುದು ಅನಾಚಾರ, ಬೀದಿಗೆ ಬಂದು ನಿಂತಿದೆ ಎಲ್ಲರ ಭ್ರಷ್ಟಾಚಾರ’ ಎಂದು ಸರಳ ವಾಕ್ಯದಲ್ಲಿ ಹೇಳಿಬಿಡಬಹುದಾದ ಪರಿಸ್ಥಿತಿಯನ್ನು ರಾಜಕಾರಣಿಗಳು ತಂದುಕೊಂಡಿದ್ದಾರೆ.

ಹಿಂದಿನ ನಾಲ್ಕೈದು ತಿಂಗಳಿನಲ್ಲಿ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ, ಬಡವರ ಕಲ್ಯಾಣ, ಶಿಕ್ಷಣ–ಆರೋಗ್ಯ–ಜನಜೀವನ ಸುಧಾರಣೆಗೆ ಒತ್ತು ಎಂಬಂತಹ ಯಾವ ಪದಗಳೂ ಕೇಳಿಸುತ್ತಲೇ ಇಲ್ಲ. ಬರ–ನೆರೆ ತಂದಿತ್ತ ಅನಾಹುತವು ಯಾವ ರಾಜಕೀಯ ಪಕ್ಷದವರಿಗೂ ಕಾಳಜಿಯ ಸಂಗತಿಯೇ ಆಗಿಲ್ಲ. ಅವರ ಮೇಲೆ ಇವರು ಕಲ್ಲೆಸೆಯುವುದು, ಇವರ ಮೇಲೆ ಅವರು ಕೆಸರು ಎರಚುವುದು– ಇದನ್ನು ಕಂಡು ಜನ ಆಡಿಕೊಳ್ಳುವುದು... ಇಷ್ಟಕ್ಕೇ ಸೀಮಿತವಾಗಿದೆ ರಾಜ್ಯದ ರಾಜಕೀಯ ಬೆಳವಣಿಗೆ. ಒಂದು ಕಾಲದಲ್ಲಿ ಮೌಲ್ಯಾಧಾರಿತ ರಾಜಕಾರಣ, ಜನಕಲ್ಯಾಣ ಎಂಬುದನ್ನು ಮಾತಿನಲ್ಲಾದರೂ ಉಳಿಸಿ ಕೊಂಡ ರಾಜ್ಯವಾಗಿ ಕರ್ನಾಟಕವು ದೇಶದಲ್ಲೇ ಪರಿಗಣಿತ ವಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡಾಗ, ಪಂಚ ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಕಲ್ಯಾಣದ ಕನಸುಗಳು ಗರಿಗೆದರಿದವು. ಆರ್ಥಿಕ ಹಿಂಜರಿತ, ಬರದಿಂದ ಕಂಗೆಟ್ಟ ಜನರಲ್ಲಿ ಹೊಸ ಕಸುವು ತುಂಬಲು ಗ್ಯಾರಂಟಿಗಳು ತಾಯಿಬೇರಾಗಿದ್ದವು. ಹೀಗೆ ಹೊಸ ದಿಕ್ಕಿನತ್ತ ಚಲಿಸಹೊರಟಿತ್ತು ಕರ್ನಾಟಕ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಹೊರಬಂದ ಹೀನಾತಿಹೀನ ಲೈಂಗಿಕ ಹಗರಣಗಳು, ಭ್ರಷ್ಟಾಚಾರದ ಆರೋಪಗಳು ಕರ್ನಾಟಕದ ಮಾನಸಿಕ ಆರೋಗ್ಯಕ್ಕೆ ಕೊಳ್ಳಿ ಇಟ್ಟವು. ಕಲ್ಯಾಣದ ಹೊಂಗನಸುಗಳನ್ನು ಒಂದರ್ಥದಲ್ಲಿ ಹೊಸಕಿ ಹಾಕಿದವು.

ದೇಶಕ್ಕೆ ಪ್ರಧಾನಿಯಾಗಿ ಎಚ್.ಡಿ. ದೇವೇಗೌಡರನ್ನು ಕೊಟ್ಟ ರಾಜಕೀಯ ಕುಟುಂಬದ ಕುಡಿಗಳಿಬ್ಬರ ಲೈಂಗಿಕ ಹಗರಣಗಳು ಸಾರ್ವಜನಿಕ ಜೀವನದಲ್ಲಿ ನೈತಿಕತೆ ಕುಸಿದಿರುವುದನ್ನು ಬಿಂಬಿಸಿದವು. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಾಯಿತು. ಬಿಜೆಪಿ ಶಾಸಕ ಮುನಿರತ್ನ ಪ್ರಕರಣವಂತೂ ‘ವಿಷಕನ್ಯೆ’ಯರನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದ ಪುರಾಣದ ಕತೆಗಳನ್ನು ನೆನಪಿಸಿದವು. ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧವೂ ಅತ್ಯಾಚಾರದ ಆರೋಪದಡಿ ಪ್ರಕರಣ ದಾಖಲಾಯಿತು.

ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಗಳು ಹೊರ
ಬಂದವು. ನಿಗಮದಲ್ಲಿ ನಡೆದ ಅಕ್ರಮದ ಕಾರಣಕ್ಕೆ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಜೈಲಿಗೆ ಹೋದರು. ಮುಡಾ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅವರ ವಿರುದ್ಧ ವಿರೋಧ ಪಕ್ಷಗಳು ‘ಮುಡಾಸ್ತ್ರ’ ಬಳಸುತ್ತಿದ್ದಂತೆ, ಹುತ್ತದಲ್ಲಿ ಅಡಗಿದ್ದ ಒಂದೊಂದೇ ಪ್ರಕರಣ ಬೀದಿಗೆ ಬರತೊಡಗಿತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಕುಟುಂಬ, ಕೋವಿಡ್ ಹಗರಣಗಳನ್ನೆಲ್ಲ ಬೀದಿಗೆ ತಂದು ನಿಲ್ಲಿಸಲಾಯಿತು. ಸಿದ್ದರಾಮಯ್ಯ ಅವರನ್ನು ಬೀದಿಗೆ ತಂದು ನಿಲ್ಲಿಸಬೇಕೆಂಬ ಕುಮಾರಸ್ವಾಮಿ ಅವರ ಹಟ, ಎಲ್ಲರನ್ನೂ ನಡುಬೀದಿಗೆ ತಳ್ಳಿತು.

ಭ್ರಷ್ಟಾಚಾರದ ಪ್ರಕರಣಗಳೆಲ್ಲ ಹೀಗೆ ಏಕಾಏಕಿ ಒಂದೇ ವರ್ಷದಲ್ಲಿ ಹೊರಬಂದಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ಈ ವರ್ಷದ ವರದಿಯಲ್ಲಿ ‘ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1’ ಎಂದು ದಾಖಲಾದರೂ ಅಚ್ಚರಿ ಇಲ್ಲ! ಹಾಗೆಂದು, ರಾಜ್ಯದಲ್ಲಿ ಹಿಂದೆಂದೂ ಭ್ರಷ್ಟಾಚಾರ ಇರಲೇ ಇಲ್ಲವೆಂದಲ್ಲ. ಮುಖ್ಯಮಂತ್ರಿಯಾದ ಬಹುತೇಕರು ಇಂತಹ ಆರೋಪಗಳ ಸುಳಿಯಲ್ಲಿ ಮುಳುಗಿ ಎದ್ದವರೇ. ಆದರೆ ಬಂದ ದುಡ್ಡೆಲ್ಲವೂ ತನ್ನ ಮನೆಯ ತಿಜೋರಿಯನ್ನೇ ಸೇರಬೇಕು ಎಂಬ ಪದ್ಧತಿ ಇಟ್ಟುಕೊಂಡವರಲ್ಲ.

ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಡಿ.ಬಿ. ಚಂದ್ರೇಗೌಡರು ಹೇಳಿದ ಕತೆಯೊಂದು ಹೀಗಿದೆ: ಬಾಲಬ್ರೂಯಿಯಲ್ಲಿ ವಾಸಿಸುತ್ತಿದ್ದ ಅರಸು ಅವರನ್ನು ಒಮ್ಮೆ ಚಂದ್ರೇಗೌಡರು ಕಾಣಲು ಹೋಗಿದ್ದರು. ಅಲ್ಪಸಂಖ್ಯಾತ ಸಮುದಾಯದ ಒಬ್ಬ ಯುವಕ, ಅರಸು ಭೇಟಿಗಾಗಿ ಕಾಯುತ್ತಾ ಕುಳಿತಿದ್ದರು. ಎಷ್ಟು ಹೊತ್ತಾದರೂ ಅರಸು ಅವರು ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಚಂದ್ರೇಗೌಡರನ್ನು ಕಂಡ ಕೂಡಲೇ, ಹೇಗಾದರೂ ಭೇಟಿ ಮಾಡಿಸಿ ಎಂದು ಆ ಯುವಕ ದುಂಬಾಲು ಬಿದ್ದರು. ಗೌಡರು ಇದನ್ನು ತಿಳಿಸಿದಾಗ, ‘ಅವನಿಗೆ ದುಡ್ಡು ಬೇಕಷ್ಟೆ, ಕಾಯಲಿ ಬಿಡು’ ಎಂದು ಅರಸು ಹೇಳಿದರು. ಗೌಡರ ಒತ್ತಾಯದ ಮೇರೆಗೆ ಯುವಕನನ್ನು ಕರೆಸಿಕೊಂಡ ಅರಸು, ತಮ್ಮ ಆಪ್ತ ನಟರಾಜನನ್ನು ಕರೆದು, ‘ಆ ಎರಡು ಬ್ಯಾಗ್ ತಂದುಕೊಡು’ ಎಂದು ಆಜ್ಞಾಪಿಸಿದರು. ಆ ಯುವಕನಿಗೆ ಕೊಟ್ಟ ಬ್ಯಾಗ್ನಲ್ಲಿ ಎಷ್ಟು ಹಣವಿತ್ತೋ ಗೊತ್ತಿಲ್ಲ. ‘ಮತ್ತೆ ಆರು ತಿಂಗಳು ಬರಬೇಡ’ ಎಂದು ಗದರಿದ ಅರಸು ಆತನನ್ನು ಕಳುಹಿಸಿದ್ದರು. ಇಷ್ಟು ಉದಾರಿಯಾಗಿದ್ದ ಅರಸು ಅವರಿಗೆ ಅವರ ಜತೆಗಿದ್ದವರೆಲ್ಲ ‘ನೀವು ಹೇಳಿದರೆ ಹಾಳುಬಾವಿಗೆ ಬೇಕಾದರೂ ಹಾರುತ್ತೇವೆ’ ಎಂದು ಹೇಳುತ್ತಿದ್ದರು. ಆದರೆ ಅರಸು ಸ್ವತಃ ಕಷ್ಟಕ್ಕೆ ಸಿಲುಕಿ ‘ಬಾವಿಗೆ ಬೀಳುವಂತಹ’ ಸನ್ನಿವೇಶ ಎದುರಾದಾಗ, ಅವರೆಲ್ಲ ಬಾವಿಕಟ್ಟೆ ಮೇಲೆ ನಿಂತು ಗಹಗಹಿಸಿ ನಗುತ್ತಿದ್ದರು.

ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಜೆ.ಎಚ್.ಪಟೇಲ್ ಅಧಿಕಾರ ಸ್ವೀಕರಿಸಿದ್ದರು. ಮೊದಲ ದಿನವೇ ಅವರನ್ನು ಭೇಟಿಯಾದ ಅಬಕಾರಿ ಕುಳಗಳು, ‘ಇದನ್ನು ಒಪ್ಪಿಸಿಕೊಳ್ಳಿ’ ಎಂದು ದೊಡ್ಡ ಸೂಟ್ಕೇಸ್ ಒಂದನ್ನು ಮುಂದಕ್ಕೆ ತಳ್ಳಿದರು. ‘ಏನಿದು?’ ಎಂದು ಪಟೇಲರು ಕೇಳಿದಾಗ, ‘ಇಲಾಖೆ ಸಚಿವರಿಗೆ ಕೊಡುವ ಮಾಮೂಲು’ ಎಂದರು. ಸಿಟ್ಟಿಗೆದ್ದ ಪಟೇಲರು ಸೂಟ್ಕೇಸನ್ನು ಝಾಡಿಸಿ ಒದ್ದಿದ್ದರು. ಇದು ಪಟೇಲರೇ ಹೇಳಿದ್ದ ಕತೆ.

‘ಸುಮ್ಮನೆ ಕುಳಿತಿದ್ದರೂ ತಿಂಗಳಿಗೆ ಕನಿಷ್ಠ ₹ 100 ಕೋಟಿ ಬರುತ್ತದೆ. ಸ್ವಲ್ಪ ದಬಾಯಿಸಿ, ಬಡಿಗೆ ಹಿಡಿದರೆ ಬರುವ ಹಣಕ್ಕೆ ಲೆಕ್ಕವೇ ಇರುವುದಿಲ್ಲ. ಹೀಗಿರುವಾಗ ಇನ್ನಷ್ಟು ಹೆಚ್ಚು ದುಡ್ಡು ಏಕೆ ಬೇಕು’ ಎಂದು ಮುಖ್ಯಮಂತ್ರಿ ಆಗಿದ್ದವರೊಬ್ಬರು ಹೇಳುತ್ತಿದ್ದುದು ಉಂಟು. ಆದರೆ, ಈಗ ಕಾಲ ಬದಲಾಗಿದೆ. ಬಹುಕೋಟಿ ವೆಚ್ಚ ಮಾಡದೇ ಚುನಾವಣೆಯನ್ನು ಎದುರಿಸುವ ಪರಿಸ್ಥಿತಿಯೇ ಇಲ್ಲ. ಕೋಟಿಗಟ್ಟಲೆ ಬೆಲೆಬಾಳುವ ಬಂಗಲೆ, ಕಾರು ಹೊಂದಿರುವವರೇ ಮತ ಹಾಕಲು ಹಣಕ್ಕಾಗಿ ಕೈಯೊಡ್ಡುವ ದುರ್ದಿನಗಳಲ್ಲಿ ಹಣವಿಲ್ಲದೆ ಚುನಾವಣೆ ಎದುರಿಸುವುದಾದರೂ ಹೇಗೆ? ಇದು ಭ್ರಷ್ಟಾಚಾರಕ್ಕೆ ಸಮರ್ಥನೆಯಲ್ಲ. ವ್ಯವಸ್ಥೆಯನ್ನು ಸರಿದಾರಿಗೆ ತರುವ ಕುರಿತು ಚರ್ಚೆಯಾಗದೇ, ರಾಜಕಾರಣಿಗಳು ಮಾತ್ರ ಭ್ರಷ್ಟರಾಗಬಾರದು ಎಂದು ಹೇಳುವುದಕ್ಕೆ ಅರ್ಥವೇ ಇರುವುದಿಲ್ಲ.

ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ ಕಟ್ಟಿದ ಶಾಂತವೇರಿ ಗೋಪಾಲಗೌಡ ಅವರು ಮೂರು ಬಾರಿ ಶಾಸಕರಾಗಿದ್ದವರು. ನಿವೇಶನ, ಮನೆ ಯಾವುದೂ ಅವರಿಗೆ ಇರಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದವರು, ಮನೆ ಕೊಡುವುದಾಗಿ ಹೇಳಿದರು. ‘ನನ್ನ ಕ್ಷೇತ್ರದಲ್ಲಿನ ಜನ ಸೇರಿದಂತೆ ರಾಜ್ಯದಲ್ಲಿ ಹಲವರಿಗೆ ಮನೆ–ನಿವೇಶನ ಯಾವುದೂ ಇಲ್ಲ. ಅವರೆಲ್ಲರಿಗೂ ಕೊಟ್ಟ ಮೇಲೆ ನನಗೆ ಕೊಡಿ’ ಎಂದು ಶಾಂತವೇರಿ ಹೇಳಿದ್ದರು. ಈಗಿನ ಸಮಾಜವಾದಿಗಳ ಕತೆ?

ಈಗಂತೂ ಪೈಪೋಟಿಗೆ ಬಿದ್ದವರಂತೆ ಒಬ್ಬರ ಮೇಲೊಬ್ಬರು ಪ್ರಕರಣ ದಾಖಲಿಸುವ ಉಮೇದಿನಲ್ಲಿದ್ದಾರೆ. ಯಾರೂ ಸತ್ಯ ಹರಿಶ್ಚಂದ್ರರಲ್ಲ, ಎಲ್ಲರೂ ಒಬ್ಬರನ್ನೊಬ್ಬರು ಕಾಡುವ ನಕ್ಷತ್ರಿಕರೇ. ಮೇಲೆ ಕುಳಿತು ಆಡಿಸುತ್ತಿರುವವರು ನಕ್ಷತ್ರಿಕನನ್ನು ಛೂ ಬಿಟ್ಟ ‘ವಿಶ್ವಾಮಿತ್ರ’ರಷ್ಟೆ.

‘ಸಿದ್ದರಾಮಯ್ಯನವರನ್ನು ಇಳಿಸಿಯೇ ಸಿದ್ಧ’ ಎಂದು ಕುಮಾರಸ್ವಾಮಿ, ವಿಜಯೇಂದ್ರ ಹಾಗೂ ಕೆಲವು ಕಾಂಗ್ರೆಸ್ಸಿಗರು ಸ್ಪರ್ಧೆಗಿಳಿದಿದ್ದಾರೆ. ಸಿದ್ದರಾಮಯ್ಯ ಅಧಿಕಾರದಿಂದ ಇಳಿದರೆ ಇಳಿಯಲಿ, ಅದು ಅವರಿಗೆ, ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಆದರೆ, ಅವರ ಜಾಗದಲ್ಲಿ ಕೂರುವಂತಹ ಸತ್ಯ ಹರಿಶ್ಚಂದ್ರ ಯಾವ ಪಕ್ಷದಲ್ಲಿದ್ದಾರೆ? ಎಲ್ಲರ ಬಳಿ ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಇರುವಂತೆ, ಅಷ್ಟೇ ಕಾಲ ಎದುರಿಸಬೇಕಾದ ಪ್ರಕರಣಗಳೂ ಇವೆ. ಕಾಂಗ್ರೆಸ್ನಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ಒಬ್ಬರು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದರೆ, ಮತ್ತೆ ಕೆಲವರು ಆದಾಯ ತೆರಿಗೆಯ ದಾಳಿಗೆ ಒಳಗಾದವರು. ಒಂದಿಬ್ಬರ ಮೇಲಷ್ಟೇ ಪ್ರಕರಣ ಇರಲಿಕ್ಕಿಲ್ಲ.

ಹಾಗಿದ್ದರೂ, ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆ ಬಲವಾಗಿದೆ. ಭ್ರಷ್ಟಾಚಾರ ಮತ್ತು ಅಧಿಕಾರ ರಾಜಕಾರಣ ಒಂದಕ್ಕೊಂದು ಬೆಸೆದುಕೊಂಡು ವಿಜೃಂಭಿಸುತ್ತಿರುವ ಹೊತ್ತಿನೊಳಗೆ, ಭವಿಷ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ‘ಸಜ್ಜನ’ರೊಬ್ಬರ ಹುಡುಕಾಟವೇ ದೊಡ್ಡ ವ್ಯಂಗ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.