ಅಧಿಕಾರವೆಂಬೋ ಶಕ್ತಿಕೇಂದ್ರದ ಮಗ್ಗುಲಲ್ಲೇ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಈಗ ರಾಜ್ಯ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ವೀರಶೈವ–ಲಿಂಗಾಯತರ ‘ಸರ್ವೋಚ್ಚ ನಾಯಕ’ ಎಂಬ ಯಡಿಯೂರಪ್ಪನವರ ಹಣೆಪಟ್ಟಿ ತೆಗೆದೊಗೆಯುವುದು; ಆ ಜಾಗದಲ್ಲಿ ಮತ್ತೊಬ್ಬರನ್ನು ಸೃಷ್ಟಿಸಿ ಲಿಂಗಾಯತರ ಸಂಭಾವ್ಯ ಬಂಡಾಯವನ್ನು ಹೊಸಕಲು ಬಿಜೆಪಿ ವರಿಷ್ಠರು ಬೊಮ್ಮಾಯಿ ಅವರಿಗೆ ಅವಕಾಶ ಕೊಟ್ಟರು. ಬಯಸದೇ ಲಾಬಿ ಮಾಡದೇ ಅಯಾಚಿತವಾಗಿ ಮುಖ್ಯಮಂತ್ರಿ ಸ್ಥಾನ ದಕ್ಕಿದೆ.

ಅವರ ಈ 20 ತಿಂಗಳ ಅವಧಿಯ ದಾರಿಗುಂಟ ಕತ್ತಲೇ ಆವರಿಸಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಬೊಮ್ಮಾಯಿ, ‘ನನ್ನನ್ನು ಹಲವರು ಅನುಮಾನದಿಂದ ನೋಡುತ್ತಿದ್ದಾರೆ. ಹಲವರು ಟೀಕೆಗಳನ್ನೂ ಮಾಡುತ್ತಿದ್ದಾರೆ. ಅನುಮಾನ, ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳುವೆ’ ಎಂದಿದ್ದಾರೆ.

ಆದರೆ, ಅದು ಅಷ್ಟು ಸಲೀಸಲ್ಲ. ಈ ಸರ್ಕಾರವೇ ‘ವಲಸಿಗ’ರ ಊರುಗೋಲಿನ ಮೇಲೆ ನಿಂತಿರುವುದು. ‘ಲಾಭದಾಯಕ’ ಖಾತೆಯೇ ಬೇಕೆಂಬ ವಲಸಿಗರು ಹಾಗೂ ಮೂಲನಿವಾಸಿಗಳ ಹುಯಿಲು ಆರಿಲ್ಲ. ಸಚಿವ ಸ್ಥಾನ ಸಿಗದ ಅತೃಪ್ತರ ಸಂಖ್ಯೆಯೂ ದೊಡ್ಡದಾಗಿಯೇ ಇದೆ. ಮೈತ್ರಿ ಸರ್ಕಾರ ಕೆಡವಲು ಕಾರಣಕರ್ತರಾದ ರಮೇಶ ಜಾರಕಿಹೊಳಿ ಕುಟುಂಬ, ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ ಅವರೆಲ್ಲ ಸರ್ಕಾರದ ಭಾಗವಾಗಿಲ್ಲ. ಹೊರಗಿದ್ದುಕೊಂಡೇ ಅವರು ನಡೆಸಬಹುದಾದ ಕಾರ್ಯಾಚರಣೆಯ ಭಯವೆಂಬ ತಂತಿಯ ಮೇಲಿನ ನಡಿಗೆಯನ್ನು ಬೊಮ್ಮಾಯಿ ಮಾಡಬೇಕಿದೆ. ಚುನಾವಣೆ ಹತ್ತಿರವಾಗುತ್ತಿರುವಾಗ ಅನುದಾನದ ಬೇಡಿಕೆ ಹೊತ್ತೇ ಶಾಸಕರು ಬರುತ್ತಾರೆ. ಸಂಪನ್ಮೂಲವೇ ಬರಿದಾಗಿರುವ ಕಾಲದೊಳಗೆ ಅವರ ‘ಮೂಟೆ’ ತುಂಬಿಸದಿದ್ದರೆ ಅತೃಪ್ತಿ ಸುಡುಬೆಂಕಿಯಾಗುತ್ತದೆ.

ಯಡಿಯೂರಪ್ಪ ಮತ್ತು ಅವರ ಕುಟುಂಬ ಅಧಿಕಾರದ ಅಂಚಿನಿಂದಾಚೆಗಿದೆ. ಮಗನಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಸಿಟ್ಟನ್ನು ಒಡಲೊಳಗೆ ಇಟ್ಟುಕೊಂಡಿರುವ ಯಡಿಯೂರಪ್ಪ ಸುಮ್ಮನೆ ಕೂರುವ ಜಾಯಮಾನದವರಲ್ಲ. ಆರು ತಿಂಗಳ ಬಳಿಕ ಅವರು ಬುಸುಗುಡತೊಡಗಿದರೆ ಬೊಮ್ಮಾಯಿ ಅದುರಿ ಹೋಗಬೇಕಾಗುತ್ತದೆ. ಇರುವ ಅಲ್ಪಾವಧಿಯಲ್ಲಿ, ಭ್ರಷ್ಟಾಚಾರರಹಿತ ಆಡಳಿತ ಕೊಡುವ ಜತೆಗೆ, ಜತೆಗಿರುವವರನ್ನೆಲ್ಲ ಸಂಭಾಳಿಸ ಬೇಕಾಗಿದೆ. ಇವೆಲ್ಲವನ್ನೂ ನೀಗಿಸಿ, ಚುನಾವಣೆ ಹೊತ್ತಿಗೆ ಜನರ ವಿಶ್ವಾಸ ಗಳಿಸುವ ನಿಜದ ಸವಾಲು ಬೊಮ್ಮಾಯಿ ಅವರ ಮುಂದಿದೆ.

ಈ ಹಿಂದಿನ ಎರಡು ವರ್ಷದ ಸರ್ಕಾರ ಭ್ರಷ್ಟಾಚಾರವನ್ನೇ ಹಾಸಿ–ಹೊದ್ದು ಮಲಗಿತ್ತು. ಕೈ ಚಾಚಿದ ಕಡೆಯೆಲ್ಲ ಕಾಸು ಗಿಂಜುವ ಮಂದಿಯೇ ಹೆಚ್ಚಾಗಿದ್ದರಿಂದಾಗಿ ಆಡಳಿತ ಹದ ತಪ್ಪಿ ಅರಾಜಕತೆ ಮೂಡಿತ್ತು. ಕೋವಿಡ್ ತಂದಿತ್ತ ಆಘಾತದ ಜತೆಗೆ, ಆಡಳಿತದ ಹಿಡಿತ ತಪ್ಪಿದ್ದರಿಂದಾಗಿ ಆರ್ಥಿಕತೆ ದಿವಾಳಿ ಅಂಚಿಗೆ ತಲುಪಿತ್ತು.

ರಾಜ್ಯದ ಜಿಎಸ್‌ಡಿಪಿ 2019ರಲ್ಲಿ ₹ 12,03,031 ಕೋಟಿ ತಲುಪಿ ಶೇ 6.8ರಷ್ಟು ಬೆಳವಣಿಗೆ ಕಂಡಿದ್ದರೆ, 2020ರಲ್ಲಿ ಇದು 11,13,818 ಕೋಟಿಗೆ ಇಳಿದು ಶೇ –2.6ಕ್ಕೆ ಕುಸಿದು ಬೀಳುವತ್ತ ಸಾಗಿತ್ತು. ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇ 3.9ರಿಂದ ಶೇ 6.4ಕ್ಕೆ ಏರಿಕೆಯಾಗುವ ಲಕ್ಷಣ ಕಾಣಿಸಿತ್ತು. ಆದರೆ, ಉದ್ಯೋಗ ಸೃಷ್ಟಿಯ ಬಹುಮುಖ್ಯ ವಲಯಗಳಾದ ಕೈಗಾರಿಕೆಯಲ್ಲಿ ಶೇ 4.8ರಷ್ಟಿದ್ದುದು ಶೇ –5.1 ಹಾಗೂ ಸೇವಾ ವಲಯದಲ್ಲಿ ಶೇ 7.8ರಿಂದ ಶೇ –3.1ಕ್ಕೆ ಧಸಕ್ಕನೇ ಇಳಿಕೆಯತ್ತ ಸಾಗಿರುವುದನ್ನು ಸರ್ಕಾರವೇ ತನ್ನ ವರದಿಯಲ್ಲಿ ಹೇಳಿದೆ.

ಇಂಥ ದುರಿತ ಕಾಲದಲ್ಲಿ ಅಧಿಕಾರ ಹಿಡಿದ ಬೊಮ್ಮಾಯಿ, ಆಡಳಿತವನ್ನು ಹಳಿಗೆ ತರುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕುರ್ಚಿಯಲ್ಲಿ ಕುಳಿತ ದಿನದಿಂದ ಅವರು ಕೈಗೊಳ್ಳುತ್ತಿರುವ ನಿರ್ಧಾರಗಳ ಹಿಂದೆ ಜನತಾ ಪರಿವಾರದ ಛಾಯೆ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕೊಟ್ಟಂತೆ ಬೊಮ್ಮಾಯಿ ಅವರು ಮೊದಲ ದಿನವೇ ರೈತ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು, ವೃದ್ಧರ ಪಿಂಚಣಿ ಮೊತ್ತ ಹೆಚ್ಚಳದಂತಹ ಯೋಜನೆ ಘೋಷಿಸಿದ್ದಾರೆ. ಜನರಿಗೆ ತೊಂದರೆ ಕೊಡಲು ಇದ್ದಂತಿರುವ ಝೀರೊ ಟ್ರಾಫಿಕ್ ವ್ಯವಸ್ಥೆಯನ್ನು ಸರಳಗೊಳಿಸಲು ಸೂಚಿಸಿದ್ದಾರೆ. ಸರ್ಕಾರಿ ಸಮಾರಂಭಗಳಲ್ಲಿ ಹಾರ–ತುರಾಯಿಗಳ ಬದಲು ಕನ್ನಡ ಪುಸ್ತಕ ನೀಡುವ ಪದ್ಧತಿಗೆ ಚಾಲನೆ ಕೊಟ್ಟಿದ್ದಾರೆ.

ಆರು ಜನ ಮುಖ್ಯಮಂತ್ರಿಗಳ ನಿಕಟ ಒಡನಾಟ, 7 ಮುಖ್ಯಮಂತ್ರಿಗಳ ಆಡಳಿತ ವೈಖರಿಯ ಪ್ರತ್ಯಕ್ಷ ಅನುಭವ ಬೊಮ್ಮಾಯಿ ಅವರಿಗಿದೆ. ಕಳೆ ಅಂಟಿದ್ದ ಸರ್ಕಾರದ ವರ್ಚಸ್ಸಿಗೆ ಒಂದಿಷ್ಟು ಹೊಳಪು, ಹೊಸ ಕಸುವು ತಂದು ಕೊಡಲು ಬೊಮ್ಮಾಯಿ ಅವರಂತಹ ಅನುಭವಿ ಬೇಕು ಎಂಬುದು ಬಿಜೆಪಿ ವರಿಷ್ಠರ ಅಪೇಕ್ಷೆ ಇದ್ದೀತು. ಅದೇ ಹೊತ್ತಿಗೆ, ಪಕ್ಷದ ಮೂಲ ಕಾರ್ಯಸೂಚಿ ಆಗಿರುವ ‘ಹಿಂದುತ್ವ’ದ ಅಮಲನ್ನು ಸಮಾಜದ ದಶದಿಕ್ಕಿಗೆ ಹಂಚಲು ಅದೇ ವರಿಷ್ಠರು ಕೆಲವು ನಾಯಕರಿಗೆ ಸೂಚನೆ ಕೊಟ್ಟಂತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೊರಸೂಸುತ್ತಿರುವ ಮಾತುಗಳು ಅದಕ್ಕೆ ಸಾಕ್ಷಿಯಂತಿವೆ. ಮತ್ತೆ ಅಧಿಕಾರಕ್ಕೆ ಬರಲು ಒಳ್ಳೆಯ ಆಡಳಿತ ನೀಡುವುದರ ಜತೆಗೆ ಕೋಮು ಹಗೆ ಬಿತ್ತುವುದು ಅನಿವಾರ್ಯ ಎಂಬುದು ಬಿಜೆಪಿಯ ನಂಬಿಕೆ ಇದ್ದಂತಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕ, ಅಂತಹ ದ್ವೇಷದ ರಾಜಕಾರಣಕ್ಕೆ ಒಗ್ಗಿಕೊಳ್ಳುವುದಿಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಹಾಗಿದ್ದರೂ ಮತ್ತೆ ಎರಡು ದೋಣಿಗಳ ಮೇಲೆ ಬಿಜೆಪಿ ಕಾಲಿಟ್ಟಿರುವುದೇಕೆ?

ಒಳ್ಳೆಯ ಆಡಳಿತ ಕೊಡಬೇಕೆಂಬ ಬೊಮ್ಮಾಯಿ ಅವರ ಅಪೇಕ್ಷೆಗೆ ‘ಕೂಗುಮಾರಿ’ಗಳ ಮಾತು ಮುಳುವಾದೀತು. ಕೋಮುದ್ವೇಷವನ್ನೇ ಮೈ ಉಸಿರಾಗಿಸಿ ಕೊಂಡ ಉತ್ತರಪ್ರದೇಶ, ಅಭಿವೃದ್ಧಿ ಘೋಷಣೆಯ ಹುಸಿ ಮಾದರಿಯೊಂದನ್ನು ಬಿಂಬಿಸಿಕೊಂಡ ಗುಜರಾತ್, ಔದ್ಯಮಿಕ ಭ್ರಷ್ಟಾಚಾರಕ್ಕೆ (ಕಾರ್ಪೊರೇಟ್ ಕರಪ್ಷನ್) ಬಾಯ್ತೆರೆದುಕೊಂಡ ಕೇಂದ್ರದ ಮಾದರಿ ಹೀಗೆ ಬಿಜೆಪಿಯಲ್ಲಿ ಮೂರು ಮಾದರಿಗಳು ಚಾಲ್ತಿಯಲ್ಲಿವೆ. ಕರ್ನಾಟಕದ್ದೇ ಆದ ಹಲವು ಮಾದರಿಗಳನ್ನು ನಮ್ಮವರೇ ಬಿಟ್ಟು ಹೋಗಿದ್ದಾರೆ. ಬಿಜೆಪಿಯ ಸಿದ್ಧಮಾದರಿಯಲ್ಲದೇ, ತಮ್ಮ ಅನುಭವದಿಂದಲೇ ಕರ್ನಾಟಕದ್ದೇ ಒಂದು ಮಾದರಿಯನ್ನು ಬೊಮ್ಮಾಯಿ ತೋರಿಸಿದರೆ ನಾಡ ಭವಿಷ್ಯ ಉಜ್ವಲವಾದೀತು, ಬಿಜೆಪಿಯ ಮುಂದಿನ ಸರ್ಕಾರಗಳಿಗೆ ದಾರಿಯೂ ಕಂಡೀತು.

ಜೀವನಕ್ಕೆ ತಮ್ಮದೇ ಉದ್ಯಮ ಇದೆ, ಅದಕ್ಕಾಗಿ ಅಧಿಕಾರವನ್ನು ನೆಚ್ಚಿಕೊಳ್ಳಬೇಕಿಲ್ಲ, ಉತ್ತಮ ಆಡಳಿತ ನೀಡಬೇಕು ಎಂಬುದಷ್ಟೇ ತಮ್ಮ ಅಪೇಕ್ಷೆ ಎಂದು ಬೊಮ್ಮಾಯಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದುಂಟು. ಅದು ಮಾತಿನಲ್ಲೇ ಉಳಿಯದೆ ಕಾರ್ಯರೂಪಕ್ಕೆ ಬರ ಬೇಕು. ಸರ್ಕಾರವೆಂದರೆ ಮುಖ್ಯಮಂತ್ರಿ ಮಾತ್ರವಲ್ಲ; ಅವರ ಸಂಪುಟದಲ್ಲಿರುವ ಸಚಿವರು, ಅಧಿಕಾರಿಗಳೂ ಸೇರುತ್ತಾರೆ. ಸಚಿವಾಲಯದಿಂದ ಕೊನೇ ಹಂತದ ಗ್ರಾಮಪಂಚಾಯಿತಿಯವರೆಗೆ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಎಂಬ ಬೃಹನ್ಮರವನ್ನು ಬೇರು ಸಮೇತ ಕಿತ್ತೊಗೆಯಲು ಮುಂದಾಗಲಿ. 2018ರ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಎಸಿಬಿ ರದ್ದುಪಡಿಸಿ, ಲೋಕಾಯುಕ್ತಕ್ಕೆ ಬಲ ನೀಡುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಲಿ.

‘ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು/ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?/ಲಜ್ಜೆಗೆಡಲೇಕೆ? ನಾಣುಗೆಡಲೇಕೆ?/ ಕೂಡಲಸಂಗಮದೇವನುಳ್ಳನ್ನಕ್ಕ/ಬಿಜ್ಜಳನ ಭಂಡಾರವೆನಗೇಕಯ್ಯಾ?’

ಎಂಬ ವಚನವು, ತಮ್ಮ ಹೆಸರಿನಲ್ಲೇ ಬಸವಣ್ಣರನ್ನು ಜೋಡಿಸಿಕೊಂಡಿರುವ ಬೊಮ್ಮಾಯಿಗೆ ಆದರ್ಶವಾಗಲಿ.

ಒಂದೂರಿನಲ್ಲಿ ಒಬ್ಬ ದೋಣಿ ನಡೆಸುವಾತನಿದ್ದ. ಒಮ್ಮೆ ಹೊಳೆ ದಾಟಿಸಿದರೆ 25 ಪೈಸೆ ಪಡೆಯುತ್ತಿದ್ದ. ತಮ್ಮ ಸರಕು ಸಾಗಾಣಿಕೆಗೆ, ಕೋಳಿ–ಕುರಿ ದಾಟಿಸಲು ದೋಣಿಯನ್ನೇ ನೆಚ್ಚಿಕೊಂಡಿದ್ದ ಜನರಿಗೆ ಸದಾ ತಕರಾರು ಮಾಡುತ್ತಿದ್ದ. ಆತ ಮೃತನಾದ ಬಳಿಕ ಅವನ ಮಗ ಆ ಸ್ಥಾನಕ್ಕೆ ಬಂದವನೇ ಶುಲ್ಕವನ್ನು 50 ಪೈಸೆಗೆ ಏರಿಸಿದ. ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದ. ದೋಣಿಯನ್ನೇ ನಂಬಿದ ಜನ, ‘ಈ ಮಾಣಿಗಿಂತ ಇವರ ಅಪ್ಪನೇ ವಾಸಿ ಮಾರಾಯ. ಆ ಕಾಲ ಎಷ್ಟೋ ಚೆನ್ನಾಗಿತ್ತು’ ಎಂದು ದೋಣಿಯಲ್ಲೇ ಕುಳಿತು ಬೈಯತೊಡಗಿದರು. ಆಳುವವರಿಗೆ ಈ ಕತೆ ಪಾಠವಾದರೆ ಎಷ್ಟು ಚೆನ್ನ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.