ಬಸವಣ್ಣ ತನ್ನದೊಂದು ವಚನದಲ್ಲಿ, ‘ಇವನಾರವ ಇವನಾರವ ಎನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಎನ್ನಿರಯ್ಯ...’ ಎಂದು ಹೇಳುತ್ತಾನೆ. ನಾಥೂರಾಮ ವಿನಾಯಕ ಗೋಡ್ಸೆಯನ್ನು ನಮ್ಮವನು ಎಂದು ಸ್ವೀಕರಿಸಿ ಅವನ ವಿಚಾರಗಳನ್ನು ವಿಮರ್ಶೆ ಮಾಡಲು ಬಯಸುತ್ತೇನೆ.

ಮೇಲೆ ಉದ್ಧರಿಸಿದ ವಚನವು ಮಹತ್ತರವಾದದ್ದು. ವಿಶಾಲವಾದ ಅರ್ಥವಿನ್ಯಾಸ ಉಳ್ಳದ್ದು. ಲಿಂಗಾಯತದ ಸೀಮಿತ ಸಂದರ್ಭದಲ್ಲಿ ಈ ವಚನವು ಲಿಂಗಾಯತರಲ್ಲದವರೂ ನಮ್ಮವರೇ ಸರಿ ಎಂಬ ಹೃದಯ ವೈಶಾಲ್ಯವನ್ನು ತೋರಿದರೆ, ವಿಶಾಲಾರ್ಥದಲ್ಲಿ ಯಾವುದೇ ಸಮಾಜವು ತನ್ನ ಪ್ರಜೆಗಳನ್ನು ಇವನಾವ ಧರ್ಮದವ, ಇವನಾವ ಜಾತಿಯವ, ಇವಳೆಷ್ಟು ಶ್ರೀಮಂತಳು ಎಂಬ ಭೇದಭಾವ ಎಣಿಸದೆ ಸಮಾನ ಪ್ರೀತಿಯಿಂದ ಕಾಣಬೇಕು ಎಂದು ಸೂಚಿಸುತ್ತದೆ. ಆದರೆ ಭೇದಭಾವ ಅಥವಾ ಪ್ರತ್ಯೇಕತಾ ಭಾವ ಇದ್ದದ್ದೇ. ಒಳ್ಳೆಯ ಸಮಾಜದಲ್ಲೂ ಅದು ಇದ್ದದ್ದೇ. ಎಲ್ಲರನ್ನೂ ಸಮಾನವಾಗಿ ಕಾಣುವುದು ಅಷ್ಟು ಸುಲಭವಲ್ಲ. ಭೇದವನ್ನು ನಿಗ್ರಹಿಸುವ ಮೂಲಕ, ಮತ್ತೆ ಮತ್ತೆ ನಿಗ್ರಹಿಸುವ ಮೂಲಕ, ಶತ್ರುವನ್ನೂ ಮಿತ್ರನಂತೆ ಕಾಣುವ ಮೂಲಕ ಸಮಾನತೆ ಸಾಧಿಸಬೇಕು. ಪ್ರಯತ್ನಿಸಬೇಕು. ಪ್ರಯತ್ನದಲ್ಲಿ ಸೋಲಬೇಕು. ಆದರೂ ಪ್ರಯತ್ನಿಸಬೇಕು. ಪ್ರೀತಿಪೂರ್ವಕ ಪ್ರಯತ್ನದ ಮೂಲಕ ಮಾತ್ರವೇ ಮಾನವನು ಮಾನವನಾಗಬಲ್ಲನು, ಸಮುದಾಯಗಳು ಸಮುದಾಯಗಳಾಗಬಲ್ಲವು, ರಾಷ್ಟ್ರಗಳು ರಾಷ್ಟ್ರಗಳಾಗಬಲ್ಲವು. ಸಂತರೂ ಹೆಚ್ಚೂ ಕಡಿಮೆ ಇದೇ ಆಶಯವನ್ನು ಧ್ವನಿಸುತ್ತಾರೆ. ಗಾಂಧೀಜಿ ಕೂಡ ಇದೇ ಆಶಯವನ್ನು ಧ್ವನಿಸುತ್ತಾರೆ.

ನಿಮಗೆಲ್ಲ ತಿಳಿದಿರಬಹುದು. ಗಾಂಧಿಯನ್ನು ನಾಥೂರಾಮ ಕೊಂದ, ಎಲ್ಲರೂ ನಮ್ಮವರು ಎಂಬ ವಿಚಾರವನ್ನು ಒಪ್ಪಲಾರದ್ದಕ್ಕಾಗಿ ಕೊಂದ. ತಮಾಷೆಯೆಂದರೆ ವಿಚಾರವನ್ನು ಒಪ್ಪದೆಯೂ ಇರಲಾರ ಅವನು. ‘ಧಾರ್ಮಿಕವಾಗಿ ಒಪ್ಪುತ್ತೇನೆ, ಆದರೆ ಲೌಕಿಕವಾಗಿ ಒಪ್ಪಲಾರೆ’ ಎಂಬ ದ್ವಂದ್ವಾತ್ಮಕ ನಿಲುವು ತಾಳಿದ. ಲೌಕಿಕ ಬೇರೆ, ಧಾರ್ಮಿಕ ಬೇರೆ ಎಂಬ ಈ ಅಪಾಯಕಾರಿ ದ್ವಂದ್ವವು ಅವನನ್ನು ಮಾತ್ರವಲ್ಲ, ನಮ್ಮನ್ನೆಲ್ಲ ಕಾಡಿದೆ. ಇದೊಂದು ವಿಚಿತ್ರ ದ್ವಂದ್ವ. ‘ಗಾಂಧಿ ವಧೆ ಏಕೆ ಮಾಡಿದೆ’ ಎಂಬ ಪುಸ್ತಕದಲ್ಲಿ ತನ್ನ ಈ ದ್ವಂದ್ವವನ್ನು ತನ್ನದೇ ರೀತಿಯಲ್ಲಿ ಹೊರಹಾಕಿದ್ದಾನೆ ನಾಥೂರಾಮ. ‘ಸಂತ ಗಾಂಧಿಯ ಕಾಲಿಗೆ ನಮಸ್ಕರಿಸಿದೆ, ರಾಜಕಾರಣಿ ಗಾಂಧಿಯ ಎದೆಗೆ ಗುಂಡಿಕ್ಕಿದೆ’ ಎನ್ನುತ್ತಾನೆ ನಾಥೂರಾಮ. ಲೌಕಿಕ ಹಾಗೂ ಧಾರ್ಮಿಕವನ್ನು ಅಥವಾ ರಾಜಕಾರಣ ಹಾಗೂ ನೈತಿಕತೆಗಳನ್ನು ಸಮನ್ವಯಗೊಳಿಸಬೇಕೆಂಬ ಗಾಂಧಿಮಾರ್ಗ ರಾಜಕಾರಣವಾಗಿ ಕಾಣಿಸಿತ್ತು ನಾಥೂರಾಮನಿಗೆ. ತಾನು ಶತ್ರುವೆಂದು ಪರಿಗಣಿಸಿದ್ದ ಮುಸಲ್ಮಾನರನ್ನು ಗಾಂಧೀಜಿ ಮಿತ್ರರೆಂದು ಪರಿಗಣಿಸುತ್ತಾರೆ ಎಂಬ ಸಿಟ್ಟಿತ್ತು ಅವನಿಗೆ.

ದ್ವಂದ್ವವು ಧರ್ಮಗಳಲ್ಲಿಯೇ ಅಡಗಿದೆ. ತಮ್ಮ ದೇವರೇ ಜಗತ್ತಿನ ದೇವರು, ತಮ್ಮ ಬೇಲಿಯೇ ಜಗತ್ತಿನ ಬೇಲಿ ಎಂದು ತಿಳಿಯುತ್ತವೆ ಹೆಚ್ಚಿನ ಧರ್ಮಗಳು. ಹಾಗೆಂದೇ, ತಾಲ್ಲೂಕು ಮಟ್ಟದ ಧರ್ಮಗುರುವೂ ತನ್ನನ್ನು ಜಗದ್ಗುರು ಎಂದೇ ಕರೆದುಕೊಳ್ಳುತ್ತಾನೆ. ಅದರೆ ಅನಾದಿ ಕಾಲದಿಂದಲೂ ಒಂದಕ್ಕಿಂತ ಹೆಚ್ಚು ಧರ್ಮಗಳು ಒಂದರ ಪಕ್ಕ ಒಂದು ನಿಂತಿವೆ. ಒಂದೇ ಜಾಗಕ್ಕೆ ಬೇಲಿ ಹಾಕಲು ಹೊರಟು ಸೆಣಸಾಡಿವೆ. ರಕ್ತ ಹರಿಸಿವೆ. ಇದು ಏಕೆ ಹೀಗಾಗುತ್ತದೆಂದರೆ, ಧರ್ಮಗಳಿಗೆ ಎರಡು ಆಯಾಮಗಳಿವೆ. ಒಂದು ಜಂಗಮವಾದರೆ ಮತ್ತೊಂದು ಸ್ಥಾವರ. ಒಂದು ಆಶಯವಾದರೆ, ಮತ್ತೊಂದು ಆಕಾರ. ಆಶಯವು ಹರಡಲು ಬಯಸುತ್ತದೆ. ಆಕಾರವು ಆಶಯವನ್ನು ಬೇಲಿಯೊಳಗೆ ಮಿತಿಗೊಳಿಸಲು ಬಯಸುತ್ತದೆ. ಪ್ರಾಯಶಃ, ಬೌದ್ಧ ಧರ್ಮ ಒಂದೇ ಆಶಯಕ್ಕೆ ಹೆಚ್ಚಿನ ಒತ್ತು ನೀಡಿದ್ದು. ಅವರವರ ಕಾಲ-ದೇಶ-ಸಂಸ್ಕೃತಿಗಳಿಗೆ ಅನುವಾಗಿ ಅವರು ತಮ್ಮದೇ ಆಕಾರ ಕೊಟ್ಟುಕೊಳ್ಳಲಿ ಎಂಬ ಬುದ್ಧನ ಆಶಯಕ್ಕೆ ಸ್ವಾತಂತ್ರ್ಯ ನೀಡಿತ್ತು ಬೌದ್ಧಧರ್ಮ.

ಆದರೆ ಸಾಮಾನ್ಯವಾಗಿ ಧರ್ಮಗಳಿಗೆ ಆಕಾರ ಅತಿಯಾಗುವ ರೋಗ ಬಡಿಯುತ್ತದೆ. ಆಶಯ ನಲುಗುತ್ತದೆ. ಉದಾಹರಣೆಗೆ, ಹಿಂದೂ ಧರ್ಮಕ್ಕೆ ಬಡಿದಿರುವ ಆಕಾರಪ್ರಿಯತೆಯ ರೋಗವನ್ನು ಅನೇಕ ಸುಧಾರಕರು ಜಾತೀಯತೆ ಎಂದು ಈಗಾಗಲೇ ಗುರುತಿಸಿದ್ದಾರೆ. ಈ ಮಹಾನ್ ಧರ್ಮದ ಉಸಿರು ಕಟ್ಟಿಸಿದೆ ಜಾತೀಯತೆ. ಇರಲಿ, ನಾಥೂರಾಮನತ್ತ ಮರಳೋಣ. ನಾಥೂರಾಮನಿಗೂ ಗಾಂಧಿಗೂ ಹಲವು ಸಾಮ್ಯಗಳಿ
ದ್ದವು. ಇಬ್ಬರೂ ರಾಜಕಾರಣಿಗಳಾಗಿದ್ದರು, ಅಧಿಕಾರದಿಂದ ದೂರ ಉಳಿಯಲು ನಿರ್ಧರಿಸಿದ್ದ ರಾಜಕಾರಣಿಗಳಾಗಿದ್ದರು. ಇಬ್ಬರ ಸಿದ್ಧಾಂತಗಳಲ್ಲಿಯೂ ಒಂದು ಸಮಾನ ಅಂಶವಿತ್ತು. ಧರ್ಮ ಹಾಗೂ ರಾಜಕಾರಣ ಪೂರಕವಾಗಿರಬೇಕೆಂದು ಇಬ್ಬರೂ ನಂಬಿದ್ದರು.

ಆದರೆ ಇಲ್ಲಿಗೆ ಸಾಮ್ಯತೆ ಮುಗಿಯುತ್ತದೆ. ಭಿನ್ನತೆ ಆರಂಭವಾಗುತ್ತದೆ. ನಾಥೂರಾಮನಿಗೆ ಬೇಲಿಗಳಲ್ಲಿ ನಂಬಿಕೆ. ಹಿಂದೂ ಧರ್ಮವು ಬೇಲಿಯಿಲ್ಲದೆ ಬಡವಾಗಿದೆ, ಮುಸಲ್ಮಾನರೆಂಬ ತುಡುಗು ದನಗಳು ನುಗ್ಗಿ ಹಿಂದೂ ಪ್ರಜೆಗಳೆಂಬ ಹಸಿರು ಹುಲ್ಲನ್ನು ಮೆಯ್ದು ಮೆಯ್ದು ಹಾಳುಗೆಡವಿವೆ ಎಂದು ಬಲವಾಗಿ ನಂಬಿದ್ದನು. ಭಾರತ ದೇಶದ ಸುತ್ತಲೂ ಹಿಂದೂ ರಾಷ್ಟ್ರವೆಂಬ ಬೇಲಿ ಬಿಗಿಯಲು ಹಾತೊರೆದಿದ್ದನು ನಾಥೂರಾಮ. ಇಷ್ಟಕ್ಕೂ, ಬೇಲಿ ಬಿಗಿಯುವ ಸಂದರ್ಭ ಹೌದು ಅದು. ದೇಶಕ್ಕೆ ಸ್ವಾತಂತ್ರ್ಯ ಬರುವುದಿತ್ತು. ಬೇಲಿಯ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ದೇಶದ ಆಕಾರ ಹಾಗೂ ಆಶಯಗಳನ್ನು ನಿರ್ಣಯಿಸುವ ಜವಾಬ್ದಾರಿ ಮಾತ್ರ ಗಾಂಧೀಜಿ ಕೈಯಲ್ಲಿತ್ತು. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಸುತಾರಂ ಒಪ್ಪುವವರಲ್ಲ ಅವರು.

ಕಥಾನಕದ ಈ ಘಟ್ಟದಲ್ಲಿ ಖಳನಾಯಕನನ್ನು ಒಳತರುವ ಅನಿವಾರ್ಯತೆ ಇದೆ. ಅದುವೇ ಮುಹಮ್ಮದ್ ಅಲಿ ಜಿನ್ನಾ! ಹಿಂದೂಸ್ತಾನವೊ ಹಿಂದೂರಾಷ್ಟ್ರವೊ ಎಂಬ ಭಿನ್ನಾಭಿಪ್ರಾಯವು ವಿಕೋಪಕ್ಕೆ ಹೋಗುವಂತೆ ಮಾಡಿದವನು ಈ ಜಿನ್ನಾ. ಹಿಂದೂಗಳಿಗಾಗಿ ನಾಥೂರಾಮ ಬಯಸಿದ್ದನ್ನೇ, ಜಿನ್ನಾ ಮುಸಲ್ಮಾನರಿಗಾಗಿ ಬಯಸಿದ. ಬಯಸಿದ ಮಾತ್ರವಲ್ಲ, ಪಡೆದ. ಬ್ರಿಟಿಷ್ ಆಳರಸರ ತೆರೆಮರೆಯ ಬೆಂಬಲ ಇತ್ತು ಅವನಿಗೆ. ಜೊತೆಗೆ ಪ್ರಳಯಾಂತಕ ಬುದ್ಧಿ ಇತ್ತು. ಮುಸಲ್ಮಾನ ಪ್ರಾಬಲ್ಯವಿರುವ ಪ್ರದೇಶಗಳ ಸೃಷ್ಟಿಗಾಗಿ ಅವನೊಂದು ಸರಳ ಉಪಾಯ ಹುಡುಕಿದ. ಕಟುಕನ ಕತ್ತಿಯಿಂದ ದೇಶದ ಜನರನ್ನು ಇಬ್ಭಾಗ ಮಾಡಿದ. ಮತೀಯ ಗಲಭೆಗಳಿಗೆ ಕರೆಕೊಟ್ಟ. ಮುಸಲ್ಮಾನ ಅಲ್ಪಸಂಖ್ಯಾತರು ಅತ್ತಲೂ, ಹಿಂದೂ ಅಲ್ಪಸಂಖ್ಯಾತರು ಇತ್ತಲೂ ಗುಳೆ ಎದ್ದರು. ದೇಶ ಹೊತ್ತಿ ಉರಿಯಿತು. ಹತ್ತು ಲಕ್ಷ ಜನ, ಹಿಂದೂ ಮುಸಲ್ಮಾನರಿಬ್ಬರೂ ಸೇರಿದಂತೆ ಹತರಾದರು. ಎಷ್ಟೋಪಾಲು ಹೆಚ್ಚಿನ ಜನ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡರು. ಸಾವಿರ ಸಾವಿರ ಹೆಂಗಸರು ಶೀಲ ಕಳೆದುಕೊಂಡರು.

ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಈ ಮಾರಣಹೋಮದಲ್ಲಿ ಅವರು ಪಾಲ್ಗೊಳ್ಳಲಿಲ್ಲ, ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಅವನು ಕತ್ತಿ ಎತ್ತಿ ನಿಂತಿದ್ದ. ಗಾಂಧೀಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು. ಭಾರತ ಇಬ್ಭಾಗವಾಗುವುದನ್ನು ತಡೆಯುವ ಶಪಥ ತೊಟ್ಟಿದ್ದರು. ಪೂರ್ವಬಂಗಾಲದ ನವಾಖಲಿಗೆ ತೆರಳಿ ಅವರು ಹಿಂದೂಗಳ ರಕ್ಷಣೆಗಾಗಿ ಸತ್ಯಾಗ್ರಹ ಮಾಡಿದರು. ಬಿಹಾರದ ಮುಸಲ್ಮಾನರ ರಕ್ಷಣೆಗಾಗಿ ವಕಾಲತ್ತು ಮಾಡಿದರು. ಕಲ್ಕತ್ತೆಯಲ್ಲಿ ಉಪವಾಸ ಮಾಡಿ ಹಿಂದೂ ಮುಸಲ್ಮಾನರಿಬ್ಬರೂ ಶಸ್ತ್ರತ್ಯಾಗ ಮಾಡುವಂತೆ ಮಾಡಿದರು. ಏನಾದರೇನು? ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದ ಮತೀಯ ಬೆಂಕಿಯನ್ನು ಬಕೆಟ್ಟು ನೀರಿನಿಂದ ನಂದಿಸಲು ಸಾಧ್ಯವೆ? ಗಾಂಧೀಜಿ ಸೋತರು. ದೇಶದ ವಿಭಜನೆ ಆಗಿಯೇ ಹೋಯಿತು. ತಾನೇ ಕಟ್ಟಿ ಬೆಳೆಸಿದ ಕಾಂಗ್ರೆಸ್ ಹೆದರಿ, ಗಾಂಧೀಜಿಯ ಬೆನ್ನಹಿಂದೆ ವಿಭಜನೆಗೆ ಸಹಿ ಹಾಕಿತು. ಅವರ ಮಾಂತ್ರಿಕತೆ ಮಾಯವಾಯಿತು. ಪ್ರಾರ್ಥನಾ ಸಭೆಗಳು ಖಾಲಿಯಾದವು. ಅಹಿಂಸೆಯ ಮಾತು ಅಪಥ್ಯವಾಯಿತು. ‘ಥೂ! ಹಾಳು ಮುದುಕ!... ಹೆಣ್ಣಿಗ!... ತನ್ನವರು ಸಾಯುತ್ತಿರುವಾಗ ಇತರರ ವಕಾಲತ್ತು ವಹಿಸುತ್ತಾನೆ!’ ಎಂದರು ಜನರು. ಎಲ್ಲಕ್ಕೂ ಕಲಶವಿಟ್ಟಂತೆ ಅವರ ಕೊಲೆಯಾಯಿತು.

ಈಗ, ಎಪ್ಪತ್ತು ವರ್ಷಗಳ ನಂತರ, ಹಿಂಸೆ ಮತ್ತೆ ಎದ್ದುನಿಂತಿದೆ. ಇತ್ತೀಚೆಗೆ, ಬೆಂಗಳೂರಿನ ಕಾಲೇಜುಗಳಲ್ಲಿ ಗ್ರಾಮಸೇವಾ ಸಂಘದ ಕೆಲವು ಕಾರ್ಯಕರ್ತರು ಅಹಿಂಸಾತ್ಮಕ ಸಂವಹನವನ್ನು ಕುರಿತು ಕಾರ್ಯಾಗಾರಗಳನ್ನು ಮಾಡಿದರು. ಅಲ್ಲಿ, ಯುವಜನತೆ ಮತ್ತೆ ಮತ್ತೆ ನಮ್ಮನ್ನು ಕೇಳುತ್ತಿದ್ದ ಪ್ರಶ್ನೆಯೆಂದರೆ, ‘ಭಾರತದ ವಿಭಜನೆಯನ್ನು ತಡೆಯುವಲ್ಲಿ ಗಾಂಧೀಜಿ ಸೋತದ್ದೇಕೆ’ ಎಂದು. ಇದು ನಾಥೂರಾಮನ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಿಲ್ಲ. ಗಾಂಧೀಜಿಯ ಸೋಲು ಸತ್ಯದ ಸೋಲು ಎಂದು ಸಾಧಿಸಲು ತವಕಿಸುತ್ತಿದೆ ಹಿಂಸೆ. ‘ಹೌದು, ಸೋತರು ಏನೀಗ’ ಎಂದು ಮರುಪ್ರಶ್ನೆ ಹಾಕುತ್ತೇನೆ ನಾನು. ಸತ್ಯ ಸೋಲುವಾಗ ಸತ್ಯಸಂಧ ಗೆಲ್ಲಲು ಸಾದ್ಯವೇ? ಇಲ್ಲ ಎಂದರು ಯುವಕರು.

ಹಿಂಸೆ ಹಾದರದಂತೆ. ಅದು ಆಕರ್ಷಕವಾದದ್ದು. ಸೋಲಲಿಕ್ಕೆ ಮುಜುಗರಪಡಬಾರದು ನಾವು. ಬಸವಣ್ಣ ಸೋತನಲ್ಲವೇ? ಹರಳಯ್ಯ ಮದುವರಸರ ಮಕ್ಕಳ ಅಂತರ್ಜಾತಿ ಮದುವೆಯ ಸಂದರ್ಭದಲ್ಲಿ ಮೇಲ್ಜಾತಿ, ಮೇಲ್ವರ್ಗಗಳು ಕಲ್ಯಾಣದ ಕ್ರಾಂತಿಯನ್ನು ಧ್ವಂಸ ಮಾಡಿದುವಲ್ಲವೆ? ಸಾವಿರಾರು ಶರಣರು, ಬಸವಣ್ಣನ ಕಣ್ಣೆದುರಿಗೇ ಹಿಂಸೆಗೆ ಬಲಿಯಾದರಲ್ಲವೇ? ಕತ್ತಿ ಹಿಡಿದು ಮಂಚಣಕ್ರಮಿತ ಹಾಗೂ ಸೋವಿದೇವರನ್ನು ಬಸವಣ್ಣ ಕೊಚ್ಚಿಹಾಕಬೇಕಿತ್ತೆ? ಹಿಂಸಾಚಾರ ಧರ್ಮವನ್ನು ಸೋಲಿಸುತ್ತದೆ. ಪುರೋಹಿತಶಾಹಿಯನ್ನು ಗೆಲ್ಲಿಸುತ್ತದೆ. ಅನುಮಾನವೇ ಬೇಡ.

ಹಿಂದೂ ರಾಷ್ಟ್ರವೆಂಬ ಪರಿಕಲ್ಪನೆ ಏನೆಲ್ಲ ಅನಾಹುತ ಮಾಡಬಲ್ಲದು ಎಂದು ತಿಳಿಯಲಿಕ್ಕೆ ತೀರಾ ದೂರ ಹೋಗಬೇಕಿಲ್ಲ. ನಮ್ಮವರೇ ಆಗಿದ್ದ, ಈಗ ಪಕ್ಕದ ರಾಷ್ಟ್ರವಾಗಿರುವ, ಪಾಕಿಸ್ತಾನವನ್ನು ನೋಡಿದರೆ ಸಾಕು. ಭಾರತವನ್ನು ‘ಹಿಂದೂ ಪಾಕಿಸ್ತಾನ’ ಮಾಡುವುದು ಅದೆಷ್ಟು ಅಪಾಯಕಾರಿ ಎಂದು ತಿಳಿದುಬಿಡುತ್ತದೆ. ತಿಳಿದುಕೊಳ್ಳಿ. ಜಿನ್ನಾ ಅನಾಹುತ ಮಾಡಿದ್ದು ಹಿಂದೂಗಳಿಗಲ್ಲ, ಮುಸಲ್ಮಾನರಿಗೆ.

ಇಂದು ಪಾಕಿಸ್ತಾನ ಚೂರಾಗಿದೆ. ನಿಜವಾದ ಮುಸಲ್ಮಾನ ಯಾರು ಎಂಬ ಒಳಜಗಳ ಶುರುವಾಗಿದೆ. ಅಹಮದೀಯ ಮುಸಲ್ಮಾನರನ್ನು, ಅಲ್ಲಿಯ ಕಾನೂನೇ ಮುಸಲ್ಮಾನರಲ್ಲವೆಂದು ಸಾರಿದೆ. ಶಿಯಾಗಳನ್ನು ಸುನ್ನಿಗಳು, ಸುನ್ನಿಗಳನ್ನು ಶಿಯಾಗಳು ಹೊಡೆದು ಕೊಲ್ಲುತ್ತಿದ್ದಾರೆ. ಹಿಂಸೆ ತಾಂಡವವಾಡುತ್ತಿದೆ. ಅಲ್ಲಿ ಹಾಗಾದರೆ, ಇಲ್ಲಿ ಭಾರತೀಯ ಮುಸಲ್ಮಾನನ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ. ಜಿನ್ನಾ ಮಾಡಿದ ಅವಾಂತರದ ನಿಜವಾದ ಫಲಾನುಭವಿಗಳು ಭಾರತೀಯ ಮುಸಲ್ಮಾನರು. ಇವರು ಶಾಪಗ್ರಸ್ತ ಪ್ರಜೆಗಳು. ಪ್ರತಿಯೊಬ್ಬ ಮುಸಲ್ಮಾನನ ಕೊರಳಿಗೆ, ‘ಪಾಕಿಸ್ತಾನದ ಏಜೆಂಟನು ನಾನು’ ಎಂಬ ಫಲಕ ತೂಗು ಬಿಡಲಾಗಿದೆ. ಪ್ರತಿದಿನ ಪೆರೇಡಿನಲ್ಲಿ ನಿಂತು ಅವರು, ‘ನಾನು ಭಾರತೀಯ!’ ಎಂದು ತಪ್ಪೊಪ್ಪಿಕೊಳ್ಳಬೇಕಾಗಿದೆ. ಇದು ಬೇಕೆ?

ಒಬ್ಬ ಹಿಂದೂ ಪ್ರಜೆಯಾಗಿ ನನಗನ್ನಿಸುತ್ತಿದೆ. ಬೇಲಿ ಹರಿದು ಅವರತ್ತ ನಡೆಯಬೇಕು! ಅವರ ಕೊರಳಿಗೆ ತೂಗು ಬಿದ್ದಿರುವ ಫಲಕ ಕಿತ್ತೊಗೆಯಬೇಕು! ಅವರ ಭುಜಗಳ ಮೇಲೆ ಕೈ ಇಕ್ಕಿ, ಮುಗುಳು ನಕ್ಕು, ‘ನಾನೂ ಭಾರತೀಯ, ನೀನೂ ಭಾರತೀಯ’ ಎಂದೆನ್ನಬೇಕು. ಜಿನ್ನಾ ಮಾಡಿದ ಅವಾಂತರ ಅಥವಾ ಅದಕ್ಕೂ ಮೊದಲು ಘಜನಿ ಮುಹಮ್ಮದ್ ಮಾಡಿದ ಅವಾಂತರಗಳ ಕುರಿತಾದ ಸಿಟ್ಟು ನಮ್ಮ ವಿವೇಕವನ್ನು ಈವರೆಗೆ ಕೆಡಿಸಿತ್ತು. ಭಾರತೀಯ ಮುಸಲ್ಮಾನರ ಮೇಲೆ ಸಿಟ್ಟು ಮಾಡಿದ್ದೆವು. ಎಷ್ಟು ದಿನ ತಾನೆ ಸಿಟ್ಟು ಮಾಡುತ್ತ ಕೂರುವುದು? ನಾಥೂರಾಮನನ್ನು ಕ್ಷಮಿಸೋಣ. ನಾಥೂರಾಮನ ತಪ್ಪನ್ನು ತಿದ್ದೋಣ. ಭಾರತೀಯ ಮುಸಲ್ಮಾನರ ತಪ್ಪನ್ನೂ ತಿದ್ದೋಣ. ಕ್ರೈಸ್ತರ ತಪ್ಪನ್ನೂ ತಿದ್ದೋಣ. ಬಲಿಷ್ಠ ಭಾರತವನ್ನು ಕಟ್ಟೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.