ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರ್ಯ–ನಮಸ್ಕಾರ | ಮಾಡಿದ್ದನ್ನೂ ಹೇಳಲಾಗದೆ ಮಂಕಾದ ಬಿಜೆಪಿ

ವಿರೋಧ ಪಕ್ಷಗಳ ಆರೋಪ ಎದುರಿಸುವುದು ಈಗ ಸವಾಲಿನ ಕೆಲಸದಂತೆ ಕಾಣುತ್ತಿದೆ
Published 1 ಜುಲೈ 2024, 19:09 IST
Last Updated 1 ಜುಲೈ 2024, 19:09 IST
ಅಕ್ಷರ ಗಾತ್ರ

ಈಚೆಗೆ ನಡೆದ ಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ಕೇಂದ್ರದಲ್ಲಿ ಸರ್ಕಾರ ರಚಿಸಿದೆಯಾದರೂ 2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿ 63 ಸ್ಥಾನಗಳನ್ನು ಕಳೆದುಕೊಂಡಿರುವುದು ವಾಸ್ತವ.

ಸ್ಥಾನಗಳ ಸಂಖ್ಯೆಯಲ್ಲಿ ಆಗಿರುವ ಈ ಕುಸಿತಕ್ಕೆ ಚುನಾವಣಾ ವಿಶ್ಲೇಷಕರು ಹಲವು ಕಾರಣಗಳತ್ತ ಬೊಟ್ಟು ಮಾಡಿದ್ದಾರಾದರೂ ‘ಇಂಡಿಯಾ’ ಮೈತ್ರಿಕೂಟದ ನಾಯಕರು ನಡೆಸಿದ ಪ್ರಚಾರವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಬಿಜೆಪಿ ಸೋಲು ಕಂಡಿದ್ದು ಹೆಚ್ಚಿನ ನಷ್ಟ ಉಂಟುಮಾಡಿತು ಎಂಬುದು ಸತ್ಯ. ಬಿಜೆಪಿಯು ಮತ್ತೆ ಅಧಿಕಾರಕ್ಕೆ ಮರಳಿದಲ್ಲಿ, ಅದು ಸಂವಿಧಾನವನ್ನು ಹಾಳುಮಾಡುತ್ತದೆ ಹಾಗೂ ದಲಿತರು ಮತ್ತು ಇತರೆ ಹಿಂದುಳಿದ ಸಮುದಾಯಗಳಿಗೆ (ಒಬಿಸಿ) ನೀಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುತ್ತದೆ ಎಂದು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಪ್ರಚಾರ ಮಾಡಿದ್ದರು. ಬಿಜೆಪಿಯನ್ನು ಮತ್ತೆ ಗೆಲ್ಲಿಸಿದರೆ ಎದುರಾಗುವ ‘ಅಪಾಯ’ಗಳ ಬಗ್ಗೆ ‘ಇಂಡಿಯಾ’ ಮೈತ್ರಿಕೂಟದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಅವಧಿಯುದ್ದಕ್ಕೂ ಮತದಾರರನ್ನು ಎಚ್ಚರಿಸುತ್ತಿದ್ದರು. ಸಾಂವಿಧಾನಿಕ ಮೌಲ್ಯಗಳಿಗೆ, ದಲಿತರು ಹಾಗೂ ಒಬಿಸಿ ಸಮುದಾಯಗಳ ಬಗ್ಗೆ ತಾನು ಹೊಂದಿರುವ ಬದ್ಧತೆ ಎಂಥದ್ದು ಎಂಬುದನ್ನು ಮತದಾರರ ಮುಂದೆ ಹೇಳಲು ಬೇಕಾದಷ್ಟು ಆಧಾರಗಳು ಕೈಯಲ್ಲಿ ಇದ್ದರೂ ಚುನಾವಣೆಯಲ್ಲಿ ತನ್ನ ವಿರುದ್ಧ ನಡೆಯುತ್ತಿದ್ದ ಪ್ರಚಾರವನ್ನು ಪರಿಣಾಮಕಾರಿಯಾಗಿ ಹಾಗೂ ಪೂರ್ಣ ಬಲದೊಂದಿಗೆ ಕೊನೆಗಾಣಿಸಲು ಬಿಜೆಪಿಗೆ ಆಗಲಿಲ್ಲ.

ಅಲ್ಲದೆ, ಮೀಸಲಾತಿಯನ್ನು ಕೊನೆಗೊಳಿಸುವ ಯಾವುದೇ ಉಲ್ಲೇಖ ಬಿಜೆಪಿ ಪ್ರಣಾಳಿಕೆಯಲ್ಲಿ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಯಾವುದೇ ರಾಷ್ಟ್ರೀಯ ನಾಯಕ ಈ ಬಗೆಯ ಆಲೋಚನೆ ಇರುವುದಾಗಿ ಹೇಳಿರಲಿಲ್ಲ. ಆಶ್ಚರ್ಯದ ಸಂಗತಿಯೆಂದರೆ, ದಲಿತರು ಹಾಗೂ ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ ತಾನು ಹಿಂದೆಲ್ಲ ಮಾಡಿದ್ದು ಏನನ್ನು ಎಂಬುದನ್ನು ಮತದಾರರ ಮುಂದೆ ಹೇಳುವಲ್ಲಿಯೂ ಬಿಜೆಪಿ ಸೋಲು ಕಂಡಿತು. ಉದಾಹರಣೆಗೆ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, 2000ನೇ ಇಸವಿಯ ಜನವರಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ, ಸಂಸತ್ತು ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ‍ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಸಂಪ್ರದಾಯವನ್ನು 10 ವರ್ಷಗಳ ಅವಧಿಗೆ ಮುಂದುವರಿಸಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಇದೇ ಬಗೆಯ ತಿದ್ದುಪಡಿಗೆ 2020ರ ಜನವರಿಯಲ್ಲಿ ಸಂಸತ್ತಿನ ಒಪ್ಪಿಗೆ ಪಡೆದುಕೊಂಡಿತು. ಆ ಮೂಲಕ ಅವರಿಗೆ ನೀಡುವ ಮೀಸಲಾತಿಯನ್ನು 2030ರವರೆಗೆ ವಿಸ್ತರಿಸಿತು. 1950ರಲ್ಲಿ ಜಾರಿಗೆ ಬಂದ ಸಂವಿಧಾನವು ಈ ಮೀಸಲಾತಿಯು ಹತ್ತು ವರ್ಷಗಳ ಅವಧಿಗೆ ಜಾರಿಯಲ್ಲಿ ಇರಬೇಕು ಎಂದು ಹೇಳಿತ್ತು. ಅದಾದ ನಂತರ, 1960ರಿಂದ ಸಂಸತ್ತಿನ ಉಭಯ ಸದನಗಳು ಈ ಮೀಸಲಾತಿಯನ್ನು ಹತ್ತು ವರ್ಷಗಳಿಗೆ ವಿಸ್ತರಿಸುವ ಕೆಲಸವನ್ನು ಕಾಲಕಾಲಕ್ಕೆ ಮಾಡಿಕೊಂಡು ಬಂದಿವೆ. ಅದೇ ಕೆಲಸವನ್ನು ವಾಜಪೇಯಿ ನೇತೃತ್ವದ ಸರ್ಕಾರ ಹಾಗೂ ಮೋದಿ ನೇತೃತ್ವದ ಸರ್ಕಾರ ಮಾಡಿವೆ. ಇದು ಮಾಮೂಲಿ ಕೆಲಸ ಎಂದು ಕಾಣಬಹುದಾದರೂ ಇದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯ ವಿಚಾರದಲ್ಲಿ ಹಾಗೂ ಹಿಂದಿನ ಸರ್ಕಾರಗಳು ರೂಪಿಸಿದ ನಿಯಮಗಳ ವಿಚಾರದಲ್ಲಿ ಬಿಜೆಪಿ ಹೊಂದಿರುವ ಬದ್ಧತೆಯನ್ನು ಸಾಬೀತು ಮಾಡುವಂಥದ್ದು. ಈ ಪಕ್ಷಕ್ಕೆ ಬೇರೆಯದೇ ಆಲೋಚನೆಗಳು ಇದ್ದವು ಎಂದಾದಲ್ಲಿ ಈ ನಿಯಮಕ್ಕೆ ಬದ್ಧವಾಗಿ ಅದು ಏಕೆ ನಡೆದುಕೊಳ್ಳುತ್ತಿತ್ತು?

ವಾಜಪೇಯಿ ನೇತೃತ್ವದ ಸರ್ಕಾರವು ರೂಪಿಸಿದ ಇನ್ನೂ ಮೂರು ತಿದ್ದುಪಡಿಗಳು ಹೆಚ್ಚು ಗಮನಾರ್ಹ. 2000ನೇ ಇಸವಿಯ ಜೂನ್‌ನಲ್ಲಿ ಅಂಗೀಕಾರ ಪಡೆದ, ಸಂವಿಧಾನಕ್ಕೆ ತಂದ 81ನೇ ತಿದ್ದುಪಡಿಯು ಸಂವಿಧಾನದ 16ನೇ ವಿಧಿಗೆ ತಿದ್ದುಪಡಿ ತಂದಿತು. ಇದು ಬ್ಯಾಕ್‌ಲಾಗ್‌ ನೇಮಕಾತಿಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಾತಿಯ ಸೌಲಭ್ಯವನ್ನು ರಕ್ಷಿಸುವ ಕೆಲಸ ಮಾಡಿತು. 2002ರ ಸೆಪ್ಟೆಂಬರ್‌ನಲ್ಲಿ ಅಂಗೀಕಾರ ಪಡೆದುಕೊಂಡ 82ನೇ ತಿದ್ದುಪಡಿಯು ಸಂವಿಧಾನದ 335ನೇ ವಿಧಿಗೆ ಬದಲಾವಣೆ ತಂದು, ಎಸ್‌ಸಿ ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ, ಅವರ ಅರ್ಹತಾ ಅಂಕಗಳು ಹಾಗೂ ಇತರ ಮಾನದಂಡಗಳ ಸಡಿಲಿಕೆಗೆ ಅವಕಾಶ ಕಲ್ಪಿಸಿತು. ಸಂವಿಧಾನದ 16ನೇ ವಿಧಿಗೆ ಮತ್ತೊಮ್ಮೆ ತಿದ್ದುಪಡಿ ತರಲು ವಾಜಪೇಯಿ ನೇತೃತ್ವದ ಸರ್ಕಾರವು 2002ರ ಜನವರಿಯಲ್ಲಿ 85ನೇ ತಿದ್ದುಪಡಿಯನ್ನು ಮಂಡಿಸಿತು. ಇದು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಬಡ್ತಿ ನೀಡಿದಾಗ ಆಗುವ ತತ್ಪರಿಣಾಮದ ಹಿರಿತನವನ್ನು ರಕ್ಷಿಸುವ ಉದ್ದೇಶದ ತಾಂತ್ರಿಕ ತಿದ್ದುಪಡಿ ಆಗಿತ್ತು. ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗಾಗಿನ ರಾಷ್ಟ್ರೀಯ ಆಯೋಗವನ್ನು ಎರಡಾಗಿ ವಿಭಜಿಸಿ, ಪರಿಶಿಷ್ಟ ಪಂಗಡಗಳಿಗೆ ಪ್ರತ್ಯೇಕ ಆಯೋಗವನ್ನು ರಚಿಸಲು ವಾಜಪೇಯಿ ನೇತೃತ್ವದ ಸರ್ಕಾರವು ಸಂವಿಧಾನಕ್ಕೆ ಇನ್ನೊಂದು ತಿದ್ದುಪಡಿ (89ನೇ ತಿದ್ದುಪಡಿ) ತಂದಿತು. ಇದು ಕೂಡ ಬಹಳ ಮಹತ್ವದ ತಿದ್ದುಪಡಿ.

ಈ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರವು ವಾಜಪೇಯಿ ನೇತೃತ್ವದ ಸರ್ಕಾರದ ಹಾದಿಯಲ್ಲಿಯೇ ಸಾಗಿದೆ.

ಒಬಿಸಿ ಸಮುದಾಯಗಳು ಯಾವುವು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ನೀಡಲು 338(ಬಿ) ವಿಧಿ, 342 (ಎ) ಮತ್ತು 366ನೇ ವಿಧಿಗಳಿಗೆ ತಿದ್ದುಪಡಿ ತರಲು ಮಹತ್ವದ ತಿದ್ದುಪಡಿಯೊಂದಕ್ಕೆ (105ನೇ ತಿದ್ದುಪಡಿ) ಮೋದಿ ನೇತೃತ್ವದ ಸರ್ಕಾರವು 2021ರಲ್ಲಿ ಅಂಗೀಕಾರ ಪಡೆದುಕೊಂಡಿತು. 2021ರ ಮೇ ತಿಂಗಳಲ್ಲಿ ತೀರ್ಪೊಂದನ್ನು ನೀಡಿದ್ದ ಸುಪ್ರೀಂ ಕೋರ್ಟ್‌, ಯಾವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬಹುದು ಎಂಬುದನ್ನು ತೀರ್ಮಾನಿಸುವ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಹೇಳಿತ್ತು. ಆದರೆ ಸರ್ಕಾರ ತಂದ ಈ ತಿದ್ದುಪಡಿಯು ಒಬಿಸಿ ಪಟ್ಟಿಗೆ ಯಾವ ಜಾತಿಗಳನ್ನು ಸೇರಿಸಬಹುದು ಎಂಬ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತು. ಇದು ರಾಜ್ಯ ಸರ್ಕಾರಗಳಿಗೆ ಬಲ ನೀಡಿದ ಮಹತ್ವದ ತಿದ್ದುಪಡಿ ಮಾತ್ರವೇ ಅಲ್ಲದೆ, ಒಕ್ಕೂಟ ವ್ಯವಸ್ಥೆಯ ತತ್ವವನ್ನು ಎತ್ತಿಹಿಡಿದ ತಿದ್ದುಪಡಿ ಕೂಡ ಆಗಿದೆ.

ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯನ್ನು ಕೊನೆಗೊಳಿಸಲು ರಾಜಕೀಯ ಪಕ್ಷವೊಂದು ಈ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆಯೇ? ಒಬಿಸಿ ಪಟ್ಟಿಯಲ್ಲಿ ಇರಬೇಕಾದ ಜಾತಿಗಳು ಯಾವುವು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೀಡಿತ್ತಾದರೂ ಮಹತ್ವದ ಈ ಅಧಿಕಾರವನ್ನು ರಾಜ್ಯಗಳಿಗೆ ವರ್ಗಾಯಿಸುವ ತೀರ್ಮಾನವನ್ನು ಮೋದಿ ನೇತೃತ್ವದ ಸರ್ಕಾರವು ಕೈಗೊಂಡಿತು. ರಾಜ್ಯಗಳನ್ನು ದುರ್ಬಲಗೊಳಿಸುವ ಉದ್ದೇಶವು ಮೋದಿ ನೇತೃತ್ವದ ಸರ್ಕಾರಕ್ಕೆ ಇದೆ ಎಂದು ವಿರೋಧ ಪಕ್ಷಗಳು ಮಂಡಿಸಿದ್ದ ವಾದಕ್ಕೆ ಇದು ವಿರುದ್ಧವಾಗಿದೆ. ಆದರೆ, ವಿರೋಧಿಗಳನ್ನು ಎದುರಿಸಲು, ಜನರ ಮನವೊಲಿಸುವ ರೀತಿಯಲ್ಲಿ ಈ ಮಾತುಗಳನ್ನು ಬಿಜೆಪಿಯ ಕಡೆಯಿಂದ ಯಾರೊಬ್ಬರೂ ಹೇಳಿದ್ದು ಕೇಳಿಬರಲಿಲ್ಲ.

ಆದರೆ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಮತ್ತು ಇತರರು ತಮ್ಮ ವಾದವನ್ನು ಚುನಾವಣಾ ಪ್ರಚಾರದ ಉದ್ದಕ್ಕೂ ಜನರ ಮುಂದಿರಿಸುತ್ತ ಬಂದರು, ಚುನಾವಣೆಯಲ್ಲಿ ಅದರ ಲಾಭ ಪಡೆದುಕೊಂಡರು. ಅಖಿಲೇಶ್ ಅವರು ಟಿಕೆಟ್‌ ಹಂಚಿಕೆಯಲ್ಲಿ ಜಾಣತನದಿಂದ ಕೆಲವೊಂದಿಷ್ಟು ಸಾಮಾಜಿಕ ಸಮೀಕರಣದ ಕೆಲಸಗಳನ್ನೂ ಮಾಡಿದರು. ಬಹುಹಳೆಯ ಕಾಲದ ಮುಸ್ಲಿಂ–ಯಾದವ ಮೈತ್ರಿಯನ್ನು ಮತ್ತೆ ಸಾಧ್ಯವಾಗಿಸಿದರು, ಟಿಕೆಟ್‌ ಹಂಚಿಕೆಯಲ್ಲಿ ನಿರ್ದಿಷ್ಟ ಕಾರ್ಯತಂತ್ರವನ್ನು ಅನುಸರಿಸುವ ಮೂಲಕ ಒಂದಿಷ್ಟು ದಲಿತ ಮತಗಳೂ ತಮಗೆ ಸಿಗುವಂತೆ ಮಾಡಿಕೊಂಡರು. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಇಂತಹ ಅಭಿಯಾನವನ್ನು ಎದುರಿಸುವಲ್ಲಿ ಬಿಜೆಪಿಯು ಸೋತಿದ್ದು ಅಲ್ಲಿ ಪಕ್ಷವು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ಎನ್ನಬಹುದು.

ಹರಿಯಾಣ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುವುದಕ್ಕೂ ಮೊದಲು ಬಿಜೆಪಿಯು ಇಂತಹ ಆರೋಪಗಳನ್ನು ನಿಭಾಯಿಸುವ ಕೆಲಸವನ್ನು ಮಾಡಬೇಕು. ಆದರೆ ಈಗಿನ ಸಂದರ್ಭದಲ್ಲಿ ಅದು ಭಾರಿ ಸವಾಲಿನ ಕೆಲಸದಂತೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT