ಮೊದಲಿಗೆ ಒಂದೆರಡು ತಲೆಹರಟೆಯ ಪ್ರಶ್ನೆ: ಈ ಬಾರಿ ತಿರುಪತಿ ತಿಮ್ಮಪ್ಪನನ್ನು ಕಡೆಗಣಿಸಿದ್ದಕ್ಕೇ ವಿಕ್ರಮ್ ಲ್ಯಾಂಡರ್ ನೌಕೆ ಚಂದ್ರನಲ್ಲಿ ಕಣ್ಮರೆಯಾಯಿತೆ? ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಪ್ರತಿಯೊಂದು ಪ್ರತಿಷ್ಠಿತ ಉಡಾವಣೆಗೂ ಮುಂಚೆ ಇಸ್ರೊ ಅಧ್ಯಕ್ಷರು ತಿರುಪತಿಗೆ ಹೋಗಿ ಗಗನನೌಕೆಯ ಪ್ರತಿಕೃತಿಯನ್ನಿಟ್ಟು ಆಶೀರ್ವಾದ ಪಡೆದು ಬರುತ್ತಿದ್ದರು. ಈ ಸಂಪ್ರದಾಯವನ್ನು ಕೈಬಿಟ್ಟು ಈಗಿನ ಇಸ್ರೊ ಅಧ್ಯಕ್ಷರು ಉಡುಪಿ ಕೃಷ್ಣನಿಗೆ ಮತ್ತು ಕೊಲ್ಲೂರು ಮೂಕಾಂಬಿಕೆಗೆ ತಲೆಬಾಗಿಸಿ ಬಂದಿದ್ದರಲ್ಲಿ ಐಬಾಯಿತೆ? ಅಥವಾ ವಾಸ್ತು ಪ್ರಕಾರ ಉತ್ತರ ದಿಕ್ಕಿನಿಂದ ಪ್ರವೇಶಿಸುವ ಬದಲು ದಕ್ಷಿಣ ಧ್ರುವದಲ್ಲಿ ಪ್ರವೇಶಿಸಲು ಯತ್ನಿಸಿದ್ದಕ್ಕೆ ಹೀಗಾಯಿತೆ?

ಬಿಡ್ತೂ ಅನ್ನಿ. ವಿಜ್ಞಾನರಂಗದಲ್ಲಿ ಇಂಥ ತರ್ಕಗಳೇ ಅಸಂಬದ್ಧ ಎಂದು ಭೌತವಿಜ್ಞಾನಿ ಹಾಗೂ ಶಿಕ್ಷಣತಜ್ಞ ಡಾ. ಎಚ್. ನರಸಿಂಹಯ್ಯ (ಬದುಕಿದ್ದಿದ್ದರೆ ಈಗ ನೂರು ತುಂಬುತ್ತಿತ್ತು) ಹೇಳುತ್ತಿದ್ದರು. ‘ವಿಜ್ಞಾನಿಗಳು ಮೂಢನಂಬಿಕೆಗಳನ್ನು ಎತ್ತಿ ಹಿಡಿಯಬಾರದು; ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಬಾರದು; ವಿಜ್ಞಾನ ಧರ್ಮಾತೀತವಾಗಿರಬೇಕು’ ಎನ್ನುತ್ತಿದ್ದರು. ಇಷ್ಟಕ್ಕೂ ‘ಇಸ್ರೊ’ ಜನಿಸಿದ್ದೇ ಧರ್ಮಾತೀತ ನೆಲೆಯಲ್ಲಿ ತಾನೆ? ಧರ್ಮಶಾಸ್ತ್ರಗಳಲ್ಲಿ ನಂಬಿಕೆಯಿಲ್ಲದ ಡಾ. ವಿಕ್ರಮ್ ಸಾರಾಭಾಯಿಯವರ (ಈಗಿದ್ದಿದ್ದರೆ ಅವರಿಗೂ ನೂರಾಗುತ್ತಿತ್ತು) ನಿರ್ದೇಶನದಲ್ಲಿ, ಕೇರಳದ ತುಂಬಾ ಎಂಬಲ್ಲಿನ ಹಳೇ ಇಗರ್ಜಿಯ ಪಡಸಾಲೆಯಲ್ಲಿ, ಬಿಷಪ್ ನಿವಾಸದ ಕೊಟ್ಟಿಗೆಯಲ್ಲಿ ಅಬ್ದುಲ್ ಕಲಾಮ್, ಕನ್ನಡಿಗ ಸಿ.ಆರ್.ಸತ್ಯ, ಎಚ್.ಜಿ.ಎಸ್. ಮೂರ್ತಿ ಮುಂತಾದವರಿಂದಲೇ ಇಸ್ರೊಕ್ಕೆ ಪ್ರಾರಂಭಿಕ ಚಾಲನೆ ಸಿಕ್ಕಿತ್ತು. ರಾಕೆಟ್ ತಂತ್ರಜ್ಞಾನಕ್ಕೆ ಹೊಸ ರೆಕ್ಕೆಪುಕ್ಕ ಕೊಟ್ಟ ಸತೀಶ್ ಧವನ್ ಕೂಡ (ಅವರಿದ್ದಿದ್ದರೆ ಮುಂದಿನ ವರ್ಷ ನೂರು) ಇಸ್ರೊದಲ್ಲಿ ಧಾರ್ಮಿಕ ನಂಬುಗೆಗಳಿಗೆ ಇಂಬು ಕೊಟ್ಟಿರಲಿಲ್ಲ. ಮುಂದೊಂದು ದಿನ ಇಸ್ರೊ ಜನಕನ ಹೆಸರಿನಲ್ಲೇ ಲ್ಯಾಂಡರ್ ಇಳಿನೌಕೆಗೆ ದೇವದೇವತೆಯ ಅನುಗ್ರಹ ಕೋರಿಯಾರೆಂದು ಅಂದು ಯಾರೂ ಊಹಿಸಿರಲಿಕ್ಕಿಲ್ಲ.

ಧರ್ಮವನ್ನು ಬದಿಗಿಟ್ಟು ಕರ್ಮದಲ್ಲಿ ವಿಶ್ವಾಸ ಇಟ್ಟಿದ್ದಕ್ಕೇ ವಿಜ್ಞಾನ ವಿಕಸಿತವಾಯಿತು ಎಂದು ಹೇಳಲು ಚರಿತ್ರೆಯಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ. ಕೊಪರ್ನಿಕಸ್, ಲ್ಯಾಪ್ಲೇಸ್, ಗೆಲಿಲಿಯೊ, ಡಾರ್ವಿನ್‍ನಂಥ ದಿಗ್ಗಜರು ಧರ್ಮದ ಬಂಧನವನ್ನು ಸಡಿಲಿಸಿಯೇ ಜಗತ್ತಿಗೆ ಸತ್ಯದರ್ಶನ ಮಾಡಿಸಿದರು. ಧರ್ಮ ಕನಲಿತು. ಗೆಲಿಲಿಯೊ ಅವರನ್ನು ಧರ್ಮದ್ರೋಹಿ ಎಂದು ಶಿಕ್ಷಿಸಲಾಯಿತು. ತೀರ ಕ್ರೂರ ವಿಧಾನಗಳಿಂದ ಅಂಟೊನಿ ಲೆವೊಯ್ಸರ್, ಮೈಕೆಲ್ ಸರ್ವೆಟಸ್, ಗ್ಯೊರ್ಡಾನೊ ಬ್ರುನೊ ಮುಂತಾದ ಪ್ರತಿಭಾವಂತ ವಿಜ್ಞಾನಿಗಳನ್ನು ಕೊಲ್ಲಲಾಯಿತು. ವಿಜ್ಞಾನ ಸತ್ಯವನ್ನೇ ಹೇಳುತ್ತದೆ ಎಂಬುದು ಗೊತ್ತಾಗುತ್ತ ಹೋದ ಹಾಗೆಲ್ಲ ಧರ್ಮ ಮೆಲ್ಲಗೆ ತನ್ನ ವಿಧಾನವನ್ನು ಬದಲಿಸಿ ಕೊಂಡಿತು. ಪ್ರತಿಷ್ಠಿತ ವಿಜ್ಞಾನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳತೊಡಗಿತು. ಬೆಂಬಲಕ್ಕೆ ರಾಜಕೀಯವನ್ನೂ ಬಳಸಿಕೊಳ್ಳತೊಡಗಿತು. ಹೀಗೆ ಧರ್ಮ, ರಾಜಕೀಯ ಮತ್ತು ಮಾಧ್ಯಮ ಮೂರೂ ಸೇರಿ ವಿಜ್ಞಾನವನ್ನು ಕುಣಿಸಲು ತೊಡಗಿದರೆ ಗೊತ್ತಲ್ಲ? ಎಂಥ ವೈಫಲ್ಯವನ್ನೂ ಶ್ಲಾಘನೀಯ ವಿಕ್ರಮವನ್ನಾಗಿಸಿ ಬೆನ್ನು ತಟ್ಟಬಹುದು.

ಮನುಷ್ಯ ಮೊದಲ ಬಾರಿ ಭೂಮಿಯನ್ನು ಬಿಟ್ಟು ಆಚೆ ಹೊರಟಾಗ ವಿಜ್ಞಾನದ ಹೆಗಲೇರಿ ಧರ್ಮವೂ ಸವಾರಿ ಹೊರಟಿತ್ತು ಗೊತ್ತೆ? ಐವತ್ತು ವರ್ಷಗಳ ಹಿಂದೆ, 1969ರಲ್ಲಿ ಅಪೊಲೊ-11ರ ಮೂಲಕ ಮೊದಲ ಬಾರಿಗೆ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಝ್ ಆಲ್‍ಡ್ರಿನ್ ಇಬ್ಬರೂ ಲ್ಯಾಂಡರ್ ನೌಕೆಯನ್ನು ಚಂದ್ರನ ಮೇಲೆ ಇಳಿಸಿದರು. ತನ್ನದು ದೇವರಥವೆಂದೇ ನಂಬಿದಂತಿದ್ದ ಆಲ್‍ಡ್ರಿನ್ ಮಹಾಶಯ ನೌಕೆಯಿಂದ ಹೊರಬರುವ ಮೊದಲು ಚರ್ಚ್‌ನಿಂದ ತಂದಿದ್ದ ಪವಿತ್ರ ತೀರ್ಥ (ವೈನ್) ಮತ್ತು ಪ್ರಸಾದದ (ಬ್ರೆಡ್) ಸೇವನೆ ಮಾಡಿದ. ಕೊಲಂಬಸ್ ಅಮೆರಿಕಕ್ಕೆ ಕಾಲಿಟ್ಟಾಗ ಕ್ರಿಶ್ಚಿಯನ್ ಧರ್ಮವನ್ನೂ ಒಯ್ದು ಬಿತ್ತರಿಸಿದ ಮಾದರಿಯಲ್ಲೇ ಈತ ಚಂದ್ರನ ಮೇಲೆ ನಿಂತು ದೇವರ ಮಹಿಮೆಯನ್ನು ಸಾರಲು ಬಯಸಿದ್ದ. ಆದರೆ ನಾಸಾ ಅನುಮತಿ ನೀಡಿರಲಿಲ್ಲ.

ಏಕೆ ನೀಡಲಿಲ್ಲ ಎಂಬುದಕ್ಕೂ ಒಂದು ಹಿನ್ನೆಲೆ ಇದೆ: ಮೆಡೆಲಿನ್ ಓ’ಹೇರ್ ಎಂಬಾಕೆ ನಾಸಾದ ವಿರುದ್ಧ ಈ ಮೊದಲೇ ಖಟ್ಲೆ ಹೂಡಿದ್ದಳು. ಕಾರಣವೇನೆಂದರೆ, ಒಂದು ವರ್ಷ ಮುಂಚೆ, 1968ರಲ್ಲಿ ಗಗನನೌಕೆ ಅಪೊಲೊ-8 ಚಂದ್ರನನ್ನು ಸುತ್ತುತ್ತಿದ್ದಾಗ ಅದರಲ್ಲಿದ್ದ ಮೂವರೂ ಗಗನಯಾತ್ರಿಗಳು ಸರದಿಯ ಮೇಲೆ ‘ಬುಕ್ ಆಫ್ ಜೆನೆಸಿಸ್’ನ (ಕ್ರಿಶ್ಚಿಯನ್ನರ ಆದಿ ಧರ್ಮಗ್ರಂಥದ) ಆಯ್ದ ಭಾಗಗಳನ್ನು ಓದಿದ್ದರು. ಕಕ್ಷೆಯಿಂದ ನೇರ ಪ್ರಸಾರಗೊಂಡ ಆ ಮೊದಲ ಟಿ.ವಿ ಕಾರ್ಯಕ್ರಮವೇ ಕೆಲವರನ್ನು ಕೆರಳಿಸಿತ್ತು. ಸರ್ಕಾರ ಮತ್ತು ಚರ್ಚ್ ನಡುವೆ ಯಾವ ಸಂಬಂಧವೂ ಇರಕೂಡದೆಂದು ಅಮೆರಿಕದ ಸಂವಿಧಾನವೇ ಹೇಳಿರುವಾಗ, ಸರ್ಕಾರಿ ಸ್ವಾಮ್ಯದ ನಾಸಾ ಸಂಸ್ಥೆ ಹಾಗೆಲ್ಲ ಧರ್ಮಪ್ರಸಾರ ಮಾಡುವಂತಿಲ್ಲ ಎಂದು ಇದೇ ಮಹಿಳೆ ನಾಸಾ ವಿರುದ್ಧ ಖಟ್ಲೆ ಹೂಡಿದ್ದಳು. ಅದಕ್ಕೂ ಮುಂಚೆ, ಆಕೆ ಇನ್ನೊಂದು ಸಾಹಸ ಮಾಡಿದ್ದಳು: ಸರ್ಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಬೈಬಲ್ಲನ್ನು ಪ್ರಾರ್ಥನೆಯಂತೆ ಓದುವುದರ ವಿರುದ್ಧವೂ ದಾವೆ ಹೂಡಿ ಸರ್ವೋಚ್ಚ ನ್ಯಾಯಾಲಯದಲ್ಲಿ ಗೆದ್ದಿದ್ದಳು. ನಾಸಾ ಸಹಜವಾಗಿಯೇ ಬೆದರಿತ್ತು. ಗಗನಯಾತ್ರಿ ಬಝ್ ಆಲ್‍ಡ್ರಿನ್‍ಗೆ ನಾಸಾ, ‘ನೀನು ಅಲ್ಲಿ ಏನಾದರೂ ಮಾಡ್ಕೊ, ಆದರೆ ರೇಡಿಯೊ ಮೂಲಕ ಜಗತ್ತಿಗೆಲ್ಲ ತಿಳಿಸಕೂಡದು’ ಎಂದು ಹೇಳಿತ್ತು. ಅಮೆರಿಕದ ಕೆಲವು ಚರ್ಚ್‌ಗಳಲ್ಲಿ ಈಗಲೂ ಆತನ ಚಂದ್ರನ ಮೇಲಿನ ದೇವಪೂಜೆಯನ್ನು ನೆನೆಸಿಕೊಂಡು ಪ್ರತಿ ಸೋಮವಾರ ಪ್ರಾರ್ಥನಾಸೇವೆ ನಡೆಯುತ್ತಿದೆ. ಇತ್ತ ಸರ್ಕಾರಿ ಸಂಸ್ಥೆಗಳ ಮೇಲಿದ್ದ ಧರ್ಮದ ಬಿಗಿಮುಷ್ಟಿ ಸಡಿಲವಾಗುವಂತೆ ಮಾಡಿದ ಮೆಡೆಲಿನ್ ಕತೆ ಮಾತ್ರ ದಾರುಣವಾಗಿದೆ. ಕಟ್ಟಾ ಸ್ತ್ರೀವಾದಿಯಾಗಿದ್ದ ಆಕೆ ಅಮೆರಿಕದ ನಿರೀಶ್ವರವಾದಿ ಸಂಘದ ಮೊದಲ ಅಧ್ಯಕ್ಷೆಯೂ ಆಗಿದ್ದಳು. 1995ರಲ್ಲಿ ಆಕೆಯನ್ನೂ ಆಕೆಯ ಮಗ ಮತ್ತು ಮೊಮ್ಮಗಳನ್ನೂ ಬರ್ಬರವಾಗಿ ಕೊಲೆ ಮಾಡಲಾಯಿತು. ಅವರೆಲ್ಲರ ಶವ ಪತ್ತೆಯಾದಾಗ, ಎಲ್ಲರ ಕಾಲುಗಳನ್ನು ಗರಗಸದಿಂದ ಕತ್ತರಿಸಿದ್ದು, ದೇಹವನ್ನು ಅಲ್ಲಲ್ಲಿ ಸುಟ್ಟಿದ್ದು ಕಂಡುಬಂತು (ಬದುಕಿದ್ದಿದ್ದರೆ ಮೆಡೆಲಿನ್ ಓ’ಹೇರ್‌ಗೂ ಇದು ನೂರನೆಯ ವರ್ಷ).

ದೇವರಿಗೆ, ಧರ್ಮಕ್ಕೆ ಶರಣಾಗದೆ ಕಕ್ಷೆಗೆ ಹೋದವರಲ್ಲಿ ನಾಸ್ತಿಕರೂ ಇದ್ದರು. ‘ನನಗೆ ದೇವರ ಮೇಲಲ್ಲ, ಮನುಷ್ಯನ ಮೇಲೆ ಗಾಢ ನಂಬಿಕೆ ಇದೆ. ಮಾನವನ ತಾಕತ್ತು, ತಾರ್ಕಿಕ ಶಕ್ತಿ ಮತ್ತು ಅವನಲ್ಲಿನ ಅಸೀಮ ಸಾಧ್ಯತೆಗಳ ಮೇಲೆ ಅಚಲ ವಿಶ್ವಾಸವಿದೆ’ ಎಂದು ಸೋವಿಯತ್ ರಷ್ಯಾದ (ಪೃಥ್ವಿಯ) ಎರಡನೆಯ ಗಗನಯಾತ್ರಿ ಘರ್ಮನ್ ಟಿಟೊವ್ ಹೇಳಿದ್ದ. ಯೂರಿ ಗಗಾರಿನ್ ನಂತರ ಭೂಮಿಯನ್ನು ಸುತ್ತಿದ ಈತ 17 ಬಾರಿ ಕಕ್ಷೆಗೆ ಹೋಗಿ ಬಂದವ.

‘ವಿಜ್ಞಾನದೊಂದಿಗೆ ಧರ್ಮವನ್ನು ಬೆರೆಸಬಾರದು; ಅವೆರಡರ ಮಾರ್ಗಗಳೂ ಬೇರೆಬೇರೆ’ ಎಂದು ವಿಕಾಸ ವಿಜ್ಞಾನಿ ಸ್ಟೀಫನ್ ಜೇಗೋಲ್ಡ್ ಮೊದಲಾಗಿ ಅನೇಕ ವಿಜ್ಞಾನ ಚಿಂತಕರು ವಾದಿಸುತ್ತಾರೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಕೂಡ ಅದೇ ನಿಲುವನ್ನು ತಳೆದಿದೆ. ನಮ್ಮಲ್ಲೂ ಇಸ್ರೊ ಮತ್ತು ಡಿಆರ್‌ಡಿಓದಂಥ ಸರ್ಕಾರಿ ಸಂಘಟನೆಗಳ ಮುಖ್ಯಸ್ಥರು ರಾಕೆಟ್ ಹಾರಿಸುವ ಮುನ್ನ ದೈವಾನುಗ್ರಹವನ್ನು ಕೋರುವುದಕ್ಕೆ ಹಿಂದೆಯೂ ಅನೇಕ ಬಾರಿ ಪ್ರಶ್ನೆಗಳೆದ್ದಿದ್ದವು. ಧರ್ಮಶ್ರದ್ಧೆ, ದೈವೀಭಕ್ತಿ ವಿಜ್ಞಾನಿಗಳಿಗೆ ಇದ್ದರೆ ಅದು ಖಾಸಗಿಯಾಗಿರಬೇಕೆ ವಿನಾ ಸಾಂಸ್ಥಿಕ ಪ್ರದರ್ಶನವಾದರೆ ಅಲ್ಲಿ ಶ್ರಮಿಸುವ ಇತರ ವಿಜ್ಞಾನಿಗಳ ಆತ್ಮವಿಶ್ವಾಸಕ್ಕೆ ಬೆಲೆಯಿಲ್ಲದಂತಾಗುತ್ತದೆ; ವಿಜ್ಞಾನವನ್ನು ದುರ್ಬಲಗೊಳಿಸಿದಂತಾಗುತ್ತದೆ. ಇದೀಗ ಓಡುತ್ತಿರುವ ಚಂದದ ‘ಮಿಶನ್ ಮಂಗಲ್’ ಸಿನಿಮಾದಲ್ಲಿ ಈ ಸಂದೇಶವನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಸಂಕಷ್ಟದಲ್ಲಿ ದೇವರನ್ನು ಪ್ರಾರ್ಥಿಸಲು ಹೊರಟ ಸಹೋದ್ಯೋಗಿಗಳಿಗೆ ಕಥಾನಾಯಕ, ‘ವಿಜ್ಞಾನವೇ ನನ್ನ ಧರ್ಮ; ಬೇರೆಯದು ನನಗೆ ಗೊತ್ತಿಲ್ಲ’ ಎನ್ನುತ್ತ ಮಂಗಳಯಾನವನ್ನು ಬಚಾವು ಮಾಡಲು ಧಾವಿಸುತ್ತಾನೆ. ಮಿಶನ್ ಯಶಸ್ವಿಯಾಗುತ್ತದೆ. ಇಸ್ರೊದಲ್ಲಿ ವಾಸ್ತವದಲ್ಲೂ ಅಂಥವರ ಸಂಖ್ಯೆ ಹೆಚ್ಚಾಗಲೆಂದು ಯಾವ ದೇವರಿಗೆ ಹರಕೆ ಹೊರೋಣ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.