ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಚೆನ್ನೈ ನಗರದಲ್ಲಿ ಜಲ ಪ್ರಳಯವಾಗಿದೆ. ತಮಿಳು ನಾಡಿಗೆ ಹೊಂದಿಕೊಂಡಿರುವ ಆಂಧ್ರ, ಕರ್ನಾಟಕದ ಗಡಿ ಪ್ರಾಂತಗಳಲ್ಲೂ ಕಳೆದ ನಾಲ್ಕು ದಿನಗಳಿಂದ ಎಡೆಬಿಡದ ಮಳೆ. ‘ನೀರು ಬೇಕು, ನೀರು ಕೊಡಿ’ ಎಂದು ಗೋಗರೆಯುತ್ತಿದ್ದ ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರಗಳ ಕೆರೆಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ಅಷ್ಟೊಂದು ನೀರನ್ನು ಹಿಡಿದಿಟ್ಟುಕೊಳ್ಳುವ ಪರಿಕರಗಳೇ ಅಲ್ಲಿ ಉಳಿದಿಲ್ಲ.

ಕೆರೆಗಳೆಲ್ಲ ಎಂದೋ ಹೂಳು ತುಂಬಿ ಬಟಾಬಯಲಾಗಿ ನಿಂತಿವೆ. ಹಳ್ಳಕೊಳ್ಳಗಳಲ್ಲಿ ನೀರನ್ನು ಸ್ಪಂಜಿನಂತೆ ಹಿಡಿದು ಮಲಗಿಸಬೇಕಿದ್ದ ಮರಳು ಹಾಸಿಗೆ ದಿಂಬುಗಳೆಲ್ಲ ಎಂದೋ ನಗರಗಳಿಗೆ ಸಾಗಿ ಹೋಗಿವೆ.

ಮಳೆನೀರಿನಿಂದ ಹಳ್ಳ ತುಂಬಿದರೂ ಅದು ಅಲ್ಲಿ ನಿಲ್ಲದೆ, ನೆಲದೊಳಕ್ಕೆ ಇಂಗದೇ ಸರ್ರೆಂದು ಬಂಗಾಳ ಉಪಸಾಗರಕ್ಕೆ ಸಾಗಿ ಹೋಗುತ್ತದೆ. ಕೆರೆ ಅಂಗಳಗಳನ್ನೇ ಒತ್ತುವರಿ ಮಾಡಿಕೊಂಡವರು ಕಂಗಾಲಾಗಿದ್ದಾರೆ. ಈಗ ಕೆರೆಯಲ್ಲಿ ನೀರಿನ ಮಟ್ಟ ಏರಿದ್ದೇ ತಡ, ಬೆಳೆ ರಕ್ಷಣೆಗೆಂದು ಕೆರೆಯ ಒಡ್ಡನ್ನೇ ಒಡೆಯುತ್ತಿದ್ದಾರೆ.

ತಮ್ಮ ಸ್ವಾರ್ಥಕ್ಕಾಗಿ ನೀರನ್ನು ಗಡಿಯಾಚೆ ಸಾಗಿಸುತ್ತಿದ್ದಾರೆ. ಮತ್ತೆ ಬೇಸಿಗೆ ಬಂದರೆ ಸಾಕು, ‘ಎತ್ತಿನ ಹೊಳೆಯ ನೀರು ಕೋಲಾರಕ್ಕೆ ಬೇಕೇ ಬೇಕು; ಸಮುದ್ರಕ್ಕೆ ಅದನ್ನು ವ್ಯರ್ಥ ಸಾಗಿಸಿದ್ದು ಸಾಕು’ ಎಂಬ ಘೋಷಣೆ ಕೇಳಬರುತ್ತದೆ. ಸಮುದ್ರವೇ (ಆಕಾಶ ಮಾರ್ಗದಲ್ಲಿ) ಸಾಗಿ ಬಂದು ಸುರಿದರೂ ‘ಮೊಣಕಾಲೇ ನೀರು’ ಎಂಬಂಥ ಪರಿಸ್ಥಿತಿ ಪಾಪ, ಕೋಲಾರಕ್ಕೆ ಬರುತ್ತದೆ.

ಋತುಮಾನಗಳ ಸಮತೋಲ ತಪ್ಪುತ್ತಿದೆ ಎಂದು ವಿಜ್ಞಾನಿಗಳು ಮುನ್ನೆಚ್ಚರಿಕೆ ಕೊಡುತ್ತಲೇ ಬಂದಿದ್ದಾರೆ. ಪೃಥ್ವಿಯ ಹವಾಗುಣ ಶೀಘ್ರವಾಗಿ ಬದಲಾಗುತ್ತಿದೆ; ಇಂದು ಬರಗಾಲವಿದ್ದಲ್ಲಿ ನಾಳೆ ಮಹಾಪೂರ ಬಂದೀತು; ಇಂದು ದಟ್ಟಡವಿ ಇದ್ದಲ್ಲಿ ನಾಳೆ ಬರಗಾಲ ಬಂದೀತು. ದೊಡ್ಡ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡರೆ ದೀರ್ಘಕಾಲದ ಪರಿಣಾಮಗಳು ಅನಿರೀಕ್ಷಿತವಾಗಬಹುದು ಎಂದು ಅವರು ಪದೇಪದೇ ಹೇಳುತ್ತ ಬಂದಿದ್ದು ನಿಜವಾಗುತ್ತಿದೆ. ವಿಜ್ಞಾನಿಗಳು ಕೊಡುವ ಅಂಥ ಮುನ್ಸೂಚನೆಗಳನ್ನು ಮುಚ್ಚಿಟ್ಟರೆ ಅಥವಾ ಕಡೆಗಣಿಸುತ್ತ ಹೋದರೆ ಏನಾದೀತು? ಅಮೆರಿಕದ ಎಕ್ಸನ್ ಮೊಬಿಲ್ (Exxon Mobil) ಎಂಬ ಬಹುದೊಡ್ಡ ತೈಲ ಕಂಪೆನಿ ಸತ್ಯವನ್ನೇ ಸುಳ್ಳೆಂದು ಸಾಬೀತು ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದೆ.

ಪೆಟ್ರೋಲು, ಡೀಸೆಲ್ ಮತ್ತು ಕಲ್ಲಿದ್ದಲನ್ನು ಉರಿಸುವುದರಿಂದಾಗಿಯೇ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚುತ್ತ ಹೋಗಿ ಭೂಮಿ ಬಿಸಿಯಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ ‘ಹವಾಗುಣ ಬದಲಾವಣೆ ಸುಳ್ಳು’ ಎಂದು ಸಾಧಿಸಲು ತೈಲ ಕಂಪೆನಿಗಳು ಹೆಣಗುತ್ತವೆ. ವಿಜ್ಞಾನಿಗಳಿಗೆ ಆಮಿಷ ಒಡ್ಡಿ ಸಾಕ್ಷ್ಯಗಳನ್ನು ಸಿದ್ಧಪಡಿಸಲು ಹೇಳುತ್ತವೆ.

ಸರ್ಕಾರವನ್ನು ನಡೆಸುವವರಿಗೂ ಭಾರೀ ಹಣದ ಆಮಿಷ ಒಡ್ಡಿ, ಸೌರಶಕ್ತಿಯಂಥ ಬದಲೀ ಸುರಕ್ಷಿತ ಇಂಧನಗಳ ಸಂಶೋಧನೆಗಳಿಗೆ ಹಣ ಸಿಗದಂತೆ ನೋಡಿಕೊಳ್ಳುತ್ತವೆ. ತೈಲದ ಬಳಕೆಯನ್ನು ನಿಯಂತ್ರಿಸಬಲ್ಲ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ರಾಷ್ಟ್ರೀಯ ಮುಖಂಡರು ಸಹಿ ಹಾಕದ ಹಾಗೆ ಒತ್ತಡ ಹೇರುತ್ತವೆ. ಕಳೆದ ಮೂರು ದಶಕಗಳಿಂದ ಅಂಥದೇ ಕೆಲಸ ಮಾಡುತ್ತಿದ್ದ ಎಕ್ಸನ್ ಮೊಬಿಲ್ ಕಂಪೆನಿಯ ಬಣ್ಣ ಇದೀಗ ಬಯಲಾಗಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಮೊತ್ತದ ಷೇರು ವಹಿವಾಟು ನಡೆಸುತ್ತಿದ್ದ ಎಕ್ಸನ್ ಮೊಬಿಲ್‌ಗೆ ಸತ್ಯ ಗೊತ್ತಿರಲಿಲ್ಲವೆಂದಲ್ಲ. ಹವಾಗುಣ ಬದಲಾಗುತ್ತಿದೆ ಎಂಬುದು ನಮಗೆಲ್ಲ ಸೂಚನೆ ಸಿಗುವುದಕ್ಕೂ ಮೊದಲೇ, ಅಂದರೆ 1977ರಲ್ಲೇ ಈ ತೈಲ ಕಂಪೆನಿಗೆ ಅದು ಗೊತ್ತಾಗಿತ್ತು. ಕಂಪೆನಿಯ ಹಿರಿಯ ವಿಜ್ಞಾನಿ ಜೇಮ್ಸ್ ಬ್ಲ್ಯಾಕ್ ಎಂಬಾತ ಆ ವರ್ಷ ಎಲ್ಲ ಹಿರಿಯ ಅಧಿಕಾರಿಗಳ ಎದುರು ಒಂದು ಉಪನ್ಯಾಸ ನೀಡಿದ್ದ: ‘ಖನಿಜತೈಲವನ್ನು ಉರಿಸುತ್ತ ಹೋಗುವುದರಿಂದ ವಾತಾವರಣದ ಇಂಗಾಲದ ಡೈಆಕ್ಸೈಡ್ (ಸಿಓಟು) ಪ್ರಮಾಣ ಹೆಚ್ಚುತ್ತ ಹೋಗಿ, ಕ್ರಮೇಣ ಮನುಷ್ಯರಿಗಷ್ಟೇ ಅಲ್ಲ, ಇತರ ಜೀವಿಗಳಿಗೂ ಮಾರಕವಾಗಲಿದೆ’ ಎಂದು ಚಿತ್ರ ಮತ್ತು ಆಲೇಖಗಳ ಮೂಲಕ ವಿವರಿಸಿದ್ದ.

‘ಕೆಲವು ಪ್ರದೇಶಗಳಲ್ಲಿ ಅತಿವೃಷ್ಟಿ, ಇನ್ನು ಕೆಲವು ಕಡೆ ಅನಾವೃಷ್ಟಿ ಆಗುತ್ತದೆ’ ಎಂದಿದ್ದ. ಅಂದಿನ ದಿನಗಳಲ್ಲಿ ಲಭ್ಯವಿದ್ದ ಎಲ್ಲ ವೈಜ್ಞಾನಿಕ ಮಾಹಿತಿಗಳನ್ನೂ ಕಲೆಹಾಕುತ್ತಲೇ ಹೋದ ಈತ ಮರುವರ್ಷ ಮತ್ತೊಂದು ಅಂಥದೇ ಉಪನ್ಯಾಸದಲ್ಲಿ, ಯಾವ ಯಾವ ದೇಶಗಳಲ್ಲಿ ಅದು (ಹವಾಗುಣ ಬದಲಾವಣೆ) ಹೇಗೆ ಪರಿಣಾಮ ಬೀರಲಿದೆ ಎಂತಲೂ ವಿವರಣೆ ನೀಡಿದ್ದ. ಕೃಷಿಯನ್ನೇ ನಂಬಿದ ದೇಶಗಳು ಯಾವ ಬಗೆಯಲ್ಲಿ ಸಂಕಷ್ಟಕ್ಕೊಳಗಾಗಬಹುದು ಎಂದು ವಿವರಿಸಿದ್ದ. ‘ಇನ್ನು ಐದು-ಹತ್ತು ವರ್ಷಗಳ ಒಳಗೆ ದೃಢ ನಿರ್ಧಾರ ತಳೆದು ಇಂಧನತೈಲಗಳ ಬಳಕೆಯನ್ನು ಕಡಿಮೆ ಮಾಡದಿದ್ದರೆ ಇಡೀ ಪೃಥ್ವಿಗೆ ಬಹುದೊಡ್ಡ ಸಂಕಟ ಬರಲಿದೆ’ ಎಂದಿದ್ದ.

ಅಷ್ಟಾಗಿದ್ದೇ ತಡ, ದಿಗಿಲುಗೊಂಡಂತೆ ಎಕ್ಸನ್ ಕಂಪೆನಿ ಮರುವರ್ಷವೇ ಈ ಕುರಿತು ವ್ಯಾಪಕ ಸಂಶೋಧನೆಗೆಂದು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸಿತು. ವಾತಾವರಣದಲ್ಲಿ ಸಿಓಟು ಹೇಗೆ ಹೆಚ್ಚುತ್ತಿದೆ ಎಂಬುದನ್ನು ಅಳೆಯಲೆಂದು ತಾಂತ್ರಿಕ ಪರಿಕರಗಳನ್ನು ಸಜ್ಜುಗೊಳಿಸಿ ತನ್ನದೇ ವಿಜ್ಞಾನಿಗಳನ್ನು ನೇಮಕ ಮಾಡಿಕೊಂಡಿತು.

1979ರಲ್ಲಿ ತನ್ನದೇ ಒಂದು ತೈಲ ಸಾಗಣೆಯ ಹಡಗಿನಲ್ಲಿ ವಿಶೇಷ ಉಪಕರಣಗಳನ್ನು ಜೋಡಿಸಿಕೊಂಡು ಸಮುದ್ರ ಮತ್ತು ಗಾಳಿಯಲ್ಲಿನ ಸಿಓಟು ಪ್ರಮಾಣವನ್ನು ಅಳೆಯತೊಡಗಿತು. ಟೆಕ್ಸಾಸ್ ವಿಶ್ವವಿದ್ಯಾಲಯ ಮತ್ತು ಎಮ್‌ಐಟಿಯ ವಿಜ್ಞಾನಿಗಳಿಗೆ ಧನಸಹಾಯ ನೀಡಿ, ತಾಪಮಾನ ಏರಿಕೆಯ ವಿವಿಧ ಮಾಡೆಲ್‌ಗಳನ್ನು ರೂಪಿಸಿತು. ವಾತಾವರಣದಲ್ಲಿ ಸಿಓಟು ಹೀಗೇ ಹೆಚ್ಚುತ್ತ ಹೋದರೆ ಎಲ್ಲೆಲ್ಲಿ ಮಳೆ ಪ್ರಮಾಣ ಹೇಗೆ ಹೇಗೆ ಅಪರಾತಪರಾ ಆದೀತು, ಎಲ್ಲೆಲ್ಲಿ ಜೀವಮಂಡಲದ ಮೇಲೆ ಎಂತೆಂಥ ಪರಿಣಾಮ ಆದೀತು ಎಂಬೆಲ್ಲ ವಿವರಗಳನ್ನೂ ಕಂಪೆನಿಯ ಹಿರಿಯ ವಿಜ್ಞಾನಿ ರೋಜರ್ ಕೋಹೆನ್ ಎಂಬಾತ ಪ್ರಬಂಧ ರೂಪದಲ್ಲಿ ಬರೆದು ಪ್ರಕಟಿಸಿದ.

ಮುಂದಿನ ಮೂರು ವರ್ಷಗಳವರೆಗೆ ಇಂಥ ಸಂಶೋಧನೆಯಲ್ಲಿ ತಾನೇ ಇತರೆಲ್ಲ ತೈಲ ಕಂಪೆನಿಗಳಿಗಿಂತ ಮುಂದೆ ಇದ್ದೇನೆಂದು ಎಕ್ಸನ್ ಕಂಪೆನಿ ಟಾಂ ಟಾಂ ಮಾಡುತ್ತ ಹೋಯಿತು. ತನ್ನ ಸಂಶೋಧನೆಗಳ ಬಗ್ಗೆ ಅದಕ್ಕೆ ಅದೆಷ್ಟು ಹೆಮ್ಮೆ ಇತ್ತೆಂದರೆ ಸರ್ಕಾರವೂ ಬೇಕಿದ್ದರೆ ತನ್ನದೇ ವಿಶೇಷ ‘ಎಸ್ಸೊ ಅಟ್ಲಾಂಟಿಕ್’ ಹಡಗಿನಲ್ಲಿ ಜಂಟಿ ಸಂಶೋಧನೆ ಕೈಗೊಳ್ಳಬಹುದೆಂದು ಆಹ್ವಾನವನ್ನೂ ನೀಡಿತ್ತು. ಸಿಓಟು ಪ್ರಮಾಣ ಹೀಗೇ ಹೆಚ್ಚುತ್ತ ಹೋದರೆ ಮುಂದಿನ ದಿನಗಳಲ್ಲಿ ಜಾಗತಿಕ ಕೃಷಿ, ಆಹಾರ ಉತ್ಪಾದನೆ ಮತ್ತು ಜನಜೀವನದ ಮೇಲೆ ಏನೇನು ಪರಿಣಾಮ ಉಂಟಾಗಲಿದೆ ಎಂಬುದನ್ನೂ ನಿಷ್ಕರ್ಷೆ ಮಾಡಬೇಕಿದೆ ಎಂದೂ ಅದು ತನ್ನ ವರದಿಯಲ್ಲಿ ಹೇಳಿತ್ತು.

ಆಮೇಲೆ ಏನಾಯಿತೊ, ಕಂಪೆನಿ ಪಕ್ಕಾ ಉಲ್ಟಾ ತಿರುಗಿ ನಿಂತಿತು. 1980ರ ದಶಕದಲ್ಲಿ ಸಿಓಟು ಕುರಿತ ತನ್ನದೇ ಸಂಶೋಧನೆಗಳಿಗೆ ಧನಸಹಾಯವನ್ನು ಹಠಾತ್ತಾಗಿ ನಿಲ್ಲಿಸಿತು. ಬದಲಿಗೆ, ಪೆಟ್ರೋಲ್, ಡೀಸೆಲ್ ಹೊಗೆಗೂ ವಾತಾವರಣ ಕಾವೇರುವುದಕ್ಕೂ ಏನೇನೂ ಸಂಬಂಧ ಇಲ್ಲವೆಂದು ವಾದಿಸಬಲ್ಲವರಿಗೆ ಕುಮ್ಮಕ್ಕು ನೀಡತೊಡಗಿತು. ವಿಜ್ಞಾನಿಗಳೇ ಅಲ್ಲದ ‘ತಜ್ಞ’ರಿಗೆ ಮತ್ತು ಪ್ರತಿವಾದಿ ಭಯಂಕರರಿಗೆ ಧನಸಹಾಯ ನೀಡಿ ಬೇರೆ ಬಗೆಯ ಅಂಕಿಅಂಶಗಳನ್ನು ಹೊಮ್ಮಿಸುತ್ತ ಹೋಯಿತು. ವಾತಾವರಣದ ಏರುಪೇರು ಬರೀ ತಾತ್ಕಾಲಿಕವೆಂದೂ ಅದಕ್ಕೆ ಜ್ವಾಲಾಮುಖಿಗಳು ಅಥವಾ ಕಾಡಿನ ಬೆಂಕಿ ಕಾರಣವೆಂದೂ ಅಥವಾ ಸೂರ್ಯನಿಂದ ಆಗಾಗ ಹೊಮ್ಮುವ ಸೌರಜ್ವಾಲೆಗಳೇ ಅತಿ ಬಿಸಿಲಿಗೆ ಕಾರಣವೆಂದೂ ಹೇಳಬಲ್ಲ ಸಂಶೋಧನೆಗಳು ಹೆಚ್ಚತೊಡಗಿದವು.

ಭಾರತದಂಥ ಹಿಂದುಳಿದ ರಾಷ್ಟ್ರಗಳಲ್ಲಿ ಕೋಟ್ಯಂತರ ಮನೆಗಳಲ್ಲಿ ಸೌದೆ ಉರಿಸುವುದರಿಂದ ಅಥವಾ ಕೆಸರಿನ ಭತ್ತದ ಗದ್ದೆಗಳಲ್ಲಿ ಮೀಥೇನ್ ಹೊಮ್ಮುವುದರಿಂದ ವಾತಾವರಣ ಜಾಸ್ತಿ ಬಿಸಿಯಾಗುತ್ತಿದೆ ಎಂಬ ಅಪಪ್ರಚಾರಗಳಿಗೆ ಪುಷ್ಟಿ ಕೊಡತೊಡಗಿತು. ಡೀಸೆಲ್ ಅಥವಾ ಪೆಟ್ರೋಲ್ ಬಳಕೆಯ ನಿಯಂತ್ರಣಕ್ಕೆ ಅಮೆರಿಕ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಹೊರಟರೂ ಅದನ್ನು ತಡೆಗಟ್ಟುವಂತೆ ವಶೀಲಿ ಪ್ರಭಾವ ಬೀರತೊಡಗಿತು. ವಾತಾವರಣ ಇನ್ನಷ್ಟು ಬಿಸಿಯಾಗದಂತೆ ತಡೆಯಬಲ್ಲ ಯಾವುದೇ ಅಂತರರಾಷ್ಟ್ರೀಯ ಒಪ್ಪಂದಕ್ಕೂ ಅಮೆರಿಕ ಸಹಿ ಹಾಕದಂತೆ ತೈಲ ಕಂಪೆನಿಗಳು ಒತ್ತಡ ಹೇರುವಲ್ಲಿ ಇದೇ ಎಕ್ಸನ್ ಕಂಪೆನಿ ಮುಂಚೂಣಿಯಲ್ಲಿ ನಿಂತಿತು.

ಇತ್ತ ಸಾಚಾ ವಿಜ್ಞಾನಿಗಳಿಗೆ ಕಸಿವಿಸಿಯಾಗತೊಡಗಿತ್ತು. ಪೃಥ್ವಿಮಟ್ಟದ ಯಾವುದೇ ಒಪ್ಪಂದಕ್ಕೂ ಸಹಿ ಹಾಕದ, ತನ್ನ ಪ್ರಜೆಗಳ ಐಭೋಗಗಳಿಗೆ ತುಸುವೂ ಅಡೆತಡೆ ಒಡ್ಡದ ಅಮೆರಿಕದ ನಿಲುವು ಇಡೀ ಭೂಮಿಯನ್ನು ಪ್ರಪಾತದಂಚಿಗೆ ಒಯ್ಯುತ್ತಿದೆ ಎಂಬುದು ಅವರಿಗೆ ಮನವರಿಕೆಆಗುತ್ತಿತ್ತು. ಭೂಮಿ ಬಿಸಿಯಾಗಲು ತೈಲ- ಕಲ್ಲಿದ್ದಲು ಕಾರಣವಲ್ಲ ಎಂಬ ನಿರಾಕರಣೆಗೆ ಪುಷ್ಟಿ ನೀಡುವ ಯಾವ ಯಾವ ನಕಲೀ ಸಂಶೋಧನೆಗಳಿಗೆ ಈ ಕಂಪೆನಿ ರಹಸ್ಯ ಧನ ಸಹಾಯ ಮಾಡುತ್ತಿದೆ ಎಂಬುದೇ ವಿಜ್ಞಾನಿಗಳಿಗೆ ಸಂಶೋಧನೆಯ ವಿಷಯವಾಯಿತು. ಅಂಥ ನಕಲೀ ಸಂಶೋಧನೆ, ಅದರಲ್ಲಿ ತೊಡಗಿಕೊಂಡ ಎಡಬಿಡಂಗಿ ವಿಜ್ಞಾನಿಗಳ ಪಟ್ಟಿಯೂ ಸಿದ್ಧವಾಯಿತು.

ಬ್ರಿಟಿಷ್ ರಾಯಲ್ ಸೊಸೈಟಿಯ (ವಿಜ್ಞಾನ ಅಕಾಡೆಮಿಯ) ಹಿರಿಯ ವ್ಯವಸ್ಥಾಪಕ ಬಾಬ್ ವಾರ್ಡ್ ಉಗ್ರವಾದ ಪತ್ರವೊಂದನ್ನು ಎಕ್ಸನ್ ಕಂಪೆನಿಗೆ ಬರೆದು, ಅಂಥ ನಕಲಿ ಸಂಶೋಧನೆಗಳಿಗೆ ಧನ ಸಹಾಯವನ್ನು ನೀಡದಂತೆ ಎಚ್ಚರಿಸಿದ್ದೂ ಆಯಿತು. ಕಂಪೆನಿಯ ಷೇರುದಾರರೇ ಬೇರೆಬೇರೆ ಅವಧಿಯಲ್ಲಿ ಅಪಪ್ರಚಾರವನ್ನು ನಿಲ್ಲಿಸುವಂತೆ 61 ಬಾರಿ ಮನವಿ ಮಾಡಿಕೊಂಡಿದ್ದನ್ನೆಲ್ಲ ಕಂಪೆನಿ ಮೂಲೆಗುಂಪು ಮಾಡಿತು.

ಇದೀಗ ಅಮೆರಿಕ ಎಚ್ಚೆತ್ತಿದೆ. ಎಕ್ಸನ್ ಕಂಪೆನಿಯ ಎಲ್ಲ ದಾಖಲೆಗಳನ್ನು ಪರಿಶೀಲನೆಗೆ ಒಡ್ಡುವಂತೆ ನ್ಯೂಯಾರ್ಕಿನ ಅಟಾರ್ನಿ ಜನರಲ್ ಅದಕ್ಕೆ ನೋಟೀಸು ಕಳಿಸಿದ್ದಾರೆ. ಹಿಂದಿನ ಸರ್ಕಾರಗಳ ತಪ್ಪನ್ನೆಲ್ಲ ಸರಿಪಡಿಸುವಂತೆ ಒಬಾಮ ಇದೀಗ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ: ಉತ್ತರ ಧ್ರುವದ ಬಳಿ ಇರುವ ಭಾರೀ ದೊಡ್ಡ ನಿಕ್ಷೇಪದಿಂದ ತೈಲ ಸಾಗಿಸಬೇಕಿದ್ದ ಕೀಸ್ಟೋನ್ ಯೋಜನೆಯನ್ನು ಅಷ್ಟಕ್ಕೇ ನಿಲ್ಲಿಸುವಂತೆ ‘ರೈಟ್ ಹಿಯರ್, ರೈಟ್ ನೌ’ ನಿಷೇಧ ಘೋಷಿಸಿದ್ದಾರೆ. ಹವಾಗುಣ ರಕ್ಷಣೆಯ ಪ್ರತಿಜ್ಞಾವಿಧಿಗೆ ಸಹಿ ಹಾಕುವಂತೆ ಅಮೆರಿಕದ 58 ಅತಿದೊಡ್ಡ ವಾಣಿಜ್ಯ ಸಂಸ್ಥೆಗಳಿಗೆ ಸುತ್ತೋಲೆ ಕಳಿಸಲಾಗಿದೆ. ಎಕ್ಸನ್ ಸಹಿ ಹಾಕಿಲ್ಲ.

ಈ ಖಳಕಂಪೆನಿಯ 25 ವರ್ಷಗಳ ಚರಿತ್ರೆಯಲ್ಲಿ ಅಡಗಿದ ಹೇಯ ಹುನ್ನಾರಗಳನ್ನೆಲ್ಲ ಕೆದಕಿ, ಸೂಕ್ತ ದಾಖಲೆಗಳ ಸಮೇತ ಕಲೆಹಾಕಿ ಪ್ರಕಟಿಸಿದ ಶ್ರೇಯ, ಪುಲಿಟ್ಝರ್ ವಿಜೇತ ‘ಇನ್‌ಸೈಡ್ ಕ್ಲೈಮೇಟ್ ನ್ಯೂಸ್’ ಹೆಸರಿನ ವಾರ್ತಾಸಂಸ್ಥೆಗೆ ಸೇರುತ್ತದೆ. ನೀಲಾ ಬ್ಯಾನರ್ಜಿ, ಲೀಸಾ ಸಾಂಗ್ ಮತ್ತು ಡೇವಿಡ್ ಹೆಸೆಮೆಯರ್ ಜೊತೆಯಾಗಿ ಸಿದ್ಧಪಡಿಸಿದ ‘ದಿ ರೋಡ್ ನಾಟ್ ಟೇಕನ್’ ಹೆಸರಿನ ಈ ತನಿಖಾ ವರದಿ ಈಗ ಇ-ಬುಕ್ ರೂಪದಲ್ಲೂ ಲಭ್ಯವಿದೆ.

ಹಿಂದೆಲ್ಲ ದೊಡ್ಡ ದೊಡ್ಡ ಸಿಗರೇಟ್ ಕಂಪೆನಿಗಳು ಸರ್ಕಾರಗಳ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದವು. ತಂಬಾಕು ಸೇವನೆಯಿಂದ ಕಾಯಿಲೆಗಳು ಬರುತ್ತವೆ ಎಂಬ ಸತ್ಯವನ್ನು ಮರೆಮಾಚಲೆಂದು ಎಷ್ಟೊಂದು ಹಣವನ್ನು ವ್ಯಯಿಸಿ ಬದಲೀ ‘ವೈಜ್ಞಾನಿಕ ವರದಿ’ಗಳನ್ನು ರೂಪಿಸುತ್ತಿದ್ದವು. ತಂಬಾಕಿಗೆ ನಿಷೇಧ ಹಾಕದಂತೆ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿದ್ದವು.

ಹವಾಗುಣದ ಈಗಿನ ಪ್ರಳಯಾಂತಕ ವೈಪರೀತ್ಯಕ್ಕೆ ಯಾರು ಕಾರಣರು? ಎಲ್ಲ ದೇಶಗಳು ಒಟ್ಟಾಗಿ ಪೃಥ್ವಿ ರಕ್ಷಣೆಗೆ ಶ್ರಮಿಸೋಣವೆಂದು 20 ಬಾರಿ ಜಾಗತಿಕ ಸಭೆಕರೆದರೂ ಆ ಇಪ್ಪತ್ತೂ ಬಾರಿ ಒಪ್ಪಂದ ವಿಫಲವಾಗಲು ಒಂದು ಕಂಪೆನಿಯ, ಒಂದು ಬೃಹತ್ ರಾಷ್ಟ್ರದ ಸ್ವಾರ್ಥ ರಾಜಕಾರಣವೆ? ಕಾಸಿಗೆ ಕೈಚಾಚುವ ವಿಜ್ಞಾನಿಗಳ ಸ್ವಾರ್ಥ ಕಾರಣವೆ? ಕೋಲಾರದಲ್ಲಿ ಕೆರೆಯನ್ನು ಒತ್ತುವರಿ ಮಾಡಿ ಅದರಲ್ಲಿ ನೀರು ನಿಲ್ಲದಂತೆ ಕಟ್ಟೆಯನ್ನೇ ಒಡೆಯುವ ಪ್ರಭಾವೀ ರೈತನ ಸ್ವಾರ್ಥ ಕಾರಣವೆ? ಗೊತ್ತಿಲ್ಲ. ಪೃಥ್ವಿಯ ಸಂಯಮದ ಕಟ್ಟೆ ಎಷ್ಟು ದಿನ ನಿಂತೀತೊ, ಅದೂ ಗೊತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.