ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ದಸರೆಗೆ ವರ್ಣರಂಜಿತ ಚಾಲನೆ: ‘ಶ್ರೇಯಾ ಘೋಷಾಲ್‌’ ಹಾಡಿಗೆ ಯುವಜನರು ಫಿದಾ

Published : 6 ಅಕ್ಟೋಬರ್ 2024, 17:23 IST
Last Updated : 6 ಅಕ್ಟೋಬರ್ 2024, 17:23 IST
ಫಾಲೋ ಮಾಡಿ
Comments

ಮೈಸೂರು: ಹೊರವಲಯದ ಉತ್ತನಹಳ್ಳಿಯ ಬಳಿ ಆರಂಭವಾದ ‘ಯುವ ದಸರಾ’ದ ಮೊದಲ ದಿನವಾದ ಭಾನುವಾರ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಸೊಂಪಾದ ಆಲಾಪ, ಹುಚ್ಚೆದ್ದು ಕುಣಿಸುವ ಹಾಡುಗಳ ಮಿಶ್ರಣವು ಪ್ರೇಕ್ಷಕರಿಗೆ ಮುದ ನೀಡಿತು.

‘ಸುನ್ ರಹಾ ಹೇ ನಾ ತೂ...’ ‘ಆಶಿಕಿ–2’ ಹಿಂದಿ ಚಿತ್ರಗೀತೆಯೊಂದಿಗೆ ವೇದಿಕೆಗೆ ಆಗಮಿಸಿದ ಗಾಯಕಿಯನ್ನು ಯುವ ಸಮೂಹ ಶಿಳ್ಳೆ, ಕರತಾಡನದೊಂದಿಗೆ ಸ್ವಾಗತಿಸಿತು. ಅವರು ‘ಮೈಸೂರು ನಮಸ್ಕಾರ’ ಎನ್ನುತ್ತಿದ್ದಂತೆ ಅಭಿಮಾನದ ಕೂಗು ಹೆಚ್ಚಿತು.

ಕನ್ನಡದ ಹಲವು ಗೀತೆಗಳಿಗೆ ಶ್ರೇಯಾ ಧ್ವನಿಯಾದರು. ‘ಕೋಟಿಗೊಬ್ಬ–2’ ಚಿತ್ರದ 'ಸಾಲುತ್ತಿಲ್ಲವೇ, ಸಾಲುತ್ತಿಲ್ಲವೇ..’ ಮಧುರ ಗೀತೆ ಕೇಳುಗರ ಹೃದಯ ಗೆದ್ದಿತು. ‘ಸಂಜು ವೆಡ್ಸ್ ಗೀತಾ’ ಚಿತ್ರದ 'ಗಗನವೇ ಬಾಗಿ, ಭುವಿಯನು ಕೇಳಿದ ಹಾಗೆ’, ‘ಬಿರುಗಾಳಿ’ ಚಿತ್ರದ 'ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ' ಹಾಡಿಗೆ ಸಂಗೀತಪ್ರೇಮಿಗಳು ಮನಸೋತರು.

ಹಿಂದಿ ಚಲನಚಿತ್ರಗಳ ಹಲವು ಗೀತೆಗಳೂ ಪ್ರೇಕ್ಷಕರನ್ನು ಕುಣಿಸಿದವು. ‘ ಹ್ಯಾಪಿ ನ್ಯೂ ಇಯರ್‌’ ಚಿತ್ರದ 'ಮನ್‌ವಾ ಲಾಗೆ’, ‘ಗುರು’ ಚಿತ್ರದ ‘ ಬರ್ಸೋರೆ ಮೇಘಾ... ಮೇಘಾ..’ ಹಾಡುಗಳಿಗೆ ಯುವತಿಯರು ಸೊಂಟ ಬಳುಕಿಸಿದರು.

ಸ್ಯಾಂಡಲ್‌ವುಡ್ ಸಂಭ್ರಮ: ಕಾರ್ಯಕ್ರಮದ ಆರಂಭದಲ್ಲಿ ಕನ್ನಡದ ನಟಿಯರಾದ ಮಾನ್ವಿತಾ ಹರೀಶ್, ಜಾನ್ವಿ ರಾಯೆಲಾ ನೃತ್ಯ ಮಾಡಿದರು. ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಂಡವು ಕನ್ನಡ ಸಿನಿ ಗೀತೆಗಳ ಮೂಲಕ ರಂಜಿಸಿದರು.

‘ಕಾಗದದ ದೋಣಿಯಲ್ಲಿ ನಾ ಕೂರುವಂಥ ಹೊತ್ತಾಯಿತೆ’, 'ಕಾಣದಂತೆ ಮಾಯವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು’, ‘ಬಡವಾ ರಾಸ್ಕಲ್’ ಹಾಡುಗಳ ಮೂಲಕ ರಂಜಿಸಿದರು. ಸಾವಿರಾರು ಮಂದಿ ಸಂಗೀತ ಪ್ರಿಯರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಅಮ್ಮ ರಾಮಚಂದ್ರ ಸೇರಿದಂತೆ ಸ್ಥಳೀಯ ತಂಡದವರು ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಯುವ ದಸರೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಚಾಲನೆ ನೀಡಿದರು.

ಯುವ ದಸರೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಚಾಲನೆ ನೀಡಿದರು.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಚಾಲನೆ

ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಆಯೋಜಿಸಿರುವ ಯುವ ದಸರೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಚಾಲನೆ ನೀಡಿದರು.

‘ನಮ್ಮ ನಾಡಿನ ಹಬ್ಬವನ್ನು ಹೆಮ್ಮೆಯಿಂದ ಆಚರಿಸೋಣ’ ಎಂದು ಹೇಳಿ ಶುಭಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ರವಿಶಂಕರ್, ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಕೆ.ವಿವೇಕಾನಂದ, ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಡಿಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಇದ್ದರು.

ಕತ್ತಲ ದಾರಿಯಲ್ಲಿ ಪಯಣ...

ಯುವ ದಸರೆಯನ್ನು ತರಾತುರಿಯಲ್ಲಿ ಉತ್ತನಹಳ್ಳಿಗೆ ಸ್ಥಳಾಂತರಿಸಿರುವ ಜಿಲ್ಲಾಡಳಿತವು ಅಲ್ಲಿನ ವ್ಯವಸ್ಥೆ ಸರಿಪಡಿಸುವ ಉತ್ಸಾಹ ತೋರಿಲ್ಲ. ಕಾರ್ಯಕ್ರಮದ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿತ್ತು. ಪೊಲಿಸರು ಕತ್ತಲಲ್ಲೇ ಕಾವಲು ಕಾದಿದ್ದರು. ವೇದಿಕೆ ಪ್ರವೇಶಿಸುವಲ್ಲೂ ಹಲವೆಡೆ ಕತ್ತಲಿತ್ತು. ರಾತ್ರಿಯಾದರೂ ದೀಪ ಅಳವಡಿಸುವ ಕಾರ್ಯ ಪ್ರಗತಿಯಲ್ಲೇ ಇತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT