ಇಂದು ಭಾರತದ ಆದಿಕವಿ ಎಂದು ಗುರುತಿಸಲ್ಪಟ್ಟ ವಾಲ್ಮೀಕಿ ಹುಟ್ಟಿದ ದಿನ. ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿಯ ಹುಟ್ಟಿದ ದಿನವನ್ನು ಒಂದು ರಾಷ್ಟೀಯ ದಿನವಾಗಿ ಆಚರಿಸುತ್ತಿರುವುದು, ಕವಿಗೆ ಸಂದ ಗೌರವವೆನ್ನಬಹುದು. 24,000 ಸಂಸ್ಕೃತ ಶ್ಲೋಕಗಳಿರುವ ಒಂದು ಬೃಹತ್ ಗ್ರಂಥವನ್ನು ಯಾವುದೇ ಹಿಂದಿನ ಮಾದರಿಯ ಆಸರೆಯಿಲ್ಲದೆ ತಾನೇ ಸೃಷ್ಟಿಸಿದ ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ.

ವಾಲ್ಮೀಕಿ ಎನ್ನುವ ದಲಿತ ಸಮುದಾಯದ ಬೇಡರ ಕವಿಗೆ ದಕ್ಕಿದ ಈ ಅಪಾರ ಜನಮನ್ನಣೆಯಿಂದಾಗಿ, ಅವನ ಹಿನ್ನೆಲೆಯ ಕುರಿತು ಸಾಕಷ್ಟು ಪುರಾಣಗಳು ಸೃಷ್ಟಿಯಾಗಿರುವುದನ್ನು ನಾವು ಕೇಳಿರುತ್ತೇವೆ ಅಥವಾ ಓದಿರುತ್ತೇವೆ; ಅವನು ದರೋಡೆಕೋರನಾಗಿದ್ದ, ಕ್ರೂರಿಯಾಗಿದ್ದ, ಕ್ರೌಂಚ ಪಕ್ಷಿಯ ಪ್ರಕರಣದಿಂದ ಮನಃಪರಿವರ್ತನೆಯಾದ, ನಾರದ ಮಹರ್ಷಿ ಅವನ ಬದುಕು ಬದಲಾಯಿಸಿದ, ‘ಮರ ಮರ’ ಮಂತ್ರದಿಂದಲೇ ಪ್ರಭಾವಿತನಾಗಿ ರಾಮಾಯಣ ರಚಿಸಿದ, ದೀರ್ಘ ತಪಸ್ಸಿನಿಂದಾಗಿ, ಮೈಮೇಲೆ ಹುತ್ತ ಬೆಳೆದು ಅದರಿಂದ ಅವನಿಗೆ ವಾಲ್ಮೀಕಿ ಎನ್ನುವ ಹೆಸರು ಬಂತು ಮತ್ತು ಅದರಿಂದ ಎದ್ದು ಬಂದು ಜ್ಞಾನೋದಯಗೊಂಡು ಕವಿಯಾದ... ಅಂತಹ ಪುರಾಣಗಳ ತಿರುಳು.

ಇಂದು, ವಾಲ್ಮೀಕಿ ಜನಾಂಗಕ್ಕೆ ಸೇರಿದ ದಲಿತರು, ಉತ್ತರ ಭಾರತದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಆದರೆ, ಇವರು, ವಾಲ್ಮೀಕಿ ಕುರಿತಂತೆ ಹೆಣೆದಿರುವ ಈ ಮೇಲಿನ ಕಥೆಗಳನ್ನು ಅಕ್ಷರಶಃ ನಿರಾಕರಿಸುತ್ತಾರೆ. ಅಂದರೆ, ಒಬ್ಬ ದುರ್ಬಲ ಜಾತಿಯ ವ್ಯಕ್ತಿ ತನ್ನ ಶ್ರಮ ಮತ್ತು ಸ್ವಸಾಮರ್ಥ್ಯದಿಂದ ಒಂದು ಶ್ರೇಷ್ಠ ಗ್ರಂಥವನ್ನು ರಚಿಸಿದ ಎಂದು ಒಪ್ಪಿಕೊಳ್ಳಲು ನಮಗೆ ಯಾಕೆ ಸಾಧ್ಯವಾಗುತ್ತಿಲ್ಲ, ಎನ್ನುವುದು ಅವರ ಪ್ರಶ್ನೆ. ಒಬ್ಬ ಮನುಷ್ಯನ ಅಪ್ರತಿಮ ಸಾಧನೆಯನ್ನು, ಅವನ ಹಿನ್ನೆಲೆಯನ್ನು ಕೆದಕದೇ, ಅದರ ಮೇಲೆ ಕಥೆಗಳನ್ನು ಹೆಣೆಯದೇ, ಬಾಹ್ಯ ಕಾರಣಗಳನ್ನು ಹಿಗ್ಗಿಸಿ ಮತ್ತು, ಅವನ ಸಾಧನೆಯನ್ನು ಕುಗ್ಗಿಸದೇ, ವಸ್ತುಶಃ ಸ್ವೀಕರಿಸುವ ಮಾನಸಿಕ ವಿಕಸತೆ ನಮ್ಮಲ್ಲಿ ಇನ್ನೂ ಅರಳಿಲ್ಲ ಎನ್ನುವುದು ವಾಸ್ತವ.

ವಾಲ್ಮೀಕಿಯ ಸಾಧನೆಯನ್ನು ಹೋಲಿಸಲು ಮತ್ತು ಜಾತಿವ್ಯವಸ್ಥೆಯ ಚೌಕಟ್ಟಿನಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲು ನಮಗಿಲ್ಲಿ ದಲಿತ ಸಮುದಾಯದ ಇನ್ನೆರಡು ಸಾಧಕರ ನಿದರ್ಶನವಿದೆ; ಏಕಲವ್ಯ ಮತ್ತು ಅಂಬೇಡ್ಕರ್. ಬೇಡರ ಹುಡುಗ ಏಕಲವ್ಯನ ಬಿಲ್ವಿದ್ಯೆ ಪರಿಣತಿಯನ್ನು ಪ್ರಬಲ ವರ್ಗಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅವನ ಕಾಲದ ಅತಿರಥ ಮಹಾರಥ ಕ್ಷತ್ರಿಯ ರಾಜಕುಮಾರರು ಗುರುಗಳ ಸತತ ಮಾರ್ಗದರ್ಶನವಿದ್ದೂ ಹರಸಾಹಸ ಪಡುತ್ತಿದ್ದ ಕೌಶಲವನ್ನು ಮೀರಿ, ಏಕಲವ್ಯ ಒಬ್ಬನೇ ಬಿಲ್ವಿದ್ಯೆ ಕಲಿತ, ಅವರಿಂದಲೂ ಚೆನ್ನಾಗಿ ಕಲಿತ. ಆದರೆ, ಮೇಲ್ವರ್ಗ ಅವನ ಪ್ರತಿಭೆಯನ್ನು ಒಪ್ಪಿಕೊಳ್ಳದೇ ಹೋಯಿತು, ಅವನ ಸಾಧನೆಯ ಕುರಿತು ಕಟ್ಟುಕತೆ ಕಟ್ಟದಿದ್ದರೂ ಹೆಬ್ಬೆರಳ ಕಿತ್ತುಕೊಂಡಿತು ಮತ್ತು ಈ ಮೂಲಕ ಅವನ ಪರಿಶ್ರಮವನ್ನು ಮಣ್ಣಾಗಿಸಿತು. ಏಕಲವ್ಯನಿಗೆ ಹೋಲಿಸಿದರೆ, ಅಂಬೇಡ್ಕರ್ ಜೀವನದ ಪ್ರತಿಯೊಂದು ಏಳು ಬೀಳು, ಪರಿಶ್ರಮ, ಮೈಲಿಗಲ್ಲುಗಳು ಇತ್ಯಾದಿಗಳ ಕುರಿತು ಸ್ಪಷ್ಟ ದಾಖಲೆಗಳು ಇರುವುದರಿಂದ, ಅವರ ಸಾಧನೆಯನ್ನು ಅಲ್ಲಗಳೆಯಲು ಸಾಧ್ಯವಾಗಲಿಲ್ಲವೆನ್ನಬಹುದು. ಬಹುಶಃ, ದಾಖಲೆಗಳಿಲ್ಲದಿದ್ದಲ್ಲಿ ಅಂಬೇಡ್ಕರ್ ಕೂಡ ಬುದ್ಧನಂತೆ ಅವತಾರ ಪುರುಷರಾಗುವ ಎಲ್ಲಾ ಸಾಧ್ಯತೆಗಳಿದ್ದವು.

ವಿಶೇಷವಾಗಿ, ನಾವಿಲ್ಲಿ ಮನಗಾಣಬೇಕಾದುದು, ಯಾವುದೊ ಒಂದು ನಿರ್ದಿಷ್ಟ ಘಟನೆಯೊಂದೇ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ. ಈ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಾ ಯಾವುದೊ ಒಂದು ಗಳಿಗೆಯಲ್ಲಿ ಅದು ತನ್ನ ಪೂರ್ಣತೆಯನ್ನು ಪ್ರಕಟಿಸಬಹುದು. ಇದು ಬುದ್ಧನಿಗೂ ಅನ್ವಯವಾಗುತ್ತದೆ. ಜನಪ್ರಿಯ ವ್ಯಾಖ್ಯಾನಗಳು, ಬುದ್ದ ಒಬ್ಬ ರೋಗಿ, ಹಸಿದವ ಮತ್ತು ಹೆಣವನ್ನು ನೋಡಿದ ತಕ್ಷಣ ಪ್ರಾಪಂಚಿಕ ಸುಖಗಳಿಗೆ ಅವನಲ್ಲಿ ವೈರಾಗ್ಯ ಮೂಡಿತು ಎನ್ನುತ್ತವೆ. ಆದರೆ, ಅವನಲ್ಲಿ ಜಗತ್ತಿನ ಕುರಿತ ಕಾರುಣ್ಯ ಬಾಲ್ಯದಿಂದಲೇ ಜಾಗೃತವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಅದೇ ರೀತಿ, ವಾಲ್ಮೀಕಿಯಲ್ಲಿಯೂ ರಾಮಾಯಣ ಬರೆಯುವಷ್ಟು ಅಪಾರ ವಿದ್ವತ್ ಯಾವುದೋ ಒಂದು ಘಟನೆಯಿಂದಷ್ಟೇ ರೂಪುಗೊಳ್ಳಲು ಸಾಧ್ಯವಿಲ್ಲ. ಬದಲಾಗಿ, ಅಲ್ಲಿ ಸಾಕಷ್ಟು ಸ್ವಪರಿಶ್ರಮ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೇವಲ ಬಾಹ್ಯ ಘಟನೆಗಳನ್ನಷ್ಟೇ ವೈಭವೀಕರಿಸಿದರೆ ವಾಲ್ಮೀಕಿಯ ಸಾಧನೆಯನ್ನು ಕುಗ್ಗಿಸಿದಂತೆ ಆಗುತ್ತದೆ. ವಾಲ್ಮೀಕಿಯ ಜೀವನದ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.

ಬಹಳ ಮುಖ್ಯ ವಿಚಾರವೆಂದರೆ, ವಾಲ್ಮೀಕಿಯ ಹಿನ್ನೆಲೆಯ ಕುರಿತಂತೆ ಇರುವ ಕಥೆಗಳು ಬೇರೆಯವರು ಸೃಷ್ಟಿಸಿರುವುದೇ ಹೊರತು, ಸ್ವತಃ ವಾಲ್ಮೀಕಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೆ, ವಾಲ್ಮೀಕಿಯ ಮಾತೃ ವಾತ್ಸಲ್ಯದ ಕುರಿತು ರಾಮಾಯಣದಲ್ಲಿಯೇ ಸಾಕಷ್ಟು ಮಾಹಿತಿ ಸಿಗುತ್ತದೆ. ರಾಮ ಸೀತೆಯನ್ನು ತ್ಯಜಿಸಿದಾಗ, ಅಯೋಧ್ಯೆಯ ಪುರುಷ ಸಾಮ್ರಾಜ್ಯವು ಅವಳ ಚಾರಿತ್ರ್ಯವನ್ನು ಸಂಶಯದಿಂದ ನೋಡುವಾಗ ಅವಳಿಗೆ ಆಶ್ರಯ ನೀಡಿದ್ದು ವಾಲ್ಮೀಕಿ. ಅವಳನ್ನು ಮತ್ತು ಅವಳ ಅವಳಿ ಮಕ್ಕಳನ್ನು ಪಾಲನೆ ಪೋಷಣೆ ಮಾಡಿದ್ದೂ ಇದೇ ಮಹರ್ಷಿ. ಇಂತಹ ಹೃದಯ ವೈಶಾಲ್ಯತೆ ಒಬ್ಬ ಶ್ರೇಷ್ಠ ಸಾಧಕನಿಗೆ ಮಾತ್ರ ಸಾಧ್ಯ. ಆದ್ದರಿಂದ, ವಾಲ್ಮೀಕಿಯನ್ನು, ಮೊದಲ ಮಹಾಕಾವ್ಯ ಬರೆದ ಆದಿಕವಿ, ಶ್ರೇಷ್ಠ ಕವಿಯಾಗಿಯೇ ಸ್ವೀಕರಿಸೋಣ.

ಕೊನೆಯದಾಗಿ, ಇಂದು ಪುರಾಣ ಮತ್ತು ಐತಿಹ್ಯಗಳ ವಿಭಿನ್ನ ನಿರೂಪಣೆಗಳ ನಡುವೆ ನಮಗೆ ವಾಲ್ಮೀಕಿ ಹೇಗೆ ಪ್ರಸ್ತುತವಾಗುತ್ತಾನೆ? ನಾವಿಂದು ಅವನನ್ನು ಒಬ್ಬ ಬೇಡ ಸಮುದಾಯದ ಅಪ್ರತಿಮ ಪ್ರತಿಭೆ, ದೈವ ಭಾಷೆಯೆಂದು ಕರೆಯುವ ಮತ್ತು ಸಮಾಜದ ಕೆಳಸ್ತರದ ಜನರಿಗೆ ನಿಷೇಧವಾಗಿದ್ದ ಸಂಸ್ಕ್ರತವನ್ನು ಕರಗತ ಮಾಡಿಕೊಂಡು ಅದರಲ್ಲಿಯೇ ಶ್ರೇಷ್ಠ ಮತ್ತು ಪ್ರಥಮ ಮಹಾಕಾವ್ಯ ರಚಿಸಿದ ದಲಿತ ಕವಿ ಎನ್ನುವುದು ಹೆಚ್ಚು ಪ್ರೇರಣೀಯವಾಗುತ್ತದೆ.

ಲೇಖಕಿ: ಸಹ ಪ್ರಾಧ್ಯಾಪಕಿ, ತುಮಕೂರು ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.