ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನತಂತ್ರದ ಹಬ್ಬ: ಹುಕ್ಕೇರಿ, ಜೊಲ್ಲೆ ಭವಿಷ್ಯ ‘ನಿರ್ಧಾರ’ ಇಂದು

ಮತದಾನಕ್ಕೆ ಕ್ಷಣಗಣನೆ
Last Updated 22 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರ ಆಯ್ಕೆಗಾಗಿ ಏ. 23ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹಾಲಿ ಸಂಸದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಅಖಾಡದಲ್ಲಿರುವ 11 ಮಂದಿಯ ‘ಭವಿಷ್ಯ’ ಬರೆಯಲು ಮತದಾರರು ಸಜ್ಜಾಗಿದ್ದಾರೆ.

ಮತದಾನಕ್ಕಾಗಿ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ನಿಪ್ಪಾಣಿ, ಚಿಕ್ಕೋಡಿ– ಸದಲಗಾ, ಅಥಣಿ, ಕಾಗವಾಡ, ಕುಡಚಿ ರಾಯಬಾಗ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 8,06,052 ಪುರುಷರು, 7,73,202 ಮಹಿಳೆಯರು ಹಾಗೂ 55 ಇತರರು ಸೇರಿ ಒಟ್ಟು 15,79,309 ಮತದಾರರಿದ್ದಾರೆ. 7,487 ಸೇವಾ ಮತದಾರರಿದ್ದಾರೆ. ಮತದಾರ ಪ್ರಭುಗಳು ಯಾವ ಪಕ್ಷದ ಅಭ್ಯರ್ಥಿಗೆ ಮಣೆ ಹಾಕುತ್ತಾರೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಿಬ್ಬಂದಿ ನಿಯೋಜನೆ

ಕ್ಷೇತ್ರದಲ್ಲಿ 392 ನಗರ, ಪಟ್ಟಣ ಹಾಗೂ 1,493 ಗ್ರಾಮೀಣ ಪ್ರದೇಶಗಳಲ್ಲಿ ಸೇರಿ ಒಟ್ಟು 1,885 ಮತಗಟ್ಟೆಗಳಿವೆ. 8,427 ಮಂದಿ ಅಂಗವಿಕಲ ಹಾಗೂ ಅಶಕ್ತ ಮತದಾರರಿದ್ದಾರೆ. 31,204 ಮಂದಿ 18ರಿಂದ 19 ವರ್ಷ ವಯಸ್ಸಿನ ಮತದಾರರಿದ್ದಾರೆ. 5,108 ಇವಿಎಂಗಳು ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ವಿತರಿಸಲಾಗಿದೆ. 9,500 ಮಂದಿ ಮತಗಟ್ಟೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವಿಎಂ, ವಿವಿಪ‍್ಯಾಟ್ ಮೊದಲಾದ‍ ಪರಿಕರಗಳೊಂದಿಗೆ ಸಿದ್ಧವಾದ ಸಿಬ್ಬಂದಿಯನ್ನು ನಿಗದಿತ ಮತಗಟ್ಟೆಗಳಿಗೆ ಸೋಮವಾರ ಬಸ್‌ಗಳಲ್ಲಿ ಕಳುಹಿಸಲಾಯಿತು.

ಬೆಳಿಗ್ಗೆ 5.30ಕ್ಕೆ ‘ಅಣಕು ಮತದಾನ ಪ್ರಕ್ರಿಯೆ’ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ತಮ್ಮನ್ನು ಬೆಂಬಲಿಸುವಂತೆ ಮತದಾರರ ಮನವೊಲಿಕೆಗೆ ಹಲವು ರೀತಿಯ ಕಸರತ್ತುಗಳನ್ನು ನಡೆಸಿದ್ದಾರೆ. ಮತದಾನದ ಮುನ್ನಾ ದಿನವಾದ ಸೋಮವಾರ ಮನೆ–ಮನೆಗಳಿಗೆ ಭೇಟಿ ನೀಡಿದ ಅಭ್ಯರ್ಥಿಗಳು ಮತ ಯಾಚಿಸಿದರು. ಅಂತೆಯೇ, ಚುನಾವಣಾ ಆಯೋಗದ ಸೂಚನೆ ಮೇರೆಗೆ ಬಹುತೇಕ ಆಡಳಿತ ವ್ಯವಸ್ಥೆಯು ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿದೆ. ಇವೆಲ್ಲ ಪರಿಶ್ರಮಕ್ಕೆ ಮತದಾರರ ಸ್ಪಂದನೆ ಏನು ಎನ್ನುವುದು ಏ. 23ರಂದು ನಿರ್ಧಾರವಾಗಲಿದ್ದು, ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿರಲಿದೆ. ಅವುಗಳನ್ನು ತೆರೆದು ಎಣಿಸುವ ಪ್ರಕ್ರಿಯೆ ಹಾಗೂ ಫಲಿತಾಂಶಕ್ಕಾಗಿ ಬರೋಬ್ಬರಿ ಒಂದು ತಿಂಗಳು ಕಾಯಬೇಕು. ಏಕೆಂದರೆ, ಮತ ಎಣಿಕೆಯು ಮೇ 23ರಂದು ಚಿಕ್ಕೋಡಿ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದೆ.

ನೇರ ಹಣಾಹಣಿ

2ನೇ ಬಾರಿಗೆ ಆಯ್ಕೆ ಬಯಸಿರುವ ಪ್ರಕಾಶ ಹುಕ್ಕೇರಿ ಹಾಗೂ ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎನ್ನುವ ತವಕದಲ್ಲಿರುವ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯ ಜೊಲ್ಲೆ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರ ನಡೆಸಿದ್ದಾರೆ. ಮತದಾರರು ಯಾರ ಮಾತಿಗೆ ‘ಬೆಲೆ’ ಕೊಡುತ್ತಾರೆ ಎನ್ನುವ ಚರ್ಚೆ ಕ್ಷೇತ್ರದಾದ್ಯಂತ ಇದೆ.

‘ಮತದಾರರು ನಿರ್ಭಯವಾಗಿ ಮತ ಚಲಾಯಿಸಲು ಹಾಗೂ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ಮತಗಟ್ಟೆಗಳಿಗೆ ಸಿಪಿಎಂಎಫ್, ವಿಡಿಯೊ ಕ್ಯಾಮೆರಾ, ವೆಬ್ ಕಾಸ್ಟಿಂಗ್, ಮೈಕ್ರೋ ಅಬ್ಸರ್ವರ್‌ಗಳ ನೇಮಕ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್ ಮಾಹಿತಿ ನೀಡಿದರು.

‘ಅಂಗವಿಕಲರು, ಶತಾಯುಷಿಗಳು, ಅಂಧರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ವೀಲ್ ಚೇರ್‌, ಅವಶ್ಯಕತೆಗೆ ಅನುಗುಣವಾಗಿ ಬ್ರೈಲ್ ಎಪಿಕ್, ಬ್ರೈಲ್ ಡಮ್ಮಿ ಬ್ಯಾಲೆಟ್ ಪೇಪರ್‌, ಬೂತಕನ್ನಡಿ ಪೂರೈಸಲಾಗುತ್ತಿದೆ. ಅಂಧ ಮತದಾರರನ್ನು ಮತಗಟ್ಟೆಗೆ ಕರೆತರಲು 18 ವರ್ಷ ಒಳಗಿನ ಸ್ವಯಂ ಸೇವಕರನ್ನು ಕೂಡ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

* 15,79,309 ಮತದಾರರರು

* 1,885 ಮತಗಟ್ಟೆಗಳು

* 9,500 ಸಿಬ್ಬಂದಿ ನಿಯೋಜನೆ

ಕಣದಲ್ಲಿರುವವರು

ಪ್ರಕಾಶ ಹುಕ್ಕೇರಿ (ಕಾಂಗ್ರೆಸ್), ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಬಳಿಗಟ್ಟಿ ಪ್ರವೀಣಕುಮಾರ (ಉತ್ತಮ ಪ್ರಜಾಕೀಯ ಪಕ್ಷ). ಪಕ್ಷೇತರರು: ಮಗದುಮ್ ಇಸ್ಮಾಯಿಲ್ ಮಗದುಮ್, ಮೋಹನ ಮೋಟಣ್ಣವರ, ಜಿತೇಂದ್ರ ನೇರ್ಲೆ, ಶ್ರೇಣಿಕ್ ಜಂಗಟೆ, ಅಪ್ಪಾಸಾಹೇಬ ಕುರಣೆ, ಮಚ್ಚೇಂದ್ರ ಕಾಡಾಪುರೆ, ಕಲ್ಲಪ್ಪ ಗುಡಸಿ ಮತ್ತು ವಿಶ್ವನಾಥ ಕಲ್ಲೋಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT