ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಸಾಗರ ಕಾರ್ಖಾನೆಯಿಂದ ಅನ್ಯಾಯ: ರೈತರ ಪ್ರತಿಭಟನೆ

ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯ
Published : 20 ಸೆಪ್ಟೆಂಬರ್ 2024, 15:15 IST
Last Updated : 20 ಸೆಪ್ಟೆಂಬರ್ 2024, 15:15 IST
ಫಾಲೋ ಮಾಡಿ
Comments

ರಾಮದುರ್ಗ: ತಾಲ್ಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಷೇರುದಾರರ ಹಿತ ಕಾಯದೆ ಎನ್‍ಸಿಎಲ್‍ಟಿ ಹರಾಜು ಹಾಕಿ ಷೇರುದಾರರು, ರೈತರು ಮತ್ತು ನೌಕರರಿಗೆ ಅನ್ಯಾಯ ಮಾಡಿದೆಂದು ಆರೋಪಿಸಿ ಉತ್ತರ ಕರ್ನಾಟಕ ರೈತ ಮತ್ತು ಕಬ್ಬು ಬೆಳೆಗಾರರ ಸಂಘ ಮತ್ತು ಷೇರುದಾರರು ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸಿದರು.

ಜಿಲ್ಲಾಧಿಕಾರಿ ಇಲ್ಲವೇ ಸಕ್ಕರೆ ಆಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಹಾರ ಒದಗಿಸುವ ತನಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ನೀರು, ಊಟ ಸೇವಿಸುವುದಿಲ್ಲ ಎಂದು ನೂರಾರು ಷೇರುದಾರರು ಹಾಗೂ ರೈತರು ಕಾರ್ಖಾನೆಯ ಗೇಟ್ ಎದುರು ಪ್ರತಿಭಟನೆ ಆರಂಭಿಸಿದರು.

ಕಾರ್ಖಾನೆಯ ಪ್ರಾರಂಭಕ್ಕೆ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯ ರೈತರು ಷೇರು ಖರೀದಿ ಮಾಡಿದ್ದರು. ಕಾರ್ಖಾನೆ ನಷ್ಟದಲ್ಲಿದೆ ಎಂದು ಕಳೆದ ಎರಡು ವರ್ಷದ ಹಿಂದೆ ಬೇರೆ ಕಂಪನಿಗೆ ನೀಡಿದ್ದರು. ಆದರೆ ಈಗ ಎನ್‍ಸಿಎಲ್‍ಟಿ ಮೂಲಕ ₹140 ಕೋಟಿಗೆ ಗುಡಗುಂಟಿ ಶುಗರ್ಸ್‍ಗೆ ಮಾರಾಟ ಮಾಡಿದ್ದು ಷೇರುದಾರರ ಹಕ್ಕು ಇಲ್ಲವಾಗಿದೆ. ರೈತರಿಗೆ ಬಿಲ್‌ ಸಿಗುತ್ತಿಲ್ಲ. ನೌಕರರಿಗೆ ವೇತನ ಪಾವತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಕಬ್ಬು ಸಾಗಿಸುವ ವಾಹನಗಳನ್ನು ದಾರಿಯಲ್ಲಿಯೇ ನಿಲ್ಲಿಸಿ ಪ್ರತಿಭಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 75 ಸಾವಿರ ಷೇರುದಾರರು ಇದ್ದಾರೆ. ಸುಮಾರು ₹14 ಕೋಟಿಯಷ್ಟು ರೈತರ ಬಾಕಿ ಹಣ ನೀಡಬೇಕಿದೆ. ₹7.8 ಕೋಟಿಯಷ್ಟು ನೌಕರರ ವೇತನ ನೀಡಬೇಕಿದೆ. ಆದರೆ ಎನ್‍ಸಿಎಲ್‍ಟಿ ಇದಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಮಾರಾಟ ಮಾಡಿರುವುದು ರೈತರು, ಷೇರುದಾರರಿಗೆ ತೀವ್ರ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕಾರ್ಖಾನೆ ಖರೀದಿ ಮಾಡಿದ ಗುಡಗುಂಟಿ ಸಮೂಹದ ಮುಖ್ಯಸ್ಥರು ರಾಜಕೀಯದಲ್ಲಿ ಇದ್ದಾರೆ. ರೈತರ ಕಷ್ಟ ಅವರಿಗೆ ಚೆನ್ನಾಗಿ ಗೊತ್ತಿದೆ. ಒಂದು ಕಾರ್ಖಾನೆ ನಡೆಯಬೇಕಿದ್ದರೆ ರೈತ ಷೇರು ಇರುತ್ತದೆ ಎಂಬ ಸಾಮಾನ್ಯ ಜ್ಞಾನ ಇರುತ್ತದೆ. ಬ್ಯಾಂಕಿನ ಸಾಲಕ್ಕೆ ಹಣ ಪಾವತಿಸಿದ ಎನ್‌ಸಿಎಲ್‌ಟಿ ರೈತರ ಷೇರು ಮತ್ತು ಕಬ್ಬಿನ ಬಾಕಿ ಬಿಲ್‌ ಬಗ್ಗೆ ಏಕೆ ಗಮನ ಹರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮದುರ್ಗದ ಸಿಪಿಐ ಈರಣ್ಣ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು. ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ಜಿಲ್ಲಾ ಅಧ್ಯಕ್ಷ ಸದಾಶಿವ ಮಾತನವರ, ಸದಾಶಿವ ಉತ್ತೂರ, ಸಲೀಂ ಖಾಜಿ, ನೆಹರು ನಾಯಕ ಇದ್ದರು. ಸಂಜೆ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT