ಬೆಚ್ಚಗಿರುವುದು ಮುಖ್ಯ: ಡಾ.ಜ್ಯೋತಿ
ಚಳಿಗಾಲದಲ್ಲಿ ವೈರಾಣುಗಳು ಕ್ರಿಯಾಶೀಲವಾಗುತ್ತವೆ. ಸಹಜವಾಗಿಯೇ ಕೆಮ್ಮು ಶೀತ ಜ್ವರ ಫ್ಲೂ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳು ಬರುತ್ತವೆ. ಇದರಿಂದ ಪಾರಾಗಲು ಜನರು ಯಾವಾಗಲೂ ಆರೋಗ್ಯವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಕಾಯಿಲೆ ಬಂದ ಮೇಲೆ ಔಷಧೋಪಚಾರ ಮಾಡಿಕೊಳ್ಳುವ ಬದಲು ಮುಂಚಿತವಾಗಿಯೇ ಜಾಗ್ರತೆ ವಹಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೊಧನಾ ಕೇಂದ್ರದ ಶ್ವಾಸಕೋಶ ತಜ್ಞೆ ಜೆಎನ್‌ಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಜ್ಯೋತಿ ಹಟ್ಟಿಹೊಳಿ ಸಲಹೆ ನೀಡಿದ್ದಾರೆ. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಬಿಸಿಯಾದ ಊಟ ನೀರು ಬಳಸಬೇಕು. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಬೇಕು. ಚಿಕ್ಕ ಮಕ್ಕಳು ಹಾಗೂ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಬೇಗ ಸೋಂಕಿಗೆ ಒಳಗಾಗುತ್ತಾರೆ. ಅಂಥವರ ಬಗ್ಗೆ ಕಾಳಜಿ ವಹಿಸಬೇಕು. ಆಯಾ ಕಾಲಕ್ಕೆ ತಕ್ಕಂತೆ ಲಸಿಕೆಗಳೂ ಇವೆ. ಅಗತ್ಯವಿದ್ದವರು ಮುಂಜಾಗ್ರತೆಯಿಂದ ಲಸಿಕೆ ಪಡೆದುಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನಸಂದಣಿಯಲ್ಲಿ ಭಾಗವಹಿಸಬಾರದು. ಯಾರಿಗೇ ಸೋಂಕು ಇದ್ದರೂ ಎಲ್ಲರಿಗೂ ತಗಲುತ್ತದೆ. ಯಾರಿಗಾದರೂ ಶೀತ ಜ್ವರಗಳು ಇದ್ದರೆ ತಮ್ಮನ್ನು ತಾವು ‘ಐಸೋಲೇಟ್’ ಮಾಡಿಕೊಳ್ಳಬೇಕು ಎಂದೂ ಡಾ.ಜ್ಯೋತಿ ಕಿವಿಮಾತು ಹೇಳಿದ್ದಾರೆ.