ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಬಾಗ: ಕೆಟ್ಟುನಿಂತ ಶುದ್ಧ ನೀರಿನ ಘಟಕಗಳು

ಆನಂದ ಮನ್ನಿಕೇರಿ
Published : 30 ಸೆಪ್ಟೆಂಬರ್ 2024, 5:11 IST
Last Updated : 30 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments

ರಾಯಬಾಗ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. 107 ಘಟಕಗಳಲ್ಲಿ ಸುಮಾರು 25 ಘಟಕಗಳು ವರ್ಷದ ಹಿಂದಿನಿಂದಲೂ ಬಂದ್ ಆಗಿವೆ. ಮತ್ತೆ ಕೆಲವು ನಿರ್ವಹಣೆ ಇಲ್ಲದೇ ಸೊರಗಿವೆ. ಇದರಿಂದ ತಾಲ್ಲೂಕಿನ ಜನರಿಗೆ ಶುದ್ಧ ನೀರು ಇನ್ನೂ ಕನಸಾಗಿದೆ.

ಈ ಘಟಕಗಳನ್ನು ಏಜೆನ್ಸಿಗಳ ಅಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಮೋಟರ್‌ ದುರಸ್ತಿ, ಫಿಲ್ಟರ್‌ ಸಮಸ್ಯೆ, ವಿದ್ಯುತ್‌ ಸಮಸ್ಯೆ, ಪೈಪ್‌ಲೈನ್‌ಗಳಲ್ಲಿ ದೋಷ ಮುಂತಾದ ಕಾರಣಗಳಿಂದ ಸ್ಥಗಿತಗೊಂಡಿವೆ. ಒಮ್ಮೆ ಸ್ಥಗಿತಗೊಂಡರೆ ಮತ್ತೆ ಅದರ ದುರಸ್ತಿಗೆ ವರ್ಷಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಾಣವಾಗಿದ್ದ ಶುದ್ಧ ನೀರಿನ ಘಟಕ ಕೆಟ್ಟು ನಿಂತು ಹಲವು ತಿಂಗಳಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ದಕ್ಕದಂತಾಗಿದೆ. 2021-22ನೇ ಸಾಲಿನಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ₹12 ಲಕ್ಷ ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗಿದೆ. ರಾಯಬಾಗ ಮತಕ್ಷೇತ್ರದ ಶಾಸಕ ಡಿ.ಎಂ.ಐಹೊಳೆ ಈ ಘಟಕ ಉದ್ಘಾಟಿಸಿದ್ದರು.

ನಿರ್ವಹಣೆ ವಿಫಲ:

‘ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಪಂಚಾಯಿತಿಗೆ ಬರುವ ಕುಡಿಯುವ ಹಾಗೂ ನೈರ್ಮಲ್ಯ ಇಲಾಖೆ ಸುಮಾರು ತಿಂಗಳುಗಳಿಂದ ಈ ಘಟಕದ ವಿದ್ಯುತ್ ಬಿಲ್ ಕೂಡ ಪಾವತಿಸಿಲ್ಲ’ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ಹಿಡಕಲ್ ಗ್ರಾಮದ ಲಕ್ಷ್ಮಿ ದೇವಾಲಯದ ಬಳಿ ಬಳಕೆಗೆ ಬಾರದ ಶುದ್ಧ ಕುಡಿಯುವ ನೀರಿನ ಘಟಕ
ಹಿಡಕಲ್ ಗ್ರಾಮದ ಲಕ್ಷ್ಮಿ ದೇವಾಲಯದ ಬಳಿ ಬಳಕೆಗೆ ಬಾರದ ಶುದ್ಧ ಕುಡಿಯುವ ನೀರಿನ ಘಟಕ

ಈ ಘಟಕ ಆರಂಭಗೊಂಡು ಕೆಲವು ತಿಂಗಳು ನಂತರ ಕೆಟ್ಟಿದೆ. ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ರೋಗಿಗಳ ಸಂಬಂಧಿಕರು ಕೂಡ ಅಶುದ್ಧ ನೀರು ಕುಡಿದು ರೋಗ ಬರಿಸಿಕೊಳ್ಳುವಂತಾಗಿದೆ.

ಸುಮಾರು 65 ಘಟಕಗಳು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸುಪರ್ದಿಯಲ್ಲಿವೆ. 42 ಘಟಕಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. 42 ಘಟಕಗಳ ಪೈಕಿ 25 ಘಟಕಗಳು ಸ್ಥಳ ಬದಲಾವಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಬಂದ್ ಆಗಿರುತ್ತವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾದ ಈ ಘಟಕ ದುರಸ್ತಿ ಕಾಣದೇ ಹಲವಾರು ತಿಂಗಳಾಗಿವೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಘಟಕದ ಸಂಪೂರ್ಣ ಜವಾಬ್ದಾರಿ ನಮ್ಮ ಇಲಾಖೆಗೆ ನೀಡಿದರೆ ಅದರ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದೆ ಎನ್ನುತ್ತಾರೆ ವೈದ್ಯಾಧಿಕಾರಿ.

ಇವರೇನಂತಾರೆ?

ನೀರಿನ ಘಟಕ ಕೆಟ್ಟುನಿಂತಾಗಿನಿಂದ ಬಹಳ ಕಷ್ಟವಾಗುತ್ತಿದೆ. ನೀರು ಕೂಡ ಖರೀದಿಸಿ ಕುಡಿಯುವಂತಾಗಿದೆ. ಮಹಿಳೆ ಮಕ್ಕಳೆಲ್ಲ ಬೀದಿಬೀದಿ ಅಲೆದು ನೀರು ಸಂಗ್ರಹಿಸಬೇಕಾಗಿದೆ. ಅದಷ್ಟು ಬೇಗ ದುರಸ್ತಿ ಮಾಡಬೇಕು. –
ಮಾಲವ್ವ ಕಾಂಬಳೆ ಪಟ್ಟಣ ನಿವಾಸಿ
ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿರುವ ಶುದ್ಧ ನೀರಿನ ಘಟಕದ ನಿರ್ವಹಣೆಯ ಜವಾಬ್ದಾರಿ ಸಾರ್ವಜನಿಕ ಆಸ್ಪತ್ರೆಗೆ ನೀಡಿದರೆ ಮಾತ್ರ ರೋಗಿಗಳಿಗೆ ಅನುಕೂಲ ಆಗಲಿದೆ. ಅಲ್ಲಿಯವರೆಗೂ ಸಮಸ್ಯೆ ತಪ್ಪಿದ್ದಲ್ಲ.
ಆರ್.ಎಚ್.ರಂಗಣ್ಣವರ ತಾಲ್ಲೂಕು ವೈದ್ಯಾಧಿಕಾರಿ
ಘಟಕ ನಿರ್ಮಾಣಕ್ಕಾಗಿ ಜಾಗ ಬಳಸಿಕೊಂಡವರು ದುರಸ್ತಿ ಹೊಣೆ ಹೊತ್ತಿಲ್ಲ. ಇದರ ಸುತ್ತಲೂ ವಾತಾವರಣ ಮಾಲಿನ್ಯದಿಂದ ಕೂಡಿದೆ. ಆಸ್ಪತ್ರೆಯಿಂದ ಹಲವು ಬಾರಿ ದೂರು ನೀಡಿದರೂ ಗಮನಿಸಿಲ್ಲ.
–ಶಶಿಕಾಂತ ಕಾಂಬಳೆ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT