ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ: ಕಾಣದ ಸಂಭ್ರಮ

1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಿತ್ತೂರು ಚನ್ನಮ್ಮ ಸ್ಮರಣೆ
Published 19 ಜುಲೈ 2024, 4:08 IST
Last Updated 19 ಜುಲೈ 2024, 4:08 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ವೀರರಾಣಿ ಕಿತ್ತೂರು ಚನ್ನಮ್ಮ ತಮ್ಮ ಸೈನ್ಯದೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಘಳಿಗೆಗೆ ಇದೇ ವರ್ಷ ಅಕ್ಟೋಬರ್‌ 23ಕ್ಕೆ 200 ವರ್ಷ ಪೂರ್ಣಗೊಳ್ಳಲಿದೆ. ಈ ಮಹತ್ವದ ಘಟ್ಟಕ್ಕೆ ಪೂರಕವಾಗಿ ಸಂಭ್ರಮಾಚರಣೆ ಕಂಡು ಬಂದಿಲ್ಲ. ಅದಕ್ಕೆ ಸಿದ್ಧತೆಯೂ ನಡೆದಿಲ್ಲ.

‘ಪ್ರತಿ ವರ್ಷ ಅಕ್ಟೋಬರ್‌ 23ರಿಂದ 25ರವರೆಗೆ ಉತ್ಸವ ನಡೆಯುತ್ತದೆ. ಜಿಲ್ಲಾಡಳಿತ ಅದೇ ತಿಂಗಳು ತರಾತುರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ, ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ ಸುಮ್ಮನಾಗುತ್ತದೆ. ಆದರೆ, ಹೀಗೆ ಅವಸರದಲ್ಲಿ ಕಾರ್ಯಕ್ರಮ ಮಾಡುವ ಬದಲು ವ್ಯವಸ್ಥಿತವಾಗಿ ಎಲ್ಲವೂ ನೆರವೇರಬೇಕು’ ಎಂಬ ಬೇಡಿಕೆ ಜನರಿಂದ ವ್ಯಕ್ತವಾಗಿದೆ.

ರಾಷ್ಟ್ರಪತಿ ಅಥವಾ ಪ್ರಧಾನಿ ಆಹ್ವಾನಿಸಿ:

‘ಸಂಭ್ರಮಾಚರಣೆಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಪ್ರಮುಖರನ್ನು ಆಹ್ವಾನಿಸಬೇಕು. ಅದಕ್ಕಾಗಿ ಸಮಯ ಹೊಂದಿರಬೇಕು. ಜುಲೈ ತಿಂಗಳಲ್ಲೇ ಮಠಾಧೀಶರು, ಸಾಹಿತಿಗಳು, ಕಲಾವಿದರು ಮತ್ತು ಕಿತ್ತೂರು ಸುತ್ತಮುತ್ತಲಿನ ಜನರ ಜೊತೆ ಪೂರ್ವಭಾವಿ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಬೇಕು’ ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭೀಮರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ಬೃಹತ್‌ ಸ್ವರೂಪದ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವವರೆಗೆ ಕಾಯುವ ಬದಲು ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದಲೇ ಸರ್ಕಾರವು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಿತ್ತು.ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಇತರ ಸಂಘ–ಸಂಸ್ಥೆಗಳು ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಚನ್ನಮ್ಮನನ್ನು ಸ್ಮರಿಸಬೇಕಿತ್ತು. ಆದರೆ, ಈ ಯಾವ ಕಾರ್ಯಗಳು ನಡೆದಿಲ್ಲ’ ಎಂದು ಸಾಹಿತಿ ಯ.ರು.ಪಾಟೀಲ ಹೇಳಿದರು.

₹5 ಕೋಟಿ ಅನುದಾನ ಕೊಡಿ:

‘ರಾಜ್ಯ ಸರ್ಕಾರ ಈ ಬಾರಿ ವಿಶೇಷ ಉತ್ಸವ ಆಚರಿಸಿದರಷ್ಟೇ ಸಾಲದು, ₹ 5 ಕೋಟಿ ಅನುದಾನವೂ ನೀಡಬೇಕು. ವಿಜಯೋತ್ಸವದ ದ್ವಿಶತಮಾನೋತ್ಸವ ನೆನಪಿನಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸೇರಿದ ಎಲ್ಲ ಐತಿಹಾಸಿಕ ಸ್ಥಳಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡಬೇಕು. ಜನರಿಗೆ ಸಾಧನೆಯನ್ನು ತಿಳಿಪಡಿಸಬೇಕು’ ಎಂದು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಕಿತ್ತೂರು ಉತ್ಸವ ಮೂರು ಬದಲು ಐದು ದಿನ ನಡೆಸಬೇಕು. ಐತಿಹಾಸಿಕ ಉತ್ಸವಕ್ಕೆ ಕಿತ್ತೂರು ಸಾಕ್ಷಿಯಾಗಬೇಕು. ಇದಕ್ಕಾಗಿ ಜಿಲ್ಲಾಡಳಿತ ತಕ್ಷಣವೇ ಪೂರ್ವಭಾವಿ ಸಭೆ ಕರೆಯಬೇಕು.
–ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚನ್ನಮ್ಮನ ಕಿತ್ತೂರು
1857ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆದ ಬಗ್ಗೆ ಪ್ರಸ್ತಾಪಿಸಲಾಗುತ್ತದೆ. ಆದರೆ 1824ರಲ್ಲೇ ಕಿತ್ತೂರು ಸಂಸ್ಥಾನವು ವಿಜಯಕಹಳೆ ಮೊಳಗಿಸಿತು. ಆದರೆ ಚನ್ನಮ್ಮಗೆ ಹೆಚ್ಚು ಆದ್ಯತೆ ಸಿಗಲಿಲ್ಲ.
–ಸಂತೋಷ ಹಾನಗಲ್ಲ ಇತಿಹಾಸ ಸಂಶೋಧಕ
ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಆಚರಣೆಗಾಗಿ ಶೀಘ್ರವೇ ಪೂರ್ವಸಭೆ ಮಾಡಲಾಗುವುದು. ಜಿಲ್ಲೆಯ ಪ್ರಮುಖರ ಜೊತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು.
–ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT