ಸಾಹಿತ್ಯಕ ಜಗಳಗಳೇ ಇಲ್ಲ: ಕೆ.ವಿ.
ಅಕ್ಷರ ಕನ್ನಡದಲ್ಲಿಯ ವಿಮರ್ಶೆಯನ್ನು ‘ಸಾಕ್ಷಿ’ ಕಡೆಯ ದಿನಗಳಿಂದಲೂ ಗಮನಿಸಿದ್ದೇನೆ. ಆಗ ಸಾಹಿತ್ಯ ಸಂಬಂಧ ಜಗಳಗಳು ನಡೆಯುತ್ತಿದ್ದವು. ಆದರೆ ಈಗ ಅಂಥ ಜಗಳಗಳೇ ಇಲ್ಲ. ಈಗ ಆ ಕಡೆ ಒಬ್ಬರಿದ್ದರೆ ಮತ್ತೊಂದು ಕಡೆ ಇನ್ನೊಬ್ಬರು ಮಾತಾಡುತ್ತಾರೆ. ಇಂಥ ವಾತಾವರಣದಲ್ಲಿ ವಿಮರ್ಶೆ ಹುಟ್ಟುವುದು ಕಷ್ಟ ಎಂದು ‘ನೀನಾಸಂ ಮಾತುಕತೆ’ಯ ಸಂಪಾದಕ ಕೆ.ವಿ. ಅಕ್ಷರ ಬೇಸರಿಸಿದರು. ‘ಇದು ವಿಮರ್ಶಕರ ಅಥವಾ ಓದುಗರ ಸಮಸ್ಯೆ ಅಲ್ಲ; ಸಂಸ್ಕೃತಿ ಸಮಾಜಕ್ಕೆ ವ್ಯಾಪಿಸುತ್ತಿರುವ ರೋಗ ಇರಬಹುದು. ಇದು ಸಕಾರಾತ್ಮಕ ರೋಗವೂ ಆಗಿರಬಹುದೇನೋ? ಒಟ್ಟಿನಲ್ಲಿ ದೊಡ್ಡ ಬದಲಾವಣೆಯಂತೂ ಆಗುತ್ತಿದೆ. ಸಾಹಿತ್ಯ ಅನ್ನುವುದು ಮೊದಲು ಸಂವಹನೆ ಮತ್ತು ಪ್ರತಿಸ್ಪಂದನೆ ಆಗಿತ್ತು. ಆದರೆ ಅದು ಈಗ ಉತ್ಪಾದನೆ ಮತ್ತು ಬಳಕೆ ಎಂಬುದಾಗಿ ವಿಸ್ತಾರವಾಗಿದೆ’ ಎಂದು ಅಭಿಪ್ರಾಯಪಟ್ಟರು.