ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟಿಸಿ: ಕುದುರೆ ಪಂದ್ಯಾವಳಿಗೆ ಹೈಕೋರ್ಟ್‌ ಅಸ್ತು

ಬೆಂಗಳೂರಿನ ಆನ್‌ ಕೋರ್ಸ್, ಮೈಸೂರು‍– ಮುಂಬೈನ ಆಫ್ ಕೋರ್ಸ್‌ಗಳಿಗೆ ಸಮ್ಮತಿ
Published 18 ಜೂನ್ 2024, 16:35 IST
Last Updated 18 ಜೂನ್ 2024, 16:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ನಿಲುವು, ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಬರೆ ಎಳೆದಂತಿದೆ’ ಎಂದು ಸರ್ಕಾರದ ಆದೇಶಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಬೆಂಗಳೂರು ಟರ್ಫ್ ಕ್ಲಬ್‌’ನಲ್ಲಿ (ರೇಸ್ ಕೋರ್ಸ್–ಬಿಟಿಸಿ) ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದೆ.

ಪಂದ್ಯಗಳ ಆಯೋಜನೆಗಾಗಿ ಕ್ಲಬ್‌ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ‘ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ ಕಂಪನಿ’ ಹಾಗೂ ಇತರರು ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ. ಇದರಿಂದಾಗಿ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಂದ್ಯಾವಳಿ ಪುನರಾರಂಭಗೊಳ್ಳಲಿವೆ.

‘ಬಿಟಿಸಿಯು, ಆನ್‌ ಕೋರ್ಸ್ (ಬೆಂಗಳೂರು) ಮತ್ತು ಆಫ್ ಕೋರ್ಸ್‌ (ಮೈಸೂರು, ಮುಂಬೈ) ಮೂಲಕ ಪಂದ್ಯಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಎಲ್ಲಾ ಪಂದ್ಯಗಳೂ, ಸರ್ಕಾರ ಈಗಾಗಲೇ 2024ರ ಮಾರ್ಚ್‌ನಲ್ಲಿ ನೀಡಿರುವ ಪರವಾನಗಿಗೆ ಅನುಗುಣವಾದ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತವೆ. ಹಾಗೆಯೇ, ಪ್ರತಿವಾದಿಗಳು ರೇಸಿಂಗ್ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸ್ವಾತಂತ್ಯ ಹೊಂದಿದ್ದಾರೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕುದುರೆ ಪಂದ್ಯಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಅವಲಂಬಿಸಿದ್ದಾರೆ. ಪ್ರತಿ ದಿನ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ ಮತ್ತು ಇದು ಬೊಕ್ಕಸಕ್ಕೆ ಸೇರುತ್ತದೆ. ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರೂ ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರದ ಮೂಗಿನಡಿಯಲ್ಲೇ ಇರುತ್ತವೆ. ಇಲ್ಲಿ ಅಕ್ರಮಗಳು ನಡೆಸುವ ಸಾಧ್ಯತೆಗಳೇ ಇಲ್ಲ’ ಎಂದು ನ್ಯಾಯಪೀಠಕ್ಕೆ ಮನದಟ್ಟು ಮಾಡಿಕೊಟ್ಟರು.

‘ತೆರಿಗೆ ವಂಚನೆ ಮತ್ತು ಅಕ್ರಮ ಬೆಟ್ಟಿಂಗ್ ನಡೆಸಿದವರ ವಿರುದ್ಧ, ದೋಷಾರೋಪ ಹೊತ್ತ ಬುಕ್ಕಿಗಳ ಪರವಾನಗಿ ರದ್ದುಪಡಿಸಲು ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟಕ್ಕೂ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ. ಆದ್ದರಿಂದ, ಪಂದ್ಯಗಳ  ಆಯೋಜನೆಗೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿದ್ದರು. ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದೆ.  

‘ಬೆಂಗಳೂರು ಟರ್ಫ್‌ ಕ್ಲಬ್‌’ ಪರ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ, ‘ದಿ ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ಸ್’ ಪರ ರವಿ ಬಿ.ನಾಯಕ್‌ ಮತ್ತು ಕೆ.ಬಿ.ಮೋನೇಶ್‌ ಕುಮಾರ್, ‘ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಪದ್ಮನಾಭನ್‌ ಮತ್ತು ಗಿರೀಶ್‌ ಬಾಳಿಗಾ’ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್‌ ಹಾಗೂ ‘ಕರ್ನಾಟಕ ಜಾಕಿಗಳ ಸಂಘ’ದ ಕೆ.ಆರ್.ವಸಂತ ಕುಮಾರ್ ಸೇರಿದಂತೆ ಒಟ್ಟು ಎಂಟು ಜನರ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಮತ್ತು ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT