ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ 6 ಅಂತಸ್ತಿನ ‘ಅನೆಕ್ಸ್–3’ ಕಟ್ಟಡ
₹5 ಕೋಟಿ ವೆಚ್ಚದಲ್ಲಿ ಲಿಫ್ಟ್!
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಗುಣಮಟ್ಟ ಖಾತರಿ ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ 9 ಮಂದಿ ಗಾಯಗೊಂಡು ಮುಖ್ಯ ಎಂಜಿನಿಯರ್ ಮೃತಪಟ್ಟಿದ್ದರು. ಇದಾದ ಮೇಲೆ ಇದೇ ಆವರಣದಲ್ಲಿರುವ ಆರು ಅಂತಸ್ತಿನ ‘ಅನೆಕ್ಸ್–3’ ಕಟ್ಟಡದ ಸುರಕ್ಷತೆ ಬಗ್ಗೆ ಅನುಮಾನಗಳು ಮೂಡಿದ್ದವು. 10 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ‘ಅನೆಕ್ಸ್–3’ ಆರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಸುರಕ್ಷತೆಯ ನಿಯಮಗಳನ್ನು ಪಾಲಿಸಲಾಗಿಲ್ಲ. ಅಗ್ನಿಶಾಮಕ ದಳ ಕಚೇರಿಯಿಂದ ಸಾಕಷ್ಟು ಬಾರಿ ಪತ್ರ ಬರೆದು ಪರ್ಯಾಯ ಲಿಫ್ಟ್ ಅಥವಾ ಮೆಟ್ಟಿಲುಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ಆದರೆ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ‘ಪ್ರಯೋಗಾಲಯದಲ್ಲಿ ಬೆಂಕಿ ಅವಘಡದ ನಂತರ ಈ ಬಗ್ಗೆಯೂ ಗಮನ ಹರಿಸಲಾಗಿದ್ದು ಅನೆಕ್ಸ್–3 ಕಟ್ಟಡದಲ್ಲಿ ₹5 ಕೋಟಿ ವೆಚ್ಚದಲ್ಲಿ ಹೊರಭಾಗದಲ್ಲಿ ಲಿಫ್ಟ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಮೂಲಸೌಕರ್ಯ ವಿಭಾಗದಿಂದ ನಿರ್ವಹಿಸಲಾಗುತ್ತದೆ. ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಯನ್ನೂ ಹೊಂದಿರುವ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.