ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ ನಿಯಂತ್ರಣಕ್ಕೆ ಸಮಗ್ರ ಯೋಜನೆ ರೂಪಿಸಿ: ತುಷಾರ್‌ ಗಿರಿನಾಥ್‌

Published 28 ಜೂನ್ 2024, 15:22 IST
Last Updated 28 ಜೂನ್ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ಸಮಗ್ರ ಮತ್ತು ಸೂಕ್ಷ್ಮ ಯೋಜನೆ ತಯಾರಿಸಿಕೊಂಡು ಡೆಂಗಿ ಪ್ರಕರಣಗಳನ್ನು ನಿಯಂತ್ರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಎಂ ಪಾಳ್ಯ ಹಾಗೂ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ನಾಗರಿಕರಲ್ಲಿ ಡೆಂಗಿ ಕುರಿತು ಜಾಗೃತಿ ಮೂಡಿಸುತ್ತಿರುವ ಸ್ಥಳಕ್ಕೆ ಭೇಟಿ ಅವರು ಮಾತನಾಡಿದರು.

ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗಿ ಹರಡುತ್ತದೆ. ಸಂಪ್, ಡ್ರಮ್‌ಗಳ ನೀರನ್ನು ಆಗಾಗ ಬದಲಾಯಿಸಬೇಕು. ಕೊಳಾಯಿ ಬಳಿ, ಹೂವಿನ ಕುಂಡ ಸೇರಿದಂತೆ ಇನ್ನಿತರೆ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ‌ಸಂಗ್ರಹಿಸಿರುವ ನೀರನ್ನು ವಾರಕ್ಕೊಮ್ಮೆ ಹೊರ ಹಾಕಿ ಮತ್ತೆ ಶುದ್ಧ ನೀರು ಸಂಗ್ರಹಿಸಿಕೊಳ್ಳಬೇಕು. ವಾರಕ್ಕಿಂತ ಹೆಚ್ಚು ಕಾಲ ಒಂದೇ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ ಎಂದು ನಾಗರಿಕರಿಗೆ ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡುವ ವೇಳೆ ಭಿತ್ತಿಪತ್ರಗಳನ್ನು ವಿತರಿಸಬೇಕು. ಲಾರ್ವಾ ಉತ್ಪತ್ತಿ ತಾಣಗಳನ್ನು ಗುರುತಿಸಿರುವ ಕಡೆ ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಉತ್ಪತ್ತಿ ತಾಣವನ್ನು ನಿಯಂತ್ರಿಸಬೇಕು. ನಗರದಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗಿ ನಿಯಂತ್ರಿಸಲು ವಲಯವಾರು ‘ಡ್ರೈ ಡೇ’ ನಡೆಸಲಾಗುತ್ತಿದೆ. ಮನೆಗಳಿಗೆ ಭೇಟಿ ನೀಡಿ ನಡೆಸುತ್ತಿರುವ ಸಮೀಕ್ಷೆಯ ಸಮಗ್ರ ವರದಿಯನ್ನು ಫ್ರಿಸ್ಮ್-ಎಚ್ ತಂತ್ರಾಂಶದಲ್ಲಿ ಆಯಾ ದಿನವೇ ನಮೂದಿಸಬೇಕು ಎಂದು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಡ್ರೈ ಡೇ ಕಾರ್ಯಾಚರಣೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಡ್ರೈ ಡೇ ಮಾಡುವ ಸ್ಥಳಗಳಿಗೆ ಭೇಟಿ ನೀಡಿದರು. ಯಲಹಂಕ ವಲಯ ಆಯುಕ್ತರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ,  ಅಧಿಕಾರಿಗಳು ಉಪಸ್ಥಿತರಿದ್ದರು.

* ವಾರಕ್ಕೊಮ್ಮೆ ಸಂಗ್ರಹವಾಗಿದ್ದ ನೀರನ್ನು ಬದಲಿಸಿ * ಸೊಳ್ಳೆ ಉತ್ಪತ್ತಿ ತಾಣಗಳಿಗೆ ಔಷಧ ಸಿಂಪಡಿಸಿ * ಜಾಗೃತಿ ಮಾಹಿತಿಯ ಕರಪತ್ರ ವಿತರಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT