ಯಲಹಂಕ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಬಿಬಿಎಂಪಿ ಪೋಷಿಸುತ್ಗಿರುವ ಕೊನೊಕಾರ್ಪಸ್ ಗಿಡಗಳು
ಕೊನೊಕಾರ್ಪಸ್ ಗಿಡ
ದುಷ್ಪರಿಣಾಮವೇನು?
ಕೊನೊಕಾರ್ಪಸ್ ಗಿಡ– ಮರ ಅತಿಹೆಚ್ಚು ಇಂಗಾಲದ ಜೊತೆಗೆ ಮಾನವನ ದೇಹ ಮೇಲೆ ದುಷ್ಪರಿಣಾಮ ಬೀರುವ ಮಾರಕ ಆಮ್ಲವನ್ನು ಹೊರಸೂಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ನೆಗಡಿ ಕೆಮ್ಮು ಆಸ್ತಮಾ ಸೇರಿದಂತೆ ಅಲರ್ಜಿಯಂತಹ ಕಾಯಿಲೆಗಳು ಉದ್ಭವಿಸುತ್ತದೆ. ಸ್ಥಳೀಯ ಕೀಟ ಪಕ್ಷಿ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ಹಾನಿಕಾರಕ. ಚಳಿಗಾಲದಲ್ಲಿ ಈ ಗಿಡ–ಮರದಿಂದ ಹೆಚ್ಚು ದುಷ್ಪರಿಣಾಮವಾಗುತ್ತದೆ. ಅತಿಹೆಚ್ಚು ಬೇರು ಬಿಡುವುದರಿಂದ ನೆಲದಡಿಯಲ್ಲಿರುವ ಕೇಬಲ್ ಹಾಗೂ ಕೊಳವೆ ಮಾರ್ಗಗಳಿಗೂ ಅಧಿಕ ಹಾನಿಯಾಗುತ್ತದೆ.
‘ಪರಿಸರ ದಿನವೆಂದು ನೆಡಬೇಡಿ’
‘ಬಿಬಿಎಂಪಿ ಅರಣ್ಯ ಇಲಾಖೆಗಳ ನರ್ಸರಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾರಕ ಕೊನೊಕಾರ್ಪಸ್ ಗಿಡಗಳನ್ನು ಪರಿಸರ ದಿನದ ಸಂದರ್ಭದಲ್ಲಿ ಸಂಘ–ಸಂಸ್ಥೆಗಳು ನಾಗರಿಕರು ನೆಡಬಾರದು. ಸ್ಥಳೀಯ ಗಿಡಗಳಿಗೆ ಮಾತ್ರ ಆದ್ಯತೆ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊನೊಕಾರ್ಪಸ್ ಗಿಡಗಳನ್ನು ನೆಡುತ್ತಿರುವ ಬಗ್ಗೆ ಅರಣ್ಯ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈ ಗಿಡಗಳಿಂದಾಗುವ ಮಾರಕಗಳನ್ನು ಅವರಿಗೆ ವಿವರಿಸಲಾಗಿದ್ದು ಅದನ್ನು ನಿಷೇಧಿಸುವ ಕುರಿತಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ. ನೆಟ್ಟಿರುವ ಗಿಡಗಳನ್ನು ತೆಗೆಯಬೇಕು. ಅದಕ್ಕೆ ಮುನ್ನ ಇನ್ನು ಮುಂದೆ ಈ ಗಿಡಗಳನ್ನು ನೆಡದಂತೆ ನೋಡಿಕೊಳ್ಳಬೇಕು’ ಎಂದು ‘ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ ಹೇಳಿದರು. ‘ತೆರವುಗೊಳಿಸಿ...’ ‘ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾಗೂ ನೈಸರ್ಗಿಕವಾಗಿ ಕೀಟ–ಪಕ್ಷಿಗಳಿಗೆ ಮಾರಕವಾಗಿರುವ ಇತರೆಡೆ ನಿಷೇಧವಾಗಿರುವ ಕೊನೊಕಾರ್ಪಸ್ ಗಿಡವನ್ನು ಬೆಳೆಸಬಾರದು. ನೆಟ್ಟು ಬೆಳೆಯಲಾಗುತ್ತಿರುವ ಮರ–ಗಿಡಗಳನ್ನು ತೆರವುಗೊಳಿಸಲೂ ಕ್ರಮ ಕೈಗೊಳ್ಳಬೇಕು’ ಎಂದು ಸಸ್ಯ ತಜ್ಞ ಎನ್.ಎಂ. ಗಣೇಶ್ ಬಾಬು ಆಗ್ರಹಿಸಿದರು.
‘ಕ್ರಮ ಕೈಗೊಳ್ಳುತ್ತೇವೆ...’
‘ಕೊನೊಕಾರ್ಪಸ್ ಗಿಡಗಳ ದುಷ್ಪರಿಣಾಮ ಬಗ್ಗೆ ತಜ್ಞರು ನಮ್ಮ ಗಮನಕ್ಕೆ ತಂದಿದ್ದಾರೆ. ಗಿಡ ಹೆಚ್ಚು ಹಸಿರಾಗಿದೆ ಎಂದು ರಸ್ತೆಗಳ ಮಧ್ಯಭಾಗದಲ್ಲಿ ಬೆಳೆಸಲಾಗುತ್ತದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚರ್ಚೆ ನಡೆಸಿ ಮಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಬಿಡಿಎ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದರು.