ಬೆಂಗಳೂರು: ತುತ್ತು ಅನ್ನ ಅರಸಿ ಬೆಂಗಳೂರಿಗೆ ಬಂದಿರುವ ವಲಸೆ ಕಾರ್ಮಿಕರ ಬದುಕು ರಾಜಕಾಲುವೆ ನೀರಿನಲ್ಲಿ ಕೊಚ್ಚಿಹೋಗಿದೆ. ಹೊರ ವಲಯದಲ್ಲಿ ಅಲ್ಲಲ್ಲಿ ಬೀಡು ಬಿಟ್ಟಿರುವ ಕಾರ್ಮಿಕರ ಜೋಪಡಿಗಳು ನೀರಿನಲ್ಲಿ ತೇಲುತ್ತಿದ್ದರೆ, ಅವರ ಬದುಕು ಸಂಪೂರ್ಣ ಮುಳುಗಿಹೋಗಿದೆ.

ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಕೆಲಸ ಮಾಡುವ ವಲಸೆ ಕಾರ್ಮಿಕರು ನಗರದ ಸುತ್ತ ಅಲ್ಲಲ್ಲಿ ಜೋಪಡಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರಮುಖವಾಗಿ ತೂಬರಹಳ್ಳಿ, ಮುನ್ನೇಕೊಳಲು ಬಳಿ ರಾಜಕಾಲುವೆ ಪಕ್ಕದಲ್ಲೇ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಜೋಪಡಿಗಳಲ್ಲಿ ವಾಸ ಇವೆ. ಭಾನುವಾರದ ಜೋರು ಮಳೆ ಅವರ ಬದುಕಿಗೆ ದೊಡ್ಡ ಸವಾಲೊಡ್ಡಿದೆ.

ರಾಜಕಾಲುವೆಗೆ ಸ್ವಲ್ಪ ದೂರದಲ್ಲಿರುವ ಜೋಪಡಿಗಳಲ್ಲಿ ಸೋಮವಾರ ಮೊಣಕಾಲೆತ್ತರದ ನೀರಿದ್ದರೆ, ಕಾಲುವೆ ಪಕ್ಕದಲ್ಲೇ ಇರುವ ಜೋಪಡಿಗಳಲ್ಲಿ ಎದೆಮಟ್ಟಕ್ಕೆ ನೀರು ತುಂಬಿಕೊಂಡಿದೆ. ಜೀವ ಉಳಿಸಿಕೊಳ್ಳಲು ಮಕ್ಕಳೊಂದಿಗೆ ಕಾರ್ಮಿಕರು ರಸ್ತೆಗೆ ಬಂದು ನಿಲ್ಲಬೇಕಾಯಿತು.

‘ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ನೀರು ನುಗ್ಗಿದ ಕೂಡಲೇ ಮಕ್ಕಳೊಂದಿಗೆ ಹೊರಗೆ ಓಡಿ ಬಂದು ರಸ್ತೆಗೆ ನಿಂತೆವು. ಜೋಪಡಿಯಲ್ಲಿದ್ದ ದಿನಸಿ ಪದಾರ್ಥ, ಬಟ್ಟೆಗಳೆಲ್ಲ ನೀರು ಪಾಲಾಗಿವೆ. ಏನು ಮಾಡಬೇಕೋ ದಿಕ್ಕೇ ತೋಚದಾಗಿದೆ’ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.

‘ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕೆಂದು ಬೆಂಗಳೂರಿಗೆ ಬಂದಿದ್ದೇವೆ. ರಾಜಕಾಲುವೆ ನೀರು ಕ್ಷಣಾರ್ಧದಲ್ಲೇ ನಮ್ಮನ್ನು ಭಿಕ್ಷುಕರನ್ನಾಗಿ ಮಾಡಿದೆ. ದೊಡ್ಡವರು ಹೇಗೋ ಹಸಿವು ತಡೆಯುತ್ತೇವೆ. ಮಕ್ಕಳಿಗೆ ಊಟ ಕೊಡಲಾಗದ ಸ್ಥಿತಿಗೆ ತಲುಪಿರುವುದು ನಮ್ಮ ದುರಂತ’ ಎಂದು ನಿವಾಸಿ ಮಮ್ತಾಜ್ ಅರ್ಧ ಮುಳುಗಿರುವ ಜೋಪಡಿಗೆ ಒರಗಿ ಗದ್ಗದಿತರಾದರು.

‘ಸೋಮವಾರ ಹಗಲು ಮಳೆ ಬಂದಿಲ್ಲ, ಎತ್ತರದ ಜಾಗದಲ್ಲೇ ಕಾಲ ಕಳೆದಿದ್ದೇವೆ. ರಾತ್ರಿ ಹೇಗೆ ಕಾಲ ತಳ್ಳುವುದೋ ಗೊತ್ತಿಲ್ಲ. ಮಳೆ ಬಂದರೆ ಏನು ಮಾಡಬೇಕು, ಮಕ್ಕಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಗೊತ್ತಿಲ್ಲ. ಅಕ್ಕ–ಪಕ್ಕದಲ್ಲಿ ದೊಡ್ಡ ಅಪಾರ್ಟ್‌ಮೆಂಟ್ ಸಮುಚ್ಚಯಗಳಿವೆ. ಮಳೆಯಿಂದ ರಕ್ಷಣೆ ಪಡೆಯಲು ಅಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ’ ಎಂದು ಕಣ್ಣೀರಿಟ್ಟರು.

ಗುಡಿಸಿಲಲ್ಲೇ ಉಳಿದ ರೋಗಪೀಡಿತ

ಜೋಪಡಿಯಲ್ಲಿ ಮಕ್ಕಳು, ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರ ಸ್ಥಿತಿ ಚಿಂತಾಜನಕವಾಗಿದೆ.

ಪಪ್ಪು ಎಂಬ ಯುವಕನೊಬ್ಬ ಕೆಲಸ ಮಾಡುವಾಗ ಮಹಡಿ ಮೇಲಿನಿಂದ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಎದ್ದೇಳಲು ಆಗದ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಮಲಗಿದ್ದಾರೆ.

ಜೋಪಡಿಗೆ ನೀರು ತುಂಬಿಕೊಂಡು ಎಲ್ಲರೂ ಓಡಿಹೋದರೂ ಅವರು ಅಲ್ಲೇ ಮಲಗಿದ್ದಾರೆ. ಮರದ ಹಲಗೆಯೊಂದನ್ನು ಸ್ವಲ್ಪ ಎತ್ತರಕ್ಕೆ ಹಾಕಲಾಗಿದ್ದು, ಅದರ ಮೇಲೆಯೇ ಮಲಗಿದ್ದಾರೆ.

ಜೋರು ಮಳೆ ಬಂದು ಜೋಪಡಿ ಮುಳುಗಿದರೆ ಅವರನ್ನು ಹೊತ್ತೊಯ್ಯುವುದು ಹೇಗೆ ಎಂಬ ಚಿಂತೆ ಕುಟುಂಬದವರನ್ನು ಕಾಡುತ್ತಿದೆ. ಮಳೆ ಎಂಬುದು ಈ ನಿವಾಸಿಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.