ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಣ್ಯ ಕೈಗಾರಿಕೆ ಪ್ರದೇಶ: ಮಾಲಿನ್ಯ ನಿರ್ವಹಣೆಗಿಲ್ಲ ಸೌಲಭ್ಯ

ಕೆರೆಗೆ ಸೇರುತ್ತಿರುವ ಅತಿ ಹಾನಿಕಾರಕ ಅಂಶಗಳು | ಕ್ರಮ ಕೈಗೊಳ್ಳದ ಸರ್ಕಾರ
ಶ್ರೀ ಡಿ.ಎನ್‌.
Published : 25 ಆಗಸ್ಟ್ 2024, 0:00 IST
Last Updated : 25 ಆಗಸ್ಟ್ 2024, 0:00 IST
ಫಾಲೋ ಮಾಡಿ
Comments

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ಅರೆ ಸಂಸ್ಕರಿಸಿದ ಕೊಳಚೆ ನೀರು ಸದ್ದಿಲ್ಲದೇ ಕೆರೆಗೆ ಬಿಡಲಾಗುತ್ತಿದೆ.‌ ಅಸಾಧ್ಯವಾದ ವಾಸನೆ ವಾತಾವರಣವನ್ನೇ ಅಸಹನೀಯಗೊಳಿಸಿದೆ. 

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ನರಸಪ್ಪನಹಳ್ಳಿ ಕೆರೆಯು ಕೈಗಾರಿಕೆಗಳ ಮಾಲಿನ್ಯದ ಭಾರಕ್ಕೆ ನಲುಗಿಹೋಗಿದೆ. ಪಕ್ಕದ ಶಿವಪುರ ಕೆರೆಯ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ಆಗ್ನೇಯ ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯ ಎಂಬ ಹೆಗ್ಗಳಿಕೆ ಹೊಂದಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರೋಪ್ಲೇಟಿಂಗ್, ಮಿಶ್ರಲೋಹ ಮತ್ತು ಲೋಹದ ಕೆಲಸಗಳು, ಬ್ಯಾಟರಿ ನವೀಕರಣ, ವೆಲ್ಡಿಂಗ್, ಪೌಡರ್ ಲೇಪನ, ಸೀಸದ ಸಂಸ್ಕರಣೆ, ಸ್ಪ್ರೇ ಪೇಂಟಿಂಗ್, ಫಾಸ್ಫೇಟಿಂಗ್, ಉಪ್ಪಿನಕಾಯಿ, ಗಾರ್ಮೆಂಟ್ ವಾಷಿಂಗ್/ ಡೈಯಿಂಗ್ ಯುನಿಟ್‌... ಹೀಗೆ ಅನೇಕ ಕೈಗಾರಿಕೆಗಳಿವೆ. ಇವೆಲ್ಲದರ ಮಾಲಿನ್ಯ ಕೆರೆಗಳಿಗೆ ಸೇರುತ್ತಿದೆ.

ಕೇಂದ್ರ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಇಎಫ್‌ ಆ್ಯಂಡ್‌ ಸಿಸಿ) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸಮಗ್ರ ಪರಿಸರ ಮಾಲಿನ್ಯ ಸೂಚ್ಯಂಕ (ಸಿಇಪಿಐ) ಆಧಾರದ ಮೇಲೆ 2010ರಲ್ಲಿ ದೇಶದಾದ್ಯಂತ 88 ಕೈಗಾರಿಕಾ ವಲಯಗಳ ಪರಿಸರ ಮೌಲ್ಯಮಾಪನವನ್ನು ನಡೆಸಿತ್ತು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗಾಳಿ, ನೀರು ಮತ್ತು ಮಣ್ಣಿನ ಭಾರಿ ಮಾಲಿನ್ಯ ಕಂಡು ಬಂದಿದ್ದರಿಂದ (ಸಿಇಪಿಐ ಸ್ಕೋರ್‌ 65.11) ‘ತೀವ್ರ ಕಲುಷಿತ ವಲಯ’ ಎಂದು ಘೋಷಿಸಲಾಗಿತ್ತು.

‍ಪರಿಷ್ಕೃತ ಮಾನದಂಡಗಳನ್ನು ಜಾರಿ ಮಾಡಲು ಮತ್ತು ಕ್ರಿಯಾಯೋಜನೆಗಳನ್ನು ತಯಾರಿಸುವಂತೆ 2016ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಿಪಿಸಿಬಿ ಸೂಚನೆ ನೀಡಿತ್ತು. ಮಾಲಿನ್ಯ ನಿಯಂತ್ರಿಸಲು ರಾಜ್ಯಗಳು ಕಾಲಮಿತಿಯ ಒಳಗೆ ಯೋಜನೆ ಸಿದ್ಧಪಡಿಸುವಂತೆ 2018ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿತ್ತು. ‘ತೀವ್ರ ಕಲುಷಿತ ವಲಯ’ ಎಂದು ಘೋಷಣೆಯಾಗಿ 10 ವರ್ಷಗಳ ಬಳಿಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಸಿಇಪಿಐ ಕ್ರಿಯಾಯೋಜನೆಯನ್ನು ತಯಾರಿಸಿತ್ತು.

ಈ ಕ್ರಿಯಾಯೋಜನೆಯ ದತ್ತಾಂಶಗಳ ಪ್ರಕಾರ 1,059 ಕೆಎಲ್‌ಡಿ ಕೊಳಚೆ ನೀರು, 1,251 ಕೆಎಲ್‌ಡಿ ಕೈಗಾರಿಕಾ ತ್ಯಾಜ್ಯವು ಈ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಮಾಲಿನ್ಯ ತಗ್ಗಿಸಲು 2018–19ರ ಸಾಲಿನ ಬಜೆಟ್‌ನಲ್ಲಿ ಸಿಇಟಿಪಿಗೆ ₹ 10 ಕೋಟಿ  ಮಂಜೂರು ಮಾಡಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಈ ಹಣ ರಾಜ್ಯ ಹಣಕಾಸು ಇಲಾಖೆಗೆ ಮರಳಿ ಹೋಗಿತ್ತು.

ಈ ಕೈಗಾರಿಕಾ ಪ್ರದೇಶದ ಅಂತರ್ಜಲ ಮತ್ತು ಮಣ್ಣಿನಲ್ಲಿ ಅತಿಯಾದ ಲೋಹ ಮಾಲಿನ್ಯ (ಪಾದರಸ, ಕ್ಯಾಡ್ಮಿಯಮ್, ತಾಮ್ರ, ಸತು, ಸೀಸ, ಆರ್ಸೆನಿಕ್, ಅಲ್ಯೂಮಿನಿಯಂ) ಇರುವುದರ ಬಗ್ಗೆ ಪರಿಸರ ಎಂಜಿನಿಯರಿಂಗ್ ಮತ್ತು ಪರಿಸರ ತಂತ್ರಜ್ಞಾನ ಸಂಶೋಧನಾ ತಂಡವು ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಬೆಳಕು ಚೆಲ್ಲಿದ್ದವು. 

ಕೆಎಸ್‌ಪಿಸಿಬಿಯ ಈಗಿನ ಅಂಕಿಅಂಶಗಳ ಪ್ರಕಾರ, ದಿನಕ್ಕೆ 1458.37 ಕಿಲೋಲೀಟರ್ (ಕೆಎಲ್‌ಡಿ) ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಅದರಲ್ಲಿ 1403.16 ಕೆಎಲ್‌ಡಿಯನ್ನು ಆಯಾ ಕೈಗಾರಿಕಾ ಸಂಸ್ಥೆಗಳಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್‌ಗಳಲ್ಲಿ (ಇಟಿಪಿ) ಸಂಸ್ಕರಿಸಲಾಗುತ್ತಿದೆ. 55.21 ಕೆಎಲ್‌ಡಿಯನ್ನು ಹೊರಗಿನ ಸಂಸ್ಕರಣಾ ಘಟಕಗಳಿಗೆ ಕಳುಹಿಸಲಾಗುತ್ತಿದೆ.

ಮಾಲಿನ್ಯ ನಿಯಂತ್ರಣಕ್ಕೆ ಕೈಗಾರಿಕಾ ಸಂಸ್ಥೆಗಳು ಮುಂದಾಗಬೇಕು. ಜೊತೆಗೆ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಿಯಮಿತವಾಗಿ ಪರಿಶೀಲನೆ

ಸಂಸ್ಕರಣೆ ಮತ್ತು ತ್ಯಾಜ್ಯ ವಿಸರ್ಜನೆಯ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ತಿಳಿಸಿದರು. ‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಟಿಪಿ ಸ್ಥಾಪಿಸಲು ಮಂಡಳಿ ಒಪ್ಪಿಗೆ ನೀಡಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಪೀಣ್ಯದಲ್ಲಿ 125 ಕೆಎಲ್‌ಡಿ ಸಿಇಟಿಪಿ ಒದಗಿಸುವ ಯೋಜನೆಯನ್ನು ಅಂತಿಮಗೊಳಿಸಲಾಗಿದೆ. ತಾಂತ್ರಿಕ ಪ್ರಸ್ತಾವನೆ ಮತ್ತು ಲೈನ್ ಅಂದಾಜನ್ನು ಚೆನ್ನೈನ ಎಂಎಸ್‌ ಎಚ್‌ಟುಒ ಇಂಡಿಯಾದಿಂದ ಪಡೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಕೆಎಸ್‌ಪಿಸಿಬಿ ಬೆಂಗಳೂರು ನಗರದ ಹಿರಿಯ ಪರಿಸರ ಅಧಿಕಾರಿ ವಿಜಯಲಕ್ಷ್ಮಿ ಮಾಹಿತಿ ನೀಡಿದರು.

ಅನುದಾನ ನೀಡಬೇಕು

‘ಇಂದಿನ ಸುಧಾರಿತ ತಂತ್ರಜ್ಞಾನದಲ್ಲಿ ₹ 5 ಕೋಟಿಗಿಂತ ಕಡಿಮೆ ಮೊತ್ತದಲ್ಲಿ ಉತ್ತಮ ಸಿಇಟಿಪಿಯನ್ನು ನಿರ್ಮಿಸಬಹುದು. ಮಾಲಿನ್ಯವನ್ನು ನಿಯಂತ್ರಿಸಬಹುದು. ಆದರೆ ಸರ್ಕಾರವು ಅನುದಾನ ನೀಡುತ್ತಿಲ್ಲ’ ಎಂದು ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್‌ ಅಧ್ಯಕ್ಷ ಶಿವಕುಮಾರ್ ಆರ್. ಬೇಸರ ವ್ಯಕ್ತಪಡಿಸಿದರು. ‘ಈ ಪ್ರದೇಶದಲ್ಲಿ 16000 ಕೈಗಾರಿಕಾ ಘಟಕಗಳಿವೆ. ಅದರಲ್ಲಿ ಶೇ 90 ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿವೆ. ಸುಮಾರು 50 ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ವಿವಿಧ ದೊಡ್ಡ ಕೈಗಾರಿಕೆಗಳು ಸ್ಥಾಪಿಸಿದ 25 ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಿವೆ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT