ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪಂಪನ ಪುತ್ಥಳಿ: ಮಹೇಶ್ ಜೋಶಿ

Published 28 ಜೂನ್ 2024, 16:33 IST
Last Updated 28 ಜೂನ್ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕನ್ನಡದ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದರು.‌

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯಕ್ಕೆ ಜೈನರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಮ್ಮ ಭವ್ಯ ಸಾಹಿತ್ಯ ಸೌಧ ನಿರ್ಮಾಣಗೊಂಡಿದೆ’ ಎಂದು ಶ್ಲಾಘಿಸಿದರು.

‌‘ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಜೈನರ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇರಬಹುದು. ಆದರೆ, ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಸಂಖ್ಯೆಯಲ್ಲಿ ಮಾತ್ರವಲ್ಲದೇ, ಗುಣಮಟ್ಟದಲ್ಲೂ ಬಹಳ ದೊಡ್ಡದು. ಆ ಕೊಡುಗೆ ಕನ್ನಡ ಸಾಹಿತ್ಯದ ಅರ್ಧ ಭಾಗವನ್ನು ಆವರಿಸಿಕೊಳ್ಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ಹಂ.ಪ. ನಾಗರಾಜಯ್ಯ, ‘ಜೈನರಿಗೆ ಅಂತರಿಕ ಶೋಧದಷ್ಟೇ ಸಾಮಾಜಿಕ ಮುಖಗಳೂ ಮುಖ್ಯ. ಈ ಪುರಸ್ಕಾರ ಅದರ ಭಾಗ’ ಎಂದು ಹೇಳಿದರು.

‘ಚಾವುಂಡರಾಯ ದತ್ತಿ ಪ್ರಶಸ್ತಿ’ ಸ್ವೀಕರಿಸಿದ ಲೇಖಕಿ ಪ್ರೀತಿ ಶುಭಚಂದ್ರ ಮಾತನಾಡಿ, ‘ಪಂಪ, ರತ್ನಾಕರ ವರ್ಣಿ ಕಾವ್ಯದಲ್ಲಿ ಚಿತ್ರಿಸಿದ ಬಾಹುಬಲಿಯನ್ನು ಚಾವುಂಡರಾಯರು ಮೂರ್ತಿರೂಪಕ್ಕೆ ತಂದರು. ಅವರ ಹೆಸರಿನಲ್ಲಿನ ಈ ಪ್ರಶಸ್ತಿ ಧನ್ಯತೆಯನ್ನು ತಂದಿದೆ‘ ಎಂದು ಹೇಳಿದರು.

‘ಇತ್ತೀಚೆಗೆ ನಮ್ಮನ್ನು ಅಗಲಿದ ಸಾಹಿತಿ ಕಮಲಾ ಹಂಪನಾ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ತಿಳಿಸಿದರು.

ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಸುರೇಂದ್ರ ಕುಮಾರ್, ನ್ಯೂಜರ್ಸಿಯ ಬೃಂದಾವನ ಕನ್ನಡ ಕೂಟದ ಸ್ಥಾಪಕ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು.

ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT