ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಪಂದ್ಯದ ಗತಿ ಬದಲಿಸಿದ ಸೂರ್ಯ ಹಿಡಿದ ಅದ್ಭುತ ಕ್ಯಾಚ್ ಸುತ್ತ ವಿವಾದ

Published 30 ಜೂನ್ 2024, 3:35 IST
Last Updated 30 ಜೂನ್ 2024, 3:35 IST
ಅಕ್ಷರ ಗಾತ್ರ

ಬ್ರಿಡ್ಜ್‌ಟೌನ್(ಬಾರ್ಬಡೋಸ್): 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ–20 ವಿಶ್ವಕಪ್ ಮತ್ತು 11 ವರ್ಷಗಳ ಬಳಿಕ ಐಸಿಸಿ ಟ್ರೋಪಿ ಜಯಿಸಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಶಗಳಲ್ಲಿ 20ನೇ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಸಹ ಒಂದು.

ಹೌದು, ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 16 ಬೇಕಿದ್ದಾಗ ಹಾರ್ದಿಕ್ ಪಾಂಡ್ಯಾ ಅವರ ಎಸೆತವನ್ನು ಬಿರುಸಾಗಿ ಹೊಡೆದ ಡೇವಿಡ್ ಮಿಲ್ಲರ್, ಬೌಂಡರಿ ಗೆರೆ ದಾಟಿಸಿ ಸಿಕ್ಸರ್ ಗಳಿಸುವ ಮೂಲಕ ತಂಡಕ್ಕೆ ಜಯವನ್ನು ಒಲಿಸಿಕೊಡುವ ಹಾದಿಯಲ್ಲಿದ್ದರು. ಆದರೆ, ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯ ಚೆಂಡನ್ನು ಹಿಡಿದು ಗಾಳಿಗೆ ಎಸೆದು ಬೌಂಡರಿ ಆಚೆಯಿಂದ ಮತ್ತೆ ಹಿಂದಿರುಗಿ ಕ್ಯಾಚ್ ಪಡೆದರು. ಆ ಕ್ಯಾಚ್ ಮಿಸ್ ಆಗಿ ಸಿಕ್ಸರ್ ಆಗಿದ್ದರೆ ದಕ್ಷಿಣ ಆಫ್ರಿಕಾ ಗೆದ್ದು ಟ್ರೋಫಿ ಎತ್ತಿಹಿಡಿಯುವ ಸಾಧ್ಯತೆ ಇತ್ತು. ಸೂರ್ಯ ಅವರ ಈ ಅದ್ಬುತ ಫೀಲ್ಡಿಂಗ್‌ಗೆ ದೇಶದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಅತ್ಯದ್ಭುತ ಕ್ಯಾಚ್’ ಎಂದು ಇಯಾನ್ ಸ್ಮಿತ್ ಹೇಳಿದ್ದಾರೆ. ಆದರೆ, ಮ್ಯಾಚ್ ವಿನ್ನಿಂಗ್ ಕ್ಯಾಚ್ ಬಗ್ಗೆ ಕೆಲವು ವಿವಾದ ಎದ್ದಿದೆ.

ಆದರೆ, ಪಂದ್ಯ ಮುಗಿದು ಕೆಲ ಗಂಟೆಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೊ ಹರಿದಾಡುತ್ತಿದ್ದು, ಅದು ವಿವಾದ ಸೃಷ್ಟಿಸಿದೆ. ಸೂರ್ಯ ಕುಮಾರ್ ಅವರು ಕ್ಯಾಚ್ ಹಿಡಿದು ಗಾಳಿಗೆ ಚೆಂಡನ್ನು ಎಸೆದಾಗ ಅವರ ಶೂ ಬೌಂಡರಿಯ ಕುಷನ್ ಅನ್ನು ಸ್ಪರ್ಶಿಸಿದೆ ಎನ್ನಲಾದ ವಿಡಿಯೊ ಹರಿದಾಡುತ್ತಿದೆ.

ಈ ಕುರಿತಂತೆ ಬೆನ್ ಕರ್ಟಿಸ್ ಎನ್ನುವವರು ಎಕ್ಸ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದು, ಬೌಂಡರಿಯ ರೋಪ್ ಅಲುಗಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದಕ್ಕಿಂತ ಹೆಚ್ಚು ಬಾರಿ ಇದನ್ನು ಪರಿಶೀಲಿಸುವ ಅಗತ್ಯವಿತ್ತು ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕ್ಯಾಚ್ ಹಿಡಿಯುವ ಸ್ವಲ್ಪ ಮುನ್ನ ಬೌಂಡರಿ ಗೆರೆಯ ಕುಶನ್ ಹಿಂಬದಿಗೆ ಸರಿದಿದೆ. ಇದನ್ನು ಸಿಕ್ಸ್ ಎಂದು ಪರಿಗಣಿಸಬೇಕಿತ್ತು ಎಂದು ಬರೆಯಲಾಗಿದೆ. ಐಸಿಸಿ ಆಯೋಜಿಸುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬಿಳಿ ಗೆರೆಯ ಬದಲಿಗೆ ಕುಷನ್ ಒಳಗೊಂಡ ಹಗ್ಗವನ್ನು ಹಾಕಲಾಗಿರುತ್ತದೆ.

ಸೂರ್ಯ ಹಿಡಿದ ಆ ಕ್ಯಾಚ್‌ನಿಂದ ಕ್ರೀಸ್‌ನಲ್ಲಿ ಏಕೈಕ ಭರವಸೆಯ ಬ್ಯಾಟರ್ ಡೇವಿಡ್ ಮಿಲ್ಲರ್ ನಿರ್ಗಮಿಸಿದರು. ನಂತರದ ಎಸೆತದಲ್ಲಿ ಕಗಿಸೊ ರವಬಾಡ ಬೌಂಡರಿ ಸಿಡಿಸಿದರಾದರೂ ಉಳಿದ 4 ಎಸೆತಗಳ್ಲಲಿ ಕೇವಲ 4 ರನ್ ಕಲೆ ಹಾಕಲು ಮಾತ್ರ ದಕ್ಷಿಣ ಆಫ್ರಿಕಾಕ್ಕೆ ಸಾಧ್ಯವಾಯಿತು. ಈ ಮೂಲಕ 7 ರನ್‌ಗಳಿಂದ ಆಫ್ರಿಕಾ ಸೋಲೊಪ್ಪಿಕೊಂಡಿತು.

ಈ ಪಂದ್ಯದಲ್ಲಿ ಟಾಸ್ ಗಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ಸಮಯೋಚಿತ 76 ರನ್ ನೆರವಿನಿಂದ 176 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಚೊಚ್ಚಲ ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT