ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಮ್‌ ವಿನಿಮಯ | ಜುಲೈ 1ರಿಂದ ಹೊಸ ನಿಯಮ ಜಾರಿ; ಇಲ್ಲಿದೆ ಸಂಪೂರ್ಣ ವಿವರ

ವಂಚನೆ ಪ್ರಕರಣ ತಡೆಗೆ ಕ್ರಮ: ಟ್ರಾಯ್‌
Published 29 ಜೂನ್ 2024, 15:39 IST
Last Updated 29 ಜೂನ್ 2024, 15:39 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಸಿಮ್‌ ವಿನಿಮಯ ಅಥವಾ ಬದಲಾವಣೆ ವೇಳೆ ನಡೆಯುತ್ತಿದ್ದ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ರೂಪಿಸಿರುವ ಹೊಸ ನಿಯಮಾವಳಿಗಳು, ಜುಲೈ 1ರಿಂದ ಜಾರಿಗೆ ಬರಲಿವೆ.

ಗ್ರಾಹಕರು ತಮ್ಮ ಮೊಬೈಲ್‌ ಸಂಖ್ಯೆ ಬದಲಾಯಿಸದೆ ದೂರಸಂಪರ್ಕ ಸೇವಾದಾರರನ್ನು (ಸರ್ವಿಸ್ ಪ್ರೊವೈಡರ್) ಮಾತ್ರವಷ್ಟೇ ಬದಲಾಯಿಸುವ ಪೋರ್ಟಿಂಗ್‌ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯನ್ನು ತರಲಾಗಿದೆ.

ಯಾವುದಾದರು ಕಾರಣದಿಂದ ಗ್ರಾಹಕರ ಮೊಬೈಲ್‌ ಹಾನಿಗೀಡಾದರೆ ಅಥವಾ ಕಳೆದು ಹೋದ ಸಂದರ್ಭದಲ್ಲಿ ಅದೇ ನಂಬರ್‌ನ ಸಿಮ್‌ ಪಡೆಯಬಹುದಾಗಿದೆ. ಇದಕ್ಕೆ 10 ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ, ದೂರಸಂಪರ್ಕ ಸೇವಾದಾರರು ಈ ಅವಧಿಗೂ ಮೊದಲೇ ಚಂದಾದಾರರಿಗೆ ಸೇವೆ ಒದಗಿಸುತ್ತಿದ್ದರು.

ಪೋರ್ಟಿಂಗ್‌ ವೇಳೆ ಗ್ರಾಹಕರು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಈ ವೇಳೆ ಕೆಲವು ಖಾಸಗಿ ವ್ಯಕ್ತಿಗಳು ದೂರಸಂಪರ್ಕ ಸೇವಾದಾರರ ಮೂಲಕ ನೋಂದಾಯಿತ ಗ್ರಾಹಕರ ಸಿಮ್‌ ಬದಲಾಗಿ, ಹೊಸ ಸಿಮ್‌ ಪಡೆದು ವಂಚನೆ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದವು. ಗ್ರಾಹಕರ ದತ್ತಾಂಶ ಸುರಕ್ಷತೆಯ ದೃಷ್ಟಿಯಿಂದ ಪೋರ್ಟಿಂಗ್‌ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಟ್ರಾಯ್‌ ತಿಳಿಸಿದೆ. 

ಹೊಸ ನಿಯಮ ಹೇಳುವುದೇನು?:

ಟೆಲಿಕಮ್ಯುನಿಕೇಷನ್‌ ಮೊಬೈಲ್‌ ನಂಬರ್‌ ಪೋರ್ಟೆಬಿಲಿಟಿ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದೆ. ಇದರ ಅನ್ವಯ ಸಿಮ್‌ ವಿನಿಮಯ ಅಥವಾ ಬದಲಾವಣೆ ನಂತರ ಪೋರ್ಟಿಂಗ್‌ಗೆ ಅರ್ಹತೆ ಪಡೆಯುವ ಅವಧಿಯನ್ನು 7 ದಿನಗಳಿಗೆ ಇಳಿಸಲಾಗಿದೆ.

ಸಿಮ್‌ ಪೋರ್ಟಿಂಗ್‌ ಮಾಡಿಸುವಾಗ ಮೊದಲ ಹಂತದಲ್ಲಿ ವಿಶಿಷ್ಟ  ಪೋರ್ಟಿಂಗ್‌ ಕೋಡ್ (ಯುಪಿಸಿ) ಹಂಚಿಕೆ ಮಾಡಲಾಗುತ್ತದೆ. ಆದರೆ, 7 ದಿನಕ್ಕೂ ಮೊದಲೇ ಯುಪಿಸಿ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ಟ್ರಾಯ್‌ ಸ್ಪಷ್ಟಪಡಿಸಿದೆ.

ಸಿಮ್‌ ವಿನಿಮಯ ಮಾಡುವಾಗ ವಂಚಕ ಕೃತ್ಯಗಳು ನಡೆಯುತ್ತಿದ್ದವು. ಇದಕ್ಕೆ ಕಡಿವಾಣ ಉದ್ದೇಶದಿಂದ ಹೊಸ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಈ ಬಗ್ಗೆ ದೂರಸಂಪರ್ಕ ಕಂಪನಿಗಳ ಜೊತೆಗೆ ಚರ್ಚಿಸಲಾಗಿದೆ. ಕೆಲವು ಕಂಪನಿಗಳು ಗ್ರಾಹಕರು ಕಾಯುವ ಅವಧಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ನಿಯಮವನ್ನೇ ಮುಂದುವರಿಸಲು ಸಲಹೆ ನೀಡಿದ್ದವು. ಮತ್ತೆ ಕೆಲವು ಕಂಪನಿಗಳು ಈಗಿನ ಅವಧಿಯು ದೀರ್ಘವಾಗಿದೆ ಎಂದು ಹೇಳಿದ್ದವು. ಹಾಗಾಗಿ, ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಾಯುವ ಅವಧಿಯನ್ನು ತಗ್ಗಿಸಲಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT