‘ನೋಟಿಸ್ ನೀಡಿದ ಮೇಲೆ ಅಳತೆ ಮಾಡಲು ಬರಬೇಕು. ನಾವು ಮನೆಯಲ್ಲಿ ಸರ್ವೆಯರ್ ಹೇಳಿದ ದಿನ ಕಾದು ಕುಳಿತರೂ ಬರುವುದಿಲ್ಲ. ಗೂಗಲ್ ಮ್ಯಾಪ್‌ನಲ್ಲಿ ತೆಗೆದುಕೊಳ್ಳುವುದಾದರೆ ನೋಟಿಸ್ ಏಕೆ ಕೊಡಬೇಕು. ನಮ್ಮ ನಿವೇಶನಕ್ಕಿಂತಲೂ ಕಡಿಮೆ ಅಥವಾ ಹೆಚ್ಚಿನ ಅಳತೆ ನಮೂದಿಸಿದರೆ ಮತ್ತೆ ಅದನ್ನು ಸರಿಪಡಿಸಲು ನಾವು ಕಚೇರಿ ಹುಡುಕಿಕೊಂಡು ಹೋಗಬೇಕು. ಬಿಬಿಎಂಪಿಯಿಂದ ಮಾಹಿತಿ ಪಡೆದಿದ್ದೇವೆ ಎನ್ನುತ್ತಾರೆ. ಕ್ರಯ ಪತ್ರ ಖಾತಾ ಆಸ್ತಿ ತೆರಿಗೆ ವಿವರವೆಲ್ಲ ಇದ್ದ ಮೇಲೆ ಅದನ್ನೇ ಏಕೆ ನಮೂದಿಸುವುದಿಲ್ಲ. ಇಂತಹ ತಪ್ಪು ಮಾಹಿತಿಯಿಂದ ನಮಗೆ ಮುಂದೆ ತೊಂದರೆಯಾಗುತ್ತದೆ. ದೋಷಯುಕ್ತ ಯುಪಿಒಆರ್ ಕಾರ್ಡ್ ನೀಡುವ ಅಗತ್ಯವೇನು’ ಎಂದು ರಾಜರಾಜೇಶ್ವರಿನಗರದ ಟಿ.ಇ. ಶ್ರೀನಿವಾಸ್ ಪ್ರಶ್ನಿಸಿದರು. ‘ದಾಖಲೆ ಪಡೆಯದೆ ಕೊಟ್ಟಿಲ್ಲ ಎನ್ನುತ್ತಾರೆ!’ ಯುಪಿಒಆರ್ ಯೋಜನೆಯ ಪ್ರಕಾರ ಆಸ್ತಿಯ ಮಾಲೀಕತ್ವದ ಕ್ರಯಪತ್ರ ಆಸ್ತಿ ತೆರಿಗೆ ಪಾವತಿ ರಸೀದಿ ಆಸ್ತಿ ಋಣಭಾರ ಪತ್ರ ಬಿಬಿಎಂಪಿ ಖಾತೆ ನಿವೇಶನ ಹಂಚಿಕೆ ಪತ್ರ ನಿವೇಶನ ಸ್ವಾಧೀನ ಪತ್ರ ಭೂಪರಿವರ್ತನೆ ಆದೇಶ/ ಲೇಔಟ್ ನಕ್ಷೆ ಪ್ರತಿ ಮಾಲೀಕರ ಫೋಟೊ ಆಸ್ತಿಯ ಫೋಟೊವನ್ನು ಕಾರ್ಡ್‌ನಲ್ಲಿ ಪ್ರಕಟಿಸಬೇಕು. ಇಷ್ಟೆಲ್ಲ ವಿವರ ಅವರ ಬಳಿ ಇಲ್ಲದಿದ್ದರೆ ನಮ್ಮಿಂದ ಪಡೆಯಬೇಕು. ನೋಟಿಸ್ ಕೊಟ್ಟವರು ಬರುವುದೇ ಇಲ್ಲ ದಾಖಲೆ ಸಂಗ್ರಹಿಸದೆ ಕಾರ್ಡ್ ಕಳುಹಿಸಿ ಅದನ್ನು ಕೊಟ್ಟಿಲ್ಲ ಎಂದು ನಮೂದಿಸಿದ್ದಾರೆ. ಇದು ಬೇಜವಬ್ದಾರಿ ಯೋಜನೆಯಾಗಿದೆ. ಇದರಿಂದ ಮಾಲೀಕರಿಗೆ ಸಂಕಷ್ಟ ಎದುರಾಗಿದೆ’ ಎಂದು ಕೆಂಗೇರಿಯ ಶಿವಕುಮಾರ್ ದೂರಿದರು.
ಏನಿದು ಯುಪಿಒಆರ್?
ಸರ್ಕಾರದಿಂದ ನೀಡಲಾಗುವ ‘ಯುಪಿಒಆರ್ ಕಾರ್ಡ್’ ನಾಗರಿಕರ ಆಸ್ತಿ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ ಮಾಲೀಕತ್ವ ವಿವರ ಹಕ್ಕುಗಳು ಸೇರಿದಂತೆ ಸಾಲ ವ್ಯಾಜ್ಯ ಇತರೆ ಮಾಹಿತಿಗಳನ್ನೂ ಹೊಂದಿರುತ್ತದೆ. ‘ಯುಪಿಒಆರ್ ಕಾರ್ಡ್’ ಹೊಂದಿದ ಆಸ್ತಿ ಮಾರಾಟ ಅಥವಾ ವಿಭಜನೆ ಬದಲಾವಣೆಗಳಾದರೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಮಾಹಿತಿಗಳು ಬದಲಾಗುತ್ತವೆ. ಕೆರೆ ಪ್ರದೇಶ ಸರ್ಕಾರಿ ಆಸ್ತಿ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದರೆ ಅವುಗಳನ್ನು ಸ್ಪಷ್ಟ ಮಾಹಿತಿ ಪ್ರತಿ ಆಸ್ತಿಗೂ ಸಂಪರ್ಕಿಸಲಾಗಿರುತ್ತದೆ. ಇದು ಯುಪಿಒಆರ್ ಯೋಜನೆಯ ಉದ್ದೇಶ. ಆದರೆ ಜನರ ಕೈಗೆ ಸಿಗುತ್ತಿರುವ ‘ಯುಪಿಒಆರ್ ಕಾರ್ಡ್‌ನಲ್ಲಿ’ ಈ ಎಲ್ಲ ಮಾಹಿತಿಗಳು ಇಲ್ಲ. ಬದಲಿಗೆ ಹಲವು ಮಾಹಿತಿಗಳು ತಪ್ಪಾಗಿವೆ.
‘ಇದು ಕರಡು ದಾಖಲೆ ಸಲ್ಲಿಸಬಹುದು’
‘ಈಗ ನೀಡಿರುವುದು ಕರಡು ‘ಯುಪಿಒಆರ್ ಕಾರ್ಡ್’. ಇದರಲ್ಲಿ ತಪ್ಪುಗಳಿರುವ ಬಗ್ಗೆ ಆನ್‌ಲೈನ್‌ನಲ್ಲಿ ಸುಮಾರು ಏಳು ಸಾವಿರ ದೂರುಗಳು ಬಂದಿವೆ. ಕೆ.ಆರ್. ವೃತ್ತದಲ್ಲಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಯುಪಿಒಆರ್ ಆಯುಕ್ತರ ಕಚೇರಿಯಲ್ಲಿ ದೂರು ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಆನ್‌ಲೈನ್‌ನಲ್ಲೂ (https://rdservices.karnataka.gov.in/service5/) ದೂರು ದಾಖಲಿಸಬಹುದು’ ಎಂದು ಯುಪಿಆರ್ ಯೋಜನೆ ನಿರ್ವಹಿಸುವ ಅಧಿಕಾರಿಗಳು ತಿಳಿಸಿದರು.