ಬೆಂಗಳೂರು: ‘ರಾಜ್ಯದಲ್ಲಿ ಬರ ನೆರೆ ಬಂದಾಗ ಅತ್ಯಲ್ಪ ಪರಿಹಾರ ನೀಡಿ ವಂಚಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಸರ್ಕಾರ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಎನ್‌ಡಿಎ ಮೈತ್ರಿಕೂಟದ ಅವಧಿಯಲ್ಲಿ ಅನ್ಯಾಯವಾಗಿದೆ ಎಂದು ಗೂಬೆ ಕೂರಿಸಲು ಯತ್ನಿಸುತ್ತಿದೆ’ ಎಂದರು. ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನುಸಾರ ₹ 4860 ಕೋಟಿ ಪರಿಹಾರ ಕೇಳಿ ಮೊದಲು ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಅದರ ಅನುಸಾರ ₹ 3454 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ₹ 18172 ಕೋಟಿ ಪರಿಹಾರ ಕೇಳಲಾಗಿತ್ತು ಎಂದು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ’ ಎಂದರು. ‘ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದರಲ್ಲೇ ಕಾಲಹರಣ ಮಾಡಬಾರದು. ಕೇಂದ್ರದಿಂದ ಬಂದಿರುವ ಹಣವನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಲಿ’ ಎಂದು ಆಗ್ರಹಿಸಿದರು.
ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಶೇ 10–11ರಷ್ಟು ಅನುದಾನ ಬಿಡುಗಡೆ ಆಗಿದ್ದರೆ, ಎನ್‌ಡಿಎ ಅವಧಿಯಲ್ಲಿ ಶೇ 51ರಷ್ಟು ಅನುದಾನ ನೀಡಲಾಗಿದೆ
ಪ್ರಲ್ಹಾದ ಜೋಶಿ, ಬಿಜೆಪಿ ಅಭ್ಯರ್ಥಿ, ಧಾರವಾಡ ಲೋಕಸಭಾ ಕ್ಷೇತ್ರ