ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಾರೆಡ್ಡಿ ಪಾಟೀಲ ಬಂಧನ ಏಕಿಲ್ಲ?: ಎನ್‌. ರವಿಕುಮಾರ್‌

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್
Published : 15 ಸೆಪ್ಟೆಂಬರ್ 2024, 16:35 IST
Last Updated : 15 ಸೆಪ್ಟೆಂಬರ್ 2024, 16:35 IST
ಫಾಲೋ ಮಾಡಿ
Comments

ಬೆಂಗಳೂರು: ‘ಜಾತಿ ನಿಂದನೆ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇದೇ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ ಅವರನ್ನು ತಿಂಗಳಾದರೂ ಏಕೆ ಬಂಧಿಸಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಭಾನುವಾರ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದೆ. ಚನ್ನಾರೆಡ್ಡಿ ಪಾಟೀಲ ವಿರುದ್ಧ ಒಂದು ತಿಂಗಳ ಹಿಂದೆ ಜಾತಿನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಇದು ನಿಮ್ಮ ಪ್ರಜಾಪ್ರಭುತ್ವವೆ? ಇದು ನಿಮ್ಮ ಜಾತ್ಯತೀತತೆಯೆ? ಇದು ನಿಮ್ಮ ಸಂವಿಧಾನವೇ ಸಿದ್ದರಾಮಯ್ಯನವರೆ’ ಎಂದು ಕೇಳಿದರು.

‘ಪ್ರಜಾಪ್ರಭುತ್ವ ದಿನದ ಹೆಸರಿನಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚಿಸಿದ್ದೀರಿ. ಕರ್ನಾಟಕದಲ್ಲಿ ಸಂವಿಧಾನ ಜಾರಿ ಮಾಡುತ್ತಿದ್ದೀರಾ? ಪ್ರಜಾಪ್ರಭುತ್ವ ಇದೆಯೆ? ಚನ್ನಾರೆಡ್ಡಿ ಅವರನ್ನು ಬಂಧಿಸದಿರಲು ಕಾರಣವೇನು’ ಎಂದು ಪ್ರಶ್ನಿಸಿದರು.

‘ವಿಧಾನಸೌಧದಲ್ಲಿ ಭಾನುವಾರ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ವೇದಿಕೆಗೆ ಯುವಕನೊಬ್ಬ ನುಗ್ಗಿದ್ದಾನೆ. ವಿಧಾನಸೌಧದಲ್ಲೇ ಭದ್ರತಾ ವೈಫಲ್ಯ ನಡೆದಿದೆ. ಗೃಹ ಇಲಾಖೆ, ಗುಪ್ತಚರ ಇಲಾಖೆ, ಪೊಲೀಸರು ಏನು ಮಾಡುತ್ತಿದ್ದಾರೆ’ ಎಂದು ಕೇಳಿದರು.

ಶಾಸಕ ಸ್ಥಾನದಿಂದ ವಜಾಗೊಳಿಸಿ– ಧರ್ಮಸೇನ

ಬೆಂಗಳೂರು: ‘ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕು. ಅವರನ್ನು ಈ ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಾತಿ ನಿಂದನೆ ಮಾಡಿದ ಲಂಚಕ್ಕೆ ಬೇಡಿಕೆ ಇಟ್ಟ ಇಂಥವರು ನಮ್ಮ ಸಮಾಜಕ್ಕೆ ಬೇಕಿಲ್ಲ. ನೊಂದು ಬೆಂದಿರುವ ಜನರನ್ನು ಜಾತಿ ಹೆಸರಲ್ಲಿ ನಿಂದಿಸುವುದು ಎಷ್ಟು ಸರಿ? ಇಂತಹವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು. ‘ಮುನಿರತ್ನ ವಿರುದ್ಧ ಕೆಪಿಸಿಸಿ ಎಸ್‌ಸಿ ವಿಭಾಗದಿಂದ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಎಲ್ಲ‌ ವಿಧಾನಸಭಾ ಕ್ಷೇತ್ರಗಳಲ್ಲಿ ಮುನಿರತ್ನ ವಿರುದ್ಧ ದೂರು ದಾಖಲಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT