ಬೀದರ್: ಬೀದರ್ ಉತ್ಸವಕ್ಕೆ ಇನ್ನೂ ಎರಡು ವಾರ ಬಾಕಿ ಇದ್ದು, ಸಿದ್ಧತೆ ಭರದಿಂದ ಸಾಗಿದೆ. ಆದರೆ, ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳೇ ನಿಯಮಾವಳಿಗಳನ್ನು ಗಾಳಿಗೆ ತೂರಿ ತಯಾರಿ ನಡೆಸಿರುವುದು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ಒಳ್ಳೆಯ ಉದ್ದೇಶವಿದ್ದರೂ ಕೆಳ ಹಂತದ ಅಧಿಕಾರಿಗಳು ಅದರಲ್ಲೂ ಜೆಸ್ಕಾಂ, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳನ್ನೇ ಪಾಲಿಸುತ್ತಿಲ್ಲ. ಜೆಸ್ಕಾಂ ಅಧಿಕಾರಿಗಳು ಸ್ಮಾರಕ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದರೆ, ನಗರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜನ ಸಾಮಾನ್ಯರ ಕೆಲಸಗಳನ್ನು ಬದಿಗೊತ್ತಿದ್ದಾರೆ.

ಅಧಿಕಾರಿಗಳು ಉತ್ಸವದ ಕಾರ್ಡ್ ಹಿಡಿದು ಅಲೆದಾಡುತ್ತಿದ್ದಾರೆ. ಪೆಟ್ರೋಲ್ ಬಂಕ್, ಗುತ್ತಿಗೆದಾರರು, ಹೋಟೆಲ್ ಮಾಲೀಕರು ಹಾಗೂ ಬಾರ್ ಮಾಲೀಕರಿಗೆ ಒತ್ತಾಯ ಪೂರ್ವಕ ಕಾರ್ಡ್ ಕೊಡಲಾಗುತ್ತಿದೆ. ಕೆಲ ಅಧಿಕಾರಿಗಳು ಕಾರ್ಡ್ ಹೊರತುಪಡಿಸಿ ನೇರವಾಗಿ ನಗದು ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳ ನಡೆ ವ್ಯಾಪಾರೋದ್ಯಮಿಗಳ ನಿದ್ದೆಗೆಡಿಸಿದೆ.

‘ಅಧಿಕಾರಿಗಳು ನಮ್ಮ ಪೆಟ್ರೋಲ್ ಬಂಕ್ಗೆ ಬಂದು ಪ್ಲಾಟಿನಂ ಕಾರ್ಡ್ ಹೆಸರಲ್ಲಿ ₹ 25 ಸಾವಿರ ಕೇಳಿದ್ದಾರೆ. ನಿಮ್ಮ ಪ್ಲಾಟಿನಂ ಕಾರ್ಡ್ ಬೇಡ, ಉತ್ಸವವೂ ಬೇಡ ಎಂದು ಸ್ಪಷ್ಟವಾಗಿ ಹೇಳಿ ಕಳಿಸಿದ್ದೇನೆ.ಸೇನಾ ರ್ಯಾಲಿಯ ಸಂದರ್ಭದಲ್ಲಿ ಜಿಲ್ಲಾಡಳಿತ ಅಭ್ಯರ್ಥಿಗಳಿಗೆ ಸರಿಯಾಗಿ ಊಟ, ವಸತಿ ವ್ಯವಸ್ಥೆ ಮಾಡಲೇ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಗೆ ನಾನು ಒಂದು ಪೈಸೆಯನ್ನೂ ಕೊಡುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದೇನೆ’ ಎಂದು ಬಿಜೆಪಿ ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ತಿಳಿಸಿದ್ದಾರೆ.

ಸಂಪನ್ಮೂಲ ಕ್ರೋಢೀಕರಣಕ್ಕೆ 3 ಸಾವಿರ ಕಾರ್ಡ್: ‘ಬೀದರ್ಉತ್ಸವಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ಡಿ. 2ರಂದು ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ಲಾಟಿನಂ ಕಾರ್ಡ್ಗೆ₹ 25ಸಾವಿರ,ಡೈಮಂಡ್ ಕಾರ್ಡ್ಗೆ ₹15ಸಾವಿರ,ಗೋಲ್ಡ್ ಕಾರ್ಡ್ಗೆ ₹10 ಸಾವಿರ ನಿಗದಿಪಡಿಸಲಾಗಿದೆ. ಒಟ್ಟು ಮೂರು ಸಾವಿರಕಾರ್ಡ್ಗಳನ್ನು ಮುದ್ರಿಸಲಾಗಿದೆ. ಕಾರ್ಡ್ ಖರೀದಿಸುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ. ಉತ್ಸವದಲ್ಲಿ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶ ಇದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

‘ಉತ್ಸವಕ್ಕೆ ರಾಷ್ಟ್ರಮಟ್ಟದ ಕಲಾವಿದರಿಗೆ ಆಹ್ವಾನ ನೀಡಿ ಅರ್ಧ ಪೇಮೆಂಟ್ ಸಹ ಮಾಡಲಾಗಿದೆ. ಎಲ್ಲ ಸಿದ್ಧತೆ ಮಾಡಿಕೊಂಡಿರುವ ಕಾರಣ ಉತ್ಸವದ ದಿನಾಂಕ ಬದಲಿಸಲು ಆಗದು’ ಎಂದು ಹೇಳಿದ್ದಾರೆ.

ಮೂರೇ ದಿನದ ಅನುಮತಿ: ಬೀದರ್ ಉತ್ಸವಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಒಟ್ಟು 23 ಷರತ್ತುಗಳನ್ನು ವಿಧಿಸಿ ಕೇವಲ ಮೂರು ದಿನ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ. ಆದರೆ, ಜಿಲ್ಲಾಡಳಿತ ಈಗಾಗಲೇ 10 ದಿನಗಳ ಕಾರ್ಯಕ್ರಮದ ಘೋಷಣೆ ಮಾಡಿ ಕೆಲಸವನ್ನೂ ಆರಂಭಿಸಿದೆ.

ಬೀದರ್ ಉತ್ಸವ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಡಿಸೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಬೀದರ್ ಕೋಟೆ ಆವರಣದಲ್ಲಿ ಆಹಾರ ಮೇಳದ ಮಳಿಗೆ ಹಾಕಲು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಜನವರಿ 1 ರಿಂದ 10 ರವರೆಗೆ ಬೀದರ್ ಕೋಟೆಯ ಆವರಣದಲ್ಲಿ ಮಕ್ಕಳ ಆಟದ ಮೇಳವನ್ನು ಆಯೋಜಿಸಲಾಗಿದೆ. ಬೃಹತ್ ಉಪಕರಣಗಳನ್ನು ಕೋಟೆಯೊಳಗೆ ತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಅನುಮತಿ ಪಡೆದು ಎಎಸ್ಐಗೆ ಮಾಹಿತಿ ನೀಡದೇ 10 ದಿನಗಳ ಕಾರ್ಯಕ್ರಮ ಆಯೋಜಿಸುತ್ತಿರುವುದು ಎಎಸ್ಐಗೆ ಆಘಾತ ಮೂಡಿಸಿದೆ.

ಜಿಲ್ಲಾಡಳಿತ ಸರಿಯಾದ ಮಾಹಿತಿ ಕೊಡದೇ ಐತಿಹಾಸಿಕ ಕೋಟೆ ಆವರಣದೊಳಗೆ ಕೆಲ ನಿಷೇಧಿತ ಕಾರ್ಯ ಚಟುವಟಿಕೆ ನಡೆಸುತ್ತಿರುವ ಕಾರಣ ಬೀದರ್ ಉತ್ಸವಕ್ಕೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆಯಲು ಎಎಸ್ಐ ಪರಿಶೀಲನೆ ನಡೆಸುತ್ತಿದೆ.

ಪುರಾತತ್ವ ಅಧೀಕ್ಷಕರು ಡಿಸೆಂಬರ್ 15ರಂದು 23 ಷರತ್ತುಗಳನ್ನು ವಿಧಿಸಿ ಉತ್ಸವ ನಡೆಸಲು ಅನುಮತಿ ಕೊಟ್ಟಿದ್ದಾರೆ. ಕೋಟೆಯೊಳಗೆ ಯಾವುದೇ ವಾಹನಗಳಿಗೆ ಅವಕಾಶ ನೀಡಬಾರದು. ಕೋಟೆಯೊಳಗೆ ಎಲ್ಲಿಯೂ ಅಗೆಯುವಂತಿಲ್ಲ. ಡ್ರೋಣ್ ಕ್ಯಾಮೆರಾ ಹಾಗೂ ವಿಡಿಯೊ ಗ್ರಾಫಿ ಮಾಡುವ ಹಾಗಿಲ್ಲ. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಯೋಜಕರು ಯಾವುದೇ ರೀತಿಯ ದೊಡ್ಡ ಉಪಕರಣಗಳನ್ನು ಒಳಗೆ ಒಯ್ಯುವಂತಿಲ್ಲ. ಯಾವ ಉದ್ದೇಶಕ್ಕೆ ಅನುಮತಿ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಜಾಗ ಬಳಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವಲಯದ ಪುರಾತತ್ವ ಅಧೀಕ್ಷಕರು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದಾರೆ.

ಅಧಿಕಾರಿಗಳಿಂದಲೇ ನಿಯಮ ಉಲ್ಲಂಘನೆ: ಬಹುತೇಕ ಸ್ಮಾರಕಗಳ ಮುಂದೆ ‘ಸಂರಕ್ಷಿತ ಸ್ಮಾರಕ, ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1958ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಯಾರಾದರೂ ಇದನ್ನು ನಾಶಪಡಿಸಿದರೆ, ಸ್ಥಳಾಂತರಗೊಳಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದರೆ, ವಿಕೃತ ಗೊಳಿಸಿದರೆ ಹಾಗೂ ದುರುಪಯೋಗ ಪಡಿಸಿಕೊಂಡರೆ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಲಾಗುವುದು ಎನ್ನುವ ಫಲಕ ಹಾಕಲಾಗಿದೆ.

ನಿಷೇಧವಿದ್ದರೂ ಕೋಟೆಯ ಒಳಗೆ ಭಾರಿ ವಾಹನಗಳಲ್ಲಿ ವಿದ್ಯುತ್ ಕಂಬಗಳನ್ನು ಒಯ್ದು ಅಗೆದು ನಿಲ್ಲಿಸಲಾಗಿದೆ. ಸ್ಮಾರಕ ಪ್ರದೇಶದಲ್ಲಿ ಒಂದು ಚಿಕ್ಕದಾದ ಹಾರೆಯಿಂದ ಅಗೆಯುವುದೂ ಅಪರಾಧ. ಆದರೆ, ಇಲ್ಲಿ ಯಂತ್ರದ ನೆರವಿನಿಂದ ಡ್ರಿಲ್ ಹಾಕಿ ಕಂಬ ನಿಲ್ಲಿಸಲಾಗಿದೆ. ಒಟ್ಟು ಒಂಬತ್ತು ವಿದ್ಯುತ್ ಕಂಬಗಳನ್ನು ಹಾಕಿ ನಿಯಮ ಉಲ್ಲಂಘಿಸಲಾಗಿದೆ.

ಕೋಟೆ ಪ್ರವೇಶ ದ್ವಾರದಲ್ಲಿ ಉತ್ಸವಕ್ಕೆ ಬರುವ ವಾಹನಗಳ ನಿಲು ಗಡೆಗೆ ಜೆಸಿಬಿಯಿಂದ ನೆಲ ಸಮತಟ್ಟು ಗೊಳಿಸಲಾಗಿದೆ. ಮಣ್ಣನ್ನು ಕಂದಕದಲ್ಲಿ ತುಂಬಲಾಗಿದೆ. ಹೀಗಾಗಿ ಕೋಟೆ ಎದುರಿನ ಒಂದು ಕಡೆಯ ಕಂದಕ ಮೂಲ ಸ್ವರೂಪ ಕಳೆದುಕೊಂಡಿದೆ.

‘ಎಎಸ್ಐ ಕೇವಲ ಮೂರು ದಿನ ಅಂದರೆ ಜನವರಿ 7, 8 ಹಾಗೂ 9ರಂದು ಮಾತ್ರ ಉತ್ಸವ ನಡೆಸಲು ಅನುಮತಿ ನೀಡಿದೆ. ಅದನ್ನು ಹೊರತು ಪಡಿಸಿ ಒಂದು ದಿನವೂ ಹೆಚ್ಚುವರಿಯಾಗಿ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲ. ಹಾಗೇನಾದರೂ ಮಾಡಿದರೆ ನೇರವಾಗಿ ಜಿಲ್ಲಾಡಳಿತದ ವಿರುದ್ಧವೇ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ’ ಎಂದು ಎಎಸ್ಐ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ನಾಡ ದ್ರೋಹದ ಕೆಲಸ!: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7, 8, 9 ರಂದು ನಡೆಯುವ ಕಾರಣ ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರು ಹಾವೇರಿಗೆ ತೆರಳಲಿದ್ದಾರೆ. ನುಡಿ ಹಬ್ಬದಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತಾಗಲು ಬೀದರ್ ಉತ್ಸವದ ದಿನಾಂಕ ಮುಂದೂಡುವಂತೆ ಕೆಡಿಪಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮನವಿ ಮಾಡಿದ್ದರು.

ಕೇಂದ್ರ ರಸ ಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಇದಕ್ಕೆ ಒಪ್ಪದೇ ತಲೆಗೆ ಒಬ್ಬೊಬ್ಬರು ಮನವಿ ಮಾಡಿಕೊಳ್ಳಲು ಶುರು ಮಾಡಿದರೆ ಉತ್ಸವ ನಡೆಸಲು ಆಗದು. ನಿಗದಿತ ಸಮಯದಲ್ಲೇ ಉತ್ಸವ ನಡೆಯಲಿದೆ. ಯಾರೂ ವೈಯಕ್ತಿಕ ಕಾರಣ ನೀಡಿ ಉತ್ಸವದ ದಿನಾಂಕ ಬದಲಿಸಲು ಒತ್ತಡ ಹಾಕಬಾರದು ಎಂದು ಉತ್ತರಿಸಿದ್ದರು. ಅದಕ್ಕೆ ಜಿಲ್ಲಾಧಿಕಾರಿಯೂ ಸಹಮತ ವ್ಯಕ್ತಪಡಿಸಿದ್ದರು. ಹೀಗಾಗಿ ದಿನಾಂಕ ಬದಲಾಗಲೇ ಇಲ್ಲ.

‘ಕೆಲ ರಾಜಕಾರಣಿಗಳೇ ಜಿಲ್ಲಾಡಳಿತದ ಹೆಗಲ ಮೇಲೆ ಬಂದೂಕು ಇಟ್ಟು ದರ್ಬಾರು ನಡೆಸುತ್ತಿದ್ದಾರೆ. ಅಧಿಕಾರಿಗಳು ವಿವೇಚನೆಯಿಂದ ಕೆಲಸ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೀದರ್ ಜನತೆಯ ಪಾಲಿಗೆ ಇದ್ದೂ ಇಲ್ಲದಂತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೂ ಜಿಲ್ಲಾಡಳಿ ತದ ಅಣತಿಯಂತೆ ನಡೆಯುತ್ತಿದ್ದಾರೆ’ ಎಂದು ಜಿಲ್ಲೆಯ ಕೆಲ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಎರಡು ವರ್ಷ ಕೋವಿಡ್ನಿಂದ ಆರ್ಥಿಕ ಸಂಕಷ್ಟ ಅನುಭವಿಸಿರುವ ಕಲಾವಿದರು ಬೀದರ್ ಉತ್ಸವ ಘೋಷಣೆ ಮಾಡಿದ ನಂತರ ಬಹಳ ಖುಷಿ ಪಟ್ಟಿದ್ದರು. ಆದರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬೀದರ್ ಉತ್ಸವ ಒಂದೇ ದಿನ ನಡೆಯುತ್ತಿರುವ ಕಾರಣ ಸಾಹಿತಿಗಳು ಹಾಗೂ ಕಲಾವಿದರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಬೀದರ್ ಉತ್ಸವದ ದಿನಾಂಕ ಮುಂದೂಡುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದರೂ ಸಾಹಿತ್ಯ ಸಮ್ಮೇಳನಕ್ಕೆ ಬೀದರ್ ಜಿಲ್ಲೆಯಿಂದ 100 ಜನರೂ ಹೋಗುವುದಿಲ್ಲ ಎಂದು ಅಸಡ್ಡೆಯ ನುಡಿಗಳ ಮೂಲಕ ಕನ್ನಡದ ಸಮ್ಮೇಳನವನ್ನು ಅವಮಾನ ಮಾಡಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಕಿಡಿಕಾರಿದ್ದಾರೆ.

‘ಉತ್ಸವದ ಹೆಸರಲ್ಲಿ ಹಣ ವಸೂಲಿ’: ಉತ್ಸವದ ಹೆಸರಲ್ಲಿ ಹಣ ವಸೂಲಿಗೆ ಜಿಲ್ಲಾಡಳಿತವೇ ಮೂರು ಕಾರ್ಡ್ಗಳನ್ನು ಬಿಡುಗಡೆ ಮಾಡಿದೆ. ಕಾರ್ಡ್ಗೆ ₹ 25 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ನಿಗದಿಪಡಿಸಿದರೂ, ದಾಖಲೆಗಳಿಲ್ಲದೆ ₹ 50 ಸಾವಿರದಿಂದ ₹ 1 ಲಕ್ಷ ವರೆಗೆ ಹಣ ವಸೂಲಿ ಮಾಡುವುದು ತೆರೆಮರೆಯಲ್ಲಿ ನಡೆದಿದೆ ಎಂದು ಭಾರತ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಶರಣಪ್ಪ ವಾಲಿ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲೆಯಲ್ಲಿ ಬೇರೆ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗುತ್ತಿಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುವುದು ಬೇಡ. ಸಂಪನ್ಮೂಲ ಕ್ರೋಢೀಕರಣದ ಹೆಸರಲ್ಲಿ ಅಧಿಕಾರಿಗಳು ಕಾನೂನು ಬದ್ಧವಾಗಿ ಹಣ ವಸೂಲಿಗೆ ಇಳಿದಿರುವುದು ಖಂಡನೀಯ ಎಂದು ಹೇಳಿದ್ದಾರೆ.

ರಸ್ತೆಗಳ ನಿರ್ಮಾಣ ಕಾರ್ಯ ಆರಂಭ: ಬೀದರ್ ಸಮೀಪದ ಚಿಕ್ಕಪೇಟೆಯಿಂದ್ ನೌಬಾದ್ ವರೆಗಿನ ರಿಂಗ್ ರಸ್ತೆ ನಿರ್ಮಾಣದ ₹ 15.49 ಕೋಟಿ ವೆಚ್ಚದ ಕಾರ್ಯಕ್ಕೆ ಕೆಕೆಆರ್ಡಿಬಿ ಮ್ಯಾಕ್ರೊ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂದೆ ₹ 74.09 ಕೋಟಿ ಹಾಗೂ ಡಿಸೆಂಬರ್ 21ರಂದು ಸಚಿವ ಸಂಪುಟ 15.49 ಕೋಟಿ ವೆಚ್ಚದ ಕಾಮಗಾರಿ ಒಪ್ಪಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಈಗಾಗಲೇ ರಸ್ತೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಗೋಡೆಗಳ ಮೇಲೆ ವರ್ಲಿ ಪೇಂಟಿಂಗ್ ಹಾಗೂ ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವ ಕಾರ್ಯವೂ ಶುರುವಾಗಿದೆ. ಎರಡು ವಾರದಲ್ಲಿ ನಗರದ ಎಲ್ಲ ಪ್ರಮುಖ ರಸ್ತೆಗಳು ದುರಸ್ತಿಯಾಗಲಿವೆ ಎಂದು ಹೇಳಿದ್ದಾರೆ. ಬೀದರ್ ಉತ್ಸವಕ್ಕೆ ಪರ್ಯಾಯವಾಗಿ 29 ಉತ್ಸವಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಬಿಜೆಪಿ ಸರ್ಕಾರ ಉತ್ಸವಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ’: ‘ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ರಹೀಂ ಖಾನ್ 2018–2019ರಲ್ಲಿ ಬೀದರ್ನಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ನಡೆಸಲು ₹ 60 ಲಕ್ಷ ಬಿಡುಗಡೆ ಮಾಡಿದ್ದರು. ಜಿಲ್ಲಾಡಳಿತ ಇಲಾಖೆಯಿಂದ ಹಣ ಪಡೆದು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಖಾತೆಯಲ್ಲಿ ಇಟ್ಟುಕೊಂಡಿದೆ. ಅದೇ ಹಣವನ್ನು ಬೀದರ್ ಉತ್ಸವಕ್ಕೆ ಬಳಸಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.

‘ಬಿಜೆಪಿ ಸರ್ಕಾರ ಉತ್ಸವಕ್ಕೆಂದೇ ಪ್ರತ್ಯೇಕವಾಗಿ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳು ಕಾರ್ಡ್ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಖಂಡನೀಯ’ ಎಂದು ಹೇಳಿದ್ದಾರೆ.

ಬೀದರ್ನ ಜನತೆ ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳೂ ಹಾಳಾಗಿವೆ. ಜನಪರ ಕೆಲಸ ಮಾಡುವ ವರೆಗೂ ಬೀದರ್ ಉತ್ಸವ ಮುಂದೂಡಬೇಕು ಎಂದು ಹಿಂದೂ ಬ್ರಿಗೇಡ್ನ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ಹಿರಿಯ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಲೂಟಿಗೆ ನಿಂತಿದ್ದಾರೆ. ಜನರಿಂದ ಒತ್ತಾಯದಿಂದ ಹಣ ಪಡೆದು ಉತ್ಸವ ಮಾಡುವುದಾದರೆ ಜಿಲ್ಲೆಯ ಜನತೆಗೆ ಬೀದರ್ ಉತ್ಸವದ ಅವಶ್ಯಕತೆ ಇಲ್ಲ ಎಂದು ಜಿಲ್ಲೆಯ ವಿವಿಧ ಸಂಘಟನೆಗಳು ಆಕ್ರೋಶ
ಹೊರ ಹಾಕಿವೆ.

ಅಧಿಕಾರಿಗಳು ಬಾಗಿಲು ಹಾಕಿಕೊಂಡು ಕೊಠಡಿಯೊಳಗೆ ಕುಳಿತು ಕೆಲವೇ ಬಾಲಂಗೋಚಿಗಳ ಮಾತು ಕೇಳಿ ಜಿಲ್ಲೆಯ ಜನತೆಗೆ ತೊಂದರೆ ಉಂಟು ಮಾಡುವುದು ಸರಿ ಅಲ್ಲ. ಜಿಲ್ಲೆಗೆ ಹೊಸದಾಗಿ ಬಂದಿರುವ ಒಬ್ಬ ಅಧಿಕಾರಿಯೂ ಜನಪರವಾದ ಕೆಲಸಗಳಿಗೆ ಮನ್ನಣೆ ನೀಡುತ್ತಿಲ್ಲ ಎಂದು ದೂರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.