ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಗಾಂಧೀಜಿ ಸಂಕಲ್ಪಕ್ಕೆ ಒಲಿದ ‘ರಾಟೆ’

ಬಿಳಿಗಿರಿಬೆಟ್ಟದ ಪರಿಸರದಲ್ಲಿ ಇನ್ನೂ ಉಸಿರಾಡುತ್ತಿದೆ ಗುಡಿ ಕೈಗಾರಿಕೆ
Published : 1 ಅಕ್ಟೋಬರ್ 2024, 6:58 IST
Last Updated : 1 ಅಕ್ಟೋಬರ್ 2024, 6:58 IST
ಫಾಲೋ ಮಾಡಿ
Comments

ಯಳಂದೂರು: ಸರಳತೆ, ಅಹಿಂಸೆ, ಸತ್ಯಾಗ್ರಹ, ಸಹೋದರತೆ, ಸ್ವಾತಂತ್ರ್ಯ, ಸ್ವದೇಶಿ, ಉಪವಾಸಕ್ಕೆ ಗಾಂಧೀಜಿ ಹೆಸರೇ ಪ್ರೇರಣೆ. ರಾಟೆ, ಚರಕ, ಮಗ್ಗ, ಖಾದಿ ಸೇರಿದಂತೆ ಬಾಪು ಚಿಂತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಸೋಲಿಗರ ಕರದಲ್ಲೂ ರಾಷ್ಟ್ರಪಿತನ ಹತ್ತಿ, ರೇಷ್ಮೆ ನೂಲು ಬಟ್ಟೆಯಾಗಿ ಅಹಿಂಸಾ ಮಂತ್ರವಾಗಿ ಅನ್ನದ ಬಟ್ಟಲಾಗಿ ಉಳಿದುಕೊಂಡಿರುವುದು ವಿಶೇಷ.

ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ 25 ವರ್ಷಗಳ ಹಿಂದೆ ವಿಜಿಕೆಕೆ ಅಂಗಳದಲ್ಲಿ ಗ್ರಾಮೋದ್ಯೋಗದ ಭಾಗವಾಗಿ ಗೃಹಾಧಾರಿತ ಕೈಮಗ್ಗ ಆರಂಭವಾಗಿದ್ದು ಇಂದಿಗೂ ನಡೆದುಕೊಂಡು ಬಂದಿದೆ. ಬುಡಕಟ್ಟು ಮಹಿಳೆಯರ ಸ್ವಾವಲಂಬನೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೈಮಗ್ಗ ಉದ್ಯೋಗ ನೀಡಿದೆ. ಖಾದಿ ಸೀರೆಯಿಂದ ಆರಂಭವಾದ ನೇಯ್ಗೆ ಹೊಸತನದ ತಾಂತ್ರಿಕತೆಯಲ್ಲಿ ನೂರಾರು ಜನರ ಬದುಕಿಗೆ ಆಸರೆ ಒದಗಿಸಿದೆ. ಇಲ್ಲಿ ಉತ್ಪಾದನೆಯಾಗುವ ಬಣ್ಣದ ಉಡುಗೆ, ಅಂಗಿಗೆ ಸದಾ ಬೇಡಿಕೆ ಸೃಷ್ಟಿಸಿರುವುದು ಗಾಂಧೀಜಿ ಅವರ ದೂರದರ್ಶಿತ್ವದ ಫಲ ಎಂದೇ ಹೇಳಬಹುದು.

‘1915ರಲ್ಲಿ ದಕ್ಷಿಣಾ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ, ಸಮಾಜ ಸುಧಾರಕ ಗೋಪಾಲಕೃಷ್ಣ ಗೋಖಲೆ ಅವರ ಸಲಹೆಯಂತೆ ನಿಜವಾದ ಭಾರತ ಅರಿಯಲು ದೇಶ ಸುತ್ತಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೈಸೂರು ಸುತ್ತಮುತ್ತ ಸಂಚರಿಸಿದ್ದರು. ಈ ವೇಳೆ ಗಾಂಧೀಜಿ ಗೃಹಾಧಾರಿತ ಶಿಕ್ಷಣ, ವೃತ್ತಿಗೆ ಚರಕಗಳ ಮಹತ್ವ ಕಂಡುಕೊಂಡರು. ಪರಿತ್ಯಕ್ತ ಸ್ತ್ರೀಯರಿಗೆ ರಾಟೆ ಬಳಸುವಂತೆ ಪ್ರೇರೇಪಿಸಿದರು. ಮೂಲೆ ಸೇರಿದ್ದ ಮಗ್ಗ, ಖಾದಿ ಸ್ವಾತಂತ್ರ್ಯ ಹೋರಾಟದ ಭಾಗವಾಯಿತು. ಈಗಲೂ ವಿಜಿಕೆಕೆಯಲ್ಲಿ ನೇಯ್ದ ವಸ್ತ್ರಗಳಿಗೆ ಬೇಡಿಕೆ ಇದೆ’ ಎನ್ನುತ್ತಾರೆ ಬೆಟ್ಟದ ನಂಜೇಗೌಡ.

‘ಪ್ರತಿ ದಿನದ ಮುಂಜಾನೆಯೇ ಮಗ್ಗಕ್ಕೆ ನೂಲು ಸೇರಿಸುವ ಕಾಯಕ ಶುರುವಾಗುತ್ತದೆ. ಪ್ರತಿದಿನ ಹೊಸ ಬಣ್ಣದ ಸೀರೆ ಹೊರ ಬರುತ್ತದೆ. ಕೈ ಮಗ್ಗದ ನಡುವೆ ಚರಕವನ್ನು ಸ್ತ್ರೀಯರು ನಡೆಸುತ್ತಾರೆ. ಸಾವಿರಾರು ರೂಪಾಯಿ ಬೆಲೆ ಸೊಬಗಿನ ಸೀರೆಗಳ ವಿವಿಧ ಬ್ರಾಂಡ್‌ಗಳಲ್ಲಿ ಮಾರಾಟ ಮಳಿಗೆಗಳಿಗೆ ಸೇರುತ್ತವೆ’ ಎನ್ನುತ್ತಾರೆ ಗಾಂಧಿ ಬಟ್ಟೆ ಉತ್ಪಾದಿಸುವ ಕೇತಮ್ಮ.

‘ಮೈಸೂರು ಮಹಾರಾಜರ ಮತ್ತು ದಿವಾನರ ಆಡಳಿತವನ್ನು ಹತ್ತಿರದಿಂದ ಕಂಡಿದ್ದ ಗಾಂಧೀಜಿ, ಗುಡಿ ಕೈಗಾರಿಕೆಗಳ ಅಭಿವೃದ್ಧಿ, ಹಿಂದುಳಿದ ವರ್ಗಗಳಿಗೆ ಸೌಲಭ್ಯ ಕಲ್ಪಿಸುವುದರ ಜತೆಗೆ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದರು. ಬಸವಣ್ಣನ ಅನುಭವ ಮಂಟಪದಂತೆ ಸಂಸತ್ತು ಇದ್ದರೆ ಸ್ವಾತಂತ್ರ್ಯವೇ ಬೇಡ ಎಂದಿದ್ದರು ಗಾಂಧೀಜಿ. ಹೀಗೆ ಮಹಾತ್ಮ ಕರುನಾಡಿನಾದ್ಯಂತ ಹೆಜ್ಜೆ ಇಟ್ಟ ಕಡೆಗಳಲ್ಲಿ ದೇಶ ಪ್ರೇಮಿಗಳನ್ನು ಹುಟ್ಟುಹಾಕಿದ್ದರು. ಅವರ ಸ್ಫೂರ್ತಿಯಿಂದ ಆರಂಭವಾದ ಘಟಕವು ಬನದಲ್ಲಿ ಮಹಾತ್ಮರ ಉಸಿರನ್ನು ಸ್ಮರಿಸುತ್ತಿವೆ’ ಎಂದು ಕೇಂದ್ರದ ಮೇಲ್ವಿಚಾರಕ ವೆಂಕಟೇಶ್ ತಿಳಿಸಿದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿಜಿಕೆಕೆ ಆವರಣದಲ್ಲಿ ಶ್ರಮಿಕರು ಮಗ್ಗದಲ್ಲಿ ಸೀರೆ ತಯಾರಿಸುತ್ತಿರುವುದು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿಜಿಕೆಕೆ ಆವರಣದಲ್ಲಿ ಶ್ರಮಿಕರು ಮಗ್ಗದಲ್ಲಿ ಸೀರೆ ತಯಾರಿಸುತ್ತಿರುವುದು

ಡಾ.ಸುದರ್ಶನ್ ಕನಸಿನ ಕೇಂದ್ರ

‘ಗಾಂಧಿವಾದಿ ವಿಜಿಕೆಕೆ ಕಾರ್ಯದರ್ಶಿ ಡಾ.ಸುದರ್ಶನ್ ಇಲ್ಲಿ ರಾಟೆಗಳ ಸ್ಥಾಪನೆ ಮಾಡಿದ್ದಾರೆ. ಪ್ರತಿದಿನ ಸ್ತ್ರೀಯರು ಮತ್ತು ಶ್ರಮಿಕರು ನೂಲು ಬಳಸಿ ಬಗೆಬಗೆಯ ವಿನ್ಯಾಸದ ವಸ್ತ್ರಗಳನ್ನು ಉತ್ಪಾದಿಸುತ್ತಾರೆ’ ಎಂದು ಕೇಂದ್ರದ ಮೇಲ್ವಿಚಾರಕ ವೆಂಕಟೇಶ್ ಹೇಳಿದರು. ‘ಗ್ರಾಮೀಣ ಭಾಗದಲ್ಲಿ ಸಿಗುವ ಹತ್ತಿಯಿಂದ ರಾಟೆಯಲ್ಲಿ ನೂರಾರು ಗಜದ ಬಟ್ಟೆ ಸಿಗುತ್ತಿತ್ತು. ಈಗ ಆಧುನಿಕತೆಯೊಂದಿಗೆ ರೇಷ್ಮೆ ಮತ್ತು ಕಾದಿ ನೂಲು ಬಳಸಿ ವೈವಿಧ್ಯಮಯ ಸೀರೆಗಳನ್ನು ತಯಾರಿಸಲಾಗುತ್ತದೆ. ಪ್ರತಿಯೊಬ್ಬರೂ 2 ದಿನಕ್ಕೆ 1 ಸೀರೆ ತಯಾರಿಸುತ್ತಾರೆ. ಪ್ರತಿ ಸೀರೆಗೂ ₹ 1  ಸಾವಿರ ಕೂಲಿ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT