ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ನೌಕರರಿಂದ ಪ್ರತಿಭಟನಾ ಧರಣಿ

Published : 8 ಅಕ್ಟೋಬರ್ 2024, 14:02 IST
Last Updated : 8 ಅಕ್ಟೋಬರ್ 2024, 14:02 IST
ಫಾಲೋ ಮಾಡಿ
Comments

ಚಾಮರಾಜನಗರ: ವರ್ಗಾವಣೆ ನಿಯಮ ಬದಲಾವಣೆ ಮುನ್ನ ಸಂಘದ ಸಲಹೆ ಪಡೆಯಬೇಕು, ಬೇರೆ ತಾಲ್ಲೂಕಿಗೆ ವರ್ಗಾವಣೆ ನಿಯಮ ಕೈಬಿಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನ ಮುಂದೆ ಧರಣಿ ಕುಳಿತ ನೌಕರರು ಸರ್ಕಾರ ನೌಕರರ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಬಿತ್ತಿಪತ್ರ ಪ್ರದರ್ಶನ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪಿಡಿಒ ನೌಕರರ ಸಂಘದ ಅಧ್ಯಕ್ಷ ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ.

ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ಸಮಿತಿಯ ಆದೇಶದಂತೆ ಗ್ರಾಮ ಪಂಚಾಯಿತಿಯ ಎಲ್ಲ ಸೇವೆಗಳನ್ನು ಬಂದ್ ಮಾಡಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

ರಾಜ್ಯದ ಶೇ 65 ರಿಂದ 70ರಷ್ಟು ಜನರಿಗೆ ಗ್ರಾಮ ಪಂಚಾಯಿತಿ ಸರ್ಕಾರದ ಸೇವೆಗಳನ್ನು ಒದಗಿಸುತ್ತಿದೆ. ಗ್ರಾಮ ಪಂಚಾಯತಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕ್ಲರ್ಕ್ ಕಂ ಡಿಇಒ, ಕರ ವಸೂಲಿಗಾರರು, ಕಚೇರಿ ಸಹಾಯಕರು, ಸ್ವಚ್ಛತಾಗಾರರು ದುಡಿಯುತ್ತಿದ್ದಾರೆ. ಕಾರ್ಯನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರೂ ಈಡೇರಿಲ್ಲ. ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷ ಎನ್.ಜಿ.ಮಾದಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿರುವ ಸಮಸ್ಯೆ ಪರಿಹರಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗುತ್ತಿಲ್ಲ. ಎಲ್ಲ ಸಮಸ್ಯೆಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನೌಕರರನ್ನು ಹಾಗೂ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ.

ಈ ಧೋರಣೆಯನ್ನು ಖಂಡಿಸಿ ಗ್ರಾಮ ಪಂಚಾಯತಿಯಲ್ಲಿ ಸಿಗುವ ಸೇವೆಗಳಾದ ನರೇಗಾ, 15ನೇ ಹಣಕಾಸು ಯೋಜನೆ ಕಾರ್ಯಕ್ರಮಗಳು, ಆಶ್ರಯ ಮನೆಗಳ ನಿರ್ಮಾಣ, ಇ–ಜಾಮೆ, ಸ್ವಚ್ಚ ಭಾರತ್ ಮಿಷನ್, ಬಾಪೂಜಿ ಸೇವಾ ಕೇಂದ್ರದ ಸೇವೆಗಳು, ಕಸ ಸಂಗ್ರಹಣೆ, ಕುಡಿಯುವ ನೀರು ಸರಬರಾಜು, ವಿದ್ಯುತ್ ದೀಪಗಳ ನಿರ್ವಹಣೆ, ಕಚೇರಿ ಕರ್ತವ್ಯ ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಬಸಪ್ಪನಪಾಳ್ಯ ರೇವಣ್ಣ, ರೂಪೇಶ್‌ ಕಾಡಹಳ್ಲಿ, ಎಸ್‌ಡಿಎ ಮತ್ತು ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಕೊತ್ತಲವಾಡಿ ಮಹದೇವಸ್ವಾಮಿ, ಡಿಇಒ ಸಂಘಗಳ ಅಧ್ಯಕ್ಷ ರಾಜೇಂದ್ರ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಪ್ರಧಾನ ಕಾರ್ಯದರ್ಶಿ ಶಾಂತರಾಜು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ನೌಕರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT