ಮಹದೇಶ್ವರ ಬೆಟ್ಟ: ಇತ್ತೀಚೆಗೆ ಬಿಡುಗಡೆಯಾಗಿರುವ, ರಾಜ್ ಬಿ.ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಗರುಡ ಗಮನವೃಷಭ ವಾಹನ ಚಲನಚಿತ್ರದಲ್ಲಿ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಸ್ವಾಮಿಯ ಜಾನಪದ ಹಾಡು ‘ಸೋಜುಗಾದ ಸೂಜು ಮಲ್ಲಿಗೆ’ ಹಾಡನ್ನು ಬಳಸಿರುವುದಕ್ಕೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಶತಮಾನಗಳಿಂದ ಅರಳಿದ ಜನಪದ ಸೊಗಡಿನ ಹಾಡೊಂದರ ಮೌಲ್ಯವನ್ನು, ಅದರಿಂದ ದೊರಕುವ ಅಮೂಲ್ಯ ದೈವಿಕ ರೂಪಕಗಳನ್ನು ಒಂದು ಚಲನಚಿತ್ರದ ವಾಣಿಜ್ಯ ಉದ್ದೇಶದ ರೂಪಕಕ್ಕಾಗಿ ಬಲಿ ಕೊಡುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಪುರಾಣದ ಐತಿಹ್ಯಗಳನ್ನು ಹೋಲಿಸಿ ಚಿತ್ರಕಥೆಯನ್ನು ರೂಪಿಸಲಾಗಿದೆ ಎಂದು ಕೇಳಿ ತಿಳಿದಿದ್ದೇವೆ. ಸಿನೆಮಾ ರಂಗಕ್ಕೆ ಇದೇನೂ ಹೊಸತಲ್ಲ. ಯಾವುದೇ ಕಲಾತ್ಮಕ ಕೃತಿಗಳ ಹಾಗೆಯೇ ಸಿನೆಮಾ ರಂಗವೂ ರಚನಾತ್ಮಕವಾಗಿ ಮತ್ತು ಸಮಾಜಮುಖಿಯಾಗಿ ನಡೆದುಕೊಳ್ಳಬೇಕಾಗಿರುವುದು ಈ ಕಾಲದ ಅಗತ್ಯ. ಹೀಗೆ ಮಾಡುವಾಗ ಸೃಜನಶೀಲತೆಯ ಹಲವು ರೂಪಗಳನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಯಾರ ವಿರೋಧವೂ ಇರಕೂಡದು’ ಎಂದು ಹೇಳಿದ್ದಾರೆ.

‘ಆದರೆ, ಈ ಚಿತ್ರದಲ್ಲಿ ನಿರ್ದೇಶಕರು ಮಂಗಳೂರಿನ ಸುತ್ತಮುತ್ತಲ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಒಂದು ಕ್ರೌರ್ಯದತ್ತ ವಾಲುವ ಕಥಾಹಂದರವನ್ನು ರೂಪಿಸಿ ಅದರಲ್ಲಿ ನಡೆಯುವ ಕೊಲೆಯೆಂಬ ಹೀನಕೃತ್ಯ ಮಾಡಿ ಸಂಭ್ರಮಿಸುವ ದೃಶ್ಯದ ಹಿನ್ನೆಲೆಯಾಗಿ ಮಾದೇವನನ್ನು ಪೂಜಿಸುವ, ಆರಾಧಿಸುವ ಜಾನಪದ ಹಾಡನ್ನು ಬಳಸಿರುವುದನ್ನು ನೋಡಿದಾಗ ನಿರ್ದೇಶಕರ ಮಾರುಕಟ್ಟೆ ಆಧಾರಿತ ಚಿಂತನೆ ಬಗ್ಗೆ ಅನುಕಂಪ ಮೂಡುತ್ತದೆ. ಮಂಗಳೂರಿನ ದಟ್ಟ ಅನುಭವ ಕೊಡುವ ಚಿತ್ರದಲ್ಲಿ ಮೈಸೂರು ಸೀಮೆಯಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಮಾದೇವನ ಸ್ತುತಿಸುವ, ಈಗ ಹಠಾತ್ತಾಗಿ ಜನಪ್ರಿಯವಾಗಿರುವ ಗೀತೆಯನ್ನು ಯಾವುದೇ ಕಾರಣವಿಲ್ಲದೆ ಸೃಜನಶೀಲತೆ ಎಂಬ ಕಾರಣ ನೀಡಿ ಬಳಸಿರುವುದು ಏಕೆ? ಮಂಗಳೂರು ಸೀಮೆಯಲ್ಲೂ ನೂರಾರು ಶೈವ ಸ್ಥಾನಗಳಿವೆ; ಶಿವನನ್ನು ಸ್ತುತಿಸುವ ನೂರಾರು ಜನಪ್ರಿಯ ಹಾಡುಗಳಿವೆ. ಹೀಗಿದ್ದೂ ದೂರದ ಮಲೆ ಮಹದೇಶ್ವರನ ಕುರಿತ ಹಾಡನ್ನು ಬಳಸುವ ಅನಿವಾರ್ಯತೆ ಅವರಿಗೆ ಏಕೆ ಬಂತು ಎಂಬುದನ್ನು ರಾಜ್ಯದ ಜನರು ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಿದೆ’ ಎಂದು ಶ್ರೀಗಳು ಹೇಳಿದ್ದಾರೆ.

‘ಈ ಹಾಡಲ್ಲದೆ ದಾಸಶ್ರೇಷ್ಠ ಪುರಂದರದಾಸರ ‘ಚಂದ್ರಚೂಡ ಶಿವಶಂಕರ ಪಾರ್ವತಿ’ ಹಾಡನ್ನೂ ಇದೇ ಚಿತ್ರದಲ್ಲಿ ಇನ್ನೊಂದು ಸನ್ನಿವೇಶಕ್ಕೆ ಬಳಸಿಕೊಂಡಿದ್ದಾರೆ ಎಂಬುದನ್ನೂ ತಿಳಿದಿದ್ದೇವೆ. ಪುರಂದರ ದಾಸರಾಗಲಿ, ಮನುಷ್ಯತ್ವದಿಂದ ದೈವತ್ವಕ್ಕೇರಿದ ಮಹಾಮಹಿಮ ಮಲೆ ಮಹದೇಶ್ವರ ಸ್ವಾಮಿಗಳಾಗಲಿ, ಭಕ್ತಿ ಪರವಶದಿಂದ ಪದ್ಯಗಳನ್ನು ರಚಿಸಿದ ಜನಪದರಾಗಲಿ.. ಯಾರೂ ಈ ಹಾಡುಗಳ ಮೇಲೆ ಯಾವ ಹಕ್ಕುಗಳನ್ನೂ ಇಟ್ಟುಕೊಂಡಿಲ್ಲ. ತಮ್ಮ ಹಾಡುಗಳೆಲ್ಲವೂ ಸಮಾಜದ ಅಭ್ಯುದಯಕ್ಕಾಗಿ ಎಂದೇ ಅವರೆಲ್ಲ ಭಾವಿಸಿದ್ದರು; ಇಂದೇನಾದರೂ ಈ ಹಾಡುಗಳು ಕೃತಿಸ್ವಾಮ್ಯದಡಿ ಇದ್ದ ಪಕ್ಷದಲ್ಲಿ ಏನಾಗುತ್ತಿತ್ತು ಎಂಬುದನ್ನೂ ಈ ನಾಡಿನ ಚಿಂತಕರು, ಸಿನೆಮಾ ರಂಗದ ಅನುಭವಿಗಳು ಯೋಚಿಸಬೇಕಲ್ಲವೆ?

‘ಶತಮಾನಗಳ ಕಾಲ ಬಾಳಿದ ಈ ಹಾಡುಗಳು, ಭಗವದ್ಗೀತೆ, ಶಿವಶರಣರ ವಚನಗಳು ಮುಂತಾದ ಸಂತ ಸಾಹಿತ್ಯ, ಜನಪದ ಸಾಹಿತ್ಯದ ಕೃತಿಗಳು ಈ ಎಲ್ಲ ಘಟನೆಗಳನ್ನೂ ಮೀರಿ ಇನ್ನೂ ನೂರಾರು ವರ್ಷಗಳ ಕಾಲ ಜನರ ಮನದಾಳದಲ್ಲಿ ಇದ್ದೇ ಇರುತ್ತವೆ. ಅದರೆ ಡಿಜಿಟಲ್ ವೇದಿಕೆಗಳಲ್ಲಿ ಹೆಚ್ಚು ಕಾಲ ಬಾಳುವ ಸಿನೆಮಾಗಳಲ್ಲಿ ಹೀಗೆ ಸಂಬಂಧವಿಲ್ಲದೆ, ಸತರ್ಕವಿಲ್ಲದೆ ಸೃಜನಶೀಲತೆಯ ಹೆಸರಿನಲ್ಲಿ ಹಾಡುಗಳನ್ನು ಬಳಸಿ, ಇನ್ನೊಬ್ಬರು ಹಾಡುವಾಗ ಈ ಕ್ರೌರ್ಯದ ಸನ್ನಿವೇಶಗಳೇ ನೆನಪಾಗುವ ಹಾಗೆ ಮಾಡುವ ಮಾನಸಿಕತೆಗೆ ಏನೆನ್ನಬೇಕು? ಜಾನಪದ, ತಾತ್ವಿಕ ಹಾಡುಗಳ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ ಬೆಳೆಸುವುದು ಮುಖ್ಯವೋ, ಅವುಗಳನ್ನು ವಾಣಿಜ್ಯ ಉದ್ದೇಶದ ರೂಪಕಗಳನ್ನಾಗಿ ರೂಪಾಂತರಿಸುವುದು ಮುಖ್ಯವೋ? ಸೃಜನಶೀಲತೆ ಎಂಬುದು ಸಾಂಸ್ಕೃತಿಕ ಪತನಕ್ಕೆ ಕಾರಣವಾಗದೆ, ಸಮಾಜದ ಉನ್ನತಿಗೆ ಬಳಕೆಯಾಗಬೇಕು.

‘ಅದ್ಭುತ ಪ್ರತಿಭೆಗಳ ಸಂಗಮ ಎಂದೇ ಸುದ್ದಿಯಾಗಿರುವ ಈ ಸಿನೆಮಾ ನಿರ್ಮಾಣ ತಂಡದ ಯಾರೊಬ್ಬರೂ ಕ್ಷಮೆ ಕೇಳಿ ಆಗಬೇಕಾದ್ದೇನೂ ಇಲ್ಲ. ಕ್ಷಮಾಭಾವವು ವ್ಯಕ್ತಿಯ ಅಂತರಂಗದಲ್ಲಿ ಅದಾಗೇ ಮೂಡಬೇಕೇ ವಿನಃ ಯಾವುದೇ ಒತ್ತಡಕ್ಕೆ ಕೃತಕವಾಗಿ ಹುಟ್ಟಬಾರದು. ಆತ್ಮಸಾಕ್ಷಿ ಇದ್ದವರಿಗೆ ಕ್ಷಮೆ ಕೇಳಬೇಕೇ ಬೇಡವೆ ಎಂದು ನಿರ್ಧರಿಸುವುದೂ ಕಷ್ಟವಾಗುವುದಿಲ್ಲ. ಕೊಲೆಗೆ ರೂಪಕವಾಗಿ ದೇವರ ಹಾಡನ್ನು, ದುರ್ಗಾಸ್ತುತಿಯನ್ನು ಬಳಸುವುದು ತುಂಬ ಹಳೆಯ ತಂತ್ರ. ಹಲವು ಟಿವಿ ಸೀರಿಯಲ್ಗಳಲ್ಲೂ ಹೀಗೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಇಂತಹ ಚರ್ವಿತಚರ್ವಣ ಸಿದ್ಧ ಮಾದರಿಗಳನ್ನು ಮೀರುವ ಸೃಜನಶೀಲತೆ ಇವರಿಗೆಲ್ಲ ಒದಗಲಿ ಎಂದು ಹಾರೈಸುತ್ತೇವೆ.

‘ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವಕ್ಕೆ ಬೆಳೆದವರು. ಅವರು ಜಾತಿ – ಪಂಥ ಭೇದವಿಲ್ಲದೆ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಅವರು ಸಕಲಜೀವಿಗಳಿಗೂ ಲೇಸನ್ನೇ ಬಯಸುವವರು; ಅಲ್ಪಮತಿಗಳಿಗೆ ಜ್ಞಾನ ನೀಡಿ, ಅಂತಹವರ ಅಪಸವ್ಯಗಳನ್ನು ಕ್ಷಮಿಸಿ ನಸುನಗು ಬೀರಿದ ಮಹಾಯೋಗಿ. ಇಂತಹ ಮಹಾಮಹಿಮರ ಬಗ್ಗೆ ಇದ್ದ ಅದ್ಭುತ ಗೀತೆಯೊಂದನ್ನು ಹಾಡುವಾಗ ಯಾವುದೋ ಲೌಕಿಕ ಜಗತ್ತಿಗೆ ಸೇರಿದ ಹಿಂಸಾತ್ಮಕ ಕಥೆಯೊಳಗಿನ ಕ್ರೌರ್ಯವು ನೆನಪಾಗುವಂತೆ ಮಾಡಿದ ನಿರ್ದೇಶಕರನ್ನೂ ಮಹದೇಶ್ವರರು ಹರಸಲಿ; ಅವರಿಗೆ ಮುಂದೆಂದೂ ಇಂತಹ ಚಿಂತನೆಗಳು ಬರದಂತೆ ಸದ್ಬುದ್ಧಿ ನೀಡಲಿ’ ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.