ಚಿಕ್ಕಬಳ್ಳಾಪುರ: ನಗರದಿಂದ ಜಿಲ್ಲಾಡಳಿತ ಭವನಕ್ಕೆ ಹೋಗುವ ಶಿಡ್ಲಘಟ್ಟ ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ –7ರ ಮೇಲ್ಸೇತುವೆ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯ ಬದಿಯಲ್ಲಿ ಎಗ್ಗಿಲ್ಲದೆ ತ್ಯಾಜ್ಯ ಸುರಿಯುವ ಪ್ರವೃತ್ತಿ ಹೆಚ್ಚಿದ್ದು, ದಿನೇ ದಿನೇ ಇಲ್ಲಿನ ಚಿತ್ರಣ ತ್ಯಾಜ್ಯ ವಿಲೇವಾರಿ ಘಟಕದಂತೆ ಬದಲಾಗುತ್ತಿರುವುದು ನಾಗರಿಕರಲ್ಲಿ ಕಳವಳ ಹುಟ್ಟಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿ –7 ರಿಂದ ಶಿಡ್ಲಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸಲು ಇರುವ ಈ ಏಕೈಕ ಸರ್ವೀಸ್ ರಸ್ತೆಯ ಇಕ್ಕೆಲದಲ್ಲಿ ರಾಜಾರೋಷವಾಗಿ ಒಡೆದ ಕಟ್ಟಡಗಳ ಅವಶೇಷಗಳು, ತರಿದು ಹಾಕಿದ ಕೋಳಿ ಪುಕ್ಕಗಳು, ಉಂಡು ಮಿಕ್ಕಿದ ಆಹಾರ ಪದಾರ್ಥ, ಮಳಿಗೆಗಳಲ್ಲಿ ದಿನವೀಡಿ ಉತ್ಪತ್ತಿಯಾಗುವ ತ್ಯಾಜ್ಯ, ಹರಿದು ಹೋದ ಪಾದರಕ್ಷೆಗಳು, ಮನೆಯಲ್ಲಿ ಬಳಸಿ ಬೇಡವಾಗಿ ಬಿಸುಟಿದ ತ್ಯಾಜ್ಯ ವಸ್ತುಗಳನ್ನು ಮೂಟೆಗಟ್ಟಲೇ ತಂದು ಬಿಸಾಕಲಾಗುತ್ತಿದೆ.

ಇದರಿಂದಾಗಿ ಹೆದ್ದಾರಿಯಿಂದ ಸರ್ವೀಸ್ ಮೂಲಕ ಶಿಡ್ಲಘಟ್ಟ ರಸ್ತೆಗೆ ಬರುವವರಿಗೆಲ್ಲ ದುರ್ನಾತದ ಸ್ವಾಗತವಾಗುತ್ತದೆ. ಇಲ್ಲಿ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

ನಿಯಮದ ಪ್ರಕಾರ, ಕೋಳಿ ತ್ಯಾಜ್ಯವನ್ನು ಮಣ್ಣಿನ ಗುಂಡಿ ತೆಗೆದು ಅದರಲ್ಲಿ ಹಾಕಿ ನಂತರ ಮುಚ್ಚಿ ವಿಲೇವಾರಿ ಮಾಡಬೇಕು. ಆದರೆ, ಇಲ್ಲಿ ಬಹುತೇಕ ಮಾಲೀಕರು ಇದನ್ನು ಪಾಲಿಸುತ್ತಿಲ್ಲ. ರಾತ್ರಿ ವೇಳೆ ದಾರಿ ಮತ್ತು ಹೆದ್ದಾರಿ ಇಕ್ಕೆಲದಲ್ಲಿ ಮನಬಂದಂತೆ ತ್ಯಾಜ್ಯ ಎಸೆದು ಕಂಡು ಕಾಣದಂತೆ ಹೋಗುತ್ತಿದ್ದಾರೆ. ಕೆಲವರು ಇಲ್ಲಿ ಸುರಿದ ತ್ಯಾಜ್ಯಕ್ಕೆ ಬೆಂಕಿ ಇಟ್ಟು ನಾಶಪಡಿಸುವ ಚಾಳಿ ರೂಢಿಸಿಕೊಂಡಿದ್ದಾರೆ. ಪರಿಣಾಮ, ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.

ನಿತ್ಯವೂ ಈ ರಸ್ತೆಯಲ್ಲಿ ಅಧಿಕಾರಿಗಳು ಮತ್ತು ಶಾಲಾ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹೋಗುವ ಸಾರ್ವಜನಿಕರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ ಹಾಗೂ ಕೋಳಿ ಅಂಗಡಿ ತ್ಯಾಜ್ಯ, ಮನೆಗಳ ತ್ಯಾಜ್ಯ ಎಲ್ಲವೂ ರಸ್ತೆ ಬದಿ ಸಂಗ್ರಹಗೊಳ್ಳುತ್ತಿದೆ. ಒಂದೆಡೆ ನಗರಸಭೆಯವರ ಅಸಡ್ಡೆಯಾದರೆ, ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ಇಲ್ಲಿ ದಿನೇ ದಿನೇ ಅನೈರ್ಮಲ್ಯ ವಾತಾವರಣ ಉಂಟು ಮಾಡುವ ಜತೆಗೆ ಹೊರ ರಾಜ್ಯದವರ ಎದುರು ಮಾನ ಹರಾಜು ಹಾಕುತ್ತ, ಸವಾರರಿಗೆ ಆಗಾಗ ಮುಜುಗರ ಉಂಟು ಮಾಡುತ್ತಿರುತ್ತದೆ ಎನ್ನುವುದು ಸ್ಥಳೀಯರ ಆರೋಪ.

ಸದ್ಯ, ರಸ್ತೆ ಬದಿಯಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ ದಿನೇ ದಿನೇ ಬೆಳೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಅತ್ತ ತಿರುಗಿ ನೋಡದಿರುವುದು ಪ್ರಜ್ಞಾವಂತರಲ್ಲಿ ಬೇಸರ ತರಿಸಿದೆ. ಅಧಿಕಾರಿಗಳ ಜಾಣ ಕುರುಡುತನ ಬಲ್ಲ ಹೆದ್ದಾರಿ ಇಕ್ಕೆಲಗಳಲ್ಲಿರುವ ಮಳಿಗೆಗಳ ವರ್ತಕರು ಯಾರ ಭಯವಿಲ್ಲದೆ ರಾಜಾರೋಷವಾಗಿ ತ್ಯಾಜ್ಯ ತಂದು ರಸ್ತೆಯ ಪಕ್ಕದಲ್ಲಿ ಸುರಿಯುತ್ತಿದ್ದಾರೆ. ಅದಕ್ಕೆ ಸಾಥ್ ನೀಡುತ್ತಿರುವ ನಾಗರಿಕರು ಕೂಡ ಪೈಪೋಟಿಯಲ್ಲಿ ಬೇಡದ ವಸ್ತುಗಳನ್ನೆಲ್ಲ ಹೆದ್ದಾರಿ ಬದಿ ಸುರಿದು ಕೈತೊಳೆದುಕೊಳ್ಳುತ್ತಿದ್ದಾರೆ.

ಈ ಹಿಂದೆ ಅನಿರುದ್ಧ್ ಶ್ರವಣ್ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಗರಗಳ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾಳಜಿ ತೋರಿ, ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಘನ ತ್ಯಾಜ್ಯ ನಿರ್ವಹಣೆ ನಿಯಮ 2016’ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿ ಆದೇಶ ಹೊರಡಿಸಿದ್ದರು. ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ) ಅಡಿ ದತ್ತವಾದ ಅಧಿಕಾರ ಬಳಸಿ ದಂಡ ಹಾಕುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲಾಧಿಕಾರಿ ಅವರ ಆದೇಶ ಪಾಲಿಸುವ ನಿಟ್ಟಿನಲ್ಲಿ ನಗರಸಭೆ ಆಯುಕ್ತರು ಸಂಚಾರ ಪೊಲೀಸರು ದಂಡ ವಿಧಿಸಲು ಬಳಸುತ್ತಿರುವ ಮಾದರಿಯ ಮೂರು ಯಂತ್ರಗಳನ್ನು ಖರೀದಿಸಿದರು. ಆರಂಭದಲ್ಲಿ ಕೆಲವೆಡೆ ದಂಡ ವಸೂಲಿ ಮಾಡಿದಂತೆ ಮಾಡಿದ ನಗರಸಭೆ ಸಿಬ್ಬಂದಿ, ಅನಿರುದ್ಧ್ ಅವರ ವರ್ಗಾವಣೆಯಾಗುತ್ತಿದ್ದಂತೆ ತ್ಯಾಜ್ಯ ಸುರಿವವರನ್ನು ನಿಯಂತ್ರಿಸುವ ಗೋಜಿಗೆ ಹೋಗಲಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶ.

ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ
‘ಸರ್ವೀಸ್ ರಸ್ತೆ ಬದಿಯಲ್ಲಿಯೇ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ನಡೆದಿದ್ದು, ಅದೀಗ ಪೂರ್ಣಗೊಳ್ಳುವ ಹಂತ ತಲುಪಿದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಪ್ರದೇಶ ತ್ಯಾಜ್ಯ ವಿಲೇವಾರಿ ಘಟಕವಾಗಿ ಬದಲಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಕಣ್ಣೆತ್ತಿ ನೋಡುತ್ತಿಲ್ಲ. ಆ ರಸ್ತೆಯಲ್ಲಿ ದಾಟಿ ಹೋಗಬೇಕಾದರೆ ವಾಕರಿಕೆ ಬರುತ್ತದೆ. ನಾಳೆ ಕಾಲೇಜು ಆರಂಭಗೊಂಡರೆ ವಿದ್ಯಾರ್ಥಿಗಳ ಗತಿ ಏನು? ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ಉಳಿದ ರಸ್ತೆಗಳ ಪಾಡೇನು?
‘ಇದು ಇಂದು, ನಿನ್ನೆಯ ಸಮಸ್ಯೆಯಲ್ಲ ಹಲವು ವರ್ಷಗಳಿಂದ ಶಿಡ್ಲಘಟ್ಟ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಪ್ರವೃತ್ತಿ ಕಾಣುತ್ತಲೇ ಇದೆ. ಜಿಲ್ಲಾಡಳಿತ ಭವನದ ದಾರಿಯಲ್ಲಿರುವ ರಸ್ತೆಗಳಿಗೆ ಇಂತಹ ದುರ್ಗತಿ ಒದಗಿದರೂ ಅಧಿಕಾರಿಗಳು ತಿರುಗಿ ನೋಡದಿದ್ದ ಬಳಿಕ ಇನ್ನು ಉಳಿದ ರಸ್ತೆಗಳ ಪಾಡೇನು? ದುಡ್ಡು ಮಾಡುವ ವಿಚಾರಗಳಿದ್ದರೆ ರಾಜಕಾರಣಿಗಳು, ಅಧಿಕಾರಿಗಳು ಬೇಗ ಗಮನ ಹರಿಸುತ್ತಾರೆ. ಕಸ ತೆಗೆಸುವುದರಿಂದ ಅವರಿಗೇನು ಲಾಭವಿದೆ? ಹೀಗಾಗಿ ಇಂತಹ ಪರಿಸ್ಥಿತಿ ನಗರದ ಅನೇಕ ರಸ್ತೆಗಳಲ್ಲಿ ಕಾಣುವಂತಾಗಿದೆ’ ಎಂದು ಅಣಕನೂರು ನಿವಾಸಿ ಚಂದ್ರಶೇಖರ್ ತಿಳಿಸಿದರು.

‘ಸ್ವಚ್ಛ ಭಾರತ ’ ಘೋಷಣೆ ಹಾಕುವವರನ್ನು ಮೊದಲು ಕರೆದುಕೊಂಡು ಬಂದು ಶಿಡ್ಲಘಟ್ಟ ರಸ್ತೆಯ ಸರ್ವೀಸ್ ರಸ್ತೆ ತೋರಿಸಿದರೆ ಆ ಯೋಜನೆಯ ವಾಸ್ತವ ಫಲಿತಾಂಶ ಗೋಚರಿಸುತ್ತದೆ. ಕಾಟಾಚಾರಕ್ಕೆ ಮಾಡುವ ಯಾವ ಕೆಲಸಗಳು ಫಲ ಕೊಡುವುದಿಲ್ಲ.
-ಪ್ರವೀಣ್, ಚಾಮರಾಜಪೇಟೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.