ಕ್ವಿಂಟಾಲ್‌ಗೆ ₹80 ಸಾವಿರದಿಂದ ₹1 ಲಕ್ಷದ ತನಕ ಬೆಲೆ ಇದೆ. ಬೀಜ ವಿತರಿಸಿ ರೈತರಿಂದ ಖರೀದಿಸುವ ಹಲವು ಕಂಪನಿಗಳಿದ್ದು ನಾಮ್ದಾರಿ ತಳಿಗೆ ಹೆಚ್ಚಿನ ಬೆಲೆ ಇದೆ. ಜಪಾನ್ ಅಮೆರಿಕಾ ಮತ್ತು ಚೀನಾದಲ್ಲಿ ಬೇಡಿಕೆ ಇದೆ. ಆದ್ದರಿಂದಲೇ ಹೆಚ್ಚಿನ ಬೆಲೆ ಇದೆ ಎಂದು ರೈತರು ವಿವರಿಸುತ್ತಾರೆ. ಕಡೂರು ತಾಲ್ಲೂಕು ಬೀರೂರು ಹೋಬಳಿ ಜೋಡಿ ತಿಮ್ಮಾಪುರ ದೊಡ್ಡಘಟ್ಟ ಕಾರಿಹಳ್ಳಿ ಹುಲ್ಲೆಹಳ್ಳಿ ಎರೇಹಳ್ಳಿ ಗಾಳಿಹಳ್ಳಿ ಕಡೂರು ಕಸಬಾ ಹೋಬಳಿಯ ಕೊಪ್ಪಲು ನೀಲೇಗೌಡನ ಕೊಪ್ಪಲು ಹೊಸಹಳ್ಳಿ ಕುರುಬಗೆರೆ ಸುತ್ತಮುತ್ತಲ ರೈತರು ಹೆಚ್ಚಿನದಾಗಿ ಈ ಬೆಳೆಯನ್ನು ಆಶ್ರಯಿಸಿದ್ದಾರೆ. ಅದರಲ್ಲೂ ಜೋಡಿ ತಿಮ್ಮಾಪುರದ ಪ್ರತಿ ಮನೆಯ ರೈತರೂ ಈ ಬೆಳೆ ಬೆಳೆಯುತ್ತಾರೆ. ಮೂರು ತಿಂಗಳ ಬೆಳೆ ಆಗಿರುವುದರಿಂದ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಸಾಧ್ಯವಿದೆ. ಎಕರೆಗೆ ಕನಿಷ್ಠ ₹1 ಲಕ್ಷದಿಂದ ₹2 ಲಕ್ಷ ತನಕ ಆದಾಯ ಇದೆ. ಬಿತ್ತನೆ ಬೀಜ ಔಷಧಿ ಮತ್ತು ಕಾರ್ಮಿಕರ ಕೂಲಿ ಸೇರಿ ಎಕರೆಗೆ ಒಂದು ಬೆಳೆಗೆ ₹25 ಸಾವಿರ ಖರ್ಚಾಗುತ್ತದೆ. ಎರಡು ಬೆಳೆ ಬೆಳೆಯುವುದರಿಂದ ಎಕರೆಗೆ ₹3 ಲಕ್ಷದಿಂದ ₹3.50 ಲಕ್ಷ ಉಳಿತಾಯ ಆಗುತ್ತದೆ ಎಂದು ಜೋಡಿ ತಿಮ್ಮಾಪುರದ ರೈತ ಷಣ್ಮುಖಪ್ಪ ಹೇಳುತ್ತಾರೆ. ಕಡೂರು ತಾಲ್ಲೂಕಿನಲ್ಲೇ ಸಿಹಿ ಕುಂಬಳ ಬೆಳೆ ಅತೀ ಹೆಚ್ಚಿದೆ. 2022–23ನೇ ಸಾಲಿನಲ್ಲಿ 183 ಎಕರೆಯಲ್ಲಿ ಕುಂಬಳ ಬೆಳೆ ಇತ್ತು. ಈ ವರ್ಷ ಇನ್ನೂ ಹೆಚ್ಚಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.