ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ: ವಿದ್ಯುತ್‌ ಸಂಪರ್ಕಕ್ಕೆ ಕುತ್ತಾದ ಮಾನ್ಯತಾ ಅವಧಿ

ರೈತರ ಕೃಷಿ ಪಂಪ್‌ಸೆಟ್‌ ಅಂತರ ದೃಢೀಕರಣ ಪ್ರಮಾಣ ಪತ್ರ
Published 5 ಜುಲೈ 2024, 6:35 IST
Last Updated 5 ಜುಲೈ 2024, 6:35 IST
ಅಕ್ಷರ ಗಾತ್ರ

ನರಸಿಂಹರಾಜಪುರ: ರೈತರ ಕೊಳವೆ ಬಾವಿಯ ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಕುಡಿಯುವ ನೀರಿನ ಸ್ಥಾವರದಿಂದ ಸ್ವಂತ ಭೂಮಿಯಲ್ಲಿರುವ ಸ್ಥಾವರಕ್ಕೆ ಇರುವ ಅಂತರ ದೃಢೀಕರಣ ಪತ್ರದ ಮಾನ್ಯತಾ ಅವಧಿಯು ಕೇವಲ 6 ತಿಂಗಳು ಎಂಬುದು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಕುತ್ತಾಗಿ ಪರಿಣಮಿಸಿದೆ.

‘ನಿರಾಕ್ಷೇಪಣಾ ಪತ್ರ ಮತ್ತು ಅಂತರ ದೃಢೀಕರಣ ಪತ್ರದ ಮಾನ್ಯತಾ ಅವಧಿ 6 ತಿಂಗಳು ಮಾತ್ರ ಎಂದು ಮೆಸ್ಕಾಂ  ಅಧಿಕಾರಿಗಳು ಹೇಳುತ್ತಾರೆ. ಆದರೆ,  ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ 6 ತಿಂಗಳಾದರೂ ಮೆಸ್ಕಾಂ ಇಲಾಖೆಯಲ್ಲಿ ಅದನ್ನು ವಿಲೇವಾರಿ ಮಾಡುವುದಿಲ್ಲ. ಹಾಗಾಗಿ 6 ತಿಂಗಳ ನಂತರ ಮತ್ತೆ ನಿರಾಕ್ಷೇಪಣಾ ಮತ್ತು ಅಂತರ ದೃಢೀಕರಣ ಪತ್ರ ತರುವಂತೆ ಮೆಸ್ಕಾಂನವರು  ಸೂಚಿಸುತ್ತಾರೆ’ ಎನ್ನುವುದು ರೈತರ ದೂರು.

ಹಿಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ 2019ರಲ್ಲಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ರೈತರು ಕೊಳವೆಬಾವಿ ಪಂಪ್‌ಸೆಟ್‌ಗೆ ವಿದ್ಯುತ್‌ ಸಂಪರ್ಕ ಪಡೆಯಲು ಜಮೀನು, ನೀರಿನ ಹಕ್ಕು ಪತ್ರ, ಪಹಣಿ ಈ ಮೂರು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿದರೆ ಸಾಕು. ಆದರೆ, ಈ ಸುತ್ತೋಲೆಯಲ್ಲಿ ಎಲ್ಲೂ ದೃಢೀಕರಣ ಪತ್ರದ ಮಾನ್ಯತಾ ಅವಧಿ 6 ತಿಂಗಳು ಎಂದು ಹೇಳಿಲ್ಲ. 

ದೃಢೀಕರಣ ಪತ್ರದ ಮಾನ್ಯತಾ ಅವಧಿಯ ಬಗ್ಗೆ ಎಚ್.ಎಸ್. ಸುಧಾಕರ ಎಂಬುವರು ಮಾಹಿತಿ ಹಕ್ಕಿನಡಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದಾಗ, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂಬ ಕಾರಣ ನಿಡಿ ಅದನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ವರ್ಗಾಯಿಸಿದ್ದರು. ಸಿಇಒ ಸಹ ಇದೇ ಕಾರಣ ನೀಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ವರ್ಗಾಯಿಸಿದ್ದರು. ಈ ಇಲಾಖೆ ನಮ್ಮ ಇಲಾಖೆಯಲ್ಲಿ ಮಾಹಿತಿ ಇಲ್ಲ ಎಂದು ಹಿಂಬರಹ ನೀಡಿತು. ಸಮರ್ಪಕ ಮಾಹಿತಿ ಲಭಿಸದ ಕಾರಣ, ಸುಧಾಕರ ಮತ್ತೆ ಪ್ರಥಮ ಮೇಲ್ಮನವಿಯನ್ನು ಜಿಲ್ಲಾಧಿಕಾರಿಗೆ  ಸಲ್ಲಿಸಿದ್ದಾರೆ.

‘ಹಿಂದಿನ ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ವಿದ್ಯುತ್ ಸಂಪರ್ಕಕ್ಕೆ ಖಾತೆದಾರರ ಚಾಲ್ತಿ ಪಹಣಿ ದಾಖಲೆಗಳಿದ್ದರೂ ಅಂತರ ದೃಢೀಕರಣ ಪತ್ರವನ್ನು ಕೇಳಿ 6 ತಿಂಗಳ ಮಿತಿ ಹೇರಿರುತ್ತಾರೆ. ಆದರೆ, ಈ ಅಂತರ ದೃಢೀಕರಣಕ್ಕೆ 6 ತಿಂಗಳ ಮಾನ್ಯತಾ ಅವಧಿ ಎನ್ನುವ ಆದೇಶವನ್ನು ಅಥವಾ ಆದೇಶದ ಪ್ರತಿಯನ್ನು ಮೆಸ್ಕಾಂ ಅಧಿಕಾರಿಗಳು ಒದಗಿಸುವುದಿಲ್ಲ’ ಎನ್ನುತ್ತಾರೆ ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರು. 

‘ಸಕಾಲದಲ್ಲಿ ವಿಲೇವಾರಿ ಆಗದೆ ಅರ್ಜಿಗಳು 6 ತಿಂಗಳ ನಂತರ ಪರಿಶೀಲನೆಗೆ ಬಂದಾಗ ಮತ್ತೆ ಅಂತರ ದೃಢೀಕರಣ ಪತ್ರ ತರುವಂತೆ ಒತ್ತಾಯಿಸುತ್ತಾರೆ. ಜಿಲ್ಲಾಡಳಿತ ಮತ್ತು ಮೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ರೈತರು ಶೋಷಣೆ ಅನುಭವಿಸುತ್ತಾ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ’ ಎನ್ನುತ್ತಾರೆ ಕೃಷಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT