ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಲ್ಗುಣಿ ನದಿಯಲ್ಲಿ ಸತತ 7 ಗಂಟೆ ಶೋಧ; ಇನ್ನೂ ಸಿಗದ ಮುಮ್ತಾಜ್ ಅಲಿ ಸುಳಿವು

Published : 6 ಅಕ್ಟೋಬರ್ 2024, 10:09 IST
Last Updated : 6 ಅಕ್ಟೋಬರ್ 2024, 10:09 IST
ಫಾಲೋ ಮಾಡಿ
Comments

ಮಂಗಳೂರು: ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಜ್ ಅಲಿ (52) ಅವರು ಭಾನುವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ. ಅವರ ಬಿಎಂಡಬ್ಲ್ಯು ಕಾರು ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರಿಗಾಗಿ ಬೆಳಿಗ್ಗೆ 7 ಗಂಟೆಯಿಂದ ಕೂಳೂರು ಬಳಿ ಫಲ್ಗುಣಿ ನದಿಯಲ್ಲಿ ಶೋಧಕಾರ್ಯ ನಡೆದಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಆರೇಳು ದೋಣಿಗಳಲ್ಲಿ ಕೂಳೂರು ಸೇತುವೆಯ ತಳಭಾಗದಲ್ಲಿ ಫಲ್ಗುಣಿ ನದಿಯಲ್ಲಿ ಮುಮ್ತಾಜ್ ಅಲಿ ಅವರಿಗಾಗಿ ಶೋಧ ನಡೆಸುತ್ತಿವೆ. ಮಧ್ಯಾಹ್ನ 2 ಗಂಟೆವರೆಗೆ ಸತತ 7 ಗಂಟೆಗಳ ಶೋಧದ ಬಳಿಕವೂ ಅವರ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ಸತತ ನಾಲ್ಕೈದು ಗಂಟೆ ಫಲ್ಗುಣಿ ನದಿಯಲ್ಲಿ ಹುಡುಕಿದರೂ ಮುಮ್ತಾಜ್ ಅಲಿ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

'ನೀವು ಚೆನ್ನಾಗಿರಿ. ನಾನಿನ್ನು ಬದುಕಿರುವುದಿಲ್ಲ'
ಮುಮ್ತಾಜ್ ಅವರು ರಾತ್ರಿ 3 ಗಂಟೆ ಸುಮಾರಿಗೆ ನಗರದ ಕದ್ರಿ ಆಲ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮನೆಯಿಂದ ಹೊರಟಿದ್ದರು. ಮುಂಜಾನೆ 3.30ರ ಸುಮಾರಿಗೆ ಅವರ ಕುಟುಂಬದ ಸದಸ್ಯರ ವಾಟ್ಸ್‌ಆ್ಯಪ್ ಬಳಗಕ್ಕೆ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಿದ್ದರು. ಮನೆಯವರು ಬೆಳಿಗ್ಗೆ 4.40ರ ಸುಮಾರಿಗೆ ಆ ಸಂದೇಶವನ್ನು ನೋಡಿದ್ದರು. ಅದರಲ್ಲಿ ಮಕ್ಕಳನ್ನು ಉದ್ದೇಶಿಸಿ, ‘ನೀವು ಚೆನ್ನಾಗಿರಿ. ನಾನಿನ್ನು ಬದುಕಿರುವುದಿಲ್ಲ’ ಎಂದು ಹೇಳಿಕೊಂಡಿದ್ದರು. ಕುಟುಂಬದವರು ತಕ್ಷಣವೇ ತಂದೆಯನ್ನು ಹುಡುಕಲು ಶುರುಹಚ್ಚಿಕೊಂಡಿದ್ದರು. ಈ ವೇಳೆ ಕೂಳೂರು ಸೇತುವೆಯಲ್ಲಿ ಅವರ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ಮುಮ್ತಾಜ್ ಅಲಿ ಇರಲಿಲ್ಲ. ಅಪಘಾತಕ್ಕೊಳಗಾದ ಸ್ಥಿತಿಯಲ್ಲಿದ್ದ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಮುಳುಗು ತಜ್ಞ ಈಶ್ವರ ಮಲ್ಪೆ

ಮುಳುಗು ತಜ್ಞ ಈಶ್ವರ ಮಲ್ಪೆ

ಬಸ್‌ಗೆ ಗುದ್ದಿದ್ದ ಕಾರು

ಮುಮ್ತಾಜ್‌ ಅಲಿ ಅವರು ಚಲಾಯಿಸುತ್ತಿದ್ದ ಕಾರು ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೂಳೂರಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೈಕಂಪಾಡಿಯಲ್ಲಿ ಖಾಸಗಿ ಬಸ್‌ಗೆ (ಮಹೇಶ್‌) ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಕಾರಿನ ನಂಬರ್‌ ಪ್ಲೇಟ್ ಅಲ್ಲೇ ಕಳಚಿಬಿದ್ದಿತ್ತು. ಅಪಘಾತದ ಸಂಭವಿಸಿದ ಬಳಿಕವೂ ಮಮ್ತಾಜ್ ಅಲಿ ಅವರು ಕಾರನ್ನು ನಿಲ್ಲಿಸದೇ ಸಾಗಿದ್ದರು ಎಂದು ಆ ಬಸ್‌ನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅವರ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಂಜಾನೆ 5.09ರ ಸುಮಾರಿಗೆ ಅವರ ಮಗಳು ಕೂಳೂರು ಸೇತುವೆಯಲ್ಲಿ ಅವರ ಕಾರು ಇರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ 4.40 ಮತ್ತು 5.09ರ ನಡುವೆ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ.ಫಾರೂಕ್‌ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವ ಅವರು ಮುಮ್ತಾಜ್ ಅಲಿ ಅವರ ಅಣ್ಣಂದಿರು. ಮುಮ್ತಾಜ್‌ ಅಲಿ ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಮಗ ಹಾಗೂ ಪತ್ನಿ ಇದ್ದಾರೆ.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ.ಫಾರೂಕ್‌, ಐವನ್ ಡಿಸೋಜ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ. ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌ ಭೇಟಿ ನೀಡಿದರು. ಮೊಯ್ದಿನ್ ಬಾವ , ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ್‌, ಎಸಿಪಿ ಶ್ರೀಕಾಂತ್‌ ಅವರು ಸ್ಥಳದಲ್ಲೇ ಇದ್ದು ಶೋಧಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಸಾಮಾಜಿಕ ಮುಂದಳುವಾಗಿದ್ದ ಮುಮ್ತಾಜ್‌
ಮುಸ್ಲಿ ಸಮುದಾಯದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಮುಮ್ತಾಜ್ ಅಲಿ ಹಲವಾರು ಮುಸ್ಲಿಂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಉದ್ಯಮಿಯೂ ಆಗಿದ್ದ ಅವರು ಬೈಕಂಪಾಡಿಯಲ್ಲಿ ಮಂಗಳೂರು ‘ಲೈಮ್‌ ಆ್ಯಂಡ್‌ ಮೆರೈನ್‌ ಇಂಡಸ್ಟ್ರೀಸ್‌’ ಕಂಪನಿಯ ಆಡಳಿತ ಪಾಲುಗಾರರು. ಮುಮ್ತಾಜ್ ಟ್ರೇಡರ್ಸ್‌ನ ಮಾಲೀಕರು. ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ಜಮಾತ್‌ನ ಅಧ್ಯಕ್ಷ. ಕೃಷ್ಣಾಪುರದ ಅಲ್‌ ಬದ್ರಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ. ಕಾಟಿಪಳ್ಳದ ಮಿಸ್ಬಾ ಸಂಸ್ಥೆಗಳ ಸಮೂಹದ ಅಧ್ಯಕ್ಷ, ಕರ್ನಾಟಕ ಮುಸ್ಲಿಂ ಜಮಾತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT