ಮಂಗಳೂರು: ಸೆಪ್ಟೆಂಬರ್ ಮೊದಲ ವಾರ ತುಳುನಾಡು ಮತ್ತು ತುಳುವರು ಇರುವ ಪ್ರಪಂಚದ ಎಲ್ಲ ಕಡೆಯಲ್ಲೂ ಸಂಭ್ರಮ ಮನೆಮಾಡಿತ್ತು. ತುಳು– ತಿಗಳಾರ ಭಾಷೆ ಯೂನಿಕೋಡ್ಗೆ ಸೇರಿದ್ದು ಇದಕ್ಕೆ ಕಾರಣ. ತುಳು ಲಿಪಿ ಕಲಿಕೆಯ ಬಗ್ಗೆ ಅಭಿಯಾನಗಳು ನಡೆಯುತ್ತಿರುವಾಗ, ಕಾರ್ಯಕ್ರಮಗಳ ಆಯೋಜನೆ ಹೆಚ್ಚುತ್ತಿರುವಾಗ, ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ, ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾಡಬೇಕೆಂಬ ಬೇಡಿಕೆಯ ಧ್ವನಿ ಪದೇ ಪದೇ ಮೊಳಗುತ್ತಿರುವಾಗಲೇ ಬಂದ ‘ಯುನಿಕೋಡ್’ಸುದ್ದಿ ತುಳುವರಲ್ಲಿ ಹೊಸ ಹುಮ್ಮಸ್ಸು ತುಂಬಿತ್ತು.

ಇದಾಗಿ ಒಂದೂವರೆ ತಿಂಗಳ ನಂತರ ತುಳುವಿಗೆ ಸಂಬಂಧಿಸಿ ಸಣ್ಣ ಪ್ರಮಾಣದ ಮತ್ತೊಂದು ಸಂಚಲನ ಆಗಿದೆ. ಮಂಗಳೂರು ವಿಶ್ವವಿದ್ಯಾಲಯ ನಡೆಸಿಕೊಂಡು ಬರುತ್ತಿರುವ ತುಳು ಸ್ನಾತಕೋತ್ತರ ಅಧ್ಯಯನ ಕೋರ್ಸ್ನ ಶುಲ್ಕ ಹೆಚ್ಚಳ ಮಾಡಿರುವುದರಿಂದ ವಿದ್ಯಾರ್ಥಿಗಳಲ್ಲೂ ಭಾಷೆಯ ಬಗ್ಗೆ ಕಾಳಜಿ ಇರುವವರಲ್ಲೂ ಆತಂಕ ಮೂಡಿದೆ.

ಪದವಿಯಲ್ಲಿ ತುಳು ಭಾಷೆ ಕಲಿಸಲು ಮುಂದೆ ಬರುವಂತೆ ಕಾಲೇಜುಗಳ ಆಡಳಿತವನ್ನು ಕೋರುತ್ತಿರುವ ವೇಳೆಯಲ್ಲೇ ಹಾಗೂ ಶಾಲೆಗಳಲ್ಲಿ ಐಚ್ಛಿಕ ಭಾಷೆಯಾಗಿ ತುಳು ಕಲಿಯಲು ಪ್ರೇರೇಪಿಸುವ ಕಾರ್ಯ ನಡೆಯುತ್ತಿರುವಾಗಲೇ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟ ಪರಿಹಾರ ಸೂತ್ರದ ಭಾಗವಾಗಿ ಶುಲ್ಕ ಹೆಚ್ಚಿಸಿತ್ತು.

ಈ ಬೆಳವಣಿಗೆ ಹಲವು ಆಯಾಮದ ಚಿಂತೆ–ಚಿಂತನೆಗಳಿಗೂ ದಾರಿಮಾಡಿಕೊಟ್ಟಿತು. ಭಾಷೆ ಉಳಿಸುವ ಹೊಸ ಹುಮ್ಮಸ್ಸು ಮೂಡಿದ್ದು ಈ ಚಿಂತನೆಗಳ ಫಲಿತ. ತುಳು ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವವರು ಈಗ ಆರ್ಥಿಕ ನೆರವು ನೀಡಲು ಮುಂದಾಗಬೇಕು, ಆ ಮೂಲಕ ಭಾಷೆ ಉಳಿಸಬೇಕು ಎಂಬ ವಾದವೂ ಕೇಳಿಬಂದಿದೆ.

‘ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಸಿಬ್ಬಂದಿಯ ವೇತನಕ್ಕೆ ವೆಚ್ಚ ಮಾಡುವುದಕ್ಕೆ ಎಲ್ಲಿಗೂ ಸಾಲುವುದಿಲ್ಲ. ಹೀಗಾಗಿ ಕೆಲವು ಕೋರ್ಸ್ಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ತುಳು ಸ್ನಾತಕೋತ್ತರ ಕೋರ್ಸ್ ಸಂಜೆ ವೇಳೆ ನಡೆಯುತ್ತದೆ. ಕೋರ್ಸ್ಗೆ ಸೇರುವವರ ಪೈಕಿ ಬಹುತೇಕ ಎಲ್ಲರೂ ಉದ್ಯೋಗಸ್ಥರು. ಆದ್ದರಿಂದ ಶುಲ್ಕ ಭರಿಸುವುದು ದೊಡ್ಡ ಸಮಸ್ಯೆ ಆಗಲಾರದು. ಸರ್ಕಾರ ಮಾನ್ಯ ಮಾಡಿದ ಕೋರ್ಸ್ ಅಲ್ಲದ್ದರಿಂದ ಅಲ್ಲಿಂದಲೂ ಅನುದಾನ ಕೇಳುವಂತಿಲ್ಲ. ಕೋರ್ಸ್ ನಿಲ್ಲಿಸಬೇಕೆಂಬ ಯಾವ ಹುನ್ನಾರವೂ ಇಲ್ಲ, 10 ಮಂದಿ ವಿದ್ಯಾರ್ಥಿಗಳು ದಾಖಲಾದರೆ ಮುಂದುವರಿಸಲಾಗುವುದು’ ಎಂದು ವಿವಿ ರಿಜಿಸ್ಟ್ರಾರ್ ರಾಜು ಮೊಗವೀರ ಹೇಳುತ್ತಾರೆ.

‘ಶುಲ್ಕ ತೆರಲು ತೊಂದರೆಯಾಗುವ ವಿದ್ಯಾರ್ಥಿಗಳಿಗೆ ನೆರವು ನೀಡಲು ತುಳು ಸಂಘಸಂಸ್ಥೆಗಳು, ಕಾಳಜಿ ಇರುವವರು ಮುಂದೆ ಬರಬೇಕು. ನನ್ನಿಂದಾಗುವ ನೆರವು ನೀಡಲು ಸಿದ್ಧನಿದ್ದೇನೆ’ ಎಂದು ಪದವಿಯಲ್ಲಿ ತುಳು ಕಲಿಸುತ್ತಿರುವ ಎರಡು ಕಾಲೇಜುಗಳ ಪೈಕಿ ಒಂದಾದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.

ತುಳು ವಿಭಾಗದ ಕೊರತೆ

ಮಂಗಳೂರು ವಿವಿಯಲ್ಲಿ ತುಳು ಅಧ್ಯಯನ ಪೀಠ ಇದೆ. ಆದರೆ ತುಳು ವಿಭಾಗ ಇಲ್ಲ. ಈ ಕೊರತೆಯೇ ಇಂದಿನ ಗೊಂದಲಗಳಿಗೆ ಕಾರಣ ಎನ್ನುವವರಿದ್ದಾರೆ. ‘ವಿ.ವಿ.ಯಲ್ಲಿ ವಿಭಾಗವೊಂದನ್ನು ತೆರೆಯಬೇಕಾದರೆ ಷರತ್ತುಗಳನ್ನು ಪಾಲಿಸಲೇಬೇಕು. ಅದು ಸಾಧ್ಯವಾಗಲಿಲ್ಲ. ಆದರೆ ಕನ್ನಡ ವಿಭಾಗದಲ್ಲೇ ತುಳುವಿನ ಕೆಲಸ ಸಾಕಷ್ಟು ಆಗಿದೆ. ತುಳು ಪೀಠವೂ ಉತ್ತಮ ಕೆಲಸ ಮಾಡುತ್ತಿದೆ. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಇದು ಗಮನಾರ್ಹ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳ ಅಭಿಪ್ರಾಯ.

ಸದ್ಯ ಎಲ್ಲ ಕಡೆ ಗೌರವಧನದ್ದೇ ಸಮಸ್ಯೆ. ಸ್ನಾತಕೋತ್ತರ ಕೊರ್ಸ್ನಲ್ಲಿ ಅರೆಕಾಲಿಕ ಉಪನ್ಯಾಸಕರು ಇದ್ದಾರೆ. ಅವರಿಗೆ ಗೌರವಧನ ನೀಡಲು ವಿವಿಯಲ್ಲಿ ಆರ್ಥಿಕ ನಿಧಿ ಇಲ್ಲ. ಪದವಿ ಕಾಲೇಜಿನಲ್ಲಿ ತುಳು ಕಲಿಸಲು ಹಿಂದೇಟು ಹಾಕುವುದಕ್ಕೂ ಗೌರವಧನವೇ ದೊಡ್ಡ ತೊಡಕು. ಶಾಲೆಗಳಲ್ಲಿ ಶಿಕ್ಷಕರಿಗೆ ಗೌರವಧನ ನಿಲ್ಲಸಿದಾಗಿನಿಂದ ಕಲಿಕೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ.

‘6ರಿಂದ 10ನೇ ತರಗತಿವರೆಗೆ ತುಳು ಭಾಷೆ ಕಲಿಯಲು ಅವಕಾಶ ಇದೆ. ಶಾಲೆಯಲ್ಲಿ ಇರುವ ಶಿಕ್ಷಕರನ್ನೇ ಅದಕ್ಕೆ ಬಳಸಲಾಗುತ್ತದೆ. ಶಾಲೆಯಿಂದ ಸಿಗುವ ವೇತನದ ಜೊತೆ ಅಕಾಡೆಮಿ ತಿಂಗಳಿಗೆ ₹3 ಸಾವಿರದ ‘ಗೌರವ’ ಕೊಡುತ್ತದೆ. ಇದು 2010ರಲ್ಲಿ ಆರಂಭಗೊಂಡ ಯೋಜನೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಇತ್ತು. ನಂತರ ಸ್ವಲ್ಪ ಸಮಸ್ಯೆ ಆಗಿದೆ. ಗೌರವಧನವನ್ನು ಸರ್ಕಾರವೇ ಭರಿಸುವಂತಾದರೆ ಉತ್ತಮ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಕಳೆದ ವರ್ಷ ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ₹1000 ಮೊತ್ತವನ್ನು ನೀಡಲಾಗಿದೆ’ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದರು.

ತುಳು ಹೋರಾಟದ ಹಾದಿಯ ಹಿನ್ನೋಟ

ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಈಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ, ‘ಹಲವು ಮಜಲುಗಳನ್ನು ದಾಟಿ ಬಂದಿರುವ ತುಳು ಈಗಿನ ಸ್ಥಿತಿಯಲ್ಲಿದೆ. ಎಸ್.ವಿ. ಪನಿಯಾಡಿ ಅವರ ಕಾಲದಲ್ಲಿ ತುಳು ಸಾಹಿತ್ಯದಲ್ಲಿ ದೊಡ್ಡ ಆಂದೋಲನವೇ ಆಗಿತ್ತು. ಪೊಳಲಿ ಶೀನಪ್ಪ ಹೆಗಡೆ ಮತ್ತು ಎನ್.ಎಸ್. ಕಿಲ್ಲೆ ತುಳುವ ಸಾಹಿತ್ಯ ಮಾಲೆ ಪ್ರಕಟಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲೇ ತುಳುವಿಗೆ ಪ್ರತ್ಯೇಕ ಸ್ಥಾನ ಸಿಗಬೇಕೆಂಬ ಕೂಗು ಎದ್ದಿತ್ತು’ ಎಂದರು.

‘ನಂತರವೂ ತುಳು ಭಾಷೆ– ಸಾಹಿತ್ಯದ ಕೆಲಸಗಳು ನಿರಂತರವಾಗಿ ನಡೆದವು. ಪ್ರತ್ಯೇಕ ಸ್ಥಾನದ ವಿಷಯವೂ ಆಗಾಗ ಮುನ್ನೆಲೆಗೆ ಬರುತ್ತಿತ್ತು. 1970ರ ನಂತರ ಭಾಷೆ ಮತ್ತು ಸಾಹಿತ್ಯದ ಚಟುವಟಿಕೆಗೆ ಮತ್ತಷ್ಟು ಚುರುಕು ಪಡೆಯಿತು. ಈ ಸಂದರ್ಭದಲ್ಲಿ ತುಳು ಸಂಘ– ಸಂಸ್ಥೆ, ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳೆದವು. ಕು.ಶಿ. ಹರಿದಾಸ ಭಟ್ಟ ಅವರ ನೇತೃತ್ವದಲ್ಲಿ ತುಳು ಜಾನಪದ ಕ್ಷೇತ್ರಕ್ಕೂ ಸಾಂಸ್ಥಿಕ ನೆಲೆ ಸಿಕ್ಕಿತು. ಸಿರಿ ಯೋಜನೆಯ ಮೂಲಕ ತುಳು ಕಟ್ಟುವ ಕೆಲಸ ಹೆಚ್ಚಾಯಿತು. ವಿವಿಯಲ್ಲಿ ತುಳು ಎಂ.ಎ ಕೋರ್ಸ್ ಆರಂಭವಾದದ್ದು ಕೂಡ ಮಹತ್ವದ ಘಟ್ಟ. ಆರ್ಥಿಕ ಸಂಕಷ್ಟದ ನಡುವೆ ಕೋರ್ಸ್ ಮುನ್ನಡೆಸುವುದು ಸ್ವಲ್ಪ ಕಷ್ಟದ ಕಾರ್ಯ. ಆದರೂ ಹಣಕಾಸಿನ ಸ್ಥಿತಿ ಸುಧಾರಿಸುವ ಕಾಲ ಬರಬಹುದು. ಆದ್ದರಿಂದ ಕೋರ್ಸ್ ಸ್ಥಗಿತ ಆಗಬಾರದು. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಯಾವುದಾದರೂ ಮಾರ್ಗ ಕಂಡುಕೊಳ್ಳಲು ಸಾಧ್ಯವಾದರೆ ಅದಕ್ಕೆ ಶೈಕ್ಷಣಿಕವಾಗಿ ಮಹತ್ವವಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.