ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ-ವನ್ಯಜೀವಿ ಸಂಘರ್ಷ ಚರ್ಚಿಸಲು ಆಗಸ್ಟ್‌ನಲ್ಲಿ ಕಾರ್ಯಾಗಾರ: ಸಚಿವ ಖಂಡ್ರೆ

ದಶಲಕ್ಷ‌ ಗಿಡ ನಾಟಿಗೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ
Published 2 ಜುಲೈ 2024, 6:55 IST
Last Updated 2 ಜುಲೈ 2024, 6:55 IST
ಅಕ್ಷರ ಗಾತ್ರ

ಬಂಟ್ವಾಳ (ದಕ್ಷಿಣ ಕನ್ನಡ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಪರಿಸರ ಸಂರಕ್ಷಣೆಗಾಗಿ ರಾಜ್ಯದಾದ್ಯಂತ ದಶಲಕ್ಷ ಗಿಡ ನಾಟಿ' ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ‌ ನೀಡಿದರು.

ಮಾನವ - ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಚಿಸಲಾಗಿದೆ. ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆಗಳು ಇವೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಆನೆಗಳ ದಾಳಿ ಪ್ರಕರಣಗಳು ಹೆಚ್ಚು ಘಟಿಸಿವೆ‌. ವನ್ಯಜೀವಿ ಆವಾಸ ಸ್ಥಾನ ಕಡಿಮೆ ಆಗುತ್ತಿರುವ ಕಾರಣ ಕಾಡುಪ್ರಾಣಿಗಳು ನಾಡಿಗೆ ದಾಳಿ ಇಡುತ್ತಿವೆ. ಇದರಿಂದಾಗಿ ಮಾನವ- ವನ್ಯಜೀವಿ ಸಂಘರ್ಷ ಉಂಟಾಗುತ್ತಿದೆ. ಪ್ರಾಣಿಗಳ ರಕ್ಷಣೆಯೊಂದಿಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ‌ ಕುರಿತು ಕಾರ್ಯಾಗಾರದಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು.

ಧರ್ಮಸ್ಥಳ ಯೋಜನೆಯ ಗಿಡ‌ ನಾಟಿ ಕಾರ್ಯಕ್ರಮದ‌ ಅಡಿಯಲ್ಲಿ 3 ಲಕ್ಷ ಕಾಡು ಹಣ್ಣಿನ ಗಿಡಗಳು, 7 ಲಕ್ಷ ಇತರ ಸಾಮಾಜಿಕ ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ಯೋಜನೆಯ 257 ಕಚೇರಿ ವ್ಯಾಪ್ತಿಯಲ್ಲಿ ತಲಾ 5,000 ಗಿಡಗಳನ್ನು ನೆಡಲಾಗುವುದು. ಇದಕ್ಕೆ ₹1 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್ ತಿಳಿಸಿದರು.

ಕಾಡುಪ್ರಾಣಿಗಳು ನಾಡಿಗೆ ಬಂದು ಕೃಷಿ ಬೆಳೆ ನಾಶ ಮಾಡುವುದನ್ನು ತಪ್ಪಿಸಿ, ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುವಂತಾಗಲು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು 2021ರಲ್ಲಿ ರೂಪಿಸಿರುವ ಯೋಜನೆಯಡಿ ಕೆರೆಯಂಚು, ಖಾಲಿ ಜಾಗಗಳು, ದೇವರ ಕಾಡು, ಶಾಲಾ ಆವರಣಗಳಲ್ಲಿ ಸಸಿ ನೆಡಲಾಗಿದೆ. ಈವರೆಗೆ ನಾಟಿ ಮಾಡಿದ ಹಣ್ಣಿನ ಗಿಡಗಳ ಸಂಖ್ಯೆ 3.70 ಲಕ್ಷ, ಇತರ ಗಿಡಗಳ ಸಂಖ್ಯೆ 7.33 ಲಕ್ಷ ದಾಟಿದೆ.

ಇದಕ್ಕಾಗಿ ರಚನೆಯಾಗಿರುವ ಶೌರ್ಯ ಸ್ವಯಂ ಸೇವಕರ ತಂಡ ಈ ಕಾರ್ಯವನ್ನು ಮುತುವರ್ಜಿಯಿಂದ ನಿರ್ವಹಿಸುತ್ತಿದೆ. ರಾಜ್ಯದ 91 ತಾಲ್ಲೂಕುಗಳಲ್ಲಿ 10,300 ರಷ್ಟು ಸ್ವಯಂ ಸೇವಕರು ಇದ್ದಾರೆ ಎಂದು ವಿವರಿಸಿದರು.

ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ‌ ವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ, ಮಂಗಳೂರು‌ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಿ.‌ಕರಿಕಾಲನ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT